ಪ್ರಧಾನಿ ಚುನಾವಣಾ ಪ್ರಚಾರ ನಿಜ ಸಮಸ್ಯೆಗಳು ಮಾಯ!

ಮಂಗಳವಾರ, ಏಪ್ರಿಲ್ 23, 2019
31 °C

ಪ್ರಧಾನಿ ಚುನಾವಣಾ ಪ್ರಚಾರ ನಿಜ ಸಮಸ್ಯೆಗಳು ಮಾಯ!

Published:
Updated:
Prajavani

ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಸಭೆಗಳು ಸ್ವಾಭಾವಿಕವಾಗಿಯೇ ಸದ್ದು ಮಾಡತೊಡಗಿವೆ. ಆರಂಭಿಕ ರ‍್ಯಾಲಿಗಳಲ್ಲಿ ಅವರು ಆಡುವ ಮಾತುಗಳು, ನೀಡುವ ಒತ್ತುಗಳನ್ನು ರಾಜಕೀಯ ವೀಕ್ಷಕರು ಹತ್ತಿರದಿಂದ ಗಮನಿಸುತ್ತಾರೆ. ಪ್ರಚಾರದ ಅಜಮಾಸು ದಿಕ್ಕು–ಧೋರಣೆಗಳನ್ನು ಗುರುತಿಸುತ್ತಾರೆ.

‘ಈ ಹಿಂದಿನ ಸರ್ಕಾರಗಳು ಹೆದರುಪುಕ್ಕ ಹೇಡಿ ಸರ್ಕಾರಗಳಾಗಿದ್ದವು. ಅಂದಿನ ಅನಗತ್ಯ ಸಂಯಮವನ್ನು ಬದಿಗೊತ್ತಿರುವ ಇಂದಿನ ಸರ್ಕಾರ ಕಠಿಣ ನಿರ್ಧಾರಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಪಾಕಿಸ್ತಾನದೊಳಕ್ಕೆ ನುಗ್ಗಿ ಏಟಿಗೆ ತಿರುಗೇಟು ನೀಡುವುದು ಇಂದಿನ ಭಾರತದ ದಿಟ್ಟ ಚಹರೆ’ ಎಂದಿದ್ದಾರೆ ಮೋದಿ. ತಾವು ಪ್ರಧಾನಿಯಾಗಿರುವ ಕಾರಣಕ್ಕೇ ಭಾರತ ಸುರಕ್ಷಿತವಾಗಿದೆ.

 ಪ್ರತಿಪಕ್ಷಗಳು ಪಾಕಿಸ್ತಾನದೊಂದಿಗೆ ಮತ್ತು ಜಿಹಾದಿ ಭಯೋತ್ಪಾದಕರ ಜೊತೆ ಶಾಮೀಲಾಗಿವೆ. ಅಷ್ಟೇ ಅಲ್ಲದೆ, ಬಿಜೆಪಿ ವಿರುದ್ಧ ಕಲಬೆರಕೆಯ ಮಹಾಮೈತ್ರಿ (ಮಹಾ ಮಿಲಾವಟ್)  ಮಾಡಿಕೊಂಡಿವೆ.  ಈ ಕಾರಣಗಳಿಗಾಗಿ ಪುನಃ ತಮಗೇ ಮತ ನೀಡಿ ಗೆಲ್ಲಿಸಬೇಕು ಎಂಬುದು ಅವರ ಮಾತುಗಳ ಮುಖ್ಯಾಂಶ. ಭ್ರಷ್ಟ ಮತ್ತು ಅದಕ್ಷ ಕಾಂಗ್ರೆಸ್ ಪಕ್ಷ ಸರ್ವನಾಶ ಆಗಿದೆ ಎನ್ನುತ್ತ, ಅದೇ ಉಸಿರಿನಲ್ಲಿ ಕಾಂಗ್ರೆಸ್ ಮೇಲೆ ಗದಾಪ್ರಹಾರ ನಡೆಸಿದ್ದಾರೆ.

 ಭ್ರಷ್ಟಾಚಾರ ತೊಲಗಿಸುವ ಮತ್ತು ತಾವು ಬಡವರ ಪರ ಎಂಬ ಪ್ರಸ್ತಾಪವನ್ನೂ ಮಾಡಿದ್ದಾರೆ. ಮೂರು ರಾಜ್ಯಗಳಲ್ಲಿ ಮತ್ತೆ ಅಧಿಕಾರ ಹಿಡಿದ ಕಾಂಗ್ರೆಸ್ ಚಿಗಿತುಕೊಂಡಿತ್ತು. ಬಾಲಾಕೋಟ್ ವಾಯುದಾಳಿಯ ನಂತರ ಕಕ್ಕಾಬಿಕ್ಕಿ ಆಗಿತ್ತು. ವರ್ಷಕ್ಕೆ ₹ 72 ಸಾವಿರದ ಕನಿಷ್ಠ ಆದಾಯದ ಭರವಸೆ ನೀಡಿ ಚೇತರಿಸಿಕೊಂಡಿತ್ತು. ಈ ಚೇತರಿಕೆಯ ನಂತರ ಆ ಪಕ್ಷದ ಮೇಲೆ ಮೋದಿಯವರ ದಾಳಿಗೆ ಸಾವಿರ ಮುಳ್ಳುಗಳ ಮೊನಚು ಮೂಡಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಇತ್ತೀಚೆಗೆ ಆದ ಹಿನ್ನಡೆ, ಬಿಜೆಪಿಯನ್ನು ಕಳವಳಕ್ಕೆ ತಳ್ಳಿತ್ತು. ಜನಪ್ರಿಯತೆಯ ಗಂಟು ತಕ್ಕಮಟ್ಟಿಗೆ ಕರಗಿತ್ತು.

 ಈ ಹಂತದಲ್ಲಿ ಜರುಗಿದ್ದು ಪುಲ್ವಾಮಾ ದಾಳಿ ಮತ್ತು ಬಾಲಾಕೋಟ್ ಪ್ರತಿದಾಳಿ. ರಾಷ್ಟ್ರೀಯ ಸುರಕ್ಷತೆಯ ಅಸ್ತ್ರ ಹಠಾತ್ತನೆ ಕೈವಶವಾಯಿತು. ಮೂರು ತಿಂಗಳ ಹಿಂದೆ ಆಗಿದ್ದ ಹಿನ್ನಡೆಯ ಕಂದಕವನ್ನು ತುಂಬಲು ಅವರು ಉಗ್ರ ರಾಷ್ಟ್ರವಾದದ ಹತಾರವನ್ನೇ ವಿರೋಧ ಪಕ್ಷಗಳತ್ತ ಬೀಸತೊಡಗಿರುವುದು ನಿಚ್ಚಳ. ಗ್ರಾಮಾಂತರ ಭೂಹೀನ ಕೃಷಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ‘ನರೇಗಾ’ ಯೋಜನೆಯ ಕುತ್ತಿಗೆ ಅದುಮಲಾಗಿದೆ. ರೈತರ ಆತ್ಮಹತ್ಯೆಗಳು, ಆದಿವಾಸಿಗಳ ಹಸಿವಿನ ಸಾವುಗಳು, ಕ್ಷುಲ್ಲಕ ಕಾರಣಗಳಿಗಾಗಿ ದಲಿತರ ಹತ್ಯೆಗಳು, ಅವಹೇಳನಗಳು, ಅತ್ಯಾಚಾರಗಳು ಸ್ವತಂತ್ರ ಭಾರತದ ಕಪಾಳಕ್ಕೆ ಬಿಗಿಯಲಾಗುತ್ತಿರುವ ಏಟುಗಳು. ‌

ಬಹುಜನರ ಮೇಲೆ ನಡೆದಿರುವ ಹತ್ತು ಹಲವು ಬಗೆಯ ದಾಳಿಗಳಿಗೆ ಅಧಿಕಾರಾವಧಿಯಲ್ಲೇ ಕಣ್ಣು ತೆರೆಯದವರು, ಚುನಾವಣಾ ಪ್ರಚಾರದಲ್ಲಿ ತೆರೆಯುವರೆಂದು ನಿರೀಕ್ಷಿಸುವುದು ಹುಂಬತನ ಆದೀತು. ಜನಸಮುದಾಯಗಳ ನಿತ್ಯ ಬದುಕಿನ ಕಷ್ಟ–ಕಾರ್ಪಣ್ಯಗಳು, ದುಃಖ–ದುಮ್ಮಾನಗಳ ಚರ್ಚೆಗೆ ಅವರು ಚಾಲನೆ ಒದಗಿಸಬೇಕಿತ್ತು. ಭಾವೋದ್ರಿಕ್ತತೆಯನ್ನು ಬಡಿದೆಬ್ಬಿಸುವುದು, ಸರ್ಕಾರವನ್ನು ಮತ್ತು ತಮ್ಮನ್ನು ವಿರೋಧಿಸುವವರಿಗೆ ದೇಶದ್ರೋಹಿಗಳ ಪಟ್ಟಕಟ್ಟಿ ಪಾಕಿಸ್ತಾನದೊಂದಿಗೆ ಸಮೀಕರಿಸುವುದು ಘನತೆಯ ನಡವಳಿಕೆ ಅಲ್ಲ. ಹಸಿದವರಿಗೆ ಭಾವುಕತೆಯ ಅಫೀಮು ಉಣಬಡಿಸುವುದು ಮೋಸ ಮಾತ್ರವಲ್ಲ, ಕ್ರೌರ್ಯವೂ ಹೌದು.

‘ವೈರಿಗಳನ್ನು ಅವರ ಮನೆಗೆ ನುಗ್ಗಿ ಹೊಡೆದಿದ್ದೇವೆ’ ಎಂದು ಮೋದಿಯವರು ಹೇಳುವುದು ಸರಿ. ಆದರೆ ಇಂತಹ ಸಾಹಸದ ಶ್ರೇಯಸ್ಸು ತಮ್ಮೊಬ್ಬರದೇ, ಶತ್ರುದೇಶವನ್ನು ಸದೆಬಡಿಯುವ ನಿರ್ಣಯ ತೆಗೆದುಕೊಂಡ ಏಕೈಕ ಸರ್ಕಾರ ತಮ್ಮದೇ ಎಂಬಂತೆ ಆಡುವ ಅವರ ಮಾತುಗಳಲ್ಲಿ ಸತ್ಯಾಂಶ ಇಲ್ಲ. ಬಾಲಾಕೋಟ್‌ಗೆ ಮುನ್ನವೂ ನಮ್ಮ ವೀರಯೋಧರು ಪಾಕಿಸ್ತಾನದ ಸೇನೆಯನ್ನು ಅದರ ನೆಲದಲ್ಲೇ ಮಂಡಿಯೂರಿಸಿದ್ದಾರೆ. ಅಷ್ಟೇ ಅಲ್ಲ, ಆ ಸೇನೆಯಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ.

1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ, ಆ ದೇಶವನ್ನು ಎರಡು ಹೋಳಾಗಿಸಿತ್ತು. ಬಾಂಗ್ಲಾದೇಶದ ಹುಟ್ಟಿಗೆ ಕಾರಣ ಆಯಿತು. ಪೂರ್ವ ಬಂಗಾಳ ಎಂದು ಕರೆಯಲಾಗುತ್ತಿದ್ದ ಅರ್ಧದಷ್ಟು ಪಾಕಿಸ್ತಾನ ಸ್ವತಂತ್ರ ದೇಶವಾಗಿ ಉದಯಿಸಿತ್ತು. ಪಾಕಿಸ್ತಾನಿ ಸೇನೆ ಬಹಿರಂಗವಾಗಿ ಭಾರತಕ್ಕೆ ಶರಣಾಗಬೇಕಾಯಿತು. 90 ಸಾವಿರಕ್ಕೂ ಹೆಚ್ಚು ಶರಣಾರ್ಥಿಗಳ ಪೈಕಿ ಸಮವಸ್ತ್ರಧಾರಿ ಯೋಧರ ಸಂಖ್ಯೆ 79,676.

ಎರಡನೆಯ ವಿಶ್ವಯುದ್ಧದ ನಂತರ ಜರುಗಿದ ಬಹುದೊಡ್ಡ ಮಿಲಿಟರಿ ಶರಣಾಗತಿಯಿದು. ಪಾಕಿಸ್ತಾನಿ ನೌಕಾ ಪಡೆಯನ್ನು ಧ್ವಂಸ ಮಾಡಿ ಕರಾಚಿ ಬಂದರನ್ನು ಸುತ್ತುವರಿದಿತ್ತು ನಮ್ಮ ಸೇನೆ. ಲಾಹೋರಿಗೆ ಲಗ್ಗೆ ಹಾಕಿದ್ದೇ ಅಲ್ಲದೆ ಆ ವಲಯದ ಐದು ಸಾವಿರ ಚದರ ಕಿ.ಮೀ.ಗಳಷ್ಟು ಪಾಕ್ ಭೂಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಇತಿಹಾಸದ ಜಾಣಮರೆವು ಸಲ್ಲದು.

ಬರಹ ಇಷ್ಟವಾಯಿತೆ?

 • 34

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !