ಪ್ರತಿಭಾನ್ವಿತ ಉದ್ಯೋಗಾಕಾಂಕ್ಷಿಗಳ ಕನಸುಗಳನ್ನು ಕ್ರೂರವಾಗಿ ಹೊಸಕುತ್ತಲೇ ಇರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಸುಧಾರಣೆ ತರಲು ಸದನ ಸಮಿತಿ ರಚಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಆಯೋಗದ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪ ಎದುರಾದಾಗಲೆಲ್ಲ ಸಮಿತಿ ರಚಿಸಿಯೋ, ತನಿಖೆ ನಡೆಸಿಯೋ ತಮ್ಮ ಮೇಲಿನ ಕಳಂಕದಿಂದ ಪಾರಾಗುವ ಅಡ್ಡಹಾದಿಯನ್ನು ಸರ್ಕಾರಗಳು ಹಿಡಿದಿರುವುದು ಇದು ಮೊದಲೇನಲ್ಲ. 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ 2024ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರ ಪೂರ್ವಭಾವಿ ಪರೀಕ್ಷೆಯಿಂದಲೇ ಆಯೋಗಕ್ಕೆ ಮಸಿ ಮೆತ್ತಿಕೊಳ್ಳಲಾರಂಭಿಸಿತು. ಅಭ್ಯರ್ಥಿಗಳ ಆಕ್ರೋಶಕ್ಕೆ ಮಣಿದ ಸರ್ಕಾರ ಮತ್ತೊಮ್ಮೆ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಸೂಚಿಸಿತು. ಮುಖ್ಯಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಅರ್ಹತೆ ಪಡೆದವರ ಪಟ್ಟಿ ಪ್ರಕಟವಾಗುತ್ತಿದ್ದಂತೆ, ಅಕ್ರಮದ ಆರೋಪ ಆಯೋಗಕ್ಕೆ ಸುತ್ತಿಕೊಂಡಿತು. ವಿಧಾನಸಭೆ ಕಲಾಪದಲ್ಲಿಯೂ ಇದು ಪ್ರತಿಧ್ವನಿಸಿತು. ಸದಸ್ಯರ ಚರ್ಚೆಗೆ ಉತ್ತರ ಕೊಡಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇಷ್ಟೆಲ್ಲಾ ಆಗಿದೆ, ನಾನು ಏನೆಂದು ಉತ್ತರ ಕೊಡಲಿ? ನಮ್ಮ ಬಳಿ ಹೇಳಲು ಏನಿದೆ’ ಎಂದು ಬೇಸರಿಸಿಕೊಂಡು ಉತ್ತರಿಸುವ ಹೊಣೆಯನ್ನು ಸಚಿವ ಕೃಷ್ಣ ಬೈರೇಗೌಡರಿಗೆ ವಹಿಸಿದರು. ‘ಕೆಪಿಎಸ್ಸಿಗೆ ಸುಧಾರಣೆ ತರಲು ಸದನ ಸಮಿತಿ ರಚಿಸಿ, ಅದು ನೀಡುವ ವರದಿ–ಶಿಫಾರಸುಗಳನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸು ತ್ತೇವೆ. ಎಲ್ಲ ಶಿಫಾರಸುಗಳನ್ನು ಅನುಷ್ಠಾನ ಮಾಡುತ್ತೇವೆ’ ಎಂದು ಅವರು ಪ್ರಕಟಿಸಿದ್ದಾರೆ.

2008–2013ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪ ಎದುರಾಗಿತ್ತು. ಬಳಿಕ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಅಂದಿನ ಅಧ್ಯಕ್ಷ ಹಾಗೂ ಕೆಲವು ಸದಸ್ಯರ ವಿರುದ್ಧ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆಗಲೂ ಸದನದಲ್ಲಿ ನಡೆದ ಚರ್ಚೆ ಬಳಿಕ ಕೆಪಿಎಸ್ಸಿ ಸುಧಾರಣೆಗೆ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿತ್ತು. ಆಯೋಗದ ಕಾರ್ಯವೈಖರಿ ಹಾಗೂ ನೇಮಕಾತಿಯಲ್ಲಿ ಸಮಗ್ರ ಪಾರದರ್ಶಕತೆ ತಂದು, ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಮಾದರಿಯೊಳಗೆ ಹಲವು ಶಿಫಾರಸುಗಳನ್ನು ಸಮಿತಿ ಮಾಡಿತ್ತು. ಅಧ್ಯಕ್ಷ, ಸದಸ್ಯರ ಆಯ್ಕೆಗೆ ಶೋಧನಾ ಸಮಿತಿ, ವ್ಯಕ್ತಿತ್ವ ಸಂದರ್ಶನದ ನೇತೃತ್ವವನ್ನು ಅಧ್ಯಕ್ಷ ಅಥವಾ ಹಿರಿಯ ಸದಸ್ಯರೊಬ್ಬರು ನಿರ್ವಹಿಸುವ ಬದಲು ಸದಸ್ಯರೇ ಅಲ್ಲದ, ಹೊರರಾಜ್ಯದ ವಿಷಯ ತಜ್ಞರ ಮೂಲಕ ನಡೆಸಬೇಕು, ಸಂದರ್ಶನದ ತಂಡ ವಾರಕ್ಕೊಮ್ಮೆ ಬದಲಾಗಬೇಕು ಹಾಗೂ ಸಂದರ್ಶನ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಅವರ ಹೆಸರನ್ನು ಬಹಿರಂಗಪಡಿಸಬೇಕು, ಸಂದರ್ಶನಕ್ಕೆ ನಿಗದಿಪಡಿಸಿದ ಅಂಕವೇ ಭ್ರಷ್ಟಾಚಾರಕ್ಕೆ ಕಾರಣವಾಗಿರುವುದರಿಂದ ಅದನ್ನು 200ರಿಂದ 25ಕ್ಕೆ ಇಳಿಸಬೇಕು, ಪರೀಕ್ಷಾ ಪದ್ಧತಿಯಲ್ಲಿ ಸಮಗ್ರ ಬದಲಾವಣೆ ಮಾಡಬೇಕು, ಆಯೋಗದ ಶೇ 50ಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ವರ್ಗಾಯಿಸಿ ಬೇರೆ ಇಲಾಖೆಯಿಂದ ನಿಯೋಜನೆ ಮಾಡಬೇಕು ಎಂಬ ಸಲಹೆಗಳು ಪ್ರಮುಖವಾಗಿದ್ದವು. 2015ರ ಅಕ್ಟೋಬರ್ನಲ್ಲಿ ನಡೆದ ಸಚಿವ ಸಂಪುಟ ಸಭೆ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿತ್ತು. ಅದನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ, ಸದಸ್ಯರ ನೇಮಕದಲ್ಲಿ ತನ್ನ ವಿವೇಚನಾ ಅಧಿಕಾರವನ್ನು ಉಳಿಸಿಕೊಂಡ ಸರ್ಕಾರ, ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಿರುವುದಾಗಿ ಪ್ರತಿಪಾದಿಸಿತು. ಆದರೆ, ಕೆಪಿಎಸ್ಸಿಗೆ ಹಿಡಿದ ಭೀಕರ ರೋಗ ವಾಸಿಯಾಗಲೇ ಇಲ್ಲ.

ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವುದೇ ಸದಸ್ಯರ ನೇಮಕ. ಅದಕ್ಕೆ ಚಿಕಿತ್ಸೆ ಕೊಡಲು ಹೋಗದ ಸರ್ಕಾರ, ಆ ಪರಮಾಧಿಕಾರವನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ಈಗಿರುವ ಅಧ್ಯಕ್ಷರೂ ಸೇರಿ ಹಲವು ಸದಸ್ಯರು ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾದವರು. ಕಾಂಗ್ರೆಸ್ ಸರ್ಕಾರ ಕೆಲವರನ್ನು ನೇಮಕ ಮಾಡಿದೆಯಾದರೂ ಅವರಲ್ಲಿಯೂ ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದವರು ಇದ್ದಾರೆ. ಈಗ, ಮತ್ತೆ ನೇಮಕಾತಿ ಅಕ್ರಮದ ಸದ್ದು ಜೋರಾದ ಮೇಲೆ ಸದನ ಸಮಿತಿ ರಚಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಸದಸ್ಯರ ನೇಮಕದಲ್ಲಿ ಹಣ ಮತ್ತು ಜಾತಿ ಪ್ರಭಾವ ಬೀರುವುದನ್ನು ತಪ್ಪಿಸಿ, ದಕ್ಷರು, ಪ್ರಾಮಾಣಿಕರನ್ನು ನೇಮಿಸದ ಹೊರತು ಸುಧಾರಣೆ ಅಸಾಧ್ಯ ಎಂಬುದು ಸರ್ಕಾರ ನಡೆಸುವವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಹಾಗಾಗಿ, ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಸಲು ನೀಲನಕ್ಷೆ ಹಾಕಿಕೊಟ್ಟ ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವುದು ಬಿಟ್ಟು, ಸದನ ಸಮಿತಿ ರಚನೆ ಎಂಬ ಕಾಲಹರಣದ ತೀರ್ಮಾನವು ಜನರ ಕಣ್ಣಿಗೆ ಮಣ್ಣೆರಚುವ ತಂತ್ರವಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.