ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತಾರಪುರ: ಸರ್ಕಾರಗಳ ಬಾಂಧವ್ಯದ ಇರಿಸುಮುರಿಸು ಅಡ್ಡಿಯಾಗದಿರಲಿ

Last Updated 28 ನವೆಂಬರ್ 2018, 20:21 IST
ಅಕ್ಷರ ಗಾತ್ರ

ಗುರು ನಾನಕ್ ಅವರ 550ನೇ ಜನ್ಮ ವರ್ಷಾಚರಣೆ ಇಡೀ ವರ್ಷ ನಡೆಯಲಿರುವ ಪ್ರಸಕ್ತ ಸಂದರ್ಭದಲ್ಲಿ ಭಾರತ– ಪಾಕಿಸ್ತಾನ ಬಾಂಧವ್ಯಕ್ಕೆ ಹೊಸ ಆರಂಭ ದೊರೆತಿದೆ. ಕರ್ತಾರಪುರ ಕಾರಿಡಾರ್ ನಿರ್ಮಾಣಕ್ಕೆ ಉಭಯ ರಾಷ್ಟ್ರಗಳಲ್ಲಿ ಶಿಲಾನ್ಯಾಸ ಕಾರ್ಯಕ್ರಮಗಳು ನೆರವೇರಿವೆ. ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ನಡೆಸಿದ ದಾಳಿಗೆ ಮೊನ್ನೆಯಷ್ಟೇ ಅಂದರೆ ನವೆಂಬರ್ 26ಕ್ಕೆ ಹತ್ತು ವರ್ಷ ತುಂಬಿದ ಸಂದರ್ಭ ಇದು. ಆಗಿನಿಂದಲೂ ಭಾರತ– ಪಾಕಿಸ್ತಾನದ ನಡುವೆ ಬಾಂಧವ್ಯ ಕುದುರಿಲ್ಲ.

ಸುಸ್ಥಿರ ನೆಲೆಯಲ್ಲಿ ಮಾತುಕತೆಗಳು ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಾಣ ಯತ್ನ ನಡೆದಿದೆ. ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್ ಅವರು ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ ಸ್ಥಳ ಇದು. ಈಗ ಈ ಧಾರ್ಮಿಕ ಕಾರಿಡಾರ್‌ಗೆ ಉಭಯ ರಾಷ್ಟ್ರಗಳ ನಡುವೆ ವಿಶ್ವಾಸ ಹಾಗೂ ಶಾಂತಿಯನ್ನು ತರುವ ಸಾಮರ್ಥ್ಯವಿದೆ ಎಂಬುದು ಉಭಯ ರಾಷ್ಟ್ರಗಳ ಗಡಿಭಾಗಗಳ ಜನರ ಭಾವನೆ.ಎರಡೂ ರಾಷ್ಟ್ರಗಳ ಈ ನಿರ್ಧಾರವನ್ನು ಬರ್ಲಿನ್ ಗೋಡೆ ಪತನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೋಲಿಕೆ ಮಾಡಿದ್ದಾರೆ.

ಎರಡೂ ರಾಷ್ಟ್ರಗಳ ಮಧ್ಯದ ಉದ್ವಿಗ್ನತೆಯನ್ನು ಇದು ಕಡಿಮೆ ಮಾಡಬಹುದು ಎಂಬ ಆಶಯ ಇಲ್ಲಿದೆ. ಹೀಗೆಂದಾಕ್ಷಣ, ದ್ವಿಪಕ್ಷೀಯ ಮಾತುಕತೆಗಳು ಶುರುವಾಗಿ ಬಿಡುತ್ತವೆ ಎಂದೇನೂ ಇಲ್ಲ. ಏಕೆಂದರೆ ಇದೇ ಸಂದರ್ಭದಲ್ಲಿಯೇ ‘ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ಸಾಗುವುದು ಸಾಧ್ಯವಿಲ್ಲ’ ಎಂದು ಸುಷ್ಮಾ ಸ್ವರಾಜ್ ಪುನರುಚ್ಚರಿಸಿದ್ದಾರೆ.

ಜೊತೆಗೆ, ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತ ತಿರಸ್ಕರಿಸಿದೆ. ಇಂತಹ ಸನ್ನಿವೇಶದಲ್ಲಿ ಕರ್ತಾರಪುರ ಕಾರಿಡಾರ್ ನಿರ್ಮಾಣ ವಿಚಾರದಲ್ಲಿ ಕೈಗೊಂಡ ನಿರ್ಧಾರದ ಕೀರ್ತಿ ತಮಗೇ ಸಲ್ಲಬೇಕು ಎಂಬ ರೀತಿಯ ಹೇಳಿಕೆಗಳು ಎರಡೂ ರಾಷ್ಟ್ರಗಳಲ್ಲಿ ಕೇಳಿ ಬರುತ್ತಿರುವುದು ವಿರೋಧಾಭಾಸದ ಸಂಗತಿ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಉಪಕ್ರಮವನ್ನು ಮುಂದಕ್ಕೊಯ್ಯುವುದು ಸದ್ಯದ ಅಗತ್ಯ.

ವೀಸಾ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ವಿವರಗಳು ಸ್ಪಷ್ಟವಾಗಬೇಕಿವೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಯಾತ್ರಾರ್ಥಿಗಳ ಭೇಟಿಗೆ ಅವಕಾಶ ಇರುತ್ತದೆಯೇ? ವರ್ಷದ ಎಲ್ಲಾ ದಿನಗಳಲ್ಲೂ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆಯೇ? ಯಾತ್ರಾರ್ಥಿಗಳು ಗುಂಪಾಗಿ ಹೋಗಬೇಕೇ? ಅಥವಾ ಏಕಾಂಗಿಯಾಗಿ ವ್ಯಕ್ತಿಯೂ ಹೋಗಬಹುದೇ? ಎಷ್ಟು ದಿನಗಳು ತಂಗಬಹುದು? ಯಾತ್ರಾರ್ಥಿಗಳನ್ನು ಕುರಿತಾದ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ 1974ರಲ್ಲಿ ಸಹಿ ಹಾಕಿವೆ.

ಈ ಪ್ರಕಾರ, ಉಭಯ ರಾಷ್ಟ್ರಗಳಲ್ಲಿರುವ ಕೆಲವೇ ಮಂದಿರಗಳಿಗೆ ಭೇಟಿ ನೀಡಲು ಎರಡೂ ರಾಷ್ಟ್ರಗಳು ಸಂದರ್ಶಕ ವೀಸಾಗಳನ್ನು ನೀಡುತ್ತವೆ. ಆದರೆ ಈಗ ಈ ವೀಸಾ ಮುಕ್ತ ಕಾರಿಡಾರ್ ಭಾರತೀಯರಿಗಷ್ಟೇ ಸೀಮಿತವಾದದ್ದು. ಇದರ ಕಾರ್ಯನಿರ್ವಹಣೆಗೆ ಪ್ರತ್ಯೇಕ ಒಪ್ಪಂದ ಬೇಕಾಗುತ್ತದೆ. ಈ ಬಗ್ಗೆ ಉಭಯ ರಾಷ್ಟ್ರಗಳಲ್ಲೂ ಸ್ಪಷ್ಟತೆ ಅಗತ್ಯ. ಈ ಆಧ್ಯಾತ್ಮಿಕ ಪಯಣದ ಪ್ರಕ್ರಿಯೆಗಳ ಬಗ್ಗೆ ಉಭಯ ದೇಶಗಳ ನಡುವೆ ನಡೆಯುವ ಮಾತುಕತೆಗೆ ಈಗಾಗಲೇ ಉಭಯತ್ರರ ಮಧ್ಯೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ಬಾಂಧವ್ಯದ ಇರಿಸುಮುರಿಸಿನ ಕರಿ ನೆರಳು ಬೀಳಬಾರದು.

ಜನಸಾಮಾನ್ಯರ ನಡುವೆ ಸಂಬಂಧಗಳ ಸೇತುವೆ ಕಟ್ಟುವಾಗ ಸರ್ಕಾರಗಳ ನಡುವೆ ಇರುವ ಕಿರಿಕಿರಿಗಳು ಅಡ್ಡಿಯಾಗಬಾರದು. ಎರಡೂ ರಾಷ್ಟ್ರಗಳು ಪರಸ್ಪರ ಪೂರಕವಾಗಿ ಸ್ಪಂದಿಸಬೇಕು. ಜನಸಾಮಾನ್ಯರಿಗೆ ಸಂಬಂಧಿಸಿದ ಇಂತಹ ಉಪಕ್ರಮಗಳಲ್ಲಿ ಇದು ಮುಖ್ಯ. ಎರಡೂ ಕಡೆಯವರು ಭೇಟಿಯಾಗಿ ಈ ಪ್ರಕ್ರಿಯೆ ಮುಂದಕ್ಕೊಯ್ಯುವ ವಿಚಾರ ಚರ್ಚಿಸುವುದು ಒಳ್ಳೆಯದು.

ಕರ್ತಾರಪುರ ಕಾರಿಡಾರ್‌ನಿಂದಾಗಿ ಉಭಯ ರಾಷ್ಟ್ರಗಳ ಸರ್ವಾಂಗೀಣ ಸಂಬಂಧ ಸುಧಾರಣೆ ಸಾಧ್ಯವಾಗುತ್ತದೆಯೇ ಎಂಬುದನ್ನು ಈಗಲೇ ಹೇಳಲಾಗದು ಎಂಬುದಂತೂ ನಿಜ. ಭಾರತಕ್ಕೆ ಇದು ಚುನಾವಣೆ ವರ್ಷ ಬೇರೆ. ಆದರೆ ಈ ಉಪಕ್ರಮದಿಂದ ಒಂದಿಷ್ಟು ಸ್ಪಂದನಗಳಂತೂ ಸಾಧ್ಯ. ಉಭಯ ರಾಷ್ಟ್ರಗಳಲ್ಲಿನ ಜನರ– ಜನರ ನಡುವಿನ ಅನೇಕ ಉಪಕ್ರಮಗಳಿಗೆ ಇದು ನಾಂದಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT