ಉಪ ನೋಂದಣಾಧಿಕಾರಿಗಳ (ಸಬ್ ರಿಜಿಸ್ಟ್ರಾರ್) ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿಯೊಂದಿಗೆ ‘ಡಿಮೆರಿಟ್ ಅಂಕ’ (ಅನರ್ಹತಾ ಅಂಕ) ವ್ಯವಸ್ಥೆ ಪರಿಚಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ದಶಕಗಳಷ್ಟು ಹಳೆಯದಾದ ಸಮಸ್ಯೆಯನ್ನು ಒಪ್ಪಿಕೊಂಡು, ಅದಕ್ಕೆ ಉತ್ತರ ಕಂಡುಕೊಳ್ಳುವ ಕ್ರಮವಾಗಿದೆ. ಅಧಿಕಾರಿಗಳ ಮೇಲಿನ ಪ್ರಕರಣಗಳಿಗೆ ಅನುಗುಣವಾಗಿ ಅನರ್ಹತಾ ಅಂಕ ನೀಡುವ ಪದ್ಧತಿಯನ್ನು ಇದೇ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಇದರ ಅನ್ವಯ ಕ್ರಿಮಿನಲ್ ಪ್ರಕರಣಗಳು ಅಥವಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಿಗೆ ನಾಲ್ಕು ಅಂಕಗಳು, ಕಾನೂನು ಕ್ರಮಕ್ಕೆ ಒಳಗಾದವರಿಗೆ ಮೂರು ಅಂಕ, ಇಲಾಖಾ ತನಿಖೆಯಲ್ಲಿ ಶಿಕ್ಷೆಗೆ ಒಳಗಾದವರಿಗೆ ಎರಡು ಅಂಕ ಮತ್ತು ತನಿಖೆ ಪ್ರಗತಿಯಲ್ಲಿದ್ದವರಿಗೆ ಒಂದು ಅಂಕ ನೀಡಲಾಗುತ್ತದೆ. ಈ ಅಂಕಗಳನ್ನು ಆಧರಿಸಿ ವರ್ಗಾವಣೆಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ನಿಗದಿಯಾಗಲಿದೆ. ಈ ಮೂಲಕ ಪ್ರಾಮಾಣಿಕತೆಗೂ ವರ್ಗಾವಣೆಗೂ ಸಂಬಂಧ ಬೆಸೆಯಲು ಹೊರಟಿರುವ ಸರ್ಕಾರದ ಪ್ರಯತ್ನ ತಾತ್ತ್ವಿಕವಾಗಿ ಒಂದು ಮಹತ್ವದ ನಡೆಯಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳು– ವಿಶೇಷವಾಗಿ ಬೆಂಗಳೂರಿನಲ್ಲಿನ ಕಚೇರಿಗಳು– ಬಹಳ ಕಾಲದವರೆಗೂ ಖಾಸಗಿ ಸಾಮ್ರಾಜ್ಯಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಪಾರದರ್ಶಕವಲ್ಲದ ಮಾರ್ಗಗಳ ಮೂಲಕ ಹುದ್ದೆಗಳನ್ನು ಪಡೆದುಕೊಳ್ಳುವ ಹಾಗೂ ಉಳಿಸಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿತ್ತು. ಆ ವ್ಯವಸ್ಥೆಯನ್ನು ಬದಲಿಸಿ, ಪ್ರಭಾವ ಮತ್ತು ಶಿಫಾರಸುಗಳಿಗೆ ಅವಕಾಶ ಕಲ್ಪಿಸದಿರುವ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಹೆಚ್ಚಿನ ಮೌಲ್ಯದ ಸ್ಥಳಗಳಿಗೆ ವರ್ಗಾವಣೆ ಮಾಡುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಉದ್ದೇಶ ಸರಿಯಾದುದಾಗಿದೆ. ಉದ್ದೇಶಿತ ಕ್ರಮಗಳನ್ನು ಪ್ರಾಮಾಣಿಕತೆಯಿಂದ ಅಕ್ಷರಶಃ ಅನುಷ್ಠಾನಗೊಳಿಸಿದಲ್ಲಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ವರ್ಷಗಳಿಂದ ಆವರಿಸಿಕೊಂಡಿರುವ ಪ್ರಭಾವಿ ವಲಯಗಳನ್ನು ಮಟ್ಟ ಹಾಕುವುದು ಸಾಧ್ಯವಾಗುತ್ತದೆ.

ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ಹೊಸತೇನೂ ಅಲ್ಲ. ಕಳೆದ ವರ್ಷವೇ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು ಹಾಗೂ ಕೆಲವು ಅಧಿಕಾರಿಗಳು ಅನೇಕ ವರ್ಷಗಳ ಕಾಲ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ವಿಷಯವನ್ನು ಸರ್ಕಾರ ಪ್ರಸ್ತಾಪಿಸಿತ್ತು. ವ್ಯವಸ್ಥೆಯಲ್ಲಿ ಪಾರದರ್ಶಕ ಬದಲಾವಣೆ ತರುವ ಭರವಸೆಯನ್ನೂ ನೀಡಲಾಗಿತ್ತು. ಈ ಬಾರಿಯೂ ಹಳೆಯ ಕಳವಳ ಮತ್ತು ಭರವಸೆಯನ್ನು ಪುನರುಚ್ಚರಿಸಲಾಗುತ್ತಿದೆ. ಪ್ರಮುಖ ಹುದ್ದೆಗಳಲ್ಲಿ ಅವಧಿಗೂ ಮೀರಿ ನೆಲೆಸಿದ್ದ ಅಧಿಕಾರಿಗಳು ಈಗಲೂ ಅಲ್ಲಿಯೇ ಮುಂದುವರಿದಿದ್ದಾರೆ ಎನ್ನುವುದಾದರೆ, ಕಳೆದ ವರ್ಷದ ಕೌನ್ಸೆಲಿಂಗ್ ಪ್ರಕ್ರಿಯೆ ಬರೀ ಪ್ರದರ್ಶನಕ್ಕಾಗಿ ನಡೆಯಿತೇ ಅಥವಾ ಅದರಿಂದ ಏನಾದರೂ ಸಾಧನೆ ಆಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಫಲಿತಾಂಶಗಳಿಲ್ಲದ ಮಾತು, ಭರವಸೆ, ಘೋಷಣೆಗಳ ಮುಂದುವರಿಕೆಯು ವ್ಯವಸ್ಥೆಯನ್ನು ಆಕ್ರಮಿಸಿಕೊಂಡಿರುವ ವಲಯಗಳ ಪ್ರತಿರೋಧದ ಶಕ್ತಿಯನ್ನು ಸೂಚಿಸುವಂತಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳು ಭ್ರಷ್ಟಾಚಾರಕ್ಕೆ ಪರ್ಯಾಯ ಹೆಸರುಗಳಾಗಿವೆ ಹಾಗೂ ಅವುಗಳು ಮಧ್ಯವರ್ತಿಗಳ ನಿಯಂತ್ರಣಕ್ಕೊಳಪಟ್ಟಿವೆ. ಈ ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಬಲಿಷ್ಠವಾಗಿ ಬೆಳೆದಿದ್ದಾರೆ ಎನ್ನುವುದು ಬಹಿರಂಗ ಸತ್ಯವಾಗಿದೆ. ಅಪವಿತ್ರ ಮೈತ್ರಿಯನ್ನು ಭಂಗಗೊಳಿಸುವ ಪ್ರಯತ್ನವನ್ನು ಅಧಿಕಾರದಲ್ಲಿ ಇರುವ ರಾಜಕಾರಣಿಗಳು ಮಾಡಿರುವುದು ಕೂಡ ವಿರಳ. ಸಮಸ್ಯೆಯ ಮುಂದುವರಿಕೆಯು ರೋಗನಿರ್ಣಯದ ಕೊರತೆಯ ಬದಲು, ನೀತಿನಿಯಮಗಳ ಜಾರಿಯ ಕೊರತೆಯನ್ನು ಸೂಚಿಸುತ್ತದೆ. ನೀತಿನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಪರಿಶೀಲನೆ, ಸಕಾಲಿಕ ಲೆಕ್ಕಪರಿಶೋಧನೆ ಮತ್ತು ತಪ್ಪುಗಳಿಗೆ ಕಠಿಣ ಹಾಗೂ ಖಚಿತ ಶಿಕ್ಷೆಯೊಂದಿಗೆ ವ್ಯವಸ್ಥೆಯನ್ನು ಸರಿಪಡಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದೆ ಹೋದಲ್ಲಿ, ಪ್ರಸ್ತುತ ತರಲು ಹೊರಟಿರುವ ಸುಧಾರಣೆಯೂ ಹಿಂದಿನಂತೆ ಹಳ್ಳ ಹಿಡಿಯುವ ಸಾಧ್ಯತೆಯಿದೆ.

ರಾಜಕೀಯ ಸಂಕಲ್ಪದ ಕೊರತೆಯಿಂದ ಒಳ್ಳೆಯ ಯೋಜನೆಗಳೂ ಹಳಿ ತಪ್ಪಬಹುದು ಎನ್ನುವುದಕ್ಕೆ ‘ಇ–ಖಾತಾ’ ಯೋಜನೆ ಎಚ್ಚರಿಕೆಯ ಪಾಠದಂತಿದೆ. ಆಸ್ತಿ ದಾಖಲೆಗಳನ್ನು ಭ್ರಷ್ಟಾಚಾರ ತಡೆಗಟ್ಟುವ ಮಹತ್ವಾಕಾಂಕ್ಷೆಯಿಂದ ಜಾರಿಗೆ ತರಲಾದ ಈ ಯೋಜನೆ, ಹೊಸ ಅಕ್ರಮಗಳಿಗೆ ದಾರಿಗಳನ್ನು ಸೃಷ್ಟಿಸಿತು. ತಂತ್ರಜ್ಞಾನ ಮತ್ತು ನೀತಿಗಳಿಂದಷ್ಟೇ ಪಟ್ಟಭದ್ರ ಹಿತಾಸಕ್ತಿಗಳನ್ನು ಮಣಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ‘ಇ–ಖಾತಾ’ ಸಾಕ್ಷಿಯಂತಿದೆ. ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ಕೂಡ ವೈಫಲ್ಯಗಳ ಪಟ್ಟಿಗೆ ಸೇರಬಾರದು. ಸಕಾಲಿಕ ವರ್ಗಾವಣೆ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ–ಮಾನ್ಯತೆ ಹಾಗೂ ಮಧ್ಯವರ್ತಿ ವ್ಯವಸ್ಥೆಯನ್ನು ಕೊನೆಗೊಳಿಸುವ ಪ್ರಯತ್ನಗಳಿಂದ ವ್ಯವಸ್ಥೆಯಲ್ಲಿ ಹೊಸ ಗಾಳಿ–ಬೆಳಕು ತರಬಹುದು. ಒಳ್ಳೆಯ ಉದ್ದೇಶವಿರುವ ಯೋಜನೆಗಳಷ್ಟೇ ರಾಜ್ಯಕ್ಕೆ ಸಾಕಾಗವು. ಅವುಗಳೊಂದಿಗೆ, ಶಿಕ್ಷೆಯ ಭಯವಿಲ್ಲದೆ ದಶಕಗಳಿಂದ ಭ್ರಷ್ಟಾಚಾರವನ್ನೇ ಸಹಜಸ್ಥಿತಿಯನ್ನಾಗಿ ಮಾಡಿರುವ ವ್ಯವಸ್ಥೆಯನ್ನು ಕೊನೆಗೊಳಿಸುವ ರಾಜಕೀಯ ದೃಢ ಸಂಕಲ್ಪ ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.