ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಕೊನೆಗೊಳ್ಳಲಿ

7

ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಕೊನೆಗೊಳ್ಳಲಿ

Published:
Updated:
Deccan Herald

ಶ್ರೀಲಂಕಾದ ಸಂಸದೀಯ ಬಿಕ್ಕಟ್ಟು ಹೊಸ ತಿರುವು ಪಡೆದುಕೊಂಡಿದೆ. ಬುಧವಾರ ಸಂಸತ್ತಿನಲ್ಲಿ ಪ್ರಧಾನಿ ಮಹಿಂದ ರಾಜಪಕ್ಸೆ ವಿರುದ್ಧ ಸದಸ್ಯರು ಸ್ಪಷ್ಟ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. 225 ಸದಸ್ಯ ಬಲದ ಸಂಸತ್ತಿನಲ್ಲಿ 122 ಸದಸ್ಯರು ರಾಜಪಕ್ಸೆ ನೇತೃತ್ವದ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಮತದಾನದ ಪ್ರಕ್ರಿಯೆಯನ್ನು ಭಂಗಗೊಳಿಸಲು ರಾಜಪಕ್ಸೆ ಅವರ ಪರವಿದ್ದ ಸದಸ್ಯರು ಗದ್ದಲ ಎಬ್ಬಿಸಿದರು. ಸ್ವತಃ ರಾಜಪಕ್ಸೆ ಅವರೇ ಸಭಾತ್ಯಾಗ ಮಾಡಿದರು. ಇದ್ಯಾವುದೂ ಫಲ ನೀಡಲಿಲ್ಲ. ಸ್ಪೀಕರ್‌ ಅವರು ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದೆ ಎಂದು ಪ್ರಕಟಿಸಿದರು. ಈ ಮೂಲಕ ಸಂಸತ್ತಿನಲ್ಲಿ ಪದಚ್ಯುತ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಕೈಮೇಲಾಗಿದೆ. ಆದರೆ ಈ ತಕ್ಷಣಕ್ಕೆ ವಿಕ್ರಮಸಿಂಘೆಯವರೇ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎನ್ನುವಂತಿಲ್ಲ. ಅದೇನಿದ್ದರೂ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರವನ್ನು ಅವಲಂಬಿಸಿದೆ. ಅವರು ತಮ್ಮ ಅಧ್ಯಕ್ಷೀಯ ಪರಮಾಧಿಕಾರವನ್ನು ಬಳಸಿಕೊಂಡು ಈ ಹಿಂದೆ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದ್ದರು. ಈಗ ಬೇರೊಬ್ಬರನ್ನು ನೇಮಿಸುವ ನಿರ್ಧಾರವನ್ನು ಕೈಗೊಂಡರೆ ಸಂಸತ್‌ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ರಾಜಕೀಯ ಮತ್ತು ಸಾಂವಿಧಾನಿಕ ಸ್ಥಿರತೆಯ ಭರವಸೆಯೊಂದಿಗೆ ರಾಷ್ಟ್ರದ ಅಧ್ಯಕ್ಷರಾದ ಸಿರಿಸೇನಾ ಮುತ್ಸದ್ದಿತನ ತೋರಬೇಕು. ಆಡಳಿತದಲ್ಲಿ ಉಂಟಾಗಿರುವ ಗೊಂದಲವನ್ನು ಆ ಮೂಲಕ ನಿವಾರಿಸಬೇಕು.

ದ್ವೀಪರಾಷ್ಟ್ರ ಶ್ರೀಲಂಕಾ ಈಗ ಎದುರಿಸುತ್ತಿರುವ ಸಂಸದೀಯ ಗೊಂದಲಗಳಿಗೆ ಸಿರಿಸೇನಾ ಅವರ ಅಪಕ್ವ ನಿರ್ಧಾರಗಳೇ ಕಾರಣ ಎನ್ನದೆ ನಿರ್ವಾಹವಿಲ್ಲ. ಸಾಂವಿಧಾನಿಕ ನಿರ್ಬಂಧಗಳನ್ನು ಉಲ್ಲಂಘಿಸಿ ಸಿರಿಸೇನಾ ಅವರು ಚುನಾಯಿತ ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಅಕ್ಟೋಬರ್‌ 26ರಂದು ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿದರು. ಈ ನೇಮಕಾತಿ ವೇಳೆ ಸಂಸತ್ತಿನಲ್ಲಿ ಅವರಿಗೆ ಬಹುಮತ ಇದೆಯೇ ಎನ್ನುವುದನ್ನು ಸಿರಿಸೇನಾ ಅವರು ಪರಿಶೀಲಿಸದೇ ಹೋದುದು ಆಶ್ಚರ್ಯಕರ. ರಾಜಪಕ್ಸೆ ಅವರು ಒಬ್ಬರೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ ಅವರು ಪಕ್ಷಾಂತರವನ್ನು ಪ್ರೇರೇಪಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದರು ಎನ್ನುವುದು ಸ್ಪಷ್ಟ. ಬಹುಮತವನ್ನು ಸಾಬೀತುಪಡಿಸಲು ರಾಜಪಕ್ಸೆ ಅವರಿಗೆ ಸಾಧ್ಯವಾಗದಾಗ ಸಿರಿಸೇನಾ ಸಂಸತ್ತನ್ನು ವಿಸರ್ಜಿಸಿದರು. ಕೊನೆಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ ಅಧ್ಯಕ್ಷರ ಈ ಆದೇಶವನ್ನು ಅನೂರ್ಜಿತಗೊಳಿಸಿತು. ಈಗ ರಾಜಪಕ್ಸೆ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸುವ ಮೂಲಕ ಹೆಚ್ಚಿನ ಸಂಸತ್‌ ಸದಸ್ಯರು ವಿಕ್ರಮಸಿಂಘೆ ಅವರನ್ನೇ ಪುನಃ ಪ್ರಧಾನಿಯಾಗಿಸಲು ಒಲವು ತೋರಿಸಿದ್ದಾರೆ. ಈ ಇಂಗಿತವನ್ನು ಸರಿಯಾಗಿ ಗ್ರಹಿಸಿ ಹೊಸ ಪ್ರಧಾನಿಯನ್ನು ನೇಮಿಸಲು ಸಿರಿಸೇನಾ ಮುಂದಾಗಬೇಕು. ವಿಕ್ರಮಸಿಂಘೆ ಅವರ ಕುರಿತು ವೈಯಕ್ತಿಕ ಪೂರ್ವಗ್ರಹಗಳೇನಿದ್ದರೂ ಅವುಗಳನ್ನು ಬದಿಗಿಟ್ಟು ಆಡಳಿತದ ಹಿತದೃಷ್ಟಿಯಿಂದ ಸಿರಿಸೇನಾ ಅವರು ನಿಷ್ಪಕ್ಷಪಾತ ನಿಲುವನ್ನು ತಳೆಯಬೇಕು. ಅಧ್ಯಕ್ಷರೇ ಮಂದೆ ನಿಂತು ಸಂವಿಧಾನದ ವಿಧಿಗಳನ್ನು ನಿರ್ಲಕ್ಷ್ಯ ಮಾಡಿ, ಬಿಕ್ಕಟ್ಟನ್ನು ಇನ್ನಷ್ಟು ಜಟಿಲಗೊಳಿಸುವುದು ಎಳ್ಳಷ್ಟೂ ಸರಿಯಲ್ಲ. ದೇಶ ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರೊಂದಿಗೆ ಸಂಸದೀಯ ಬಿಕ್ಕಟ್ಟು ಸಹ ಸೇರಿಕೊಂಡರೆ ಅಂತಃಕಲಹ ಹೆಚ್ಚುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !