ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ನೈತಿಕ ಶಿಕ್ಷಣದ ತುರ್ತು ಅಗತ್ಯ ಮಕ್ಕಳಿಗಲ್ಲ, ರಾಜಕಾರಣಿಗಳಿಗೆ

Last Updated 21 ಏಪ್ರಿಲ್ 2022, 1:00 IST
ಅಕ್ಷರ ಗಾತ್ರ

ಧಾರ್ಮಿಕ ಅಂಶಗಳನ್ನು ಒಳಗೊಂಡ ನೀತಿ ಪಾಠಗಳನ್ನುಶಾಲೆಗಳಲ್ಲಿ ಬೋಧಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಗೊಂದಲದಿಂದ ಕೂಡಿರುವಂತಹದ್ದು ಹಾಗೂ ಮಕ್ಕಳ ನಡುವೆ ಧಾರ್ಮಿಕವಾಗಿ ಪ್ರತ್ಯೇಕತೆಯ ಭಾವನೆ ಬೆಳೆಯಲು ಅವಕಾಶ ಕಲ್ಪಿಸುವಂತಹದ್ದು. ಶಾಲೆಗಳಲ್ಲಿ ಶೇಕಡ 90ರಷ್ಟು ವಿದ್ಯಾರ್ಥಿಗಳು ಯಾವ ಧರ್ಮಕ್ಕೆ ಸೇರಿರುವರೋ ಆ ಧರ್ಮದ ಅಂಶಗಳನ್ನು ಒಳಗೊಂಡ ಪಾಠವನ್ನು ಮುಂದಿನ ವರ್ಷದಿಂದ ಬೋಧಿಸಲಾಗುವುದು ಎನ್ನುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ಮಾತು, ಸರ್ಕಾರಿ ಶಾಲೆಗಳ ಬಹುತ್ವದ ಸ್ವರೂಪಕ್ಕೆ ವಿರುದ್ಧವಾಗಿದೆ.

ಮಕ್ಕಳಲ್ಲಿ ವಿಶ್ವಮಾನವ ಪ್ರಜ್ಞೆ ಬೆಳೆಸುವ ಸಾಧ್ಯತೆಯ ಪ್ರಯೋಗಶಾಲೆಯಂತಿರುವ ಸರ್ಕಾರಿ ಶಾಲೆಗಳನ್ನು ಧರ್ಮದ ಗರಡಿಮನೆಗಳಾಗಿಸುವ ಪ್ರಯತ್ನಗಳು ಕೆಲವು ತಿಂಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಆ ಅನಪೇಕ್ಷಿತ ಘಟನೆಗಳ ಮುಂದುವರಿಕೆಯಂತೆ ಧಾರ್ಮಿಕ ಅಂಶಗಳನ್ನು ಒಳಗೊಂಡ ನೀತಿಪಾಠ ಬೋಧಿಸುವ ಪ್ರಯತ್ನವನ್ನು ಗುರುತಿಸಬಹುದು.

ಅರಿವು ಹಾಗೂ ಆತ್ಮವಿಶ್ವಾಸವನ್ನು ಮೂಡಿಸುವುದರ ಜೊತೆಗೆ ಸಮಾಜದ ವಿವಿಧ ವರ್ಗಗಳ ಮಕ್ಕಳು ಶಾಲೆಯ ವಾತಾವರಣದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಸರ್ಕಾರಿ ಶಾಲೆಗಳಿಗಿಂತ ಅತ್ಯುತ್ತಮ ವೇದಿಕೆ ಬೇರೊಂದಿಲ್ಲ. ವಿದ್ಯಾರ್ಥಿಗಳಲ್ಲಿ ಬಹುಸಂಖ್ಯಾತ
ರನ್ನು ಗುರುತಿಸಿ, ಅವರ ಧರ್ಮದ ಸಂಗತಿಗಳನ್ನು ನೀತಿಪಾಠದಲ್ಲಿ ಅಳವಡಿಸುವುದರಿಂದ ಶಾಲೆಗಳ ಜಾತ್ಯತೀತ ಸ್ವರೂಪವನ್ನೇ ದುರ್ಬಲಗೊಳಿಸಿದಂತಾಗುತ್ತದೆ. ಇಂಥ ಪ್ರಯತ್ನಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಉಂಟುಮಾಡಬಹುದಾದ ಸೂಕ್ಷ್ಮ ಪರಿಣಾಮಗಳನ್ನು ಸರ್ಕಾರ ಅಲಕ್ಷಿಸಿದಂತಿದೆ. ಮಾದರಿ ಶಿಕ್ಷಣ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎನ್ನುವ ಭಾವನೆ ಮಕ್ಕಳಲ್ಲಿ ಉಂಟಾಗಬಾರದು. ಆದರೆ, ವಿದ್ಯಾರ್ಥಿ ಸಮೂಹವನ್ನು ಒಡೆದು ಬೋಧಿಸುವುದೇ ಈಗಿನ ಸರ್ಕಾರದ ಶಿಕ್ಷಣನೀತಿ ಇದ್ದಂತಿದೆ.

ಹಿಜಾಬ್ ಮತ್ತು ಕೇಸರಿಶಾಲು ವಿವಾದದಲ್ಲಿ ಶಾಲೆಗಳಲ್ಲಿ ಯಾವುದೇ ಧರ್ಮದ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂದು ಮತ್ತೆ ಮತ್ತೆ ಹೇಳಿದ್ದ ಸರ್ಕಾರ, ಈಗ ಧಾರ್ಮಿಕ ಅಂಶಗಳ ಬೋಧನೆ ವಿಷಯದಲ್ಲಿ ತನ್ನ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ‘ಯಾವ ಧರ್ಮದ ಮಕ್ಕಳು ನಮ್ಮ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೋ ಅವರು ಕೇಳುವ ವಿಚಾರಗಳನ್ನು ಅಳವಡಿಸುತ್ತೇವೆ’ ಎನ್ನುವ ಶಿಕ್ಷಣ ಸಚಿವರ ಮಾತು ಶಿಕ್ಷಣ ಕ್ಷೇತ್ರಕ್ಕೆ ಹೊಂದುವಂತಹದ್ದಲ್ಲ. ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಒದಗಿಸುವ ಮನೋಧರ್ಮ ವ್ಯಾಪಾರದಲ್ಲಿ ಸರಿಹೋಗಬಹುದೇ ವಿನಾ ಶಾಲೆಗಳಲ್ಲಿ ಅಲ್ಲ.

ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಅಳವಡಿಸುವುದಾಗಿ ಶಿಕ್ಷಣ ಸಚಿವರು ಇತ್ತೀಚೆಗಷ್ಟೇ ಹೇಳಿದ್ದರು. ಆ ಮಾತನ್ನೀಗ ವಿಸ್ತರಿಸಿದಂತಿರುವ ಅವರು, ಧರ್ಮಗಳ ಉತ್ತಮ ಅಂಶಗಳನ್ನು ನೀತಿಶಿಕ್ಷಣದ ರೂಪದಲ್ಲಿ ಮಕ್ಕಳಿಗೆ ಪರಿಚಯಿಸುವುದಾಗಿ ಹೇಳಿದ್ದಾರೆ.

ಮಕ್ಕಳಲ್ಲಿ ನೈತಿಕಶಕ್ತಿಯನ್ನು ಬೆಳೆಸಬೇಕು ಎನ್ನುವುದು ಒಪ್ಪತಕ್ಕ ಮಾತು. ಸಮಸ್ಯೆ ಇರುವುದು ನೈತಿಕಪ್ರಜ್ಞೆಯನ್ನು ಮೂಡಿಸಲು ಸರ್ಕಾರ ಆರಿಸಿಕೊಂಡಿರುವ ಮಾರ್ಗದಲ್ಲಿ. ಧರ್ಮ ಮತ್ತು ರಾಜಕಾರಣದ ನಡುವಣ ಗೆರೆ ಕ್ಷೀಣಿಸಿಹೋಗಿರುವುದರ ರೂಪವಾಗಿ ವರ್ತಮಾನದ ಬಹುತೇಕ ಬಿಕ್ಕಟ್ಟುಗಳನ್ನು ನೋಡಬಹುದಾಗಿದೆ. ಧರ್ಮದ ನೈತಿಕಶಕ್ತಿಯನ್ನು ಲಾಭಬಡುಕ ರಾಜಕಾರಣ ಆಪೋಶನ ತೆಗೆದುಕೊಂಡಿರುವ ಸನ್ನಿವೇಶದಲ್ಲಿ, ಧರ್ಮಗ್ರಂಥಗಳಿಗೆ ನೈತಿಕಪ್ರಜ್ಞೆಯನ್ನು ಆರೋಪಿಸುವುದು ಕೂಡ ಒಂದು ರಾಜಕೀಯ ತಂತ್ರವೇ ಆಗಿದೆ. ಸಮಾನ ಶಿಕ್ಷಣಕ್ಕೆ ಅವಕಾಶವಿಲ್ಲದವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಮಾತನಾಡುವುದು ಆತ್ಮವಂಚನೆಯೇ ಸರಿ. ಶಿಕ್ಷಣ ಕ್ಷೇತ್ರದಲ್ಲಿನ ಮೂಲಭೂತ ಹುಳುಕುಗಳನ್ನು ಸರಿಪಡಿಸುವ ಗೋಜಿಗೇ ಹೋಗದೆ ನೈತಿಕ ಶಿಕ್ಷಣದ ಬಗ್ಗೆ ಮಾತನಾಡುವುದಾದರೆ, ಆ ಮಾತುಗಳಲ್ಲಿ ರಾಜಕೀಯ ಉದ್ದೇಶಗಳಿರಬಹುದೇ ಹೊರತು ಮಕ್ಕಳ ಬಗೆಗಿನ ಕಾಳಜಿ ಇರುತ್ತದೆಂದು ಭಾವಿಸಲಾಗದು. ಅಲ್ಲದೆ, ಕರ್ನಾಟಕದಲ್ಲಿ ಸದ್ಯಕ್ಕೆ ನೈತಿಕ ಶಿಕ್ಷಣದ ಅಗತ್ಯಇರುವುದು ಮಕ್ಕಳಿಗಿಂತ ಹೆಚ್ಚಾಗಿ ರಾಜಕಾರಣಿಗಳಿಗೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯಲುಶೇ 40ರಷ್ಟು ಲಂಚ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಮಠಕ್ಕೆ ಘೋಷಿತ ಅನುದಾನ ಪಡೆಯಲು ಕಮಿಷನ್ ನೀಡಬೇಕಾಗಿದೆ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ.

ಗುತ್ತಿಗೆದಾರರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ. ಲೈಂಗಿಕ ಹಗರಣದ ಆರೋಪದಲ್ಲಿ ಮತ್ತೊಬ್ಬರು ಸಚಿವ ಸಂಪುಟದಿಂದ ದೂರ ಉಳಿಯುವಂತಾಗಿದೆ. ಪಿಎಸ್‌ಐ ಸೇರಿದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಅಕ್ರಮಗಳು ನಡೆದ ಆರೋಪ ಇದೆ. ಹೀಗೆ ಹಲವು ರೂಪದಲ್ಲಿ ಸರ್ಕಾರದ ನೈತಿಕತೆಯೇ ಪ್ರಶ್ನಾರ್ಹವಾಗಿದೆ. ತನ್ನ ನೈತಿಕ ಮಟ್ಟವನ್ನು ಸುಧಾರಿಸಿಕೊಳ್ಳುವ ಗೋಜಿಗೇ ಹೋಗದ ಸರ್ಕಾರ, ಶಾಲಾ ಮಕ್ಕಳಿಗೆ ನೈತಿಕತೆಯ ಪಾಠ ಮಾಡಲು ಹೊರಟಿರುವುದು
ವಿಕಟ ವಿನೋದದಂತೆ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT