ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಮಾದರಿ ಆಲೋಚನೆಯ ಉರುಳಿಗೆ ಸಿಲುಕಿದ ರಾಹುಲ್‌

Last Updated 21 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ವಿವೇಕವನ್ನು ಬಳಸಲು ಇಚ್ಛಿಸದ ಸೋಮಾರಿ ಮನಸ್ಸುಗಳು ಸಿದ್ಧ ಮಾದರಿಗಳನ್ನು ಸೃಷ್ಟಿಸಿಟ್ಟುಕೊಂಡು ಅವುಗಳ ಚೌಕಟ್ಟಿನಲ್ಲೇ ಜಗತ್ತನ್ನು ಗ್ರಹಿಸುತ್ತವೆ. ನಿರ್ದಿಷ್ಟ ಬುಡಕಟ್ಟುಗಳು ಅಪರಾಧಿ ಗುಣವನ್ನು ಹೊಂದಿವೆ ಎಂದು ಬ್ರಿಟಿಷರು ಭಾವಿಸಿದ್ದರು. ಇದೇ ಕಾರಣದಿಂದ, ವಸಾಹತುಶಾಹಿಯ ವಿರುದ್ಧ ಬಂಡೆದ್ದು ಹೋರಾಟದಲ್ಲಿ ನಿರತವಾಗಿದ್ದ ಬುಡಕಟ್ಟುಗಳನ್ನು ‘ಅಪರಾಧಿ ಬುಡಕಟ್ಟುಗಳು’ ಎಂದು ಗುರುತಿಸಲಾಗಿತ್ತು. ನಿರ್ದಿಷ್ಟ ಜಾತಿಗೆ ಸೇರಿದವರು ಬುದ್ಧಿವಂತರು ಅಥವಾ ನಿರ್ದಿಷ್ಟ ಜಾತಿಯು ಕ್ಷಾತ್ರಗುಣ ಹೊಂದಿದೆ ಎಂಬ ಭಾವನೆಯ ಹಿಂದೆಯೂ ಇಂಥದ್ದೇ ಸಿದ್ಧ ಮಾದರಿಯೊಳಗೇ ಚಿಂತಿಸುವ ಮನಸ್ಸಿದೆ.

ಈ ಬಗೆಯ ಸಿದ್ಧ ಮಾದರಿಗಳು ಪ್ರಪಂಚದಾದ್ಯಂತ ಅನೇಕ ಅನಾಹುತಗಳನ್ನು ಸೃಷ್ಟಿಸಿವೆ. ಇಂಥದ್ದೊಂದು ಸಿದ್ಧ ಮಾದರಿ ಆಲೋಚನೆಯ ಉರುಳಿನೊಳಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸಿಲುಕಿದಂತೆ ಕಾಣಿಸುತ್ತದೆ. ‘ಎಲ್ಲ ಕಳ್ಳರ ಹೆಸರಿನಲ್ಲಿಯೂ ಮೋದಿ ಇದೆ... ಲಲಿತ್ ಮೋದಿ, ನೀರವ್ ಮೋದಿ ಅಥವಾ ನರೇಂದ್ರ ಮೋದಿ’ ಎಂಬ ಅವರ ಮಾತು, ಇಡೀ ಒಂದು ಸಮುದಾಯವನ್ನು ‘ಕಳ್ಳ’ರನ್ನಾಗಿಸುತ್ತಿದೆ.

‘ಮೋದಿ’ ಎಂಬ ಉಪನಾಮ ಹೊಂದಿರುವ ಕಾರಣಕ್ಕೆ, ಯಾವ ವಿವೇಚನೆಯನ್ನೂ ಬಳಸದೆ ಅವರೆಲ್ಲರಿಗೂ ‘ಕಳ್ಳರು’ ಎಂಬ ಹಣೆಪಟ್ಟಿ ಹಚ್ಚಿದ ರಾಹುಲ್ ಮಾತು ಅತ್ಯಂತ ಖಂಡನೀಯ. ರಾಹುಲ್ ಅವರ ಈ ಮಾತಿನ ವಿರುದ್ಧ ಕೇಸು ದಾಖಲಿಸುವ ಮಾತುಗಳು ಕೇಳಿಬಂದಿವೆ. ಇಲ್ಲಿರುವುದು ಕೇವಲ ಕಾನೂನು ಕ್ರಮದೊಂದಿಗೆ ಪರಿಹಾರವಾಗುವ ಸಮಸ್ಯೆಯಷ್ಟೇ ಅಲ್ಲ. ಇದೊಂದು ಮನಃಸ್ಥಿತಿಯ ಪ್ರಶ್ನೆ. ಹೆಸರು, ಉಪನಾಮ ಎಂಬುದು ಆತ ಅಥವಾ ಆಕೆಯನ್ನು ಇತರರಿಂದ ಪ್ರತ್ಯೇಕಿಸುವ ಒಂದು ಗುರುತು ಮಾತ್ರ. ನಿರ್ದಿಷ್ಟ ಹೆಸರಿರುವ ಕಾರಣಕ್ಕೆ ವ್ಯಕ್ತಿಯು ಶ್ರೇಷ್ಠ ಅಥವಾ ಕನಿಷ್ಠನಾಗುವುದಿಲ್ಲ.

ರಾಹುಲ್ ಗಾಂಧಿ ಈ ವಿಚಾರದಲ್ಲಿ ಉಳಿದವರಿಗಿಂತ ಹೆಚ್ಚು ಸಂವೇದನಾಶೀಲರಾಗಿ ಇರಬೇಕಿತ್ತು. ಈ ಹೆಸರಿನ ರಾಜಕಾರಣದ ಪರಿಣಾಮಗಳ ಅರಿವು ಉಳಿದವರಿಗಿಂತ ಅವರಿಗೆ ಚೆನ್ನಾಗಿಯೇ ಇದೆ. ಆದರೆ, ಅವರು ಸಾಮಾನ್ಯ ರಾಜಕಾರಣಿಗಳಿಗಿಂತ ತಾವು ಭಿನ್ನರಲ್ಲ ಎಂಬುದನ್ನು ಈ ಪ್ರಕರಣದಲ್ಲಿ ತೋರಿಸಿಕೊಟ್ಟರಷ್ಟೆ. ಈ ಬಾರಿ ಚುನಾವಣಾ ಕಣದಲ್ಲಿರುವ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ವಿಲಕ್ಷಣ ಹತಾಶೆಯಲ್ಲಿದ್ದಾರೆ. ಸೋಲಿನ ನಿರೀಕ್ಷೆಯಲ್ಲಿ ಹುಟ್ಟುವ ಹತಾಶೆಯಿದು. ಸೋಲು, ಭವಿಷ್ಯಕ್ಕೆ ಮಾರಕವಾದ್ದರಿಂದ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದು ಅದಕ್ಕಾಗಿ ಏನು ಮಾಡಲೂ ಸಿದ್ಧರಾಗಿರುವ ನಾಯಕರಿವರು. ಐದು ವರ್ಷಗಳ ಹಿಂದೆ ಅಭಿವೃದ್ಧಿ ಮತ್ತು ಬದಲಾವಣೆಯ ಮಾತನಾಡುತ್ತಿದ್ದ ಬಿಜೆಪಿ, ಅದನ್ನು ಮರೆತು ಕೋಮು ಧ್ರುವೀಕರಣದ ಮಾತುಗಳನ್ನಾಡುತ್ತಿರುವುದು ಮತ್ತು ರಚನಾತ್ಮಕ ವಿಮರ್ಶೆಯನ್ನು ಪ್ರತಿಪಾದಿಸುತ್ತಿದ್ದ ರಾಹುಲ್ ಗಾಂಧಿ, ವಿರೋಧಿಗಳನ್ನು ಬೈಯ್ಯುವುದಕ್ಕೆ ಸೀಮಿತಗೊಂಡಿರುವುದರ ಹಿಂದೆ ಹತಾಶೆಯಿದೆ.

‘ಚೌಕೀದಾರ’ನನ್ನು ‘ಚೋರ’ನನ್ನಾಗಿಸುವ ಪ್ರಯತ್ನದಲ್ಲಿ ರಾಹುಲ್, ಸುಪ್ರೀಂ ಕೋರ್ಟ್‌ನ ತೀರ್ಪನ್ನೂ ಅಪವ್ಯಾಖ್ಯಾನಕ್ಕೆ ಒಳಪಡಿಸಿದರು. ಸುಪ್ರೀಂ ಕೋರ್ಟ್, ಪ್ರಧಾನಿಯನ್ನು ಆರೋಪಿಯನ್ನಾಗಿಸಿದೆ ಎಂಬ ಅರ್ಥದಲ್ಲಿ ಭಾಷಣ ಮಾಡಿದರು. ಗೆಲ್ಲುವುದಕ್ಕಾಗಿ ಏನನ್ನು ಬೇಕಾದರೂ ಮಾಡುತ್ತೇವೆಂಬ ಸಂಕಲ್ಪದಲ್ಲಿ ಕಣಕ್ಕೆ ಇಳಿದಿರುವ ಈ ಚುನಾವಣೆಯಲ್ಲಿ ಇಂತಹ ಮಾತುಗಳು ಆಶ್ಚರ್ಯ ಹುಟ್ಟಿಸುವುದಿಲ್ಲ. ಆದರೆ, ಒಟ್ಟಾರೆ ರಾಜಕೀಯ ಸಂಸ್ಕೃತಿಯ ಬಗ್ಗೆಯೇ ಒಂದು ವಿಷಾದಕ್ಕೆ ಕಾರಣವಾಗುತ್ತವೆ. ನಾಯಕತ್ವಕ್ಕೆ ಎದುರಾಗುವ ನಿಜವಾದ ಪರೀಕ್ಷೆಯೆಂದರೆ ನಿರ್ದಿಷ್ಟ ಹೋರಾಟದಲ್ಲಿ ಗೆಲ್ಲುವುದೋ ಸೋಲುವುದೋ ಅಲ್ಲ. ಆ ಗುರಿಯತ್ತ ಅವನ ಪ್ರಯಾಣ ಹೇಗಿತ್ತು ಎಂಬುದು. ವಿನಮ್ರನಾಗಿ ಗೆಲ್ಲಬಹುದು, ಹಾಗೆಯೇ ವೀರೋಚಿತವಾಗಿ ಸೋಲಬಹುದು. ಪ್ರಜಾಸತ್ತಾತ್ಮಕ ರಾಜಕಾರಣದಲ್ಲಿ ಈ ಎರಡರಲ್ಲಿಯೂ ಮಾತು ಸೋಲಬಾರದು. ದುರದೃಷ್ಟವಶಾತ್ ಈ ಚುನಾವಣೆಯಲ್ಲಿ ಮಾತು ಸೋಲುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT