ಪ್ರಸಕ್ತ ವರ್ಷದ ಬೇಸಿಗೆಯು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಎದುರಿಸಿದ ಅತ್ಯಂತ ಕಠಿಣ ಧಗೆಯ ಕಾಲಗಳಲ್ಲಿ ಒಂದಾಗಿದೆ. ಈ ಬೇಸಿಗೆ ಋತು ರಾಜ್ಯದೆಲ್ಲೆಡೆ ಹವಾಮಾನ ಬದಲಾವಣೆ ಅತ್ಯಂತ ತೀವ್ರವಾಗಿರುವುದನ್ನು ಅನುಭವಕ್ಕೆ ತರುವಂತಿದೆ. ಭಾರತೀಯ ಹವಾಮಾನ ಇಲಾಖೆಯ ದತ್ತಾಂಶಗಳು ಬಿಸಿಲ ಅಲೆಗಳು ದೀರ್ಘಾವಧಿ ಆಗಿರುವುದನ್ನು ಸೂಚಿಸುತ್ತಿವೆ. ಬಿಸಿಲ ಅಲೆಗಳ ಈ ಝಳವು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕವನ್ನು ಹೆಚ್ಚಾಗಿ ಬಾಧಿಸುತ್ತಿದೆ. ಬಿಸಿಲು ಇಷ್ಟು ತೀವ್ರವಾಗಿದ್ದರೂ, ಇದು ರಾಜ್ಯದ ಇತಿಹಾಸದಲ್ಲಿ ಅತ್ಯಂತ ತೀವ್ರವಾದ ಬೇಸಿಗೆಯೇನೂ ಅಲ್ಲ. 2016ರ ಬೇಸಿಗೆ ಕಾಲದಲ್ಲಿ ಬೆಂಗಳೂರು ಮತ್ತು ರಾಜ್ಯದ ಬಹುತೇಕ ಭಾಗಗಳಲ್ಲಿ ಅಸಾಧಾರಣವಾದ ಧಗೆಯ ದಿನಗಳು ಕಂಡುಬಂದಿದ್ದವು. ಹತ್ತು ವರ್ಷಗಳ ಹಿಂದಿನ ಕಠಿಣ ದಿನಗಳನ್ನು ಈ ಬೇಸಿಗೆ ನೆನಪಿಸುವಂತಿದೆ; ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಉಷ್ಣಾಂಶ ಈಗಾಗಲೇ 40 ಡಿಗ್ರಿ ಸೆಂಟಿಗ್ರೇಡ್ ಮೀರಿದೆ. ಕಲಬುರಗಿ ಜಿಲ್ಲೆಯಲ್ಲಿ 42 ಡಿ.ಸೆಂ. ಆಸುಪಾಸಿನಲ್ಲಿ ಉಷ್ಣಾಂಶವಿದೆ. ಬೀದರ್, ಬಳ್ಳಾರಿ ಮತ್ತು ಕೊಪ್ಪಳದಲ್ಲಿಯೂ ಅಸಹನೀಯ ಧಗೆಯ ವಾತಾವರಣವಿದೆ. ಈ ಬದಲಾವಣೆ ಆಕಸ್ಮಿಕವಾಗಿರದೆ ಪರಿಸರದ ಮೇಲೆ ತೀವ್ರವಾದ ಒತ್ತಡ ಉಂಟಾಗಿರುವುದನ್ನು ಸೂಚಿಸುತ್ತಿದೆ. ಉದ್ಯಾನನಗರಿ ಎನ್ನುವ ವಿಶೇಷಣಕ್ಕೆ ಪಾತ್ರವಾಗಿದ್ದ ಬೆಂಗಳೂರಿನಲ್ಲಿ ಕೂಡ ಉಷ್ಣಾಂಶದ ಗಣನೀಯ ಏರಿಳಿಕೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ 35 ಡಿ.ಸೆಂ. ಆಸುಪಾಸಿನಲ್ಲಿ ತಾಪಮಾನ ದಾಖಲಾಗುತ್ತಿದೆ. ತ್ವರಿತ ಗತಿಯಲ್ಲಿ ನಡೆಯುತ್ತಿರುವ ಕಾಂಕ್ರಿಟೀಕರಣ ಹಾಗೂ ತೀವ್ರವಾಗಿ ಕ್ಷೀಣಿಸುತ್ತಿರುವ ಹಸುರು ಹೊದಿಕೆಯು ಬೆಂಗಳೂರಿನ ತಾಪಮಾನ ಹೆಚ್ಚಳಕ್ಕೆ ಕಾರಣಗಳಾಗಿವೆ. ರಾಜಧಾನಿಯ ನಾಗರಿಕರಿಗೆ ರಾತ್ರಿಗಳು ಅಸಹನೀಯವಾಗುತ್ತಿರುವುದು ಹವಾಮಾನ ವ್ಯವಸ್ಥೆಯಲ್ಲಿ ಆಗಿರುವ ಆಳವಾದ ಬದಲಾವಣೆಯನ್ನು ಸೂಚಿಸುವಂತಿದೆ.

ಬೇಸಿಗೆಯ ತೀವ್ರಗೊಂಡಿರುವ ತಕ್ಷಣದ ಪರಿಣಾಮ ನೀರಿನ ಕೊರತೆಯ ಸಂಕಟಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯದ 207 ತಾಲ್ಲೂಕುಗಳಲ್ಲಿ ನೀರಿನ ಕೊರತೆಯು ಗಂಭೀರ ಪ್ರಮಾಣದಲ್ಲಿದೆ ಎಂದು ಗುರ್ತಿಸಲಾಗಿದೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟ ಕುಸಿದಿರುವುದು ಕಳವಳ ಹುಟ್ಟಿಸುವಂತಿದೆ. ಉತ್ತರ ಕನ್ನಡ, ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಕೊರತೆ ಉಲ್ಬಣಗೊಂಡಿದೆ. ಏರುತ್ತಿರುವ ತಾಪಮಾನ ಹಾಗೂ ನೀರಿನ ಕೊರತೆಯು ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಫ್ಯಾನು ಹಾಗೂ ತಂಪುಗಾಳಿಯ ಉಪಕರಣಗಳ ಬಳಕೆಯು ಹೆಚ್ಚಾಗುತ್ತಿರುವುದು ವಿದ್ಯುತ್ ಜಾಲದ ಮೇಲೆ ಭಾರೀ ಒತ್ತಡ ಹೇರುತ್ತಿದೆ. ಕೃಷಿ ಕ್ಷೇತ್ರವೂ ಒತ್ತಡ ಎದುರಿಸುತ್ತಿದೆ. ಭತ್ತ, ಕಬ್ಬು, ಮುಂತಾದ ಬೆಳೆಗಳು ತೇವಾಂಶದ ಕೊರತೆಯನ್ನು ಎದುರಿಸುತ್ತಿವೆ. ಇದು ಇಳುವರಿಯ ಮೇಲೆ ಪರಿಣಾಮ ಬೀರುವುದರೊಂದಿಗೆ, ರೈತರನ್ನೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲಿದೆ. ಹವಾಮಾನದಲ್ಲಿನ ವ್ಯತ್ಯಾಸವು ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೀರಿನ ಮೂಲಕ ಹರಡುವ ರೋಗಗಳು, ಸೊಳ್ಳೆಯ ಮೂಲಕ ಹಬ್ಬುವ ಕಾಯಿಲೆಗಳು ಹಾಗೂ ಉದರಸಂಬಂಧಿ ಸಮಸ್ಯೆಗಳು ಬೇಸಿಗೆಯೊಂದಿಗೆ ಹೆಚ್ಚುತ್ತಾ ಹೋಗುವಂತಹವು. ನಾಡಿಗೆ ಮಾತ್ರವಲ್ಲದೆ, ಕಾಡಿಗೂ ಕಿಚ್ಚಿನ ರೂಪದಲ್ಲಿ ಪರಿಣಮಿಸುವ ಒಣಹವೆಯು ಅಪಾಯಕರ.

ಬೇಸಿಗೆಯ ಸಂಕಷ್ಟಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕರು ಸ್ವಯಂ ಎಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಬಿಸಿಲು ತೀವ್ರವಾಗಿರುವ ಸಮಯದಲ್ಲಿ ಮನೆಯಿಂದ ಹೊರಗೆ ಬಾರದಿರುವುದು, ದೇಹಕ್ಕೆ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಆಹಾರ ಪಾನೀಯಗಳಲ್ಲಿ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯದ ಕಾಳಜಿಯನ್ನು ಮಾಡಬೇಕಾಗಿದೆ. ನೀರಿನ ಬಳಕೆ ಮತ್ತು ಮರುಬಳಕೆಯ ಬಗ್ಗೆ ಸಾರ್ವಜನಿಕರು ಎಚ್ಚರ ಮತ್ತು ವಿವೇಕದಿಂದ ವರ್ತಿಸಬೇಕಾಗಿದೆ. ಸರ್ಕಾರ ಕೂಡ ಬೇಸಿಗೆಯ ಝಳದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು, ಋತುಮಾನದ ರೋಗಗಳಿಗೆ ಆಸ್ಪತ್ರೆಗಳನ್ನು ಸಿದ್ಧಪಡಿಸುವುದು ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿವೆ. ವಿದ್ಯುತ್ ಉತ್ಪಾದನಾ ಸಂಸ್ಥೆಗಳು ಗರಿಷ್ಠ ಬೇಡಿಕೆಯ ಸವಾಲನ್ನು ನಿರ್ವಹಿಸಲು ಸಜ್ಜಾಗಬೇಕು. ಇವೆಲ್ಲವೂ ಅನುಸರಿಸಬೇಕಾದ ಆದರ್ಶಗಳಾಗಿರದೆ, ಪಾಲಿಸಲೇ ಬೇಕಾದ ಅಗತ್ಯಗಳಾಗಿವೆ. ತೀವ್ರ ಬೇಸಿಗೆಯ 2016 ನಮಗೆ ಎಚ್ಚರಿಕೆಯ ವರ್ಷವಾಗಿತ್ತು. ಆ ಎಚ್ಚರಿಕೆಯಿಂದ ನಾವು ಯಾವ ಪಾಠವನ್ನೂ ಕಲಿತಿಲ್ಲ ಎನ್ನುವುದನ್ನು 2026 ನೆನಪಿಸುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.