‘2026ರ ಮಾರ್ಚ್ 31ರೊಳಗೆ ಭಾರತವನ್ನು ನಕ್ಸಲ್ ಮುಕ್ತಗೊಳಿಸಲಾಗುವುದು’ ಎಂದು ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿತ್ತು. ಗಡುವು ಕೊನೆಗೊಳ್ಳಲು ಒಂದು ದಿನ ಬಾಕಿ ಇರುವಾಗಲೇ ‘ಭಾರತ ಈಗ ನಕ್ಸಲ್ ಮುಕ್ತವಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ. ಇದು, ಬಹುಪಾಲು ನಿಜವೂ ಹೌದು. ಛತ್ತೀಸಗಢ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ 200ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಕ್ಸಲ್ ಚಳವಳಿ ಹಬ್ಬಿತ್ತು. ಶಾ ಅವರ ಹೇಳಿಕೆ ಪ್ರಕಾರ, ‘ಕೆಂಪು ಕಾರಿಡಾರ್’ ಈಗ ಎರಡು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ. ‘ನಕ್ಸಲ್ ಚಳವಳಿಯ ನಿರ್ಣಾಯಕ ಸ್ಥಾನದಲ್ಲಿದ್ದ ಅಗ್ರ 21 ನಾಯಕರಲ್ಲಿ 20 ಮಂದಿಯನ್ನು ತಟಸ್ಥಗೊಳಿಸಲಾಗಿದೆ. 12 ಮಂದಿಯನ್ನು ಹತ್ಯೆ ಮಾಡಲಾಗಿದ್ದರೆ, ಏಳು ಜನ ಶರಣಾಗಿದ್ದಾರೆ. ಮತ್ತೊಬ್ಬರನ್ನು ಬಂಧಿಸಲಾಗಿದೆ’ ಎಂದು ಸರ್ಕಾರ ಹೇಳಿಕೊಂಡಿದೆ. ಭದ್ರತಾ ಪಡೆಗಳ ನಿರಂತರ ಶಕ್ತಿ ಪ್ರಯೋಗದ ಪರಿಣಾಮ ನಕ್ಸಲ್ ಚಳವಳಿಯ ಎಲ್ಲ ಹಂತಗಳ ನಾಯಕತ್ವವೂ ಸಂಪೂರ್ಣವಾಗಿ ನೆಲಕಚ್ಚಿದೆ. ಇತ್ತೀಚಿನ ತಿಂಗಳುಗಳಲ್ಲಿ ಯಾವುದೇ ಪ್ರಮುಖ ನಕ್ಸಲ್ ಚಟುವಟಿಕೆಯೂ ವರದಿಯಾಗಿಲ್ಲ.

ನಕ್ಸಲ್ವಾದವು ಈಗ ದೇಶದಲ್ಲಿ ಮೊದಲಿನಂತೆ ರಾಜಕೀಯ ಇಲ್ಲವೆ ರಾಷ್ಟ್ರೀಯ ಭದ್ರತೆಯ ಬೆದರಿಕೆಯಾಗಿ ಉಳಿದಿಲ್ಲ. ಅದರ ಶಕ್ತಿಯಲ್ಲಿ ಆಗಿರುವ ಈ ಪಲ್ಲಟಕ್ಕೆ ಹಲವು ಕಾರಣಗಳಿವೆ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯ ಪ್ರದೇಶಗಳಲ್ಲಿ ಬಡತನ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಕೆಲವು ದಶಕಗಳ ಹಿಂದೆ ಇದ್ದಷ್ಟು ಈಗ ತೀವ್ರವಾಗಿಲ್ಲ. ಸರ್ಕಾರದ ಕಲ್ಯಾಣ ಯೋಜನೆಗಳು ಅಂಚಿನಲ್ಲಿರುವ ಬಹುತೇಕ ಸಮುದಾಯಗಳನ್ನು ತಲಪಿರುವುದು ಕೂಡ ನಿಜ. ‘ನಕ್ಸಲ್ ಸಾಮ್ರಾಜ್ಯ’ದ ಬಹುಪಾಲು ಪ್ರದೇಶಗಳಲ್ಲಿ ರಸ್ತೆ ಮತ್ತು ಸಂಪರ್ಕ ಜಾಲ ಸೇರಿದಂತೆ ಮೂಲಸೌಕರ್ಯದಲ್ಲಿ ಸಾಕಷ್ಟು ಸುಧಾರಣೆಗಳು ಆಗಿವೆ. ಈ ಬದಲಾವಣೆಗಳ ಪರಿಣಾಮ, ನಕ್ಸಲ್ಪೀಡಿತ ಪ್ರದೇಶಗಳು ಮುಖ್ಯವಾಹಿನಿಯೊಂದಿಗೆ ಸಾಮಾಜಿಕ–ಆರ್ಥಿಕ ಸಂಬಂಧಗಳನ್ನು ಸಾಧಿಸುವಂತಾಗಿದೆ. ಹೆಚ್ಚಿದ ಮೂಲಸೌಕರ್ಯಗಳಿಂದಾಗಿ ಭದ್ರತಾ ಪಡೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲೂ ಸಾಧ್ಯವಾಗಿದೆ. ಚಳವಳಿಯು ಧ್ವನಿ ಕಳೆದುಕೊಳ್ಳಲು ಹೀಗೆ ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ನಕ್ಸಲ್ ಚಳವಳಿಯು ಇನ್ನುಮುಂದೆ ಸಂಘಟಿತ ಬಂಡುಕೋರ ಶಕ್ತಿಯಾಗಿ ಉಳಿಯದೇ ಇರಬಹುದು. ಆದರೆ, ಚಳವಳಿಯನ್ನು ಸಂಪೂರ್ಣವಾಗಿ ಸೋಲಿಸಲಾಗಿದೆ ಎಂದು ಈಗಲೇ ಘೋಷಿಸುವುದು ಆತುರದ ಕ್ರಮವಾದೀತು. ಭೂಕಬಳಿಕೆ, ಶೋಷಣೆ, ಆಡಳಿತ ಮತ್ತು ಜನರ ನಡುವಿನ ಅಂತರಗಳು ಭಾರತದಲ್ಲಿ ಇಂದಿಗೂ ವಾಸ್ತವವಾಗಿಯೇ ಉಳಿದಿವೆ. ನಕ್ಸಲ್ವಾದದ ಉದಯಕ್ಕೆ ಕಾರಣವಾದ ಸಂದರ್ಭಗಳು ಯಾವುದಾದರೂ ರೂಪದಲ್ಲಿ ಇರುವವರೆಗೆ, ಆ ಸಿದ್ಧಾಂತವು ಸಣ್ಣದಾಗಿಯಾದರೂ ಅಸ್ತಿತ್ವದಲ್ಲಿ ಇದ್ದೇ ಇರುತ್ತದೆ.

‘ಭಾರತ ಈಗ ನಕ್ಸಲ್ ಮುಕ್ತ’ ಘೋಷಣೆಯ ಸಂದರ್ಭವನ್ನು ಶಾ ಅವರು ಎದುರಾಳಿ ಕಾಂಗ್ರೆಸ್ ಪಕ್ಷ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಜಕೀಯವಾಗಿ ದಾಳಿ ನಡೆಸಲೂ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ನಕ್ಸಲ್ ಚಳವಳಿಯನ್ನು ಬೆಂಬಲಿಸಿದವು ಎಂಬ ಅವರ ಆರೋಪಗಳಿಗೆ ಸೂಕ್ತ ಸಮರ್ಥನೆಗಳಿಲ್ಲ. 2006ರಲ್ಲಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು, ‘ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗಿಂತಲೂ ನಕ್ಸಲ್ವಾದವೇ ದೇಶದ ಭದ್ರತೆಗೆ ದೊಡ್ಡ ಸವಾಲು’ ಎಂದು ಹೇಳಿದ್ದರು. ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನಕ್ಸಲ್ ಸಿದ್ಧಾಂತದ ವಿರುದ್ಧ, ಅದರ ಸಶಸ್ತ್ರ ಚಳವಳಿಯ ವಿರುದ್ಧ ಹೋರಾಡಿವೆ. ಪ್ರಸ್ತುತ ಸರ್ಕಾರವು, ನಕ್ಸಲ್ ಚಳವಳಿ ವಿರುದ್ಧ ಮಿಲಿಟರಿ ಮತ್ತು ಕಾರ್ಯತಂತ್ರದ ಮೂಲಕ ಮೇಲುಗೈ ಸಾಧಿಸಿದೆ. ಅದರ ಕೆಲವು ವಿಧಾನಗಳ ವಿಷಯವಾಗಿ ಗಂಭೀರವಾದ ಪ್ರಶ್ನೆಗಳನ್ನೂ ಎತ್ತಲಾಗಿದೆ ಎಂಬುದನ್ನು ಮರೆಯುವಂತಿಲ್ಲ. ನಕ್ಸಲ್ಪೀಡಿತ ಪ್ರದೇಶಗಳ ಜನರಿಗೆ ಯೋಜನೆಗಳ ಪ್ರಯೋಜನ ಸಮರ್ಪಕವಾಗಿ ಸಿಗುವಂತೆ ಮಾಡುವುದು, ದೇಶದ ಅಭಿವೃದ್ಧಿಯ ಚಕ್ರವು ಅವರನ್ನೂ ಒಳಗೊಳ್ಳುವುದು ಮತ್ತು ಪ್ರಜಾಪ್ರಭುತ್ವದಲ್ಲಿ ತಮಗಿರುವ ಹಕ್ಕುಗಳನ್ನು ಅರಿತುಕೊಳ್ಳಲು ಅವರಿಗೆ ಅನುವು ಮಾಡಿಕೊಡುವುದು ಸದ್ಯ ಮುಂದಿರುವ ದೊಡ್ಡ ಸವಾಲು. ನಕ್ಸಲ್ ಚಳವಳಿಯ ವಿರುದ್ಧದ ನಿರ್ಣಾಯಕ ಹೋರಾಟವೆಂದರೆ ಇದೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.