ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೆಎಸ್‌ಡಿಎಲ್‌ ಟೆಂಡರ್‌ ಹಗರಣದ ಸಮಗ್ರ ತನಿಖೆ ನಡೆಯಲಿ

Last Updated 7 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಕಚ್ಚಾವಸ್ತು ಖರೀದಿ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದ ಮೇಲೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆ‍ಪಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಅಪ್ಪನ ಪರವಾಗಿ ₹ 40 ಲಕ್ಷ ಲಂಚ ಪಡೆದ ಆರೋಪದ ಮೇಲೆ ಶಾಸಕರ ಮಗ, ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಹಾಗೂ ಇತರ ನಾಲ್ವರನ್ನು ಬಂಧಿಸಲಾಗಿದೆ. ದಾಳಿಯ ಸಂದರ್ಭದಲ್ಲೇ ಸಂದಾಯವಾದ ₹ 1.62 ಕೋಟಿ ಲಂಚದ ಹಣ ಹಾಗೂ ವಿರೂ‍ಪಾಕ್ಷಪ್ಪ ಮನೆಯಲ್ಲಿ ನಡೆಸಿದ ಶೋಧದ ವೇಳೆ ಪತ್ತೆಯಾದ ₹ 6.10 ಕೋಟಿ ನಗದನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಗುರುವಾರ ಲಂಚ ಪ್ರಕರಣದಲ್ಲಿ ಮಗ ಬಂಧಿತನಾದ ಬಳಿಕ ನಾಪತ್ತೆಯಾಗಿದ್ದ ವಿರೂಪಾಕ್ಷಪ್ಪ, ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬಳಿಕ ಮಂಗಳವಾರ ಮಧ್ಯಾಹ್ನದಿಂದ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಲೋಕಾಯುಕ್ತದ ಇತಿಹಾಸದಲ್ಲಿ ಅತ್ಯಧಿಕ ಮೊತ್ತದ ನಗದು ವಶಕ್ಕೆ ಪಡೆದಿರುವ ಭ್ರಷ್ಟಾಚಾರ ಪ್ರಕರಣವಿದು. ಕರ್ನಾಟಕದ ಅಸ್ಮಿತೆಗಳಲ್ಲಿ ಒಂದಾಗಿರುವ ‘ಮೈಸೂರು ಸ್ಯಾಂಡಲ್‌ ಸೋಪ್‌’ನಂತಹ ಜನಪ್ರಿಯ ಉತ್ಪನ್ನಗಳನ್ನು ತಯಾರಿಸುವ ಕೆಎಸ್‌ಡಿಎಲ್‌ನಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತ ಯಾವ ಮಟ್ಟದಲ್ಲಿದೆ ಎಂಬುದನ್ನು ಈ ಪ್ರಕರಣ ಹೊರಗೆಡವಿದೆ.

ವಿರೂಪಾಕ್ಷಪ್ಪ ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ₹ 700 ಕೋಟಿಗೂ ಹೆಚ್ಚು ಮೌಲ್ಯದ ಕಚ್ಚಾವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಸುಳಿವು ತನಿಖಾ ತಂಡಕ್ಕೆ ಸಿಕ್ಕಿದೆ. ರಾಜ್ಯದಲ್ಲಿ ದಶಕಗಳಿಂದ ಸದೃಢವಾಗಿ ಬೆಳೆದು ನಿಂತಿರುವ ಕೆಎಸ್‌ಡಿಎಲ್‌ನಲ್ಲಿ ದುಪ್ಪಟ್ಟು ಬೆಲೆಗೆ ಕಚ್ಚಾವಸ್ತು ಖರೀದಿಸಿ ನೂರಾರು ಕೋಟಿ ರೂಪಾಯಿ ಲಪಟಾಯಿಸಲಾಗಿದೆ ಎಂಬ ಆರೋಪ ಇದೆ. ಜನರ ನಂಬಿಕೆಯ ಬಲದಿಂದಲೇ ಹೆಮ್ಮರವಾಗಿ ಬೆಳೆದ ಸಂಸ್ಥೆಯಲ್ಲಿ ಕಚ್ಚಾವಸ್ತುಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ ಎಂಬುದು ಈ ಪ್ರಕರಣದಿಂದ ಜಾಹೀರುಗೊಂಡಿದೆ.

ಶಾಸಕರ ಮಲಗುವ ಕೋಣೆಯಲ್ಲೇ ₹ 6.10 ಕೋಟಿಯಷ್ಟು ನಗದನ್ನು ವಶಕ್ಕೆ ಪಡೆಯಲಾಗಿದೆ. ಅದರ ಮೂಲ ಪತ್ತೆಹಚ್ಚಲು ತನಿಖಾ ತಂಡಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಐದು ದಿನಗಳವರೆಗೂ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ, ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾದ ತಕ್ಷಣವೇ ತೋಟದ ಮನೆಯಿಂದ ಹೊರಬಂದು ಮೆರವಣಿಗೆ ನಡೆಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಹೊಂದಿರಬೇಕಾದ ಲಜ್ಜೆಯನ್ನು ಮೀರಿ ಈ ಶಾಸಕ ವರ್ತಿಸಿದ್ದಾರೆ. ಲಂಚ ಪ್ರಕರಣದಲ್ಲಿ ಹಾಲಿ ಶಾಸಕರ ಮಗ ಹಾಗೂ ಪ್ರಭಾವಿ ಅಧಿಕಾರಿ ಬಂಧಿತರಾಗಿರುವುದು ಮತ್ತು ಶಾಸಕರೇ ಮೊದಲನೇ ಆರೋಪಿಯಾಗಿರುವುದರಿಂದ ತನಿಖೆಯ ಮೇಲೆ ರಾಜಕೀಯ ಪ್ರಭಾವಕ್ಕೆ ಅವಕಾಶ ಆಗಬಹುದು ಎಂಬ ಸಂಶಯ ಇರುವುದು ಸಹಜ.

ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಬಲ ಸಾಕ್ಷ್ಯಾಧಾರಗಳು ಇದ್ದರೂ ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಸಾಧ್ಯವಾಗದೇ ಇದ್ದುದು ಇದಕ್ಕೆ ಪುಷ್ಟಿ ನೀಡುವಂತಿದೆ. ಪ್ರಕರಣದ ತನಿಖೆಯ ಕುರಿತು ಯಾವುದೇ ರೀತಿಯ ಸಂಶಯಗಳು ಸೃಷ್ಟಿಯಾಗಲು ತನಿಖಾ ಸಂಸ್ಥೆಯು ಅವಕಾಶ ಮಾಡಿಕೊಡಬಾರದು. ಯಾವುದೇ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆಯನ್ನು ಮುಂದುವರಿಸಬೇಕು. ಅನೇಕ ಸವಾಲುಗಳ ನಡುವೆಯೂ ಸದೃಢವಾಗಿ ನಿಂತಿರುವ ಕೆಎಸ್‌ಡಿಎಲ್‌ನ ಅಡಿಪಾಯವೇ ಅಲುಗಾಡುವಂತಹ ಕೃತ್ಯಗಳನ್ನು ಈ ಪ್ರಕರಣದ ಆರೋಪಿಗಳು ಎಸಗಿದ್ದಾರೆ ಎಂಬುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಗಳು ಕಾಣಿಸುತ್ತಿವೆ.

ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆಯಲ್ಲಿ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ತನಿಖೆಯನ್ನು ಲಂಚ ಪ್ರಕರಣಕ್ಕೆ ಸೀಮಿತಗೊಳಿಸಬಾರದು. ಕೆಎಸ್‌ಡಿಎಲ್‌ನಲ್ಲಿ ನಡೆದಿರಬಹುದಾದ ಎಲ್ಲ ಅವ್ಯವಹಾರಗಳ ಕುರಿತೂ ಸಮಗ್ರವಾದ ತನಿಖೆ ನಡೆಸಬೇಕು. ದುಬಾರಿ ಬೆಲೆಗೆ ಕಚ್ಚಾವಸ್ತುಗಳನ್ನು ಖರೀದಿಸಿ, ಸರ್ಕಾರಿ ಸ್ವಾಮ್ಯದ ಉದ್ದಿಮೆಯ ಅಸ್ತಿತ್ವಕ್ಕೆ ಸಂಚಕಾರ ತರುತ್ತಿರುವ ವ್ಯಕ್ತಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನ ಅಡಿಯಲ್ಲಿ ಕ್ರಮಕ್ಕೆ ಒಳಪಡಿಸಬೇಕು.

ಕರ್ನಾಟಕದ ಹೆಮ್ಮೆಗಳಲ್ಲಿ ಒಂದಾಗಿರುವ ಕೆಎಸ್‌ಡಿಎಲ್‌, ಬಲ ಕಳೆದುಕೊಳ್ಳದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ. ತ್ವರಿತವಾಗಿ ತನಿಖೆಯನ್ನು ಪೂರ್ಣಗೊಳಿಸಿ ಎಲ್ಲ ಆರೋಪಿಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಕ್ರಮಕ್ಕೆ ಒಳಪಡಿಸುವ ಬದ್ಧತೆಯನ್ನು ಲೋಕಾಯುಕ್ತ ಪೊಲೀಸರು ಪ್ರದರ್ಶಿಸಬೇಕು. ಅಷ್ಟೇ ಮುತುವರ್ಜಿಯಿಂದ ತನಿಖಾ ಸಂಸ್ಥೆಯಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಧೈರ್ಯವನ್ನು ಸರ್ಕಾರವೂ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT