ಭಾನುವಾರ, ಜೂನ್ 7, 2020
22 °C

ಸಂಪಾದಕೀಯ | ಎಂಎಫ್‌ ಬಿಕ್ಕಟ್ಟು ಶಮನಕ್ಕೆ ಆರ್‌ಬಿಐ ನೆರವು ಸಕಾಲಿಕ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ದೇಶಿ ಮ್ಯೂಚುವಲ್ ಫಂಡ್‌ (ಎಂಎಫ್‌) ಉ‌ದ್ದಿಮೆಗೂ ಪೆಟ್ಟುಬಿದ್ದಿದೆ. ಫ್ರ್ಯಾಂಕ್ಲಿನ್‌ ಟೆಂಪಲ್‌ಟನ್‌ ಮ್ಯೂಚುವಲ್‌ ಫಂಡ್ ಎಂಬ ಸಂಪತ್ತು ನಿರ್ವಹಣಾ ಸಂಸ್ಥೆಯು ತನ್ನ ಆರು ಸಾಲ ನಿಧಿ ಯೋಜನೆಗಳನ್ನು (ಡೆಟ್‌ ಫಂಡ್‌ ಸ್ಕೀಮ್‌) ಹಠಾತ್ತಾಗಿ ರದ್ದುಪಡಿಸಿರುವುದು ಉದ್ಯಮದಲ್ಲಿ ಆಘಾತ ಮೂಡಿಸಿದೆ.

ಜನರ ಹಣವನ್ನು ಅವರ ಪರವಾಗಿ ಮಾರುಕಟ್ಟೆಯಲ್ಲಿ ವೃತ್ತಿಪರವಾಗಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಉದ್ದಿಮೆಯಲ್ಲಿನ ಈ ಅನಿರೀಕ್ಷಿತ ಬೆಳವಣಿಗೆಯು ಹೂಡಿಕೆದಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ರದ್ದುಗೊಂಡಿರುವ ಈ ಸಾಲ ನಿಧಿ ಯೋಜನೆಗಳಲ್ಲಿ ₹ 25 ಸಾವಿರ ಕೋಟಿಗೂ ಹೆಚ್ಚು ಹಣ ಹೂಡಿಕೆಯಾಗಿದೆ. ಹೂಡಿರುವ ಹಣ ಪುನಃ ಯಾವಾಗ ಕೈಸೇರುವುದೋ ಎಂದು ಹೂಡಿಕೆದಾರರು ತಳಮಳಗೊಂಡಿದ್ದಾರೆ.

ಈ ಸಂಸ್ಥೆಯು 25 ವರ್ಷಗಳಿಂದ ಸಂಪತ್ತು ನಿರ್ವಹಣೆಯಲ್ಲಿ ತೊಡಗಿದೆ. ಮ್ಯೂಚುವಲ್‌ ಫಂಡ್ ಕ್ಷೇತ್ರದಲ್ಲಿ‌ ದೇಶದ ಎಂಟನೇ ಅತಿದೊಡ್ಡ ಸಂಸ್ಥೆ ಎಂಬ ಹಿರಿಮೆ ಪಡೆದಿದೆ. ಇಂತಹ ಸಂಸ್ಥೆಯ ಈ ದಿಢೀರ್‌ ನಿರ್ಧಾರವು ಹೂಡಿಕೆದಾರರ ವಿಶ್ವಾಸವನ್ನೇ ಅಲುಗಾಡಿಸಿದೆ. ಬಾಂಡ್‌ ಮಾರುಕಟ್ಟೆಯಲ್ಲಿ ಕಂಡುಬಂದಿರುವ ನಗದು ಕೊರತೆ ಮತ್ತು ಹಣ ವಾಪಸು ಪಡೆಯಲು ಹೂಡಿಕೆದಾರರಿಂದ ಹೆಚ್ಚಿದ ಒತ್ತಡದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಸಂಸ್ಥೆ ಸಮಜಾಯಿಷಿ ನೀಡಿದೆ.

ಸಂಸ್ಥೆಯ ಈ ಹೇಳಿಕೆಯಲ್ಲಿ ಹುರುಳಿಲ್ಲದೇ ಇಲ್ಲ. ಕೆಲವು ವರ್ಷಗಳಿಂದ ಭಾರತದ ಮಾರುಕಟ್ಟೆಯು ಸ್ಥಿರವಾಗಿಲ್ಲ. ಬೇಡಿಕೆ ಕುಸಿತ ಮತ್ತು ಒಟ್ಟಾರೆ ಆರ್ಥಿಕ ಪ್ರಗತಿಯಲ್ಲಿನ ಹಿನ್ನಡೆಯಿಂದಾಗಿ ಉದ್ಯಮ ಸಂಸ್ಥೆಗಳು ಏದುಸಿರು ಬಿಡುತ್ತಿವೆ. ಹಾಗಾಗಿಯೇ ಭಾರತಕ್ಕೆ ಕೋವಿಡ್‌ ಪಿಡುಗು ತಟ್ಟುವುದಕ್ಕೆ ಮೊದಲೇ ಮ್ಯೂಚುವಲ್ ಫಂಡ್‌ಗಳಲ್ಲಿ ಕಂಪನ ಉಂಟಾಗಿತ್ತು.

ಮ್ಯೂಚುವಲ್‌ ಫಂಡ್‌ಗಳು ಇಂತಹ ಸ್ಥಿತಿಗೆ ಬರುವುದು ಇದು ಮೊದಲೇನೂ ಅಲ್ಲ. 2008 ಮತ್ತು 2013ರಲ್ಲಿಯೂ ನಗದು ಕೊರತೆಯ ಬಿಕ್ಕಟ್ಟು ಎದುರಾಗಿತ್ತು. ಆಗಲೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಕ್ರಮವಾಗಿ ₹30 ಸಾವಿರ ಕೋಟಿ ಮತ್ತು ₹20 ಸಾವಿರ ಕೋಟಿಯ ಪ್ಯಾಕೇಜ್‌ ಪ್ರಕಟಿಸಿತ್ತು. 

ಈಗಲೂ, ಮ್ಯೂಚುವಲ್‌ ಫಂಡ್‌ ಉದ್ದಿಮೆಯ ನೆರವಿಗೆ ಆರ್‌ಬಿಐ‌ ತಕ್ಷಣ ಧಾವಿಸಿರುವುದು ಸಕಾರಾತ್ಮಕ ಬೆಳವಣಿಗೆ. ₹ 50 ಸಾವಿರ ಕೋಟಿ ಮೊತ್ತದ ವಿಶೇಷ ನಗದು ಸೌಲಭ್ಯವನ್ನು ರಿಸರ್ವ್‌ ಬ್ಯಾಂಕ್‌ ಪ್ರಕಟಿಸಿದೆ. ಮ್ಯೂಚುವಲ್‌ ಫಂಡ್‌ಗಳ ಹಣದ ಅಗತ್ಯ ಪೂರೈಸಲು ಬ್ಯಾಂಕ್‌ಗಳು ಆರ್‌ಬಿಐನಿಂದ ಅಗ್ಗದ ಬಡ್ಡಿ ದರದಲ್ಲಿ ಸಾಲ ಪಡೆಯುವ ಹಾದಿ ಸುಗಮವಾಗಿದೆ. ಆದರೆ, ಇದರ ಸದ್ಬಳಕೆ ಆಗಬೇಕು. ಕೇಂದ್ರೀಯ ಬ್ಯಾಂಕ್‌ನ ಈ ನಿರ್ಧಾರವು ಹೂಡಿಕೆದಾರರಲ್ಲಿ ಪುನಃ ವಿಶ್ವಾಸ ಮೂಡಿಸುವ ಸಾಧ್ಯತೆ ಇದೆ.

ಕಾರ್ಪೊರೇಟ್‌ ಸಾಲ ಮಾರುಕಟ್ಟೆಯಲ್ಲಿನ ಒತ್ತಡ ತಗ್ಗಿಸಲಿದೆ. ಆದರೆ, ಈ ಸಂಕೀರ್ಣ ಸಮಸ್ಯೆಗೆ ಇದೊಂದೇ ಪರಿಹಾರ ಆಗಲಾರದು. ಜನರು ಕಷ್ಟಪಟ್ಟು ದುಡಿದು ಗಳಿಸಿ ತೊಡಗಿಸಿರುವ ಹಣದ ಸಂರಕ್ಷಣೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕಾರ್ಯೋನ್ಮುಖವಾಗಬೇಕು. ಇದೊಂದು ಜಟಿಲ ಸ್ವರೂಪದ ಸಮಸ್ಯೆಯಾಗಿದ್ದು ನಾಜೂಕಿನ ಪರಿಹಾರ ಬೇಕಾಗಿದೆ.

ಹೂಡಿಕೆದಾರರ ಹಣವು ನಿರ್ದಿಷ್ಟ ಕಾಲಮಿತಿ ಒಳಗೆ ಮರಳಿ ಕೈಸೇರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸಲು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಲು ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯವೂ ಇದೆ. ಉದ್ದಿಮೆಯಲ್ಲಿ ಸ್ಥಿರತೆ ಮೂಡಿಸುವ ಉದ್ದೇಶದ ಆರ್‌ಬಿಐ ಕ್ರಮಕ್ಕೆ ಪೂರಕವಾಗಿ ಸರ್ಕಾರವೂ ಸ್ಪಂದಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು