ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ: ಸರ್ಕಾರದನೀತಿಗಳಲ್ಲಿ ಆದ್ಯತೆ ಪಡೆಯಲಿ

Last Updated 12 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ವಿಶ್ವದಾದ್ಯಂತ 30 ಕೋಟಿ ಜನರು ಖಿನ್ನತೆಯಿಂದ ನರಳುತ್ತಿದ್ದಾರೆ. ಭಾರತದಲ್ಲಂತೂ ಪ್ರತೀ 6ನೇ ಭಾರತೀಯ ಖಿನ್ನತೆಯಿಂದ ನರಳುತ್ತಿದ್ದಾನೆ. ಹೀಗಾಗಿ, ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಖಿನ್ನತೆಯಿಂದ ಬಳಲುತ್ತಿರುವವರ ರಾಷ್ಟ್ರ ಎಂಬಂಥ ಹಣೆಪಟ್ಟಿ ಭಾರತದ್ದಾಗಿದೆ. ಭಾರತದ ಜನಸಂಖ್ಯೆಯಲ್ಲಿ ಕನಿಷ್ಠ ಶೇ 6.5ರಷ್ಟು ಮಂದಿ ಒಂದಲ್ಲಾ ಒಂದು ವಿಧದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧ್ಯಯನ ವರದಿ ಹೇಳಿದೆ.

ಹೀಗಿದ್ದೂ ಇತರ ಕಾಯಿಲೆಗಳ ಬಗ್ಗೆ ಮಾತನಾಡಿದ ರೀತಿ ಮಾನಸಿಕ ಕಾಯಿಲೆಯ ಬಗ್ಗೆ ನಾವು ಮಾತನಾಡುವುದಿಲ್ಲ. ಮಾನಸಿಕ ಕಾಯಿಲೆಯ ಬಗ್ಗೆ ಈಗಲೂ ನಮ್ಮ ಸಮಾಜದಲ್ಲಿ ಕಳಂಕದ ಭಾವನೆ ಇದೆ. ಹೀಗಾಗಿ, ಮಾನಸಿಕ ಕಾಯಿಲೆಯನ್ನು ಕಡೆಗಣಿಸಿಕೊಂಡೇ ಬರಲಾಗುತ್ತಿದೆ. ಮಾನಸಿಕ ಕಾಯಿಲೆಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳಿವೆ, ಚಿಕಿತ್ಸೆಗಳೂ ಇವೆ. ಆದರೆ, ಮನೋವೈದ್ಯರು ಹಾಗೂ ಮಾನಸಿಕ ಆರೋಗ್ಯ ಚಿಕಿತ್ಸಕರ ತೀವ್ರ ಕೊರತೆಗೆ ಈವರೆಗೂ ನಾವು ಪರಿಹಾರ ಕಂಡುಕೊಳ್ಳಲಾಗಿಲ್ಲ.

ಇತ್ತೀಚಿನ ಎಂದರೆ 2014ರಲ್ಲಿ ವರದಿಯಾಗಿದ್ದ ಅಂಕಿಅಂಶಗಳ ಪ್ರಕಾರ, ‘1 ಲಕ್ಷ ಜನರಿಗೆ ಒಬ್ಬರು ಮಾನಸಿಕ ಆರೋಗ್ಯ ಚಿಕಿತ್ಸಕರಿದ್ದಾರೆ’. ಇದು ನಾಚಿಕೆಗೇಡು. ಭಾರತದಲ್ಲಿ ಸರಾಸರಿ ಆತ್ಮಹತ್ಯೆ ಪ್ರಮಾಣ, ಪ್ರತಿ ಲಕ್ಷ ಜನರಿಗೆ 10.9. ಆತ್ಮಹತ್ಯೆ ಮಾಡಿಕೊಳ್ಳುವವರು 44ಕ್ಕಿಂತ ಕೆಳಗಿನ ವಯೋಮಾನದವರು.

ಸರ್ಕಾರಿ ಉದ್ಯೋಗಿಗಳಿಗೆ ಹೋಲಿಸಿದಲ್ಲಿ ಭಾರತದ ಖಾಸಗಿ ವಲಯದಲ್ಲಿ ಕೆಲಸ ಮಾಡುವ ನೌಕರರಲ್ಲಿ ಶೇ 42.5ರಷ್ಟು ನೌಕರರಲ್ಲಿ ಉದ್ವೇಗ, ಖಿನ್ನತೆಯಂತಹ ಸಮಸ್ಯೆಗಳಿವೆ ಎಂದು ಕಳೆದ ವರ್ಷ ಅಸೋಚಾಮ್ ನಡೆಸಿದ್ದ ಅಧ್ಯಯನದಲ್ಲಿ ವ್ಯಕ್ತವಾಗಿತ್ತು. ಕಡಿಮೆ ವೇತನ ಹಾಗೂ ದುಡಿಮೆಯ ಅವಧಿ ಹೆಚ್ಚಳವು ಹೆಚ್ಚಿನ ಒತ್ತಡ ಹಾಗೂ ಹತಾಶೆಯನ್ನು ಸೃಷ್ಟಿಸುತ್ತಿದೆ ಎಂದೂ ಈ ಅಧ್ಯಯನ ವರದಿ ಹೇಳಿತ್ತು. ಇಂತಹ ಸನ್ನಿವೇಶದಲ್ಲಿಸರ್ಕಾರದ ನೀತಿಗಳಲ್ಲಿ ಮಾನಸಿಕ ಆರೋಗ್ಯದ ವಿಚಾರ ಪಡೆದುಕೊಳ್ಳಬೇಕಾಗಿದ್ದಷ್ಟು ಆದ್ಯತೆಯನ್ನು ಪಡೆದುಕೊಂಡಿಲ್ಲ ಎಂಬುದು ವಿಷಾದನೀಯ.

ಭಾರತದ ‘ಮಾನಸಿಕ ಆರೋಗ್ಯಪಾಲನೆ ಕಾಯ್ದೆ– 2017’ ಪ್ರಗತಿಪರವಾದದ್ದು ಎಂಬುದು ನಿಜ. ಈ ಪ್ರಕಾರ, ಸರ್ಕಾರಿ ನೆರವಿನ ಪಾಲನೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಲು ಪ್ರತೀ ವ್ಯಕ್ತಿಗೂ ಹಕ್ಕಿದೆ. ಆದರೆ ಮನೋವೈದ್ಯಕೀಯ ಚಿಕಿತ್ಸಕರ ಕೊರತೆ ದೊಡ್ಡ ಮಟ್ಟದಲ್ಲಿರುವಾಗ ಮಾನಸಿಕ ಆರೋಗ್ಯ ಸೇವೆ ಲಭಿಸುವುದಾದರೂ ಹೇಗೆ? ಮಾನಸಿಕ ಆರೋಗ್ಯ ಸಮಸ್ಯೆಗಳು ರಾಷ್ಟ್ರದ ಆರ್ಥಿಕತೆಗೆ ಉಂಟುಮಾಡಬಹುದಾದ ಹಾನಿಯನ್ನೂ ನಾವು ಅರ್ಥಮಾಡಿಕೊಳ್ಳಬೇಕು.

ತ್ವರಿತ ಗತಿಯಲ್ಲಿ ಸಮಾಜ ಬದಲಾಗುತ್ತಿರುವಂತೆಯೇ ಮಾನಸಿಕ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಆದರೆ ಈ ಬಗ್ಗೆ ಈಗಲೂ ಜಾಗೃತಿ ಇಲ್ಲ. ಮಾನಸಿಕ ಸಮಸ್ಯೆಗಳ ಕುರಿತಾದ ಅಸ್ಪೃಶ್ಯತೆ ಮುಂದುವರಿದೇ ಇದೆ. ಹೀಗಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಆಘಾತಕಾರಿ. ಮಾನಸಿಕ ಕಾಯಿಲೆ ಅಥವಾ ಮಾದಕ ವ್ಯಸನಗಳಿಗೆ ಸಿಲುಕಿರುವ ಸಮಸ್ಯೆಗಳನ್ನು ಹೊಂದಿದ ಶೇ 80ರಷ್ಟು ಜನರು ಭಾರತದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ ಎಂದು ‘ಲಾನ್ಸೆಟ್’ ವರದಿ ಹೇಳಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.

ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್, ‘ಕ್ಯಾಂಪಸ್‌ನಲ್ಲಿ ಒಂದು ನಡಿಗೆ’ ಎಂಬಂಥ ಕಾರ್ಯಕ್ರಮವೊಂದನ್ನು ಇದೇ 27ರಂದು ಆಯೋಜಿಸಿರುವುದು ಸ್ವಾಗತಾರ್ಹ. ನಿಮ್ಹಾನ್ಸ್ ಬಗ್ಗೆ ಇರುವ ‘ಹುಚ್ಚಾಸ್ಪತ್ರೆ’ ಎಂಬಂಥ ಕಳಂಕ ತೊಡೆದು ಸಾರ್ವಜನಿಕ ಅಭಿಪ್ರಾಯವನ್ನು ಬದಲಿಸಲು ನಡೆಸಿರುವ ಇಂತಹ ಹೊಸ ಪ್ರಯತ್ನ ಜನರಲ್ಲಿ ಜಾಗೃತಿ ಮೂಡಿಸುವಂತಾಗಬೇಕು.

ಪ್ರತಿವರ್ಷ ಅಕ್ಟೋಬರ್ 10ಅನ್ನು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ಆಚರಿಸಲು ಆರಂಭವಾಗಿ 26 ವರ್ಷಗಳೇ ಕಳೆದಿವೆ. 1992ರಲ್ಲಿ ಮೊದಲ ಬಾರಿಗೆ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು. ಹೀಗಿದ್ದೂ ಮಾನಸಿಕ ಆರೋಗ್ಯದ ಕುರಿತಾದ ಜಾಗೃತಿ ಜನರಲ್ಲಿ ಮೂಡಿಲ್ಲ. ಮಾನಸಿಕ ಆರೋಗ್ಯವನ್ನು ಸುಸ್ಥಿರ ಅಭಿವೃದ್ಧಿಯ ಕೇಂದ್ರದಲ್ಲಿ ಇರಿಸಬೇಕು.

ಇದಕ್ಕಾಗಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಸಮುದಾಯ ಮಟ್ಟಗಳಲ್ಲಿ ಆರೋಗ್ಯ ವಲಯ ಮಾತ್ರವಲ್ಲ ಇತರ ಅಭಿವೃದ್ಧಿ ವಲಯಗಳಲ್ಲೂ ಹಣಹೂಡಿಕೆಗಳು ಅಗತ್ಯ ಎಂದು ವೈದ್ಯಕೀಯ ಪತ್ರಿಕೆ ‘ಲಾನ್ಸೆಟ್’ ಅಭಿಪ್ರಾಯಪಟ್ಟಿದೆ. ದಿನನಿತ್ಯದ ಪ್ರಾಥಮಿಕ ಆರೋಗ್ಯ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ ಸೇವೆಗಳಿಗೂ ಅವಕಾಶ ಇರಬೇಕು ಎಂಬುದು ಮುಖ್ಯ. ಮಾನಸಿಕ ಆರೋಗ್ಯ ಇಲ್ಲದೆ ಸುಸ್ಥಿರ ಅಭಿವೃದ್ಧಿ ಅಸಾಧ್ಯ. ಮಾನಸಿಕ ಆರೋಗ್ಯ ಇಲ್ಲದಿದ್ದಲ್ಲಿ ಸಾಮಾನ್ಯ ಆರೋಗ್ಯವೂ ಇಲ್ಲ ಎಂಬುದು ಎಚ್ಚರಿಕೆ ಗಂಟೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT