ಲೋಕಸಭೆ: ಮಹಿಳೆಯರಿಗೆ ಟಿಕೆಟ್‌; ಇಗೋ ಇಲ್ಲಿದೆ ಮಾದರಿ ನಡೆ

ಸೋಮವಾರ, ಮಾರ್ಚ್ 18, 2019
31 °C

ಲೋಕಸಭೆ: ಮಹಿಳೆಯರಿಗೆ ಟಿಕೆಟ್‌; ಇಗೋ ಇಲ್ಲಿದೆ ಮಾದರಿ ನಡೆ

Published:
Updated:
Prajavani

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇರಿಸಿರುವ ಒಡಿಶಾದ ಬಿಜು ಜನತಾದಳದ ನಡೆ ಅಭಿನಂದನೀಯ ಮತ್ತು ಅನುಕರಣೀಯ. ಬಿಜು ಜನತಾದಳದ ಈ ಆದರ್ಶವನ್ನು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಇನ್ನಷ್ಟು ಮುಂದಕ್ಕೆ ಒಯ್ದಿದೆ

ಕೆಂಪು ಕೋಟೆಯನ್ನು ಕೆಡವಿ ಈಗ ಕೇಸರಿಯ ಆಕ್ರಮಣವನ್ನು ಹಿಮ್ಮೆಟ್ಟಿಸಲು ಸೆಣಸುತ್ತಿರುವ ಮಮತಾ ಬ್ಯಾನರ್ಜಿ ಶೇ 41ರಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳಾ ಹುರಿಯಾಳುಗಳನ್ನು ಕಣಕ್ಕೆ ಇಳಿಸಿದ್ದಾರೆ.

ಬಂಗಾಳದ 42 ಕ್ಷೇತ್ರಗಳಲ್ಲಿ ಮಹಿಳೆಯರ ಪಾಲು 17. ತೃಣಮೂಲ ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದ್ದ ಉಮೇದುವಾರರ ಪೈಕಿಯೂ ಶೇ 35ರಷ್ಟು ಮಹಿಳೆಯರಿದ್ದರು ಎಂಬುದು ಹೆಗ್ಗಳಿಕೆಯ ಸಂಗತಿ. ಬಿಜು ಜನತಾದಳದ ಅಧ್ಯಕ್ಷರೂ ಆದ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಮಮತಾ ಬ್ಯಾನರ್ಜಿ ಅವರು ಹಾಕಿಕೊಟ್ಟಿರುವ ಈ ಮೇಲ್ಪಂಕ್ತಿಗೆ ಭಾರತದ ಸಮಕಾಲೀನ ರಾಜಕಾರಣ ತನ್ನ ಒಳಗಣ್ಣು ತೆರೆಯಬೇಕಿದೆ.

ದೇಶದ ಹತ್ತು ಮಂದಿ ಸಂಸದರ ಪೈಕಿ ಒಂಬತ್ತು ಮಂದಿ ಪುರುಷರು. ಸಂಸತ್ತಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದ 190 ದೇಶಗಳ ಪೈಕಿ ಭಾರತದ ಸ್ಥಾನ 151ನೆಯದು. ಅಫ್ಗಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನೇಪಾಳಕ್ಕಿಂತಲೂ ಕೆಳಗಿನ ಸ್ಥಾನ ನಮ್ಮದು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರ್ಧಾರ ರೂಪಿಸುವ ಸಂಸ್ಥೆಗಳಲ್ಲೂ ಮಹಿಳೆ ಬಹುತೇಕ ಅದೃಶ್ಯಳು.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಮಹಿಳೆಯರ ಶೇಕಡಾವಾರು ಪ್ರಾತಿನಿಧ್ಯ ಪ್ರಮಾಣ ಹೆಚ್ಚಿದೆ. ಆದರೆ ಹೆಮ್ಮೆಪಡುವ ದಿನಗಳು ಇನ್ನೂ ಬಹುದೂರ ಉಳಿದಿವೆ. 1951ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಮಹಿಳೆಯರು 22 ಮಂದಿ (ಶೇ 4.50). 2014ರಲ್ಲಿ ಈ ಸಂಖ್ಯೆ 66ಕ್ಕೆ (ಶೇ 12.15) ಏರಿತ್ತು ಅಷ್ಟೇ. ಜಾಗತಿಕ ಸರಾಸರಿ ಶೇಕಡಾವಾರು ಪ್ರಾತಿನಿಧ್ಯವಾದ ಶೇ 23.40ರಿಂದ ಭಾರತ ಬಹಳ ಹಿಂದಿದೆ.

ಈ ಮಂದಗತಿಯಲ್ಲೇ ಸಾಗಿದರೆ ದೇಶ ರಾಜಕಾರಣದಲ್ಲಿ ಲಿಂಗ ಸಮಾನತೆ ತರಲು ಇನ್ನೂ 180 ವರ್ಷಗಳು ಬೇಕು ಎಂದು ಅಧ್ಯಯನವೊಂದು ಹೇಳಿದೆ. ಮಹಿಳೆಯರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂಬ ಸಬೂಬನ್ನು ರಾಜಕೀಯ ಪಕ್ಷಗಳು ಬಹುಕಾಲದಿಂದ ಹೇಳುತ್ತಾ ಬಂದಿವೆ. ಆದರೆ, ಪುರುಷ ಉಮೇದುವಾರರ ಗೆಲುವಿನ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಮಹಿಳಾ ಹುರಿಯಾಳುಗಳ ಗೆಲುವಿನ ಪ್ರಮಾಣವೇ ಹೆಚ್ಚು. 1952ರಿಂದ ಮೊದಲುಗೊಂಡ ಲೋಕಸಭಾ ಚುನಾವಣೆಯ ಅಧಿಕೃತ ಅಂಕಿ ಅಂಶಗಳು ಈ ಮಾತಿಗೆ ನಿಚ್ಚಳ ಪುರಾವೆ.

ಭಾರತದ ರಾಜಕಾರಣದಲ್ಲಿ ಹಲವು ಮಹಿಳೆಯರು ಎತ್ತರದ ಸ್ಥಾನಗಳನ್ನು ಅಲಂಕರಿಸಿರುವುದು ಹೌದು. ಆದರೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರ ಪ್ರಾತಿನಿಧ್ಯ ಪ್ರಮಾಣ ಈಗಲೂ ಶೋಚನೀಯ. ಕಾರ್ಯಕ್ಷಮತೆಯಲ್ಲಿ ಪುರುಷರಿಗಿಂತ ಮಿಗಿಲು ಎಂದು ರುಜುವಾತು ಮಾಡಿ ತೋರಿದ್ದಾರೆ. ಭಾರತ ದೇಶ 1966ರಷ್ಟು ಹಿಂದೆಯೇ ಮಹಿಳಾ ಪ್ರಧಾನಮಂತ್ರಿಯನ್ನು ಕಂಡಿತ್ತು.

ಇಂದಿರಾ ಗಾಂಧಿಯವರು ಈ ಸ್ಥಾನಕ್ಕೆ ಏರುವ ಮೂರು ವರ್ಷಗಳಿಗೆ ಮುನ್ನವೇ ಉತ್ತರಪ್ರದೇಶದಂತಹ ಬಹುದೊಡ್ಡ ರಾಜ್ಯಕ್ಕೆ ಸುಚೇತಾ ಕೃಪಲಾನಿ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅವರು, ಸಂವಿಧಾನ ರಚನಾ ಸಭೆಯ ಸದಸ್ಯೆಯೂ ಆಗಿದ್ದವರು. ಉತ್ತರಪ್ರದೇಶದ ಹಣಕಾಸು ಸ್ಥಿತಿಯನ್ನು ಆಕೆ ಇಳಿಜಾರಿನ ಹಾದಿಯಿಂದ ಹಿಡಿದೆತ್ತಿದ್ದರು. ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿದ್ದರು.  2008ರಲ್ಲಿ ಯುಪಿಎ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲು ಮಸೂದೆಯು ಶಾಸನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸುವ ಉದ್ದೇಶ ಹೊಂದಿತ್ತು.

ರಾಜ್ಯಸಭೆಯಲ್ಲಿ ಅಂಗೀಕಾರವಾದ ಈ ಮಸೂದೆ ಲೋಕಸಭೆಯಲ್ಲಿ ಕೊಳೆಯಿತು. 2014ರಲ್ಲಿ 15ನೇ ಲೋಕಸಭೆಯ ವಿಸರ್ಜನೆಯ ಜೊತೆಗೆ ಈ ಮಸೂದೆ ಸಮಾಧಿಯಾಯಿತು. ಚಂದ್ರಯಾನದ ಮಾತಾಡುವ ಇಂದಿನ ದಿನಗಳಲ್ಲೂ ಪುರುಷಾಧಿಪತ್ಯದ ಭಾರತೀಯ ಸಮಾಜ ತನ್ನ ಮನಃಸ್ಥಿತಿಯನ್ನು ಬದಲಾಯಿಸಿಕೊಂಡಿಲ್ಲ. ಮಹಿಳಾ ಮತದಾರರ ಪ್ರಮಾಣ ಶೇ 49ರಷ್ಟಿದ್ದರೂ, ಅವರನ್ನು ಅಡುಗೆ ಮತ್ತು ಹೆರಿಗೆ ಕೋಣೆಗಳಲ್ಲೇ ಕೂಡಿ ಹಾಕಲಾಗಿದೆ.

ಮನುಸ್ಮೃತಿ ಆಕೆಯ ಕಾಲಿಗೆ ತೊಡಿಸಿದ ಶತಮಾನಗಳ ಸಂಕೋಲೆಗಳು ಈಗಲೂ ಭದ್ರವಾಗಿವೆ. ನಾಗರಿಕ ಸಮಾಜ ನಾಚಿಕೆಪಡಬೇಕಾದ ಸಂಗತಿಯಿದು. ರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಮಂತ್ರಿ, ವಿದೇಶಾಂಗ ವ್ಯವಹಾರ ಮಂತ್ರಿ ಹಾಗೂ ಲೋಕಸಭೆಯ ಸ್ಪೀಕರ್ ಸ್ಥಾನಗಳಲ್ಲಿ ಮಹಿಳೆಯರನ್ನು ಕೂರಿಸಿದ್ದೇವೆ ಎಂದು ಕೇವಲ ಪ್ರತೀಕಗಳ ಹಿಂದೆ ಅವಿತುಕೊಳ್ಳುವುದು ಶುದ್ಧ ಆಷಾಢಭೂತಿತನ. ಅರ್ಧ ಆಕಾಶ, ಅರ್ಧ ಭೂಮಿ, ಅರ್ಧ ಅಧಿಕಾರ ಆಕೆಯ ನ್ಯಾಯಬದ್ಧ ಹಕ್ಕು, ಭಿಕ್ಷೆ ಅಲ್ಲ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !