ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜರದ ಗಿಳಿಯಾಗಿರುವ ಸಿಬಿಐ ವರ್ಚಸ್ಸನ್ನು ವೃದ್ಧಿಸಲು ಯತ್ನಿಸಿ

Last Updated 22 ನವೆಂಬರ್ 2018, 19:53 IST
ಅಕ್ಷರ ಗಾತ್ರ

ಕೇಂದ್ರ ತನಿಖಾ ದಳದ (ಸಿಬಿಐ) ದುರ್ಬಳಕೆ ವಿರುದ್ಧ ಪುನಃ ಕೂಗೆದ್ದಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತಹ ವಿದ್ಯಮಾನಗಳು ನಡೆಯುತ್ತಲೇ ಇವೆ. ಅಧಿಕಾರ ಗದ್ದುಗೆಗಳಲ್ಲಿರುವ ನೇತಾರರು ಅಳುಕು, ಅಂಜಿಕೆ ಇಲ್ಲದೆ ದೇಶದ ಪ್ರಮುಖ ತನಿಖಾ ಸಂಸ್ಥೆಯನ್ನು ತಮ್ಮ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳು
ವುದು ಮುಂದುವರಿದಿದೆ.

ಮನಮೋಹನ್‌ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಕಲ್ಲಿದ್ದಲು ಹಗರಣದ ತನಿಖೆಯ ವೈಖರಿ ಕುರಿತು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಜೊತೆಗೆ, ‘ಪಂಜರದ ಗಿಳಿ’ ಎಂದೂ ಸಿಬಿಐಗೆ ಕುಟುಕಿತ್ತು. ಆ ನಂತರವಾದರೂ ರಾಜಕೀಯ ಒತ್ತಡ
ಗಳಿಗೆ ಮಣಿಯದೆ ಸ್ವತಂತ್ರವಾಗಿ ಕೆಲಸ ಮಾಡುವ ಛಾತಿಯನ್ನು ಸಿಬಿಐ ಬೆಳೆಸಿಕೊಳ್ಳಬೇಕಿತ್ತು. ಇಲ್ಲವೇ ಸರ್ಕಾರವಾದರೂ ಇದನ್ನು ಕಪಿಮುಷ್ಟಿಯಿಂದ ಬಿಡುಗಡೆ ಮಾಡುವ ದೃಢಸಂಕಲ್ಪ ಮಾಡಬೇಕಿತ್ತು.

ಒಮ್ಮೆ, ‘ಕಾಂಗ್ರೆಸ್‌ ಬ್ಯುರೊ ಆಫ್‌ ಇನ್‌ವೆಸ್ಟಿಗೇಷನ್‌’ ಎಂದು ಕರೆಸಿಕೊಂಡಿದ್ದ ಈ ಸಂಸ್ಥೆ, ಈಗ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ, ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸುತ್ತಿರುವುದು ಸುಳ್ಳಲ್ಲ. ಎನ್‌ಡಿಎ ಒಕ್ಕೂಟದಿಂದತೆಲುಗು ದೇಶಂ ಹೊರ ಬಂದ ಬಳಿಕ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬುನಾಯ್ದು ಅವರ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿಗಳು ನಡೆದಿವೆ.

ಇಂತಹ ಸಂದರ್ಭದಲ್ಲಿ, ನಾಯ್ಡು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಂತಮ್ಮ ರಾಜ್ಯಗಳಲ್ಲಿ ಸಿಬಿಐ ತನಿಖೆಗಳಿಗೆ ನೀಡಿದ್ದಂತಹ ಅನುಮತಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಸಿಬಿಐ ದುರ್ಬಳಕೆ ಮಾಡಿಕೊಂಡು ತಮ್ಮ ವಿರುದ್ಧ ದಾಳಿ ನಡೆಸಬಹುದು ಎಂಬ ಆತಂಕ ಇವರಿಬ್ಬರಿಗಿದೆ. ಬಿಜೆಪಿ ವಿರುದ್ಧ ಪ್ರಬಲ ಮೈತ್ರಿಕೂಟ ರಚಿಸಲು ನಾಯ್ಡು ಪ್ರಯತ್ನಿಸುತ್ತಿರುವುದರಿಂದ ಅವರ ಪಕ್ಷದ ನಾಯಕರ ಮೇಲೆ ಸಿಬಿಐ ದಾಳಿಗಳು ನಡೆಯಬಹುದು ಎಂಬಂಥ ಅನುಮಾನಗಳಿವೆ. ಗುಜರಾತಿನಿಂದ ರಾಜ್ಯಸಭೆಗೆ ಕಳೆದ ವರ್ಷ ನಡೆದ ಚುನಾವಣೆ ಸಮಯದಲ್ಲಿ ಅಲ್ಲಿನ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ನೀಡಿದ್ದ ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲೂ ಆದಾಯ ತೆರಿಗೆ ದಾಳಿ ನಡೆದಿತ್ತು. ಜಾರಿ ನಿರ್ದೇಶನಾಲಯವೂ ಮೇಲಿಂದ ಮೇಲೆ ಅವರಿಗೆ ನೋಟಿಸ್‌ಗಳನ್ನು ನೀಡುತ್ತಿದೆ. ಸಚಿವರ ಆಪ್ತರ ಮನೆಗಳ ಮೇಲೆಯೂ ದಾಳಿಗ‌ಳು ಆಗಿವೆ.

ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯ್ದೆ (ಡಿಎಸ್‌ಪಿಇ) ಅನ್ವಯಸಿಬಿಐ ಕೆಲಸ ಮಾಡಬೇಕು. ರಾಜ್ಯಗಳ ಒಪ್ಪಿಗೆ ಇಲ್ಲದೆ ರಾಜ್ಯಗಳಲ್ಲಿ ಸಿಬಿಐ ತನಿಖೆ ನಡೆಸುವುದನ್ನು ಈ ಕಾಯ್ದೆ ಪ್ರತಿಬಂಧಿಸುತ್ತದೆ. ಕೇಂದ್ರ ಸರ್ಕಾರದ ನೌಕರರ ವಿರುದ್ಧ ತನಿಖೆ ನಡೆಸಲು ಹತ್ತು ರಾಜ್ಯಗಳು ಮಾತ್ರ ಅನುಮೋದನೆ ನೀಡಿವೆ. ಉಳಿದೆಡೆ ಪ್ರತಿ ಪ್ರಕರಣಕ್ಕೂ ಸಮ್ಮತಿ ಪಡೆಯಬೇಕು. ಇದು ಒಕ್ಕೂಟ ವ್ಯವಸ್ಥೆಯಲ್ಲಿ
ಒಪ್ಪಿಕೊಂಡಿರುವ ನೀತಿ. ಹೀಗಾಗಿ, ಆಂಧ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾವುದಾದರೂ ಪ್ರಕರಣದ ತನಿಖೆ ಅಥವಾ ದಾಳಿಗಳನ್ನು ನಡೆಸಬೇಕಾದರೆ ಆ ರಾಜ್ಯಗಳ ಸಹಮತ ಕಡ್ಡಾಯ.

ಕೇಂದ್ರ ತನಿಖಾ ಸಂಸ್ಥೆಯನ್ನು ರಾಜಕಾರಣಿಗಳಷ್ಟೇ ಅಲ್ಲ, ಸಾರ್ವಜನಿಕರೂ ಅನುಮಾನದಿಂದ ನೋಡುವ ಪರಿಸ್ಥಿತಿ ಈಗ ಸೃಷ್ಟಿಯಾಗಿದೆ. ದಕ್ಷ, ನಿಷ್ಪಕ್ಷಪಾತ ತನಿಖೆಯಿಂದ ಮಿಕ್ಕ ತನಿಖಾ ಸಂಸ್ಥೆಗಳಿಗೆ ಮಾದರಿಯಾಗಬೇಕಿದ್ದ ಅಧಿಕಾರಿಗಳು, ಭ್ರಷ್ಟರ ಜೊತೆ ಹೊಂದಿರುವ ನಂಟು ಹಾಗೂ ಭ್ರಷ್ಟಾಚಾರದ ಆರೋಪಗಳಿಂದಾಗಿ ಸಂಸ್ಥೆಯ ವರ್ಚಸ್ಸು ಮಣ್ಣುಪಾಲಾಗಿದೆ. ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿರುವ ಅಲೋಕ್‌ ವರ್ಮಾ ಮತ್ತು ಅಸ್ತಾನಾ ಅವರ ಜಗಳ ಇದಕ್ಕೊಂದು ಉದಾಹರಣೆ. ಈ ದೃಷ್ಟಿಯಿಂದ ಕೇಂದ್ರ ತನಿಖಾ ದಳಕ್ಕೆ ಅಂಟಿರುವ ಕಳಂಕವನ್ನು ತೊಳೆಯಲು ಎಲ್ಲ ಪಕ್ಷಗಳು ಮತ್ತು ಅವುಗಳ ನಾಯಕರು ಮುಂದಾಗಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT