ಟೆಸೆರಾಕ್ಟ್‌ ಓಸಿಆರ್‌ಬಳಸಿ ಡಿಟಿಪಿ ವೆಚ್ಚ ಉಳಿಸಿ

7

ಟೆಸೆರಾಕ್ಟ್‌ ಓಸಿಆರ್‌ಬಳಸಿ ಡಿಟಿಪಿ ವೆಚ್ಚ ಉಳಿಸಿ

Published:
Updated:

ಕನ್ನಡ ಮತ್ತು ಇತರೆ 17 ಭಾರತೀಯ ಭಾಷೆಗಳ ಪಠ್ಯಚಿತ್ರಗಳನ್ನು ಪಠ್ಯವಾಗಿ ಪರಿವರ್ತಿಸುವ (ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌– ಓಸಿಆರ್) ‘ಟೆಸೆರಾಕ್ಟ್‌’ ಎಂಬ (4.0 ಆವೃತ್ತಿ) ತಂತ್ರಾಂಶವನ್ನು ಗೂಗಲ್‌ ಸಂಸ್ಥೆಯು ಬಿಡುಗಡೆ ಮಾಡಿದೆ. ಈ ತಂತ್ರಾಂಶವು ದಕ್ಷತೆಯಿಂದ ಕೆಲಸ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತು ಇತರ ಸಂಘ ಸಂಸ್ಥೆಗಳು ಈ ತಂತ್ರಾಂಶದ ಸದುಪಯೋಗ ಪಡೆಯಬೇಕು.

ಇದರಿಂದ ಈಗ ಮುದ್ರಿತ ಪುಸ್ತಕ ಅಥವಾ ಪಿಡಿಎಫ್‌ ಪ್ರತಿಗಳನ್ನು ನೋಡಿ ಡಿಟಿಪಿ (ಅಕ್ಷರ ಜೋಡಣೆ) ಮಾಡುತ್ತಿರುವ ಬಹುತೇಕ ಕೆಲಸಗಳನ್ನು ಈ ತಂತ್ರಾಂಶದ ಮೂಲಕ ಕೆಲವೇ ನಿಮಿಷಗಳಲ್ಲಿ ಮಾಡಬಹುದಾಗಿದೆ. ಶಾಸನ, ತಾಳೆಗರಿ ಅಥವಾ ಮೋಡಿ ಅಕ್ಷರಗಳಲ್ಲಿರುವ ಕನ್ನಡವನ್ನು ಹೊರತುಪಡಿಸಿ ಯಾವುದೇ ಲೆಟರ್‌ಪ್ರೆಸ್‌ ಅಕ್ಷರಗಳನ್ನು ಚೆನ್ನಾಗಿ ಗುರುತಿಸುವ ಟೆಸೆರಾಕ್ಟ್‌ ತಂತ್ರಾಂಶವನ್ನು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂಗಳಲ್ಲಿ ಸುಲಭವಾಗಿ ಬಳಸಬಹುದು. 

ನಾನು ಈ ತಂತ್ರಾಂಶವನ್ನು ಬಳಸಿ ಪಿಡಿಎಫ್‌ ರೂಪದ 10 ಸಾವಿರ ಪುಟಗಳನ್ನು ಕೇವಲ 8 ಗಂಟೆಗಳಲ್ಲಿ ಪಠ್ಯ ಕಡತವಾಗಿ ಪರಿವರ್ತಿಸಿದ್ದೇನೆ. 4.50 ಲಕ್ಷ ಪದಗಳ ಡಿಟಿಪಿಗೆ ತಗುಲುವ ಸಮಯ ಮತ್ತು ವೆಚ್ಚವನ್ನು ಗಮನಿಸಿದರೆ, ಟೆಸೆರಾಕ್ಟ್‌ ನಿಜಕ್ಕೂ ಅನುಕೂಲಕರ. ಮೊದಲ ಹಂತದಲ್ಲಿ ಎಲ್ಲ ಪುಟಗಳನ್ನೂ ಚಿತ್ರರೂಪದ  (TIFF ಫಾರ್ಮಾಟ್) ಕಡತವಾಗಿ ಪರಿವರ್ತಿಸುವ ಕೆಲಸ ಮಾಡಬೇಕಾಗುತ್ತದೆ. ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್‌ ಮಾಡಿ ಅಥವಾ ಪಿಡಿಎಫ್‌ ಕಡತಗಳೇ ಇದ್ದರೆ ಅವನ್ನು ಪರಿವರ್ತಿಸಿ ಚಿತ್ರ ಕಡತಗಳನ್ನು ರೂಪಿಸಬೇಕು. ಅದಾದ ಮೇಲೆ ಟೆಸೆರಾಕ್ಟ್‌ ತಂತ್ರಾಂಶ, ನೋಟ್‌ಪ್ಯಾಡ್‌ ಕಡತಗಳನ್ನು ಜೋಡಿಸುವ ಪುಟ್ಟ ಉಚಿತ ತಂತ್ರಾಂಶ ಟೆಕ್ಸ್ಟ್‌ಕಲೆಕ್ಟರ್‌, ನೋಟ್‌ಪ್ಯಾಡ್‌++ - ಈ ಮೂರು ತಂತ್ರಾಂಶಗಳನ್ನು ಒಂದಾದ ಮೇಲೆ ಒಂದು ಬಳಸಿದರೆ ಅತಿ ಶೀಘ್ರದಲ್ಲಿ ಪಠ್ಯ ಕಡತವು ಸಿದ್ಧವಾಗುತ್ತದೆ.

ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳು ಮುದ್ರಿತ, ಪಿಡಿಎಫ್‌ ಪುಸ್ತಕಗಳ ಡಿಟಿಪಿ ಮಾಡುವುದರ ಬದಲು, ಟೆಸೆರಾಕ್ಟನ್ನೇ ಬಳಸಿ ಭಾರಿ ಪ್ರಮಾಣದಲ್ಲಿ ಸಾರ್ವಜನಿಕ ಹಣದ ವೆಚ್ಚವನ್ನು ತಡೆಯಬಹುದಾಗಿದೆ.

ಈ ಮಧ್ಯೆ ಭಾರತೀಯ ವಿಜ್ಞಾನ ಸಂಸ್ಥೆಯು ರೂಪಿಸಿದ್ದ ಕನ್ನಡ ಓಸಿಆರ್‌ ತಂತ್ರಾಂಶದ ಪುಟವೇ ಆ ಸಂಸ್ಥೆಯ ಜಾಲತಾಣದಿಂದ ಕಾಣೆಯಾಗಿದೆ. ಇದು ಸಾರ್ವಜನಿಕ ಹಣ ಬಳಸಿ ರೂಪಿಸಿದ ತಂತ್ರಾಂಶದ ಬಗ್ಗೆ ಸಂಸ್ಥೆಯು ಹೊಂದಿದ ನಿರ್ಲಕ್ಷ್ಯಕ್ಕೆ ನಿದರ್ಶನ. 

ಬೇಳೂರು ಸುದರ್ಶನ, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !