ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಿಡಿಒಗಳಿಂದಲೇ ವಿವಾಹ ನೋಂದಣಿ ಸಕಾರಾತ್ಮಕ ಪರಿಣಾಮ ಬೀರುವ ಕ್ರಮ

Last Updated 4 ಮೇ 2022, 19:31 IST
ಅಕ್ಷರ ಗಾತ್ರ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಿವಾಹ ನೋಂದಣಿಯ ಅಧಿಕಾರವನ್ನೂ ನೀಡಲು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಸ್ವಾಗತಾರ್ಹ ಹೆಜ್ಜೆ. ಗ್ರಾಮಾಂತರ ಪ್ರದೇಶದಲ್ಲಿ ಈಗಲೂ ಒಂದು ಪಿಡುಗಾಗಿ ಕಾಡುತ್ತಿರುವ ಬಾಲ್ಯ ವಿವಾಹವನ್ನು ತಡೆಗಟ್ಟಲು ಈ ಕ್ರಮದಿಂದ ಅನುಕೂಲವಾಗಲಿದೆ.

ಈವರೆಗೆ, ವಿವಾಹವಾದ ನವಜೋಡಿ ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿ ಹುಡುಕಿಕೊಂಡು ತಾಲ್ಲೂಕು ಕೇಂದ್ರದವರೆಗೆ ಹೋಗುವುದು ಅನಿವಾರ್ಯವಾಗಿತ್ತು. ಹೀಗಾಗಿ ಎಷ್ಟೋ ನವಜೋಡಿಗಳು ವಿವಾಹ ನೋಂದಣಿ ಮಾಡಿಸುವ ಗೋಜಿಗೇ ಹೋಗುತ್ತಿರಲಿಲ್ಲ. ಒಂದುವೇಳೆ ವಿವಾಹ ನೋಂದಣಿ ಮಾಡಿಸಿದರೂ ವಿವಿಧ ಕಾರಣಗಳಿಗಾಗಿ ಎಷ್ಟೋ ಬಾಲ್ಯ ವಿವಾಹಗಳು ಕೂಡ ಪತ್ತೆಯಾಗದೆ ಹೋಗುತ್ತಿದ್ದವು. ಪಿಡಿಒಗಳು, ಸ್ಥಳದಲ್ಲೇ ಇರುವ ಸರ್ಕಾರದ ಪ್ರತಿನಿಧಿಗಳು. ಸ್ಥಳೀಯ ಆಗು–ಹೋಗುಗಳ ಕುರಿತು ಸಮರ್ಪಕ ಮಾಹಿತಿಯೂ ಅವರಲ್ಲಿ ಇರುವುದರಿಂದ ಬಾಲ್ಯ ವಿವಾಹಗಳ ಮಾಹಿತಿ ಸುಲಭವಾಗಿ ಅವರಿಗೆ ಸಿಗುತ್ತದೆ. ಅಂತಹ ವಿವಾಹಗಳನ್ನು ತಡೆಗಟ್ಟುವಲ್ಲಿ ಅವರು ಮಹತ್ವದ ಪಾತ್ರ ವಹಿಸಬಲ್ಲರು. ಕೋವಿಡ್‌ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಬಾಲ್ಯ ವಿವಾಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದ್ದನ್ನು ಹಲವು ಸಮೀಕ್ಷೆಗಳು ಗುರುತಿಸಿದ್ದವು. ಹಾಗೆಯೇ 2021ರಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿತ್ತು. ಪಿಡಿಒಗಳಿಗೆ ವಿವಾಹ, ಜನನ ಮತ್ತು ಮರಣ ನೋಂದಣಿ ಅಧಿಕಾರ ನೀಡುವುದರಿಂದ ಪಂಚಾಯಿತಿ ಮಟ್ಟದಲ್ಲೇ ಸಮಗ್ರ ದತ್ತಾಂಶ ಬ್ಯಾಂಕ್‌ವೊಂದು ನಿರ್ಮಾಣ ಆಗಲಿದೆ. ಇದರಿಂದ ಬಾಲ್ಯ ವಿವಾಹ ತಡೆಗಟ್ಟುವ ಕೆಲಸ ಮತ್ತಷ್ಟು ಸಲೀಸಾಗಲಿದೆ ಎನ್ನುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವಾಲಯದ
ಲೆಕ್ಕಾಚಾರದಲ್ಲಿ ತಥ್ಯವಿದೆ. ಬಾಲ್ಯ ವಿವಾಹ ತಡೆಗಟ್ಟುವುದು ಸಾಧ್ಯವಾದರೆ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಂತೆ ಎಂಬುದನ್ನು ಮರೆಯುವಂತಿಲ್ಲ.

ರಾಜ್ಯದಲ್ಲಿ ವಿವಾಹ ನೋಂದಣಿ ಕಡ್ಡಾಯವೇನಲ್ಲ. ಜನನ ಮತ್ತು ಮರಣ ನೋಂದಣಿ ಹೇಗೆ ಕಡ್ಡಾಯವೋ ಹಾಗೆಯೇ ವಿವಾಹ ನೋಂದಣಿಯನ್ನೂ ಕಡ್ಡಾಯ ಮಾಡಬೇಕು ಎಂಬ ಬೇಡಿಕೆಯನ್ನು ಸಾಮಾಜಿಕ ಹೋರಾಟಗಾರರು ಬಹಳ ಹಿಂದೆಯೇ ಸರ್ಕಾರದ ಮುಂದೆ ಇಟ್ಟಿದ್ದರು. ನಿಯಮವನ್ನು ಎಷ್ಟೇ ಸರಳ ಮಾಡಿದರೂ ಅದರ ಲಾಭ ಜನಸಾಮಾನ್ಯರಿಗೆ ಸಿಗಬೇಕಾದರೆ ಅವರು ವಿವಾಹ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಲೇಬೇಕು. ಹೀಗಾಗಿ ವಿವಾಹ ನೋಂದಣಿಯನ್ನು ಉತ್ತೇಜಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿರುವುದು ಅಪೇಕ್ಷಣೀಯ. ಇದರ ದೂರಗಾಮಿ ಪ್ರಯೋಜನಗಳು ಹಲವು. ಮದುವೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಸರ್ಕಾರವೇನಾದರೂ ಮುಂದಾದರೆ ಬಹುಪತ್ನಿತ್ವವನ್ನು
ಪತ್ತೆ ಹಚ್ಚುವುದು ಕೂಡ ಮುಂದಿನ ದಿನಗಳಲ್ಲಿ ಸುಲಭವಾಗಲಿದೆ. ‘ಹಿಂದೂ ವಿವಾಹ
ಕಾಯ್ದೆ–1955’ರ ಪ್ರಕಾರ, ನೋಂದಣಿ ಮಾಡಿಸದಿದ್ದರೂ ವಿಧ್ಯುಕ್ತವಾಗಿ ನಡೆದ ಹಿಂದೂ, ಜೈನ ಮತ್ತು ಸಿಖ್‌ ಮದುವೆಗಳು ಕಾನೂನುಬದ್ಧ. ಆದರೆ, ವಿಚ್ಛೇದನದ ಸಂದರ್ಭದಲ್ಲಿ ವಿವಾಹ ಪ್ರಮಾಣಪತ್ರವು ಕಾನೂನು ಪ್ರಕ್ರಿಯೆಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ನಡೆಸಲು ನೆರವಿಗೆ ಬರುತ್ತದೆ. ಕೋರ್ಟ್‌ ಮೆಟ್ಟಿಲೇರುವ ದಂಪತಿ, ತಮ್ಮ ವಿವಾಹಕ್ಕೆ ಈಗಲೂ ಪುರಾವೆಯಾಗಿ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಛಾಯಾಚಿತ್ರಗಳನ್ನೇ ತೋರಿಸುವುದು ರೂಢಿ. ವಿವಾಹಕ್ಕೆ ಸಂಬಂಧಿಸಿದ ಸಮರ್ಪಕ ದಾಖಲೆಗಳಿಲ್ಲದೆ ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸಿದ್ದೂ ಇದೆ.

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಎಷ್ಟೆಲ್ಲ ಪ್ರಯತ್ನಗಳು ನಡೆದರೂ ಅಂತಹ ಹಲವು ಮದುವೆಗಳು ಈಗಲೂ ಪತ್ತೆಯಾಗುತ್ತಿಲ್ಲ. ರಂಗೋಲಿ ಕೆಳಗೆ ನುಸುಳುವ ಈ ಪರಿಪಾಟವನ್ನು ತಪ್ಪಿಸಲು ಇರುವ ರಾಮಬಾಣವೆಂದರೆ ವಿವಾಹ ನೋಂದಣಿ ಕಡ್ಡಾಯಗೊಳಿಸುವುದು ಎಂಬ ಹೋರಾಟಗಾರರ ಸಲಹೆ ಕೂಡ ಗಮನಿಸುವಂಥದ್ದು. ‘ಹೆಣ್ಣು ಮಕ್ಕಳು ಬೇರೆ ಜಾತಿಯ ಯುವಕರನ್ನು ಇಷ್ಟಪಟ್ಟರೆ ಮನೆ ಮರ್ಯಾದೆ ಹಾಳಾಗುತ್ತದೆ ಎಂಬ ಭಯದಿಂದ ಪೋಷಕರು ಬೇಗ ಮದುವೆ ಮಾಡಿಬಿಡುತ್ತಾರೆ’ ಎನ್ನುವುದು ಬಾಲ್ಯ ವಿವಾಹ ಪಿಡುಗಿನ ಕುರಿತ ಸಮೀಕ್ಷೆಯಲ್ಲಿ ಎದ್ದು ಕಂಡಿರುವ ಅಂಶ. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಅಡ್ಡಿಯಾಗಿರುವ ಈ ಮನಃಸ್ಥಿತಿಯನ್ನು ಹೋಗಲಾಡಿಸಲು ಪಂಚಾಯಿತಿ ಮಟ್ಟದಲ್ಲೇ ಜಾಗೃತಿ ಅಭಿಯಾನ ನಡೆಸಬೇಕು. ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರವನ್ನು ವಹಿಸಿರುವುದರಿಂದ ಇನ್ನುಮುಂದೆ ಮದುವೆಗಳ ನೋಂದಣಿ ಸಂಖ್ಯೆಯಲ್ಲಿ ಹೆಚ್ಚಳ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ, ಗ್ರಾಮ ಪಂಚಾಯಿತಿ ಕಚೇರಿಯನ್ನು ತಲುಪುವುದು ಜನಸಾಮಾನ್ಯರಿಗೆ ಕಷ್ಟವೇನೂ ಅಲ್ಲ. ಆದರೆ, ಎಲ್ಲರೂ ವಿವಾಹ ನೋಂದಣಿ ಮಾಡಿಸುವಂತಾಗಲು ಸರ್ಕಾರ ಜನರಲ್ಲಿ ಆ ಮಟ್ಟಿಗಿನ ಜಾಗೃತಿಯನ್ನು ಮೂಡಿಸುವುದು ಅಗತ್ಯವಾಗಿದೆ. ಅನಿವಾರ್ಯ ಎಂದೆನಿಸಿದರೆ ನೋಂದಣಿ ಕಡ್ಡಾಯಗೊಳಿಸುವ ‘ಅಸ್ತ್ರ’ವನ್ನು ಬಳಸಲೂ ಹಿಂಜರಿಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT