ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಮೇ 3ರಂದು ನಡೆದಿದ್ದ ‘ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ’ಯನ್ನು (ನೀಟ್–ಯುಜಿ) ‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ’ (ಎನ್ಟಿಎ) ರದ್ದುಗೊಳಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿರುವ ಕ್ರಮ, ‘ಎನ್ಟಿಎ’ ಇತಿಹಾಸದಲ್ಲಿನ ಮತ್ತೊಂದು ಕಪ್ಪುಚುಕ್ಕೆಯಾಗಿದೆ. ನೀಟ್ ಸೇರಿದಂತೆ ದೇಶದ ಕೆಲವು ಪ್ರಮುಖ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಈ ಸಂಸ್ಥೆಯದಾಗಿದೆ. ಕೃಪಾಂಕಗಳ ಕಾರಣದಿಂದಾಗಿ ವಿವಾದಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳಿಗೆ 2024ರಲ್ಲಿ ಮರು ಪರೀಕ್ಷೆ ನಡೆಸಲಾಗಿತ್ತು. ಆದರೆ, ಈಗಿನ ಅಕ್ರಮಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಸಂಭಾವ್ಯ ಪ್ರಶ್ನೆಪತ್ರಿಕೆಯಲ್ಲಿನ ಅನೇಕ ಪ್ರಶ್ನೆಗಳು ಮೇ 3ರಂದು ನಡೆದ ಪರೀಕ್ಷೆಯಲ್ಲಿ ಕಂಡುಬಂದಿರುವುದರ ಹಿನ್ನೆಲೆಯಲ್ಲಿ ಆ ದಿನ ನಡೆದ ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ‘ಎನ್ಟಿಎ’ ನಿರ್ಧರಿಸಿದೆ. ಕೈಬರಹದಲ್ಲಿನ ಸಂಭಾವ್ಯ ಪ್ರಶ್ನೆಪತ್ರಿಕೆ ವಿವಿಧ ರಾಜ್ಯಗಳಲ್ಲಿನ ಸಾವಿರಾರು ಅಭ್ಯರ್ಥಿಗಳ ಕೈಸೇರಿದೆ ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆದು ಒಂದು ವಾರವಾದ ಬಳಿಕ ಅಚಾತುರ್ಯ ಬೆಳಕಿಗೆ ಬಂದಿದ್ದು, 2024ರ ಪರಿಸ್ಥಿತಿಯೇ ಈಗಲೂ ಮುಂದುವರಿದಿರುವುದನ್ನು ಈ ಬೆಳವಣಿಗೆ ಸೂಚಿಸುವಂತಿದೆ. ಈ ಹಿಂದೆಯೂ ಇಂತಹ ಸೋರಿಕೆಗಳು ನಡೆದು, ಪತ್ತೆಯಾಗದೆ ಉಳಿದಿರಬಹುದೇ ಎನ್ನುವ ಗಂಭೀರ ಪ್ರಶ್ನೆಗೂ ಪ್ರಸಕ್ತ ಘಟನೆ ಕಾರಣವಾಗಿದೆ. ಮರು ಪರೀಕ್ಷೆಯಿಂದಾಗಿ ಕೌನ್ಸೆಲಿಂಗ್, ಪ್ರವೇಶ ಪ್ರಕ್ರಿಯೆ ಹಾಗೂ ತರಗತಿಗಳ ಆರಂಭದ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ.

‘ನೀಟ್’ ಪರೀಕ್ಷೆಯ ಮೂಲಕ ಎಂಬಿಬಿಎಸ್ ಪದವಿಗೆ 1.3 ಲಕ್ಷಪ್ರವೇಶಗಳು ದೇಶದೆಲ್ಲೆಡೆ ದೊರೆಯ
ಲಿದ್ದು, ಸುಮಾರು 22 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಬಯಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ತಿಂಗಳುಗಳ ಕಾಲ ಕಠಿಣ ಪರಿಶ್ರಮದ ಸಿದ್ಧತೆ ನಡೆಸಿದ್ದಾರೆ. ದೈಹಿಕ ಮತ್ತು ಮಾನಸಿಕ ಪರಿಶ್ರಮದೊಂದಿಗೆ ಹಣಕಾಸಿನ ಸಂಗತಿಯೂ ಈ ಸಿದ್ಧತೆಯ ಭಾಗವಾಗಿದೆ. ಪರೀಕ್ಷೆ ರದ್ದುಗೊಳಿಸಿ, ಮತ್ತೆ ಹೊಸದಾಗಿ ನಡೆಸುವುದು ವಿದ್ಯಾರ್ಥಿಗಳಿಗೆ ಆಘಾತ ಉಂಟು ಮಾಡುವಂತಿದೆ, ಅವರ ಮೇಲೆ ಎಸಗುತ್ತಿರುವ ಕ್ರೌರ್ಯವಾಗಿದೆ; ಈ ಪ್ರಕ್ರಿಯೆ ಸಂಪನ್ಮೂಲಗಳ ಅಪವ್ಯಯಕ್ಕೂ ಅವಕಾಶ ಕಲ್ಪಿಸುತ್ತಿದೆ. ಪರೀಕ್ಷಾ ಪದ್ಧತಿಯ ಸುಧಾರಣೆಯೊಂದಿಗೆ, ರಾಜ್ಯಮಟ್ಟದ ಪ್ರವೇಶ ಪ್ರಕ್ರಿಯೆಗಳಲ್ಲಿದ್ದ ಅಸಮಾನತೆಗಳನ್ನು ಹೋಗಲಾಡಿಸಿ ರಾಷ್ಟ್ರೀಯ ವೇದಿಕೆಯನ್ನು ರೂಪಿಸುವ ಉದ್ದೇಶದಿಂದ 2017ರಲ್ಲಿ ‘ಎನ್ಟಿಎ’ ರೂಪುಗೊಂಡಿತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ, ರ್ಯಾಂಕಿಂಗ್ ವಿವಾದಗಳು ಹಾಗೂ ಕೃಪಾಂಕಗಳಿಗೆ ಸಂಬಂಧಿಸಿದ ವಿವಾದಗಳನ್ನೂ, ಅಸಮರ್ಪಕ ಕಾರ್ಯವಿಧಾನದ ಆರೋಪಗಳನ್ನೂ ‘ಎನ್ಟಿಎ’ ಆರಂಭದಿಂದಲೂ ಎದುರಿಸುತ್ತಿದೆ. ಪರೀಕ್ಷಾ ಪ್ರಕ್ರಿಯೆ ಬಲಪಡಿಸುವುದಾಗಿ ಮತ್ತು ಉತ್ತಮ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡುತ್ತಲೇ ಇದೆ. ಆದರೆ, ಈಗಿನ ಸೋರಿಕೆ ಪ್ರಕರಣವು ಹಳೆಯ ತಪ್ಪುಗಳಿಂದ ‘ಎನ್ಟಿಎ’ ಹಾಗೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುವಂತಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದ್ದು, ಈಗಾಗಲೇ ಕೆಲವರ ಬಂಧನ ನಡೆದಿದೆ. ಸೋರಿಕೆ ಎಲ್ಲಿ ಮತ್ತು ಹೇಗೆ ನಡೆಯಿತು? ಸುರಕ್ಷತಾ ಕ್ರಮಗಳು ವಿಫಲವಾದುದು ಹೇಗೆ? ಎನ್ನುವುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರವಿನ್ನೂ ದೊರೆಯಬೇಕಾಗಿದೆ. 2024ರ ಹಗರಣದ ಸಂದರ್ಭದಲ್ಲಿ, ‘ನೀಟ್’ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಸಲಹೆಗಳನ್ನು ನೀಡುವುದಕ್ಕಾಗಿ ಇಸ್ರೊದ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದೆಯೆ? ನೀಟ್ ಪರೀಕ್ಷೆಯಲ್ಲಿನ ವೈಫಲ್ಯಕ್ಕೆ ಎಲ್ಲಾ ಹಂತಗಳಲ್ಲಿಯೂ ಹೊಣೆಗಾರಿಕೆಯನ್ನು ನಿಗದಿಪಡಿಸಿ, ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡ ಈ ವೈಫಲ್ಯದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 550ಕ್ಕೂ ಹೆಚ್ಚು ನಗರಗಳಲ್ಲಿನ 5,500 ಕೇಂದ್ರಗಳಲ್ಲಿ ಏಕಕಾಲದಲ್ಲಿ ಪರೀಕ್ಷೆಗಳನ್ನು ನಡೆಸುವುದು ‘ಎನ್ಟಿಎ’ಗೆ ಸವಾಲಾಗಿದೆ. ಇದಕ್ಕೆ ಅಗತ್ಯವಾದ ತಾಂತ್ರಿಕ ಹಾಗೂ ಮೂಲ ಸೌಕರ್ಯಗಳನ್ನು ದೇಶ ಹೊಂದಿದೆ. ಸಮಸ್ಯೆ ಇರುವುದು ವ್ಯಕ್ತಿಗಳ ಭಾಗವಹಿಸುವಿಕೆಯ ಹಂತದಲ್ಲಿ. ಆ ಲೋಪವನ್ನು ತುರ್ತಾಗಿ ಸರಿಪಡಿಸುವ ಹಾಗೂ ‘ಎನ್ಟಿಎ’ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವ ಸವಾಲು ಸರ್ಕಾರದ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.