ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿರ್ವಾಹಕ ಆಶಯ ಆಚರಿಸದಿರಿ

ದಲಿತ ಮಹಿಳಾ ಸಾಹಿತ್ಯ ಕಮ್ಮಟದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ
Last Updated 10 ಜೂನ್ 2018, 13:39 IST
ಅಕ್ಷರ ಗಾತ್ರ

ಕೋಲಾರ: ‘ದಲಿತ ಪದ ಬಳಕೆ ಮಾಡದಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆದೇಶಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂಬ ಪದ ಬಳಸುವಂತೆ ಸೂಚಿಸಿದೆ. ಇದೆಲ್ಲಾ ಸ್ವಲ್ಪ ದಿನವಷ್ಟೇ. ಜಾತಿ ನಿರ್ವಾಹಕ ಆಶಯಗಳನ್ನು ಆಚರಿಸದೆ ಇರುವುದು ಉತ್ತಮ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಲಿತ ಮಹಿಳಾ ಸಾಹಿತ್ಯ ಕಮ್ಮಟದಲ್ಲಿ ಮಾತನಾಡಿ, ‘ಸಗಣಿ ಬಳಿಯುತ್ತಿದ್ದ ಮಹಿಳೆಯರ ಕೈ ಲೇಖನಿ ಹಿಡಿಯುವಂತಾಗಿದೆ. ನಾಳೆ ಇದೇ ಕೈಗೆ ಗನ್ ಕೊಟ್ಟಲ್ಲಿ ಏನಾಗಬಹುದೆಂದು ಆಲೋಚಿಸಿದರೆ ರೋಮಾಂಚನವಾಗುತ್ತದೆ’ ಎಂದರು.

‘ಈ ಹಿಂದೆ ದಲಿತ ಮಹಿಳಾ ಸಾಹಿತ್ಯದಲ್ಲಿ ದೌರ್ಜನ್ಯ, ಕಿರುಕುಳ ಬಿಟ್ಟರೆ ಬೇರೆ ವಿಶೇಷತೆ ಕಾಣುತ್ತಿರಲಿಲ್ಲ. ಇಂದು ದಲಿತ ಮಹಿಳೆಯರ ಬರವಣಿಗೆಯಲ್ಲಿ ಆಶಾದಾಯಕ ಅಂಶ ಕಾಣಬಹುದು. ದಲಿತ ನಡೆಯು ನಾಲ್ಕೂವರೆ ದಶಕದ ಹಿಂದೆಯೇ ಆರಂಭವಾಗಿದ್ದರೂ ದಲಿತ ಮಹಿಳಾ ಸಾಹಿತ್ಯವು ಇತ್ತೀಚೆಗೆ ಬೆಳಕಿನ ಕಿಂಡಿಯಂತೆ ಹೊರಗೆ ಕಾಣುತ್ತಿದೆ’ ಎಂದು ಹೇಳಿದರು.

ಶೋಷಣೆಯ ಚಿತ್ರಣ: ‘ಇತ್ತೀಚಿನ ದಲಿತ ಹೋರಾಟಗಳ ಪ್ರವಾಹಕ್ಕೆ ಮಹಿಳೆಯರು ಸಿಲುಕಿಲ್ಲ. ಈ ಹಿಂದೆ ಎರಡು ತಲೆಮಾರುಗಳ ದಲಿತ ಮಹಿಳೆಯರು ಅನುಭವಿಸಿದ ಶೋಷಣೆ ಈಗಿನ ತಲೆಮಾರಿಗೆ ತಿಳಿದಿಲ್ಲ. ಹಿಂದಿನ ಕಾಲಘಟ್ಟದಲ್ಲಿ ದಲಿತ ಮಹಿಳೆಯ ಮೇಲೆ ಊಳಿಗ
ಮಾನ್ಯ ಪದ್ಧತಿ ಇತ್ತು. ಕವಿ ಗದ್ದರ್‌ ಅವರ ಕ್ರಾಂತಿಕಾರಿ ಹಾಡುಗಳಲ್ಲಿ ದಲಿತ ಮಹಿಳೆಯ ಶೋಷಣೆಯ ಚಿತ್ರಣ ಕಾಣಬಹುದು. ಇದೇ ಆಧಾರ
ವಾಗಿ ದಲಿತ ಸಾಹಿತ್ಯಕ್ಕೆ ಸರಕು ಸಿಕ್ಕಿತು’ ಎಂದು ತಿಳಿಸಿದರು.

‘ದಲಿತರ ಮೀಸಲಾತಿ ಹಕ್ಕು ಸಾಮಾಜಿಕ ಸಮೂಹದಲ್ಲಿ ಕಾಣುತ್ತಿದೆ. ಆದರೆ, ದಲಿತರು ಜಾತಿ ಮೀರಿದ ವೈರುಧ್ಯ ನಿರ್ಮಿಸಬೇಕಿದೆ. ಸಾಮಾಜಿಕ ಸ್ಥರವು ಹಿಂದಿನಂತೆ ಇಲ್ಲದೆ ಪರಿಧಿಗೆ ತಳ್ಳಲ್ಪಟ್ಟಿದ್ದೇವೆ. ಪರಿಧಿಯಿಂದ ಕೇಂದ್ರಕ್ಕೆ ಅಥವಾ ಕೇಂದ್ರದಿಂದ ಪರಿಧಿಗೆ ಬರುತ್ತಿ
ದ್ದೇವೆಯೇ ಎಂಬುದನ್ನು ತಿಳಿಯದೆ ಗೊಂದಲಕ್ಕೆ ಸಿಲುಕಿದ್ದೇವೆ. ಎಲ್ಲರ ಬದುಕಿನಲ್ಲಿ ದುಡಿಮೆ ಗುರಿಯಾಗಬೇಕು’ ಎಂದು ಸಲಹೆ ನೀಡಿದರು.

ವ್ಯಾಖ್ಯಾನ ಬದಲಾಗಿದೆ: ‘ದಲಿತ ಎಂಬ ಪದವು ಸರ್ಕಾರದ ವ್ಯಾಖ್ಯಾನವಾಗಿದ್ದು, ಕಾಲದಿಂದ ಕಾಲಕ್ಕೆ ಈ ವ್ಯಾಖ್ಯಾನ ಬದಲಾಗಿದೆ. ಸಾಂಸ್ಕೃತಿಕ ವ್ಯಾಖ್ಯಾನವನ್ನು ಕಾಲಕಾಲಕ್ಕೆ ಮುಂದುವರಿಸಿ ಕಟ್ಟಿ ಹಾಕಲಾಗಿದೆ. ಸಾಂಸ್ಕೃತಿಕ ವ್ಯಾಖ್ಯಾನವನ್ನು ಸರ್ಕಾರ ಛಿದ್ರಗೊಳಿಸುತ್ತಿದೆ. ಸರ್ಕಾರದ ನಿಯಮವು ಅನುಸರಣೆ ಕಳೆದುಕೊಳ್ಳುತ್ತಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ವಿಷಾದಿಸಿದರು.

‘ಸ್ವಾತಂತ್ರ್ಯ ಚಳವಳಿ, ರೈತರ ಚಳವಳಿ, ಕಾರ್ಮಿಕರ ಚಳವಳಿಯ ನಂತರದಲ್ಲಿ ದಲಿತ ಮಹಿಳಾ ಚಳವಳಿ ಹುಟ್ಟಿಕೊಂಡಿತು. ಮಹಿಳೆಯರೇ ಈ ಚಳವಳಿಯ ನಾಯಕತ್ವ ವಹಿಸಿದರೆ ಹೋರಾಟ ವಿಸ್ತಾರಗೊಳ್ಳುವ ಮೂಲಕ ವ್ಯಾಖ್ಯಾನ ಬದಲಾಗುವ ಸಾಧ್ಯತೆ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪ್ರೇರೇಪಿಸಿದೆ: ‘ಮಹಿಳೆಯರು ಚಳವಳಿ ಮೂಲಕ ಬದಲಾಗಬೇಕು. ಇಂದು ಬೆರಳೆಣಿಕೆಯಷ್ಟು ಲೇಖಕಿಯರಿದ್ದಾರೆ. ಮಹಿಳೆಯರ ಅಂಗೈ ಬರಹ ಎಲ್ಲರನ್ನು ಮಾತನಾಡುವಂತೆ ಪ್ರೇರೇಪಿಸಿದೆ. ಮಹಿಳೆಯರು ಸ್ತ್ರೀವಾದ ಮಂಡಿಸುವ ಪ್ರಯತ್ನದಲ್ಲಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದಲಿತ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಪಲ್ಲಟಗೊಳಿಸುವುದಾಗಿದೆ. ದಲಿತ ಎಂಬ ಪದವಿಲ್ಲದೆ ಚಳವಳಿಯಿಲ್ಲ. ವ್ಯಾಖ್ಯಾನಗಳು ಬದಲಾದಾಗ ಕನ್ನಡವನ್ನು ಕಟ್ಟಿಕೊಡುವ ಪ್ರಯತ್ನ ಆಗಿದೆ. ದಲಿತ ಸಾಹಿತ್ಯವು ಮುರಿದು ಕಟ್ಟುವ ಪ್ರಕ್ರಿಯೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT