ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಡ್ರೋನ್‌ ದಾಳಿಯ ಹೊಸ ಮಾರ್ಗ; ಗಡಿಯಲ್ಲಿ ಕಟ್ಟೆಚ್ಚರ ಅನಿವಾರ್ಯ

Last Updated 29 ಜೂನ್ 2021, 22:27 IST
ಅಕ್ಷರ ಗಾತ್ರ

ಜಮ್ಮು ವಿಮಾನ ನಿಲ್ದಾಣದಲ್ಲಿ ಇರುವ ಭಾರತೀಯ ವಾಯುಪಡೆಯ ನೆಲೆಯ ಮೇಲೆ ಭಾನುವಾರ ಬೆಳಗಿನ ಜಾವ ಡ್ರೋನ್‌ ಮೂಲಕ ಎರಡು ದಾಳಿಗಳು ನಡೆದಿವೆ. ವಾಯುಪಡೆ ನೆಲೆಯಲ್ಲಿರುವ ಭಾರಿ ಭದ್ರತೆಯ ತಂತ್ರಜ್ಞಾನ ಕೇಂದ್ರದ ಚಾವಣಿಯನ್ನು ಸೀಳಿ ಒಂದು ಸ್ಫೋಟಕವನ್ನು ಡ್ರೋನ್‌ ಒಳಕ್ಕೆ ಎಸೆದಿದೆ. ಜಮ್ಮುವಿನ ರತ್ನುಚಕ್‌–ಕಾಲೂಚಕ್‌ ಸೇನಾ ಠಾಣೆಯ ಸುತ್ತ ಭಾನುವಾರ ರಾತ್ರಿ 11.45ರ ಹೊತ್ತಿಗೆ ಮತ್ತು ಸೋಮವಾರ ಬೆಳಗಿನ ಜಾವ 2.40ರ ಹೊತ್ತಿಗೆ ಎರಡು ಡ್ರೋನ್‌ಗಳು ಹಾರಾಟ ನಡೆಸಿವೆ. ಈ ಘಟನೆಗಳು ಭಾರತದ ಆಂತರಿಕ ಸುರಕ್ಷತೆಗೆ ಸಂಬಂಧಿಸಿದಂತೆ ಕಳವಳಕಾರಿ.

ಭಾರತದ ವಿವಿಧ ಕೇಂದ್ರಗಳನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿಗಳನ್ನು ನಡೆಸಿದ್ದು ಇದು ಮೊದಲೇನೂ ಅಲ್ಲ. ಗ್ರೆನೇಡ್‌, ಗುಂಡು, ಬಾಂಬ್‌, ಆತ್ಮಹತ್ಯಾ ಬಾಂಬರ್‌ಗಳು ಮತ್ತು ಸ್ಫೋಟಕ ತುಂಬಿದ ವಾಹನಗಳನ್ನು ಅಪ್ಪಳಿಸುವಂತಹ ದಾಳಿಗಳನ್ನು ಭಾರತವು ಕಂಡಿದೆ. ಆದರೆ, ಭಾರತ ವಿರೋಧಿ ಶಕ್ತಿಗಳು ಈಗ ಬಾಂಬ್‌ಗಳನ್ನು ತಮ್ಮ ಗುರಿಗೆ ಎಸೆಯಲು ಹೊಸ ಮಾರ್ಗವನ್ನು ಕಂಡುಕೊಂಡಿವೆ ಎಂಬುದು ನಿಚ್ಚಳವಾಗಿದೆ. ಡ್ರೋನ್‌ಗಳ ಮೂಲಕವೂ ದಾಳಿ ನಡೆಸಬಹುದು ಎಂಬುದು ಭಾನುವಾರದ ಬೆಳವಣಿಗೆಯಿಂದ ಖಚಿತವಾಗಿದೆ. ನಿಯೋಜಿತ ಉಗ್ರರಿಗೆ ಶಸ್ತ್ರಾಸ್ತ್ರ ತಲುಪಿಸಲು ಡ್ರೋನ್‌ಗಳನ್ನು ಈ ಹಿಂದೆಯೂ ಬಳಸಲಾಗಿತ್ತು.

ಜಮ್ಮು–ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷಾಧಿಕಾರ ರದ್ದತಿಯ ಬಳಿಕ ಭಾರತ–ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಸುಮಾರು 300 ಡ್ರೋನ್‌ಗಳನ್ನು ಗುರುತಿಸಲಾಗಿದೆ. ಶಸ್ತ್ರಾಸ್ತ್ರ ಸಾಗಿಸಿದ ಡ್ರೋನ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದೂ ಇದೆ. ಈಗ, ಡ್ರೋನ್‌ ಮೂಲಕ ದಾಳಿಯೇ ನಡೆದಿದೆ. ವಾಯುಪಡೆಯ ನೆಲೆ ಮೇಲೆ ನಡೆದ ದಾಳಿಯಲ್ಲಿ ಜೀವಹಾನಿ ಸಂಭವಿಸಿಲ್ಲ ಮತ್ತು ಮಹತ್ವದ ಸಾಧನಗಳು ಹಾನಿಗೊಂಡಿಲ್ಲ ಎಂಬುದು ಸಮಾಧಾನಕರ ಅಂಶ. ಆದರೆ, ಡ್ರೋನ್‌ ಮೂಲಕ ದಾಳಿ ನಡೆಸಬಹುದು ಎಂಬ ಸಾಧ್ಯತೆಯೇ ಭದ್ರತಾ ಪಡೆಗಳಿಗೆ ಬಹುದೊಡ್ಡ ಸವಾಲು ಎಸೆಯುತ್ತದೆ.

ಜಮ್ಮು ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ಗಡಿಯಿಂದ ವಾಯುಮಾರ್ಗದ ಮೂಲಕ ಕೇವಲ 12–14 ಕಿ.ಮೀ. ದೂರದಲ್ಲಿದೆ. ವಾಯುನೆಲೆಯನ್ನೂ ಹೊಂದಿರುವ ಜಮ್ಮು ವಿಮಾನ ನಿಲ್ದಾಣವು ಅತಿ ಹೆಚ್ಚು ಭದ್ರತೆ ಹೊಂದಿರುವ ಸ್ಥಳ. ಅಂತಹ ಸ್ಥಳವನ್ನು ಡ್ರೋನ್‌ ಮೂಲಕ ತಲುಪುವುದು ಉಗ್ರರಿಗೆ ಸಾಧ್ಯವಾಗಿದೆ. ಡ್ರೋನ್‌ಗಳನ್ನು ಗುರುತಿಸುವುದು ಸುಲಭವಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣ. ಡ್ರೋನ್‌ ದಾಳಿಯನ್ನು ಪಾಕಿಸ್ತಾನದಿಂದಲೇ ನಡೆಸಬೇಕು ಎಂದೇನಿಲ್ಲ ಎಂಬುದೂ ನಮ್ಮ ಗಮನದಲ್ಲಿ ಇರಬೇಕಾದುದು ಬಹಳ ಮುಖ್ಯ. ಭಾರತದ ನೆಲದಿಂದಲೇ ಡ್ರೋನ್‌ ದಾಳಿ ನಡೆಸಬಹುದು. ಇಂತಹ ಸಾಧ್ಯತೆಯು ದೇಶದ ಮಹತ್ವದ ಹಲವು ಸ್ಥಾವರಗಳನ್ನು ಅಪಾಯದ ಪರಿಧಿಯೊಳಗೆ ತರಬಹುದು.

ವಾಯುನೆಲೆಯ ಮೇಲೆ ದಾಳಿ ನಡೆದ ಮರುದಿನವೇ ರತ್ನುಚಕ್‌–ಕಾಲೂಚಕ್ ಪ್ರದೇಶದಲ್ಲಿ ಎರಡು ಡ್ರೋನ್‌ಗಳು ಕಂಡುಬಂದಿವೆ. ಈ ಡ್ರೋನ್‌ಗಳತ್ತ ಸೈನಿಕರು 24 ಸುತ್ತು ಗುಂಡು ಹಾರಿಸಿದ್ದರೂ ಅವುಗಳನ್ನು ಹೊಡೆದುರುಳಿಸಲು ಸಾಧ್ಯವಾಗಿಲ್ಲ. ಡ್ರೋನ್‌ಗಳನ್ನು ಗುರುತಿಸುವುದು ಸುಲಭವಲ್ಲ. ಜತೆಗೆ, ಡ್ರೋನ್‌ಗೆ ತಗಲುವ ವೆಚ್ಚ ಕೂಡ ಬಹಳ ಕಡಿಮೆ. ಹಾಗಾಗಿ, ಭಾರತ ವಿರೋಧಿ ಉಗ್ರಗಾಮಿಗಳು ಮುಂದಿನ ದಿನಗಳಲ್ಲಿ ದಾಳಿ ನಡೆಸಲು ಡ್ರೋನ್‌ಗಳನ್ನು ಹೆಚ್ಚಾಗಿ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಭಾರತದ ಭದ್ರತಾ ಪಡೆಗಳು ಡ್ರೋನ್‌ ಪತ್ತೆ ಮತ್ತು ಹೊಡೆದುರುಳಿಸುವ ಅತ್ಯುತ್ತಮ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎನಿಸಲಿದೆ. ಡ್ರೋನ್‌ ದಾಳಿ ತಡೆಗಟ್ಟಲು ಏನೇನು ಮಾಡಬೇಕಿದೆ ಎಂಬ ಮಾರ್ಗಸೂಚಿಯನ್ನು ಎರಡು ವರ್ಷಗಳ ಹಿಂದೆಯೇ ಅಂತಿಮಗೊಳಿಸಲಾಗಿದೆ. ಆದರೆ, ಅದಿನ್ನೂ ಜಾರಿಗೆ ಬಂದಿಲ್ಲ. ಇದೇ ಔದಾಸೀನ್ಯ ಮುಂದುವರಿದರೆ ಅದಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲ.

ವಾಯುನೆಲೆ ಮೇಲೆ ದಾಳಿ ನಡೆಸಿದ ಮತ್ತು ಸೇನಾ ಠಾಣೆಗಳ ಸುತ್ತ ಹಾರಾಡಿದ ಡ್ರೋನ್‌ಗಳು ಎಲ್ಲಿಂದ ಬಂದಿವೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇವು ಪಾಕಿಸ್ತಾನದಿಂದ ಬಂದಿರಬಹುದು ಎಂಬುದನ್ನು ತಳ್ಳಿಹಾಕಲು ಆಗದು. ಭಾರತ ಮತ್ತು ಪಾಕಿಸ್ತಾನ ನಡುವಣ ಹಿಂಬಾಗಿಲ ಮಾತುಕತೆಯಿಂದಾಗಿ ನಿಯಂತ್ರಣ ರೇಖೆಯುದ್ದಕ್ಕೂ ಕೆಲ ತಿಂಗಳಿನಿಂದ ಶಾಂತಿ ನೆಲೆಸಿದೆ. ಜಮ್ಮು–ಕಾಶ್ಮೀರದಲ್ಲಿ ಚುನಾವಣೆ ನಡೆಸಿ ಪ್ರಜಾತಂತ್ರ ವ್ಯವಸ್ಥೆ ಮರುಸ್ಥಾಪನೆಯ ಪ್ರಯತ್ನ ಆರಂಭ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು–ಕಾಶ್ಮೀರದ ರಾಜಕೀಯ ಪಕ್ಷಗಳ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಸಹಜ ಸ್ಥಿತಿಗೆ ಮರಳಬಾರದು ಎಂದು ಬಯಸುವ ಶಕ್ತಿಗಳು ಇವೆ. ಎರಡೂ ದೇಶಗಳ ನಡುವಣ ಸಂಬಂಧ ಸೌಹಾರ್ದಯುತವಾಗುವುದು ಬೇಡ ಎನ್ನುವ ಮನಃಸ್ಥಿತಿಯ ಜನರು ಭಾರತದಲ್ಲಿಯೂ ಇರಬಹುದು. ಇಂತಹ ವಿಘ್ನಸಂತೋಷಿಗಳ ಕೈ ಮೇಲಾಗುವುದಕ್ಕೆ ಭಾರತ ಮತ್ತು ಪಾಕಿಸ್ತಾನ ಸರ್ಕಾರ ಅವಕಾಶ ಕೊಡಬಾರದು. ಭಾರತವು ಗಡಿಯಲ್ಲಿ ಕಟ್ಟೆಚ್ಚರದಿಂದ ಕಾವಲು ಕಾಯುವ ಅಗತ್ಯ ಇದೆ. ಅದರ ಜತೆಗೆ, ದ್ವಿಪಕ್ಷೀಯ ಸಂಬಂಧವು ವಿಷಮಗೊಳ್ಳಲಿ ಎಂಬ ಒಂದೇ ಕಾರಣಕ್ಕೆ ಡ್ರೋನ್‌ ದಾಳಿಯ ಪಿತೂರಿ ರೂಪಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲೆ ಒತ್ತಡವನ್ನೂ ಹೇರಬೇಕು. ಷಡ್ಯಂತ್ರ ಮಾಡಿದವರು ಪಾಕಿಸ್ತಾನದ ಸೇನೆಯ ಭಾಗವಾಗಿರುವ ಸಾಧ್ಯತೆಯೂ ಇದೆ. ಈ ವಿಚಾರದಲ್ಲಿ ಅನಗತ್ಯ ಅಬ್ಬರ ಎಬ್ಬಿಸದೆ, ಇಮ್ರಾನ್‌ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಹೆಚ್ಚು ಜಾಣ್ಮೆಯ ನಡೆ ಅನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT