ಕೃಷಿ ಸಂಕಷ್ಟ ಪರಿಹರಿಸಿ: ರೈತರ ಗೋಳಿಗೆ ಕಿವಿಗೊಡಿ

7

ಕೃಷಿ ಸಂಕಷ್ಟ ಪರಿಹರಿಸಿ: ರೈತರ ಗೋಳಿಗೆ ಕಿವಿಗೊಡಿ

Published:
Updated:

ದೆಹಲಿಯನ್ನು ಪ್ರವೇಶಿಸಲು ಬರುತ್ತಿದ್ದ 30 ಸಾವಿರಕ್ಕೂ ಹೆಚ್ಚು ರೈತರನ್ನು ಪೊಲೀಸರು ತಡೆದ ಘಟನೆ ಹಿಂಸಾಚಾರದಲ್ಲಿ ಪರ್ಯವಸಾನವಾಗಿದೆ. ಪೊಲೀಸರು ಹಾಗೂ ರೈತರ ಸಂಘರ್ಷ ತಾರಕಕ್ಕೇರಿ ರೈತರ ಮೇಲೆ ಲಾಠಿ ಪ್ರಹಾರ, ಅಶ್ರುವಾಯು ಹಾಗೂ ಜಲ ಫಿರಂಗಿ ಪ್ರಯೋಗಿಸಲಾಗಿದೆ. ಇದರಿಂದ ಅನೇಕ ರೈತರು ಗಾಯಗೊಂಡಿದ್ದಾರೆ. ಉತ್ತರಾಖಂಡದ ಹರಿದ್ವಾರದ ಟಿಕಾಯತ್ ಘಾಟ್‍ನಿಂದ ಸೆ. 23ರಂದು ಹತ್ತು ದಿನಗಳ ಈ ಕಿಸಾನ್‍ ಕ್ರಾಂತಿ ಪಾದಯಾತ್ರೆ ಆರಂಭವಾಗಿತ್ತು. ಪ್ರತಿಭಟನಾಕಾರರು ದೆಹಲಿ ಪ್ರವೇಶಿಸಲು ಅವಕಾಶ ನೀಡದಿರಲು ಯಾವುದೇ ಅಧಿಕೃತ ಕಾರಣವನ್ನೂ ಸರ್ಕಾರ ನೀಡಿಲ್ಲ. ಇಂತಹ ದೊಡ್ಡ ಗುಂಪು ನಿಭಾಯಿಸುವಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರ ಸಾಮರ್ಥ್ಯದ ಬಗ್ಗೆ ಇಲ್ಲಿ ಪ್ರಶ್ನೆಗಳೇಳುತ್ತವೆ. ಏಕೆಂದರೆ ಕಳೆದ ಮಾರ್ಚ್‌ ತಿಂಗಳಲ್ಲಿ ಇಂತಹದೇ ರೈತರ ದೊಡ್ಡ ಯಾತ್ರೆಯನ್ನು ಮಹಾರಾಷ್ಟ್ರ ಹಾಗೂ ಮುಂಬೈ ಪೊಲೀಸರು ಸಮರ್ಪಕವಾಗಿ ನಿಭಾಯಿಸಿದ್ದರು. ಮುಂಬೈ ಪ್ರವೇಶಿಸಬೇಕಿದ್ದ ದಿನವೇ ಅಲ್ಲಿನ ಶಾಲಾ ಮಕ್ಕಳಿಗೆ ಪರೀಕ್ಷೆ ಇತ್ತು. ಹೀಗಾಗಿ ರಾಜ್ಯ ಸರ್ಕಾರದ ಮನವಿ ಮೇರೆಗೆ ರೈತರು ಮುಂಬೈ ಬೀದಿಗಳಲ್ಲಿ ಶಾಂತವಾಗಿ ರಾತ್ರಿಯೇ ನಡೆದು ಸಭೆ ನಡೆಯಲಿದ್ದ ಆಜಾದ್ ಮೈದಾನ್ ತಲುಪುವ ಮೂಲಕ ಬೆಳಗಿನ ವೇಳೆ ಉಂಟಾಗಬಹುದಿದ್ದ ಟ್ರಾಫಿಕ್ ಜಾಮ್ ತಪ್ಪಿಸಿದ್ದರು. ಶಾಲಾ ಮಕ್ಕಳಿಗೆ ಪರೀಕ್ಷೆ ಬರೆಯಲು ತೊಂದರೆಯಾಗದಂತೆ ರೈತರು ಸ್ಪಂದಿಸಿದ ರೀತಿಗೆ ಆಗ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಅಹಿಂಸೆಯನ್ನು ಬೋಧಿಸಿದ ಗಾಂಧಿ ಜಯಂತಿಯ ದಿನವೇ ರೈತರಿಗೆ ಸಂಬಂಧಿಸಿದಂತೆ ಹಿಂಸಾಚಾರ ನಡೆದಿರುವುದು ವಿಪರ್ಯಾಸ. ಅಷ್ಟೇ ಅಲ್ಲ, ಈ ದಿನ, ‘ಜೈ ಕಿಸಾನ್’ ಘೋಷಣೆ ನೀಡಿದಂತಹ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಹೌದು. ಭಾರತದಲ್ಲಿ ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿ ಬಹಳ ಕಾಲವೇ ಆಗಿದೆ. ಹೀಗಿದ್ದೂ ರೈತರ ಗೋಳುಗಳಿಗೆ ಕಿವಿಗೊಡದಿರುವುದು ಸಲ್ಲದು. ಕಳೆದ ವರ್ಷ ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲೂ ರೈತ ಪ್ರತಿಭಟನೆಗಳು ನಡೆದಿದ್ದವು. ಈ ಎರಡು ರಾಜ್ಯಗಳಲ್ಲೂ ಈ ವರ್ಷ ಚುನಾವಣೆಗಳು ನಡೆಯಲಿವೆ. ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಆಡಳಿತ ಸೂತ್ರ ಹಿಡಿದಾಗಲಿಂದಲೂ ರೈತರ ಪ್ರತಿಭಟನೆಗಳ ಬಿಸಿಯನ್ನು ಎದುರಿಸುತ್ತಲೇ ಬಂದಿದೆ. ಆರಂಭದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದ ಎನ್‍ಡಿಎ ಸರ್ಕಾರ, ನಿಧಾನವಾಗಿ ರೈತರ ನಡುವೆ ಬೆಂಬಲ ಕಳೆದುಕೊಳ್ಳುತ್ತಿದೆ ಎಂಬಂಥ ಅಂಶ ಲೋಕನೀತಿ-ಸಿಎಸ್‍ಡಿಎಸ್‍ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು. ಕೃಷಿ ಸಂಕಷ್ಟ ಪರಿಹಾರಕ್ಕೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ ಎಂಬುದು ವಿಷಾದನೀಯ. ಕೃಷಿಸಾಲ ಮನ್ನಾ, ಕಬ್ಬಿಗೆ ಬೆಂಬಲ ಬೆಲೆ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸು ಸೇರಿದಂತೆ 15 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ರೈತರ ದೆಹಲಿ ಪ್ರವೇಶ ತಡೆಗೆ ಪ್ರತಿಪಕ್ಷಗಳು ಟೀಕೆಗಳನ್ನು ಮಾಡಿವೆ. ‘ರಾಜಧಾನಿ ಎಲ್ಲರಿಗೂ ಸೇರಿದ್ದು. ರೈತರನ್ನು ತಡೆದದ್ದು ಸರಿಯಲ್ಲ. ರೈತರ ಬೇಡಿಕೆಗಳು ನ್ಯಾಯಯುತವಾಗಿವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಶಾಂತಿಯುತವಾಗಿ ಗುಂಪು ಸೇರುವುದು, ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಭಾಗ. ಅದಕ್ಕೆ ಅಡ್ಡಿಪಡಿಸುವುದು ಸಲ್ಲದು. ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕೃಷಿ ಸಂಕಷ್ಟ ಪರಿಹರಿಸುವ ವಿಚಾರ ಸರ್ಕಾರದ ಕಾರ್ಯಕ್ರಮಗಳಲ್ಲಿ ಆದ್ಯತೆ ಪಡೆಯಲಿ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !