ಭಾನುವಾರ, ಅಕ್ಟೋಬರ್ 25, 2020
28 °C

ಹಣದ ಚಲಾವಣೆ ಹೆಚ್ಚಿಸಲು ಕ್ರಮ ಸ್ವಾಗತಾರ್ಹ, ಇನ್ನಷ್ಟು ಹೂಡಿಕೆ ಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ ಮಾರುಕಟ್ಟೆಗಳ ಬಾಗಿಲು ಲಾಕ್‌ಡೌನ್‌ ಮೂಲಕ ಮುಚ್ಚಿದ ಪರಿಣಾಮವಾಗಿ ಬೇಡಿಕೆ ಕುಸಿದುಬಿತ್ತು. ಬೇಡಿಕೆ ಕುಸಿದುಬಿದ್ದ ಕಾರಣದಿಂದ ತಯಾರಿಕಾ ವಲಯ ಮತ್ತು ಸೇವಾ ವಲಯದ ಚೈತನ್ಯ ಉಡುಗಿತು. ಹಾಗಾಗಿ, ಬೇಡಿಕೆಯನ್ನು ಹೆಚ್ಚಿಸುವ ಮೂಲಕ ತಯಾರಿಕಾ ವಲಯ ಹಾಗೂ ಸೇವಾ ವಲಯಕ್ಕೆ ಶಕ್ತಿ ತುಂಬಿ, ಆ ಮೂಲಕ ಇಡೀ ಅರ್ಥವ್ಯವಸ್ಥೆಯಲ್ಲಿ ಹೊಸ ಜೀವಕಳೆ ಬರುವಂತೆ ಮಾಡಬೇಕು ಎಂಬುದು ದೇಶದ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಕಂಡು ಹಲವು ಅರ್ಥಶಾಸ್ತ್ರಜ್ಞರು ನೀಡಿರುವ ಸಲಹೆ. ₹ 20 ಲಕ್ಷ ಕೋಟಿ ಮೊತ್ತದ್ದು ಎಂದು ಹೇಳಿಕೊಂಡ ‘ಆತ್ಮನಿರ್ಭರ ಪ್ಯಾಕೇಜ್’ ಘೋಷಣೆಯ ನಂತರ ಕೇಂದ್ರ ಸರ್ಕಾರವು ಇನ್ನೊಂದು ಸುತ್ತಿನ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಸೋಮವಾರ ಪ್ರಕಟಿಸಿದೆ. ಕೇಂದ್ರ ಸರ್ಕಾರದ ನೌಕರರು ಹಣವನ್ನು ನಿರ್ದಿಷ್ಟ ವಸ್ತು ಅಥವಾ ಸೇವೆಗಳಿಗೆ ವಿನಿಯೋಗಿಸುವಂತೆ ಮಾಡಿ, ಆ ವಸ್ತು ಮತ್ತು ಸೇವೆಗೆ ಬೇಡಿಕೆ ಹೆಚ್ಚಿಸಿ, ಆ ಮೂಲಕ ಆರ್ಥಿಕ ಬೆಳವಣಿಗೆಗೆ ದಾರಿ ಕಲ್ಪಿಸಿಕೊಡುವುದು ಈ ಕ್ರಮಗಳ ಉದ್ದೇಶ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವ ಯಾವುದೇ ಕ್ರಮ ಅಪೇಕ್ಷಣೀಯ. ನಗದು ವೋಚರ್ ನೀಡುವುದರಿಂದ ಹಾಗೂ ಹಬ್ಬದ ಸಂದರ್ಭದ ಮುಂಗಡವಾಗಿ ₹ 10 ಸಾವಿರ ನೀಡುವುದರಿಂದ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳು ಹಾಗೂ ಸೇವೆಗಳಿಗೆ ಬೇಡಿಕೆ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಲಾಕ್‌ಡೌನ್‌ ಜಾರಿಯಾದ ನಂತರ ಖಾಸಗಿ ವಲಯದ ಹಲವು ಉದ್ದಿಮೆಗಳ ನೌಕರರು ವೇತನ ಕಡಿತ ಅನುಭವಿಸಿದರು, ಇನ್ನು ಕೆಲವರು ಉದ್ಯೋಗವನ್ನೇ ಕಳೆದುಕೊಂಡರು. ಹಾಗಾಗಿ, ಆರ್ಥಿಕ ಅಸ್ಥಿರತೆ ಯನ್ನು ಎದುರಿಸುತ್ತಿರುವ ಖಾಸಗಿ ವಲಯದ ನೌಕರರು ಮೊದಲಿನಂತೆಯೇ ಖರ್ಚು ಮಾಡುತ್ತಾರೆ ಎನ್ನಲಾಗದು. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗ ನಷ್ಟದ ಭೀತಿಗೆ ಒಳಗಾಗಿರದ ಸರ್ಕಾರಿ ನೌಕರರ ಮೂಲಕ ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಹೆಚ್ಚುವಂತೆ ಮಾಡುವ ಈ ಕ್ರಮ ಸ್ವಾಗತಾರ್ಹ. ವೋಚರ್‌ ಹಾಗೂ ನಗದು ಮುಂಗಡ ಕ್ರಮಗಳಿಂದ ಕೇಂದ್ರಕ್ಕೆ ಹೆಚ್ಚಿನ ಹಣಕಾಸಿನ ಹೊರೆಯೇನೂ ಆಗದು.

ಕೇಳಲು: Podcast: ಸಂಪಾದಕೀಯ: ಹಣದ ಚಲಾವಣೆ ಹೆಚ್ಚಿಸಲು ಕ್ರಮ ಸ್ವಾಗತಾರ್ಹ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿದ ಕ್ರಮಗಳಲ್ಲಿನ ಇನ್ನೊಂದು ಅಂಶವು ಮೂಲಸೌಕರ್ಯ ಯೋಜನೆಗಳ ಮೇಲಿನ ವೆಚ್ಚ. ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯಗಳಿಗೆ ಒಟ್ಟು ₹ 12 ಸಾವಿರ ಕೋಟಿ ಬಡ್ಡಿರಹಿತ ಸಾಲ ನೀಡುವುದಾಗಿ ನಿರ್ಮಲಾ ಹೇಳಿದ್ದಾರೆ. ಹಾಗೆಯೇ, ಕೇಂದ್ರವು ಹೆಚ್ಚುವರಿಯಾಗಿ ₹ 25 ಸಾವಿರ ಕೋಟಿ ವೆಚ್ಚ ಮಾಡಲಿದೆ. ಮೂಲಸೌಕರ್ಯ ಯೋಜನೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡುವ ಮೂಲಕ ಅರ್ಥವ್ಯವಸ್ಥೆಯಲ್ಲಿ ಹಣದ ಚಲಾವಣೆ ಹೆಚ್ಚುವಂತೆ ಮಾಡುವುದು ಕುಸಿದಿರುವ ವ್ಯವಸ್ಥೆಯನ್ನು ಮೇಲಕ್ಕೆತ್ತುವ ಫಲಪ್ರದ ಮಾದರಿಗಳಲ್ಲಿ ಒಂದು. ಆದರೆ, ಈಗ ಕೇಂದ್ರವು ರಾಜ್ಯಗಳಿಗೆ ನೀಡುವುದಾಗಿ ಹೇಳಿರುವ ಮೊತ್ತ ಹಾಗೂ ತಾನು ಮಾಡುವುದಾಗಿ ಹೇಳಿರುವ ವೆಚ್ಚವು ವ್ಯವಸ್ಥೆಯಲ್ಲಿ ಹೆಚ್ಚಿನ ಲವಲವಿಕೆಯನ್ನು ತರುತ್ತದೆ ಎನ್ನಲಾಗದು. ಲಾಕ್‌ಡೌನ್‌ ಪರಿಣಾಮವಾಗಿ ತೆರಿಗೆ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ತುಂಬಿಕೊಳ್ಳುವುದರ ಜತೆಗೆ ಕೇಂದ್ರ ಸರ್ಕಾರ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಮೊತ್ತವನ್ನು ಸಾಲದ ರೂಪದಲ್ಲಿ ತಂದುಕೊಳ್ಳಬೇಕಿರುವ ಅನಿವಾರ್ಯವನ್ನು ರಾಜ್ಯಗಳು ಎದುರಿಸುತ್ತಿವೆ. ಇಂತಹ ಸನ್ನಿವೇಶದಲ್ಲಿ ಎಲ್ಲ ರಾಜ್ಯಗಳಿಗೆ ಸೇರಿಸಿ ₹ 12 ಸಾವಿರ ಕೋಟಿ ಮೊತ್ತದ ಸಾಲ ನೀಡಲು ಮುಂದಾಗಿರುವುದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆದೀತು. ಮೂಲಸೌಕರ್ಯ ವಲಯದ ಮೇಲಿನ ವೆಚ್ಚಕ್ಕಾಗಿ ನಿಗದಿ ಮಾಡಿರುವ ಮೊತ್ತವನ್ನು ಗಮನಿಸಿದರೆ, ‘ಕೇಂದ್ರ ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಿದ್ದವರಿಗೆ, ‘ಇಗೋ, ನಾವೊಂದಿಷ್ಟು ಮಾಡಿದ್ದೇವೆ’ ಎಂದು ಉತ್ತರಿಸಲು ಇಷ್ಟು ಮಾಡಿರಬಹುದೇ ಎಂಬ ಪ್ರಶ್ನೆ ಕಾಡಬಹುದು. ಮೂಲಸೌಕರ್ಯ ಯೋಜನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುವುದು, ಆ ಮೂಲಕ ಉದ್ಯೋಗ ಸೃಷ್ಟಿಸುವುದು, ಉದ್ಯೋಗದ ಮೂಲಕ ಉತ್ಪನ್ನಗಳು ಹಾಗೂ ಸೇವೆಗಳಿಗೆ ಬೇಡಿಕೆ ಸೃಷ್ಟಿಸುವುದು ಸುಸ್ಥಿರ ಬೆಳವಣಿಗೆಗೆ ನಾಂದಿ ಹಾಡುವ ಶಕ್ತಿ ಹೊಂದಿವೆ. ಆದರೆ, ರಾಜ್ಯಗಳಿಗೆ ₹ 12 ಸಾವಿರ ಕೋಟಿ ನೀಡಿ, ತಾನು ₹ 25 ಸಾವಿರ ಕೋಟಿ ಖರ್ಚು ಮಾಡುವುದು (ಒಟ್ಟು ₹ 37 ಸಾವಿರ ಕೋಟಿ) ಈಗ ಆಗಿರುವ ಆರ್ಥಿಕ ನಷ್ಟಗಳಿಗೆ ಹೋಲಿಸಿದರೆ ತೀರಾ ಸಣ್ಣ ಮೊತ್ತ ಎಂದು ಭಾಸವಾಗುತ್ತಿದೆ. ದೇಶದ ಖಾಸಗಿ ವಲಯ ಹೆಚ್ಚು ಹೂಡಿಕೆ ಮಾಡುವ ಸ್ಥಿತಿಯಲ್ಲಿ ಇರುವಂತೆ ಕಾಣುತ್ತಿಲ್ಲ. ಹಾಗಾಗಿ, ಭದ್ರವಾದ ನೆಲೆಗಟ್ಟಿನ ಮೇಲೆ ದೇಶದ ಅರ್ಥವ್ಯವಸ್ಥೆಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದಾದರೆ, ಸರ್ಕಾರದ ಮೂಲಕವೇ ಇನ್ನಷ್ಟು ಹೂಡಿಕೆ ಆಗಬೇಕಿದೆ. ಈ ವಿಚಾರದಲ್ಲಿ ಪರ್ಯಾಯಗಳು ಇದ್ದಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು