ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ವ್ಯೂಹಾತ್ಮಕ ಚರ್ಚೆಗೆ ಒತ್ತು ನೀಡಿದ ಮೋದಿ ಅಮೆರಿಕ ಭೇಟಿ

Last Updated 23 ಸೆಪ್ಟೆಂಬರ್ 2019, 19:38 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿಯವರ ಆರು ದಿನಗಳ ಅಮೆರಿಕ ಪ್ರವಾಸವು ಹ್ಯೂ‌ಸ್ಟನ್‌ನ ‘ಹೌಡಿ ಮೋದಿ’ ಕಾರ್ಯಕ್ರಮದೊಂದಿಗೆ ಉತ್ಸಾಹಭರಿತವಾಗಿ ಆರಂಭಗೊಂಡಿದೆ. ಅಲ್ಲಿನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಸೇರಿದ್ದ 50 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯ ಅಮೆರಿಕನ್ನರ ಸಭೆಯಲ್ಲಿ, ಮೋದಿಯವರ ಜೊತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಭಾಗವಹಿಸಿದ್ದು ವಿಶೇಷ. ಜಗತ್ತಿನ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳ ನಾಯಕರಾದ ಮೋದಿ ಮತ್ತು ಟ್ರಂಪ್‌, ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವುದಾಗಿ ಈ ಕಾರ್ಯಕ್ರಮದಲ್ಲಿ ಪ್ರಕಟಿಸಿದ್ದಾರೆ.

ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಗಡಿ ಭದ್ರತೆಯಂತಹ ವಿಷಯಗಳಲ್ಲಿ ಎರಡೂ ದೇಶಗಳು ಒಟ್ಟಾಗಿ ಹೆಜ್ಜೆ ಹಾಕಲಿವೆ ಎಂಬ ಸೂಚನೆಯನ್ನು ಜಾಗತಿಕ ಸಮುದಾಯಕ್ಕೆ ರವಾನಿಸಿದ್ದಾರೆ. 2020ರಲ್ಲಿ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಲು ಚುನಾವಣೆಯನ್ನು ಎದುರಿಸಹೊರಟಿರುವ ಟ್ರಂಪ್‌, ಭಾರತೀಯ ಅಮೆರಿಕನ್ನರ ಬೆಂಬಲವನ್ನು ಪಡೆದುಕೊಳ್ಳುವ ದಿಸೆಯಲ್ಲಿ ಇಟ್ಟಿರುವ ಚಾಣಾಕ್ಷ ನಡೆಯಿದು ಎನ್ನುವುದಂತೂ ನಿಸ್ಸಂಶಯ. ಇಬ್ಬರೂ ನಾಯಕರು ‍ಪರಸ್ಪರರನ್ನು ಮುಕ್ತಕಂಠದಿಂದ ಹೊಗಳಲು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ‘ಮೋದಿ ಅವರು ಅಮೆರಿಕದ ಅತ್ಯಂತ ನಿಷ್ಠಾವಂತ ಸ್ನೇಹಿತ. ಮೋದಿಯವರ ನೇತೃತ್ವದಲ್ಲಿ ಬಲಿಷ್ಠ ಮತ್ತು ಸಮೃದ್ಧ ಭಾರತ ಅರಳುತ್ತಿದೆ’ ಎಂದು ಟ್ರಂಪ್‌ ಹೊಗಳಿದ್ದಾರೆ. ‘ಟ್ರಂಪ್‌ ನನ್ನ ಮತ್ತು ಭಾರತದ ಸ್ನೇಹಿತ. ಅಬ್‌ ಕಿ ಬಾರ್‌, ಟ್ರಂಪ್‌ ಸರ್ಕಾರ್‌ ಎನ್ನುವ ಘೋಷಣೆ ಅಮೆರಿಕದಲ್ಲಿ ಮೊಳಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ.ಬೇರೊಂದು ದೇಶದ ಚುನಾವಣಾ ವಿಷಯದಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಭಾವ ಬೀರುವಂತಹ ಮಾತು ಆಡುವುದು ಸರಿಯೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.

ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಈ ಸಲ ಹೆಚ್ಚಿನ ಮಹತ್ವ ಇದೆ. ಸಂವಿಧಾನದ 370ನೇ ವಿಧಿ ಅನ್ವಯ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ಕ್ರಮವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಪಡಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಅಂತಹ ಪ್ರಯತ್ನ
ಗಳನ್ನು ನಗಣ್ಯಗೊಳಿಸಲು ಮೋದಿ ಅವರು ಈ ವೇದಿಕೆಯನ್ನೂ ಬಳಸಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಶುಕ್ರವಾರ ಮೋದಿ ಮಾತನಾಡಲಿದ್ದಾರೆ. ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನದ ಅಪಪ್ರಚಾರಕ್ಕೆ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಮೋದಿ ಮಾತನಾಡಿದ ಬಳಿಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಮಾತನಾಡಲಿದ್ದಾರೆ. ಈ ಅಧಿವೇಶನದಲ್ಲಿ ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಇಮ್ರಾನ್‌ ಖಾನ್‌ ಭಾರತದ ವಿರುದ್ಧ ಟೀಕೆಗಳನ್ನು ದಾಖಲಿಸಿದರೆ, ಅದಕ್ಕೆ ಉತ್ತರಿಸುವ ಅವಕಾಶವನ್ನು ಮೋದಿ ಬಳಸಿಕೊಳ್ಳಬಹುದು. ಟ್ರಂಪ್‌ ಜೊತೆಗೆ ಇಮ್ರಾನ್‌ ಮತ್ತು ಮೋದಿಯವರ ಪ್ರತ್ಯೇಕ ಮಾತುಕತೆಯೂ ನಿಗದಿಯಾಗಿದೆ.

ಆರ್ಥಿಕ ಸಹಕಾರದ ವಿಷಯಗಳು ಈ ಮಾತುಕತೆಯಲ್ಲಿ ಪ್ರಾಮುಖ್ಯ ಪಡೆಯಬಹುದಾದರೂ, ಕಾಶ್ಮೀರದ ವಿಷಯ ಪ್ರಸ್ತಾಪವಾಗುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಭೇಟಿಯ ಆರಂಭದಲ್ಲೇ, ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್‌ ಅವರು ಭಾಗವಹಿಸುವಂತೆ ಮಾಡಿದ್ದು ಭಾರತದ ಜಾಣನಡೆ ಎನ್ನಲೇಬೇಕು. ಅಮೆರಿಕ ಪ್ರವಾಸದಲ್ಲಿಮೋದಿಯವರು ಒಟ್ಟು 40ಕ್ಕೂ ಹೆಚ್ಚು ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಕಟ್ಟಡದ ಚಾವಣಿ ಮೇಲೆ ಅಳವಡಿಸಿರುವ ‘ಗಾಂಧಿ ಸೋಲಾರ್‌ ಪಾರ್ಕ್‌’ ಉದ್ಘಾಟನೆ, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನದಿಂದ ‘ಗ್ಲೋಬಲ್‌ ಗೋಲ್‌ಕೀಪರ್‌ ಅವಾರ್ಡ್‌’ ಸ್ವೀಕಾರ ಮುಂತಾದ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಒಟ್ಟಾರೆ, ಮೋದಿಯವರ ಅಮೆರಿಕ ಭೇಟಿಯು ಈ ಬಾರಿ ವಾಣಿಜ್ಯ ಉದ್ದೇಶಗಳಿಗಿಂತ ಹೆಚ್ಚಾಗಿ ರಾಜಕೀಯದ ವ್ಯೂಹಾತ್ಮಕ ಚರ್ಚೆಗಳಿಗೆ ಹೆಚ್ಚು ಮಹತ್ವ ಕೊಟ್ಟಿರುವುದು ಎದ್ದು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT