ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹಿಂದಿನ ಪುಸ್ತಕಗಳನ್ನೇ ಮುಂದುವರಿಸಿ ಪರಿಷ್ಕರಣೆ ಮುಂದಿನ ವರ್ಷಕ್ಕಿರಲಿ

Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

ಪರಿಷ್ಕೃತ ಪಠ್ಯಪುಸ್ತಕಗಳ ಬಗ್ಗೆ ಸಾರ್ವಜನಿಕ ವಲಯದಿಂದ ಆಕ್ಷೇಪಗಳು ಮತ್ತು ದೂರುಗಳು ಪ್ರತಿದಿನವೂ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ’ಯನ್ನು ವಿಸರ್ಜಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಆದೇಶ ‘ಕೋಲೂ ಮುರಿಯಬಾರದು, ಹಾವೂ ಸಾಯಬಾರದು’ ಎನ್ನುವ ಮಾತಿಗೆ ತಕ್ಕಂತಿದೆ. ವಿಸರ್ಜನೆಗೊಂಡ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನು ಮಕ್ಕಳ ಕೈಗೆ ನೀಡುವ ಸರ್ಕಾರದ ನಿರ್ಧಾರ, ಪಠ್ಯಪುಸ್ತಕಗಳ ಮೂಲ ಉದ್ದೇಶವನ್ನೇ ಅಣಕಿಸುವಂತಿದೆ.

ಮಕ್ಕಳ ಕಲಿಕೆ ಮತ್ತು ಮನೋವಿಕಾಸಕ್ಕೆ ಕಾರಣವಾಗಬೇಕಾದ ಪುಸ್ತಕಗಳು ಗೊಂದಲಗಳಿಂದ ಮುಕ್ತವಾಗಿರುವುದು ಅವಶ್ಯಕ. ಆದರೆ, ಪರಿಷ್ಕೃತ ಪಠ್ಯಪುಸ್ತಕಗಳ ಕುರಿತು ಹೊಸ ಹೊಸ ದೂರುಗಳು ನಿರಂತರವಾಗಿ ವ್ಯಕ್ತವಾಗುತ್ತಲೇ ಇವೆ. ಪರಿಷ್ಕರಣಾ ಸಮಿತಿಯ ಕಾರ್ಯವೈಖರಿ ಬಗ್ಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿರುವ ಕೆಲವು ಬರಹಗಾರರು ತಮ್ಮ ರಚನೆಗಳನ್ನು ಪಠ್ಯಪುಸ್ತಕಗಳಲ್ಲಿ ಬಳಸಿಕೊಳ್ಳಲು ನೀಡಿದ್ದ ಅನುಮತಿ ಹಿಂತೆಗೆದುಕೊಂಡಿದ್ದಾರೆ. ಕನ್ನಡ ಸಂಘಟನೆಗಳು, ಕೆಲವು ಮಠಾಧೀಶರು, ಶಿಕ್ಷಣ ತಜ್ಞರು ಪರಿಷ್ಕೃತ ಪಠ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ ಪಠ್ಯಗಳಲ್ಲಿ ಇರುವ ಲೋಪದೋಷಗಳ ಕುರಿತು ಸಾರ್ವಜನಿಕ ವಲಯದಿಂದಲೂ ಟೀಕೆಟಿಪ್ಪಣಿಗಳು ವ್ಯಕ್ತವಾಗುತ್ತಿವೆ.

ಭಿನ್ನಾಭಿಪ್ರಾಯ ಮತ್ತು ದೂರುಗಳನ್ನು ಬದಿಗಿರಿಸಿ, ವಿವಾದಕ್ಕೆ ಕಾರಣವಾಗಿರುವ ಸಮಿತಿ ರೂಪಿಸಿದ ಪಠ್ಯಪುಸ್ತಕಗಳನ್ನು ಮಕ್ಕಳ ಕೈಗೆ ನೀಡುವುದು ತಾತ್ವಿಕವಾಗಿ ಸರಿಯಾದ ಕ್ರಮವಲ್ಲ. ವಿವಾದಕ್ಕೆ ಕಾರಣವಾದ, ಗೊಂದಲಗಳ ಗೂಡಾದ ಪಠ್ಯಪುಸ್ತಕಗಳನ್ನು ಎಳೆಯ ಮನಸ್ಸುಗಳ ಮೇಲೆ ಹೇರುವ ಸರ್ಕಾರದ ಪ್ರಯತ್ನಕ್ಕೆ ಯಾವ ಸಮರ್ಥನೆಯೂ ಇಲ್ಲ. ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವುದು ಸದ್ಯಕ್ಕೆ ಸರ್ಕಾರದ ಮುಂದಿರುವ ವಿವೇಕದ ದಾರಿ. ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಿರುವ ಸಿಬಿಎಸ್‌ಇ ನಿರ್ಧಾರವು ರಾಜ್ಯ ಪಠ್ಯಕ್ರಮಕ್ಕೂ ಮಾದರಿಯಾಗಬೇಕು.

ಪ್ರಸ್ತುತ ಸಿದ್ಧಗೊಂಡಿರುವ ಪಠ್ಯಪುಸ್ತಕಗಳು ಯಾರಿಗೂ ತೃಪ್ತಿ ತಂದಂತಿಲ್ಲ. ಅಂಬೇಡ್ಕರ್‌ ಕುರಿತ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಎನ್ನುವ ವಿಶೇಷಣವನ್ನು ಬಿಟ್ಟಿರುವುದರ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಲಿತ ಬರಹಗಾರರ ಬರಹಗಳನ್ನು ಪ್ರಜ್ಞಾಪೂರ್ವಕವಾಗಿ ಕೈಬಿಡಲಾಗಿದೆ ಎಂದು ಹೇಳಲಾಗು ತ್ತಿದೆ. ಪರಿಷ್ಕರಣಾ ಸಮಿತಿ ಅಧ್ಯಕ್ಷರಿಂದ ಕುವೆಂಪು ಅವರಿಗೆ ಅವಮಾನವಾಗಿದೆ ಎಂದು ಒಕ್ಕಲಿಗ ಸಮುದಾಯ ಆರೋಪಿಸಿದೆ. ಬಸವಣ್ಣನವರ ಚಿತ್ರಣವು ಅವರ ಬದುಕು ಮತ್ತು ಆಶಯಗಳಿಗೆ ತಕ್ಕಂತಿಲ್ಲ ಎಂದು ಲಿಂಗಾಯತ ಸಮುದಾಯ ತಕರಾರು ಎತ್ತಿದೆ. ಧರ್ಮಗುರುಗಳನ್ನು ಪರಿಚಯಿಸುವ ಟಿಪ್ಪಣಿಗಳಲ್ಲಿ ಕೆಲವರಿಗೆ ಏಕವಚನ, ಮತ್ತೆ ಕೆಲವರಿಗೆ ಬಹುವಚನ ಬಳಸಿರುವ ಬರವಣಿಗೆಗಳೂ ಟೀಕೆಗೊಳಗಾಗಿವೆ. ಪ್ರಖ್ಯಾತ ಗೀತರಚನೆಕಾರ ಚಿ. ಉದಯಶಂಕರ್‌ ಅವರ ಗೀತೆಯನ್ನು ಆರ್‌.ಎನ್‌. ಜಯಗೋಪಾಲ್‌ ಹೆಸರಿನಲ್ಲಿ ಬಳಸಿಕೊಳ್ಳಲಾಗಿದೆ. ಒಂದೇ ಪದ್ಯವನ್ನು ಎರಡು ತರಗತಿಗಳ ಪಠ್ಯಗಳಲ್ಲಿ ಬಳಸಿಕೊಳ್ಳಲಾಗಿದೆ. ಹೀಗೆ, ಪರಿಷ್ಕೃತ ಪಠ್ಯಗಳ ಬಗ್ಗೆ ದಿನವೂ ಹೊಸ ಹೊಸ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಇಷ್ಟೆಲ್ಲ ದೂರುಗಳನ್ನು ಒಳಗೊಂಡ ಪಠ್ಯಪುಸ್ತಕಗಳನ್ನು ಮಕ್ಕಳ ಕೈಗೆ ಕೊಡುವುದು ನೈತಿಕತೆ ಅಲ್ಲ, ಶೈಕ್ಷಣಿಕ ಶಿಸ್ತೂ ಅಲ್ಲ.

ಪಠ್ಯಪುಸ್ತಕ ಪರಿಷ್ಕರಣೆಯು ಅವಸರದಲ್ಲಿ ನಡೆಯುವಂತಹದ್ದಲ್ಲ. ಹೆಚ್ಚು ಕಾಲಾವಕಾಶ, ಸಂಯಮ, ಪರಿಣತಿ ಹಾಗೂ ವಿವೇಕವನ್ನು ಅಪೇಕ್ಷಿಸುವ ಪ್ರಕ್ರಿಯೆಯದು. ಪಠ್ಯಪುಸ್ತಕಗಳನ್ನು ಯಾರು ಪರಿಷ್ಕರಣೆ ಮಾಡಬೇಕೆನ್ನುವುದು ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಸಂಗತಿ. ಯಾರ, ಯಾವ ಬರಹಗಳನ್ನು ಪಾಠಗಳನ್ನಾಗಿ ಮಾಡಬೇಕೆನ್ನುವುದು ಆಯ್ಕೆ ಸಮಿತಿಗೆ ಸಂಬಂಧಿಸಿದ ಸಂಗತಿ. ಆದರೆ, ಈ ಆಯ್ಕೆಗಳು ಹಾಗೂ ಪರಿಷ್ಕರಣೆಯು ಗೊಂದಲಗಳಿಗೆ ಆಸ್ಪದ ಕಲ್ಪಿಸಬಾರದು. ಆದಷ್ಟೂ ಸರ್ವಸಮ್ಮತ ಪಠ್ಯಪುಸ್ತಕ ಗಳನ್ನು ರೂಪಿಸಲಿಕ್ಕೆ ಸರ್ಕಾರ ‍ಪ್ರಯತ್ನಿಸಬೇಕು. ಆ ಪ್ರಯತ್ನವನ್ನು ಮಾಡದೆ, ಅವಸರದಲ್ಲಿ ಪಠ್ಯ ಪರಿಷ್ಕರಣೆ ಮುಗಿಸುವುದು ಮತ್ತಷ್ಟು ಎಡವಟ್ಟುಗಳಿಗೆ ಅವಕಾಶ ಮಾಡಿಕೊಡುತ್ತದೆ ಎನ್ನುವುದಕ್ಕೆ ಪ್ರಸ್ತುತ ಪರಿಷ್ಕೃತಗೊಂಡಿರುವ ಪಠ್ಯಗಳು ಉದಾಹರಣೆಯಂತಿವೆ.

ಈ ಪಠ್ಯಪುಸ್ತಕಗಳನ್ನು ಸರ್ಕಾರ ತಡೆ ಹಿಡಿದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪುಸ್ತಕಗಳನ್ನೇ ಮುಂದುವರಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಾಗಿರುವ ಕ್ರಮ. ಗೊಂದಲಗಳ ಗೂಡಾದ ಪರಿಷ್ಕೃತ ಪಠ್ಯಗಳನ್ನು ಉಳಿಸಿ ಕೊಳ್ಳುವುದನ್ನು ಸರ್ಕಾರ ಪ್ರತಿಷ್ಠೆಯ ವಿಷಯವಾಗಿ ಭಾವಿಸಬಾರದು. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಎದುರಾಗಿರುವ ತಾತ್ವಿಕ ವಿರೋಧವನ್ನು ಹಾಗೂ ಸಾರ್ವಜನಿಕ ಅಭಿಪ್ರಾಯಗಳನ್ನು ಸರ್ಕಾರ ಸಾವಧಾನದಿಂದ ಪರಿಶೀಲಿಸಬೇಕು. ಹಟಮಾರಿ ಧೋರಣೆಯನ್ನು ಕೈಬಿಟ್ಟು, ವಿದ್ಯಾರ್ಥಿಗಳ ಹಿತವನ್ನಷ್ಟೇ ಗಮನದಲ್ಲಿ ಇಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕು. ಪರಿಷ್ಕೃತ ಪಠ್ಯಪುಸ್ತಕಗಳ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿದ ನಂತರ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸುವುದಕ್ಕೆ ಅವಕಾಶ ಇದ್ದೇ ಇದೆ. ಆ ಕೆಲಸವನ್ನು ಮಾಡದೆ, ಈಗ ಸಿದ್ಧ ಗೊಂಡಿರುವ ಪುಸ್ತಕಗಳನ್ನೇ ಮಕ್ಕಳ ಕೈಗೆ ಕೊಡಲು ಹೊರಡುವುದು ಪ್ರಜಾಸತ್ತಾತ್ಮಕ ಸರ್ಕಾರಕ್ಕೆ ಶೋಭೆ ತರುವ ನಡವಳಿಕೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT