ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಅಸಹನೆಯ ಪರಿಧಿಯನ್ನೂ ಮೀರಿದ ಪ್ರಧಾನಿ ಮೋದಿ ಮಾತು

Published:
Updated:
Prajavani

ತೃಣಮೂಲ ಕಾಂಗ್ರೆಸ್ಸಿನ (ಟಿಎಂಸಿ) 40 ಜನ ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ, ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಆದ ನಂತರ ಅವರು ಪಕ್ಷ ತೊರೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿತನದ ಕಾರಣದಿಂದಾಗಿಯೇ ಗಮನ ಸೆಳೆದಿದೆ. ಆ ಮಾತು ಪ್ರಧಾನಿ ಸ್ಥಾನದಲ್ಲಿರುವ
ವರಿಗೆ ತಕ್ಕುದಲ್ಲ. ಪ್ರಧಾನಿಯವರು ಬಂಗಾಳದ ಸೆರಾಂಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಈ ಮಾತು ಆಡಿದ್ದಾರೆ. ಅಲ್ಲಿ ತಳಮಟ್ಟದಿಂದಲೂ ಭದ್ರವಾಗಿ ನೆಲೆನಿಂತಿರುವ ಟಿಎಂಸಿ ವಿರುದ್ಧ ಬಿಜೆಪಿ ಸೆಣಸುತ್ತಿದೆ.

ತೃಣಮೂಲ ಕಾಂಗ್ರೆಸ್‌ ಪಕ್ಷವು ಕುಸಿಯುತ್ತಿದೆ, ಅದರ ಪ್ರಾಬಲ್ಯ ಕಡಿಮೆ ಆಗುತ್ತಿದೆ, ಬಿಜೆಪಿಯು ಟಿಎಂಸಿಗೆ ಪರ್ಯಾಯ ಆಗಬಲ್ಲದು ಎಂದು ಹೇಳುವುದು ಪ್ರಧಾನಿಯವರ ಉದ್ದೇಶ ಆಗಿತ್ತು. ಟಿಎಂಸಿಯ ಯಾವುದೇ ಶಾಸಕ ಪ್ರಧಾನಿಯವರ ಜೊತೆ ಸಂಪರ್ಕದಲ್ಲಿ ಇದ್ದರೋ, ಇಲ್ಲವೋ ಎಂಬುದು ಬೇರೆ ಮಾತು. ಆದರೆ, ಪ್ರಧಾನಿಯವರ ಹೇಳಿಕೆಯು ರಾಜ್ಯವೊಂದರ ಸರ್ಕಾರದ ವಿರುದ್ಧ ದಂಗೆ ಏಳುವಂತೆ ನೀಡಿದ ಬಹಿರಂಗ ಕರೆಗೆ ಸಮ.

ಪ್ರಧಾನಿ ಸ್ಥಾನದಲ್ಲಿ ಇರುವವರು ಇಂತಹ ಮಾತನ್ನು ಆಡಿದ್ದು ಅತ್ಯಂತ ಹೊಣೆಗೇಡಿತನದ್ದು. ರಾಜ್ಯ ಮಟ್ಟದಲ್ಲಿ ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ಹಾಗೂ ಪರಸ್ಪರ ಸೆಣಸುತ್ತಿರುವ ಒಕ್ಕೂಟ ವ್ಯವಸ್ಥೆಯ ಭಾಗ ಪ್ರಧಾನಿ ಮತ್ತು ಕೇಂದ್ರ ಸರ್ಕಾರ. ಪ್ರಾದೇಶಿಕ ಪಕ್ಷಗಳಿಗೆ ಆಡಳಿತದಲ್ಲಿ ಪ್ರಮುಖ ಪಾತ್ರವನ್ನು ಸಂವಿಧಾನ ಹಾಗೂ ದೇಶದ ರಾಜಕೀಯ ಪರಂಪರೆ ನೀಡಿವೆ.

ಸಹಕಾರ ಒಕ್ಕೂಟ ತತ್ವದ ಬಗ್ಗೆ ಬಾಯುಪಚಾರಕ್ಕೆ ಮಾತನಾಡುವ ಬಿಜೆಪಿ ಮತ್ತು ಪ್ರಧಾನಿ, ಪ್ರಾದೇಶಿಕ ಪಕ್ಷಗಳ ಬಗ್ಗೆ ಅಸಹನೆ ಹೊಂದಿರುವುದು ನಿಜ. ಅಷ್ಟೇ ಅಲ್ಲ, ಬೇರೆಲ್ಲ ಪಕ್ಷಗಳ ಬಗ್ಗೆಯೂ ಅವರು ಅಸಹನೆ ಹೊಂದಿದ್ದಾರೆ. ಆದರೆ ಸೆರಾಂಪುರದಲ್ಲಿ ನೀಡಿರುವ ಹೇಳಿಕೆಯು ಅಸಹನೆಯ ಪರಿಧಿಯನ್ನೂ ಮೀರಿ ನಿಂತಿದೆ. ಶಾಸಕರ ಪಕ್ಷಾಂತರದ ಮೂಲಕ ರಾಜ್ಯ ಸರ್ಕಾರವೊಂದನ್ನು ಉರುಳಿಸಲಾಗುವುದು ಎಂಬ ಸೂಚನೆಯನ್ನು ಸಾರ್ವಜನಿಕವಾಗಿ ನೀಡುವ ಮೂಲಕ ಪ್ರಧಾನಿಯವರು ಔಚಿತ್ಯದ ಎಲ್ಲೆಗಳನ್ನು ಮೀರಿದ್ದಾರೆ.

ಶಾಸಕರ ಪಕ್ಷಾಂತರವನ್ನು ಹದ್ದುಬಸ್ತಿನಲ್ಲಿ ಇಡಲು ಕಾನೂನು ಇದೆ. ಆ ಕಾನೂನನ್ನು ಗೌರವಿಸುವ ಹಾಗೂ ಅದನ್ನು ರಕ್ಷಿಸುವ ಹೊಣೆ ಪ್ರಧಾನಿಯವರ ಮೇಲಿರುತ್ತದೆ. ಈ ಹೇಳಿಕೆಯ ಮೂಲಕ ಮೋದಿ ಅವರು ಶಾಸಕರ ಪಕ್ಷಾಂತರವನ್ನು, ಶಾಸಕರ ಖರೀದಿಯನ್ನು ಮಾನ್ಯ ಮಾಡಿದಂತೆ ಆಗಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಕೆಲವು ರಾಜ್ಯಗಳಲ್ಲಿದ್ದ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಿದೆ, ಕೆಲವು ಕಡೆಗಳಲ್ಲಿ ತಪ್ಪು ಹಾದಿ ಅನುಸರಿಸಿ ಸರ್ಕಾರ ಉರುಳಿಸುವ ಯತ್ನ ನಡೆಸಿದೆ. ಇಂತಹ ತಂತ್ರಗಳನ್ನು ಪ್ರಧಾನಿಯವರು ಸಾರ್ವಜನಿಕವಾಗಿ ಬೆಂಬಲಿಸಿರುವುದು ತಪ್ಪು.

ಇದು ನ್ಯಾಯಮಾರ್ಗದ ರಾಜಕಾರಣದ ಪರಿಕಲ್ಪನೆ ಹಾಗೂ ಆಚರಣೆಗೆ ವಿರುದ್ಧ. ಈ ಹೇಳಿಕೆಯ ಮೂಲಕ ಪ್ರಧಾನಿಯವರು ರಾಜಕೀಯ ನೈತಿಕತೆಯನ್ನು ಮೀರಿರುವುದು ಮಾತ್ರವಲ್ಲದೆ, ಚುನಾವಣೆ ವೇಳೆ ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂಬ ನಿಯಮವನ್ನೂ ಮುರಿದಿದ್ದಾರೆ.  ಅವರು ಈ ಹೇಳಿಕೆ ನೀಡಿದಾಗ, ಪಶ್ಚಿಮ ಬಂಗಾಳದ ಇತರ ಕಡೆಗಳಲ್ಲಿ ಮತದಾನ ನಡೆಯುತ್ತಿತ್ತು. ತಮ್ಮ ಮಾತಿನ ಮೂಲಕ ಪ್ರಧಾನಿಯವರು ಆ ಮತದಾನ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದ್ದಿರುವ ಸಾಧ್ಯತೆ ಇದೆ. ಅವರ ಹೇಳಿಕೆಯು ಚುನಾವಣಾ ಪ್ರಚಾರಗಳಲ್ಲಿ ಪಾಲಿಸುವ ಅಲಿಖಿತ ನಿಯಮಗಳಿಗೆ ವಿರುದ್ಧವಾಗಿದೆ.

ಚುನಾವಣಾ ರ‍್ಯಾಲಿಗಳಿಗೆ ಸಂಬಂಧಿಸಿದಂತೆ ಪಾಲಿಸಲಾಗುವ ಸೌಜನ್ಯದ ನಡೆಯನ್ನು ಪ್ರಧಾನಿ ಕೈಬಿಟ್ಟಿದ್ದಾರೆ. ಹಲವು ಸಂದರ್ಭಗಳಲ್ಲಿ ಮಾದರಿ ನೀತಿ ಸಂಹಿತೆಯನ್ನು ಮುರಿದಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಚುನಾವಣೆ ಗೆಲ್ಲಲೇಬೇಕು ಎಂದು ಬಯಸುವ ರಾಜಕೀಯ ಪಕ್ಷವೊಂದರ ನಾಯಕರಂತೆ ಅವರು ವರ್ತಿಸಿದ್ದಾರೆ ಹಾಗೂ ಆ ರೀತಿ ಮಾತನಾಡಿದ್ದಾರೆಯೇ ವಿನಾ ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಪಾಲಿಸುವ ಪ್ರಧಾನಿಯಂತೆ ಅಲ್ಲ.

Post Comments (+)