ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸಂಸದರ ನಿಧಿ, ಮೊದಲು ನ್ಯೂನತೆ ಸರಿಪಡಿಸಿ

Last Updated 11 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಕೋವಿಡ್‌ ಕಾರಣಕ್ಕೆ ಅಮಾನತಿನಲ್ಲಿಟ್ಟಿದ್ದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ(ಎಂ.ಪಿ. ಲ್ಯಾಡ್ಸ್‌) ಪುನಃ ಚಾಲನೆ ಕೊಟ್ಟು ಮುಂದುವರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ದೇಶದ ಸಂಸದರ ಪಾಲಿಗೆ ಸಂತಸದ ಸಮಾಚಾರ ಇದಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿಯೊಬ್ಬ ಸಂಸದರ ಕ್ಷೇತ್ರಕ್ಕೆ ₹2 ಕೋಟಿಯಷ್ಟು ಅನುದಾನ ಸಿಗಲಿದೆ. ಮುಂದಿನ ಹಣಕಾಸು ವರ್ಷದಿಂದ ಯಥಾಪ್ರಕಾರ ₹5 ಕೋಟಿಯಷ್ಟು ಅನುದಾನ ಒದಗಿಸಲಾಗುವುದು ಎಂದೂ ಸರ್ಕಾರ ಪ್ರಕಟಿಸಿದೆ. ಎರಡು ವರ್ಷಗಳವರೆಗೆ ಅಮಾನತಿನಲ್ಲಿಡಲು ನಿರ್ಧರಿಸಿದ್ದ ಯೋಜನೆಗೆ ಅವಧಿ ಮುಗಿಯುವ ಮೊದಲೇ ಮರುಚಾಲನೆ ನೀಡುವಂತಹ ಅಗತ್ಯ ಏನಿತ್ತು ಎಂಬ ಪ್ರಶ್ನೆ ಮೂಡಿದೆ. ಹಾಗೆಯೇ 2020–21ನೇ ಹಣಕಾಸು ವರ್ಷದಲ್ಲಿ ಯೋಜನೆಯನ್ನು ಅಮಾನತಿನಲ್ಲಿ ಇಟ್ಟಿದ್ದರಿಂದ ಉಳಿದ ₹4,000 ಕೋಟಿಯಷ್ಟು ನಿಧಿಯನ್ನು ಯಾವ ಉದ್ದೇಶಕ್ಕಾಗಿ ಬಳಕೆ ಮಾಡಲಾಯಿತು ಮತ್ತು ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಡುವ ದಿಸೆಯಲ್ಲಿ ಅದು ಹೇಗೆ ದೇಶದ ನೆರವಿಗೆ ಬಂತು ಎಂಬ ಪ್ರಶ್ನೆಯೂ ಇದೆ. ಸಕಾರಣದ ಮತ್ತು ಸಕಾಲಿಕವಾದ ಈ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ರಾಜ್ಯವನ್ನು ರಾಜ್ಯಸಭಾ ಸದಸ್ಯರೂ ಸೇರಿದಂತೆ 40 ಸಂಸದರು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಅವರೆಲ್ಲರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಸಿಗಬೇಕಾಗಿದ್ದ ಒಟ್ಟು ಮೊತ್ತ ₹200 ಕೋಟಿ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಈ ಅನುದಾನ ಬಳಸಬಹುದಿತ್ತು. ಅಂತಹ ಸುವರ್ಣಾವಕಾಶವನ್ನು ಕೈಚೆಲ್ಲಲಾಗಿದೆ. ಹಾಗಾದರೆ ಆ ಹಣ ಯಾವ ಉದ್ದೇಶಕ್ಕೆ ಬಳಕೆಯಾಯಿತು ಎಂಬುದನ್ನು ತಿಳಿಯುವ ಹಕ್ಕು ಜನರಿಗಿದೆ.

ಎಂ.ಪಿ. ಲ್ಯಾಡ್ಸ್‌ ಅನ್ನು ತರಾತುರಿಯಲ್ಲಿ ಪುನರಾರಂಭಿಸುವ ತುರ್ತು ಸಂದರ್ಭವೊಂದು ಈಗ ಸೃಷ್ಟಿಯಾಗಿರುವಂತೆ ಕಾಣುವುದಿಲ್ಲ. ವಾಸ್ತವವಾಗಿ ಈ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆಯ ಕೊರತೆ ತೀವ್ರವಾಗಿದ್ದು, ಅನುದಾನ ಬಳಕೆಯ ಸ್ವರೂಪದ ಕುರಿತು ಮೊದಲಿನಿಂದಲೂ ಅಪಸ್ವರಗಳು ಕೇಳಿಬರುತ್ತಿವೆ. ಹಣ ದುರ್ಬಳಕೆ, ಅಪವ್ಯಯ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಕೆಸರು ಈ ಯೋಜನೆಗೆ ಮೆತ್ತಿಕೊಂಡಿರುವುದು ಮಹಾಲೇಖಪಾಲರ (ಸಿಎಜಿ) ವರದಿಗಳಲ್ಲಿ ಮೇಲಿಂದ ಮೇಲೆ ವ್ಯಕ್ತವಾಗುತ್ತಲೇ ಇದೆ. ಇದರಿಂದ ಇಡೀ ಯೋಜನೆಯನ್ನು ಅನುಮಾನದಿಂದಲೇ ನೋಡುವಂತಾಗಿದೆ. ಕುಡಿಯುವ ನೀರು, ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಹಾಗೂ ರಸ್ತೆ ಸೌಕರ್ಯ ಒದಗಿಸುವಂತಹ ಮಹತ್ವದ ಯೋಜನೆಗಳಿಗೆ ಈ ನಿಧಿಯನ್ನು ಬಳಕೆ ಮಾಡಬೇಕೆಂದು ಆದ್ಯತಾ ವಲಯಗಳನ್ನೇನೋ ಗುರುತಿಸಲಾಗಿದೆ. ಆದರೆ, ಮತ ತರುವಂತಹ ಸಮುದಾಯ ಭವನಗಳ ನಿರ್ಮಾಣಕ್ಕೇ ಈ ಹಣ ಬಳಕೆಯಾಗಿದ್ದು ಹೆಚ್ಚು. ಕೆಲವು ಸಂಸದರು ಜಾತಿವಾರು ಸೌಲಭ್ಯಗಳಿಗೆ ಅನುದಾನ ಹಂಚಿಕೆ ಮಾಡಿದ ದೂರುಗಳೂ ಇಲ್ಲದಿಲ್ಲ. ಅನುದಾನ ಹಂಚಿಕೆಯ ವಿವೇಚನಾಧಿಕಾರವನ್ನು ಹೊಂದಿರುವ ಸಂಸದರಿಗೆ ಉತ್ತರದಾಯಿತ್ವದ ಹೊಣೆಗಾರಿಕೆ ಇಲ್ಲದಿರುವುದು ಯೋಜನೆಯ
ಅನುಷ್ಠಾನದಲ್ಲಿನ ಲೋಪಗಳಿಗೆ ಬಹುಮುಖ್ಯ ಕಾರಣ. ಹಾಗೆ ನೋಡಿದರೆ, ರಾಜಕೀಯವಾಗಿ, ನೈತಿಕವಾಗಿ ತಪ್ಪು ಹೆಜ್ಜೆ ಎನಿಸಿರುವ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕ ಹಣಕಾಸು ನಿರ್ವಹಣೆಯ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಬಹುಮತವನ್ನು ಕಾಯ್ದುಕೊಳ್ಳುವ ತಂತಿಯ ಮೇಲಿನ ನಡಿಗೆಯಲ್ಲಿ ತೊಡಗಿದ್ದ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಆಗಿನ ಕೇಂದ್ರ ಸರ್ಕಾರವು 1993ರಲ್ಲಿ ಜಾರಿಗೆ ತಂದ ಯೋಜನೆ ಇದಾಗಿದೆ. ಸಂಸದರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಲು ಅವರಿಗೆ ಕೊಟ್ಟಂತಹ ಸರ್ಕಾರಿ ಪ್ರಾಯೋಜಿತ ‘ಬಹುಮಾನ’ ಇದಾಗಿತ್ತು ಎನ್ನುವ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ.

ಕಾರ್ಯಾಂಗ ಮತ್ತು ಶಾಸಕಾಂಗದ ನಡುವಣ ಕಾರ್ಯವ್ಯಾಪ್ತಿ ಸ್ಪಷ್ಟವಾಗಿರಬೇಕು ಎಂಬ ತತ್ವಕ್ಕೆ ಈ ಯೋಜನೆ ಬದ್ಧವಾಗಿಲ್ಲ.ಕಾರ್ಯಗತ ಆಗಬೇಕಿರುವ ಯೋಜನೆಗಳು ಯಾವುವು ಎಂಬುದನ್ನು ಸಂಸದರು ಆಯ್ಕೆ ಮಾಡುವುದು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂಬ ಟೀಕೆಗಳಲ್ಲಿನ ಸತ್ಯಾಂಶವನ್ನು ಗ್ರಹಿಸಿ, ಈ ಯೋಜನೆಯ ಅಗತ್ಯದ ಬಗ್ಗೆ, ಸ್ವರೂಪದ ಬಗ್ಗೆ, ಹಣದ ವರ್ಗಾವಣೆ ಬಗ್ಗೆ ಸರ್ಕಾರ ಪುನರ್‌ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಹಣ ಪೋಲಾಗುವುದನ್ನು ತಪ್ಪಿಸಬೇಕು. ಆದ್ಯತೆಯ ಕೆಲಸಗಳಿಗೆ ಮಾತ್ರ ಅದು ಬಳಕೆಯಾಗುವಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT