ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋರ್ಟ್‌ ಕಲಾಪಗಳ ನೇರಪ್ರಸಾರ- ಸುಪ್ರೀಂ ಕೋರ್ಟ್‌ ಕ್ರಮ ಪ್ರಶಂಸನೀಯ

Last Updated 23 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಸಾಂವಿಧಾನಿಕ ನ್ಯಾಯಪೀಠಗಳು ನಡೆಸುವ ವಿಚಾರಣೆಗಳನ್ನು ನೇರಪ್ರಸಾರ ಮಾಡುವ ಸುಪ್ರೀಂ ಕೋರ್ಟ್‌ನ ತೀರ್ಮಾನವು ಬಹಳ ಪ್ರಮುಖ ಹೆಜ್ಜೆ. ಇದರಲ್ಲಿ ಹಲವು ಸಕಾರಾತ್ಮಕ ಅಂಶಗಳು ಇವೆ. ನ್ಯಾಯಾಲಯವು 2018ರಲ್ಲಿಯೇ ಕಲಾಪಗಳ ನೇರ ಪ್ರಸಾರಕ್ಕೆ ಮುಂದಾಗಿತ್ತು. ಮೂವರು ನ್ಯಾಯಮೂರ್ತಿಗಳು ಇದ್ದ ಪೀಠವು ಈ ಬಗ್ಗೆ ಆದೇಶವನ್ನು ಕೂಡ ಹೊರಡಿಸಿತ್ತು. ನೇರ ಪ್ರಸಾರದ ವಿಚಾರವಾಗಿ ಕೆಲವು ಮಾರ್ಗಸೂಚಿಗಳನ್ನು ಕೂಡ ನ್ಯಾಯ‍ಪೀಠ ರೂಪಿಸಿತ್ತು. ಆದರೆ, ಆ ಯೋಜನೆಯು ಹೆಚ್ಚು ಮುಂದುವರಿಯಲಿಲ್ಲ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಹಾಗೂ ಹಲವು ಹೈಕೋರ್ಟ್‌ಗಳ ಕಲಾಪಗಳು ಆನ್‌ಲೈನ್‌ ಮೂಲಕ ನಡೆದವು. ಆದರೆ, ಆಗ ಆಗಿದ್ದು ತುರ್ತು ಸಂದರ್ಭವೊಂದಕ್ಕೆ ನೀಡಿದ್ದ ಪ್ರತಿಕ್ರಿಯೆಯಂತೆ ಇತ್ತು. ಅದು, ಸಾರ್ವಜನಿಕರು ಕೋರ್ಟ್‌ ಕಲಾಪಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ಲಭ್ಯವಾದ ಒಂದು ಪೂರ್ಣ ಅವಕಾಶ ಎನ್ನಲಾಗದು. ಆದರೆ, ಕಲಾಪಗಳನ್ನು ಆನ್‌ಲೈನ್‌ ಮೂಲಕ ಪ್ರಸಾರ ಮಾಡುವ ಆಲೋಚನೆಯು ಹೆಚ್ಚು ಮಹತ್ವ ಪಡೆದುಕೊಂಡಿತು. ಈಗ ಕರ್ನಾಟಕ ಹೈಕೋರ್ಟ್‌ ಸೇರಿದಂತೆ ಒಟ್ಟು ಆರು ಹೈಕೋರ್ಟ್‌ಗಳು ತಮ್ಮದೇ ಆದ ಯೂಟ್ಯೂಬ್‌ ವಾಹಿನಿ ಮೂಲಕ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುತ್ತಿವೆ. ಹಲವು ಪ್ರಕರಣಗಳ ವಿಚಾರಣೆಯು ನೇರವಾಗಿ ಪ್ರಸಾರ ಆದಾಗ ಅದನ್ನು ಜನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಿರುವುದನ್ನು ಗಮನಿಸಿದರೆ, ನ್ಯಾಯಾಲಯದ ಕಲಾಪಗಳಲ್ಲಿ ಸಾರ್ವಜನಿಕರಿಗೆ ಎಷ್ಟು ಆಸಕ್ತಿ ಇದೆ ಎಂಬುದು ಅರಿವಾಗುತ್ತದೆ.

ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುವುದರಿಂದಾಗಿ ‘ಮಾಹಿತಿಯನ್ನು ಸಾಧ್ಯ
ವಾದಷ್ಟು ಹೆಚ್ಚು ವ್ಯಾ‍ಪಕವಾಗಿ ಬಿತ್ತರಿಸಲು ಆಗುತ್ತದೆ, ನ್ಯಾಯಾಂಗದ ಪ್ರಕ್ರಿಯೆಗಳಿಗೆ ಹೆಚ್ಚು ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಬರುತ್ತದೆ’ ಎಂದು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ಹೇಳಿತ್ತು. ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂಬು ದನ್ನು ತಿಳಿದುಕೊಳ್ಳುವುದು ಪ್ರಜೆಗಳ ಮೂಲಭೂತ ಹಕ್ಕುಗಳ ಒಂದು ಭಾಗ ಎಂದು ಸಹ ಕೋರ್ಟ್‌ ಹೇಳಿತ್ತು. ದೇಶದ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ನ್ಯಾಯಾಂಗವನ್ನು ದೇಶದ ಜನ ಬಹಳ ಗೌರವದಿಂದ ಕಾಣುತ್ತಾರೆ. ನ್ಯಾಯಾಂಗದ ಕಲಾಪಗಳಲ್ಲಿ ಪಾರದರ್ಶಕತೆ ಹೆಚ್ಚಾದರೆ ನ್ಯಾಯಾಂಗದ ಕುರಿತು ಜನ ಇರಿಸಿರುವ ವಿಶ್ವಾಸವು ಇನ್ನಷ್ಟು ಜಾಸ್ತಿ ಆಗುತ್ತದೆ. ಹೀಗಾಗಿ, ನ್ಯಾಯಾಂಗದ ಕಲಾಪಗಳ ಪಾರದರ್ಶಕತೆಯನ್ನು ಹೆಚ್ಚು ಮಾಡುವ ಯಾವುದೇ ಕ್ರಮ ಸ್ವಾಗತಾರ್ಹ ಆಗುತ್ತದೆ. ಭಾರತದ ನ್ಯಾಯಾಂಗ, ನ್ಯಾಯಾಲಯಗಳು ಸಾರ್ವಜನಿಕರಿಗೆ ತಮ್ಮ ಬಾಗಿಲುಗಳನ್ನು ಮುಚ್ಚಿಲ್ಲ. ಆದರೆ, ಸೀಮಿತ ಸ್ಥಳಾವಕಾಶದ ಕಾರಣದಿಂದಾಗಿ ಹೆಚ್ಚಿನವರಿಗೆ ಕಲಾಪಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ಕಲಾಪಗಳ ನೇರ ಪ್ರಸಾರವು ನ್ಯಾಯಾಂಗವನ್ನು ನೇರವಾಗಿ ಜನರ ಬಳಿಗೆ ಒಯ್ಯುತ್ತದೆ. ನ್ಯಾಯದಾನ ಮಾಡುವುದಷ್ಟೇ ಅಲ್ಲ, ನ್ಯಾಯದಾನ ಆಗುತ್ತಿದೆ ಎಂಬುದು ಇತರರಿಗೆ ಗೊತ್ತಾಗುವಂತೆಯೂ ಇರಬೇಕು ಎಂಬ ಮಾತು ಇದೆ. ಕಲಾಪಗಳ ನೇರ ಪ್ರಸಾರದ ಕ್ರಮದಿಂದಾಗಿ ಈ ಮಾತು ಇನ್ನಷ್ಟು ಅರ್ಥಪೂರ್ಣ ಆಗುತ್ತದೆ.

ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ದೇಶದಲ್ಲಿ ಬಹುತೇಕರಿಗೆ ಪೂರ್ಣವಾಗಿ ಗೊತ್ತಿಲ್ಲ. ಕಲಾಪಗಳ ನೇರ ಪ್ರಸಾರ ಆರಂಭವಾದ ನಂತರದಲ್ಲಿ ಅವರಿಗೆ ಪ್ರಕ್ರಿಯೆಗಳ ಬಗ್ಗೆ ಇನ್ನಷ್ಟು ಹೆಚ್ಚು ಸ್ಪಷ್ಟವಾಗಿ ಗೊತ್ತಾಗುತ್ತದೆ, ಅವರಿಗೆ ಕಾನೂನಿನ ಕುರಿತು ಇನ್ನಷ್ಟು ಅರಿವು ಮೂಡುತ್ತದೆ. ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಬಹಳ ಸಹಾಯಕ್ಕೆ ಬರುತ್ತದೆ. ಕಕ್ಷಿದಾರರು ಹಾಗೂ ಸಾರ್ವಜನಿಕರು, ನ್ಯಾಯಾಲಯಗಳಲ್ಲಿ ವಕೀಲರ ವಾದ ಮಂಡನೆ ಹೇಗಿರುತ್ತದೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ಅರಿಯಬಹುದು. ವಿಚಾರಣೆಯ ಹಂತದಲ್ಲಿ ಇರುವ ಕೆಲವು ಪ್ರಮುಖ ಪ್ರಕರಣಗಳನ್ನು 25 ಸಾಂವಿಧಾನಿಕ ಪೀಠಗಳು ಪ್ರತಿನಿತ್ಯ ವಿಚಾರಣೆ ನಡೆಸಲಿವೆ ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಕೂಡ ಹೊಸ ಉಪಕ್ರಮವು ಮಹತ್ವ ಪಡೆಯುತ್ತದೆ. ರಾಷ್ಟ್ರದ ಭದ್ರತೆ ಮತ್ತು ಇತರ ಕೆಲವು ಸೂಕ್ಷ್ಮ ಪ್ರಕರಣಗಳನ್ನು ಹೊರತುಪಡಿಸಿ, ಬೇರೆ ಪ್ರಕರಣಗಳ ನೇರ ಪ್ರಸಾರದ ಬಗ್ಗೆಯೂ ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸಬೇಕು. ಅಧೀನ ನ್ಯಾಯಾಲಯಗಳು ಕೂಡ ಇದೇ ಕ್ರಮವನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್‌ ಕ್ರಮ ಕೈಗೊಳ್ಳಬಹುದು. ಇದಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ಸರ್ಕಾರಗಳು ಒದಗಿಸಬೇಕು. ಕೆಳಹಂತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ, ಅಲ್ಲಿನ ಕಲಾಪಗಳ ಬಗ್ಗೆ ಜನರ ಆಸಕ್ತಿ ಕೂಡ ಹೆಚ್ಚಿನದಾಗಿಯೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT