ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕ್ರೀಡಾಕೂಟದ ಸಿಹಿಫಲಒಲಿಂಪಿಕ್ಸ್‌ ಕನಸಿಗೆ ತುಂಬಲಿ ಬಲ

Last Updated 3 ಸೆಪ್ಟೆಂಬರ್ 2018, 19:46 IST
ಅಕ್ಷರ ಗಾತ್ರ

ಆಕೆಗೆ ಆ ದಿನ ಹಲ್ಲುನೋವಿನ ಯಮಯಾತನೆ. ಕೆನ್ನೆಗೆ ಔಷಧಪಟ್ಟಿ ಅಂಟಿಸಿಕೊಂಡು ಟ್ರ್ಯಾಕ್‌ಗಿಳಿದ ಆಕೆಯ ಕಣ್ಣ ಮುಂದೆ ತನ್ನ ಮನೆಯೆಂಬ ತಗಡಿನ ಶೆಡ್‌ನಲ್ಲಿ ಕಾಯಿಲೆಯಿಂದ ಮಲಗಿರುವ ಅಪ್ಪ, ಕಿತ್ತು ತಿನ್ನುವ ಬಡತನಗಳೆಲ್ಲ ಹಾದುಹೋಗಿದ್ದವು. ಸಾಲದಕ್ಕೆ ತನ್ನ ಆರು ಬೆರಳುಗಳಿರುವ ಕಾಲುಗಳಿಗೆ ಸರಿಹೊಂದದ ಬೂಟು ನೀಡುತ್ತಿದ್ದ ನೋವು ಬೇರೆ. ಅವುಗಳನ್ನೆಲ್ಲ ಬದಿಗೊತ್ತಿದ ಆ ಯುವತಿ, ಹೆಪ್ಟಥ್ಲಾನ್ ಎಂಬ ಕಠಿಣ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಾಗ ಕ್ರೀಡಾಪ್ರೇಮಿಗಳ ಕಂಗಳು ಹನಿಗೂಡಿದ್ದವು. ಪಶ್ಚಿಮಬಂಗಾಳದ ಜಲಪಾಯ್‌ಗುಡಿಯ ಆ ಹುಡುಗಿ ಸ್ವಪ್ನಾ ಬರ್ಮನ್. ಇಂಡೊನೇಷ್ಯಾದ ಜಕಾರ್ತ–ಪಾಲೆಂಬಂಗ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ತನ್ನ ಸಾಧನೆಯ ಮೂಲಕ ಈಗ ಮನೆಮಾತಾಗಿದ್ದಾರೆ.

ಆಗಸ್ಟ್‌ 18ರಿಂದ ಸೆಪ್ಟೆಂಬರ್ 2ರವರೆಗೆ ನಡೆದ ಈ ಕೂಟದಲ್ಲಿ ಭಾರತದ ಇಂತಹ ಹತ್ತಾರು ಯುವಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದವು. ‘ಏಷ್ಯಾದ ತಾಕತ್ತು’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಕೂಟದಲ್ಲಿ ಭಾರತದ ಕ್ರೀಡಾ ತಾಕತ್ತು ಕೂಡ ಅನಾವರಣಗೊಂಡಿತು. ಈ ಬಾರಿ ಸ್ಪರ್ಧಿಸಿದ್ದ 572 ಕ್ರೀಡಾಪಟುಗಳಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ 24 ವರ್ಷದೊಳಗಿನವರು. ಈ ಉತ್ಸಾಹಿ ಪಡೆಯು ಒಟ್ಟು 69 ಪದಕಗಳನ್ನು ಗೆದ್ದು ಹೊಸ ದಾಖಲೆ ಸೃಷ್ಟಿಸಿತು. ಅದರಲ್ಲಿ 15 ಚಿನ್ನದ ಪದಕಗಳೂ ಸೇರಿವೆ. ಶೂಟಿಂಗ್‌ನಲ್ಲಿ 16 ವರ್ಷದ ಸೌರಭ್ ಚೌಧರಿ, ಸಾಹಿತ್ಯಪ್ರೇಮಿ ರಾಹಿ ಸರ್ನೊಬತ್, ಕುಸ್ತಿಯಲ್ಲಿ ವಿನೇಶಾ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರ ಚಿನ್ನದ ಸಾಧನೆಗಳು ಗಮನ ಸೆಳೆದವು.

ಅಥ್ಲೆಟಿಕ್ಸ್‌ನಲ್ಲಿ ಅನಿರೀಕ್ಷಿತವಾದ ಯಶಸ್ಸು ಲಭಿಸಿದ್ದು ಕೂಡ ಈ ಸಲದ ಬೋನಸ್. ಈ ವಿಭಾಗದಲ್ಲಿ ನಮ್ಮವರದ್ದು ಮೊದಲಿನಿಂದಲೂ ಸಪ್ಪೆ ಪ್ರದರ್ಶನ. ಈ ಬಾರಿ ಶಾಟ್‌ಪಟ್‌ನಲ್ಲಿ ತಜಿಂದರ್ ಪಾಲ್ ಸಿಂಗ್ ತೂರ್, ಜಾವೆಲಿನ್‌ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಕಾಣಿಕೆ ನೀಡಿದರು. ಪುರುಷರ 800 ಮೀಟರ್ಸ್‌ ಓಟದಲ್ಲಿ 36 ವರ್ಷಗಳಿಂದ ಕಾಡಿದ ಪದಕಗಳ ಬರವನ್ನು ಮಂಜೀತ್ ಸಿಂಗ್ ಚಿನ್ನ ಮತ್ತು ಜಿನ್ಸನ್ ಜಾನ್ಸನ್ ಬೆಳ್ಳಿ ಪದಕ ಜಯಿಸುವ ಮೂಲಕ ನೀಗಿಸಿದರು. 1500 ಮೀಟರ್ಸ್‌ ಓಟದಲ್ಲಿಯೂ ಜಿನ್ಸನ್ ದಾಖಲೆ ಬರೆದರು.

ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ ಯೋಗದಾನವೂ ದೊಡ್ಡದು. ದ್ಯುತಿ ಚಾಂದ್ 100 ಮೀಟರ್ಸ್ ಮತ್ತು 200 ಮೀಟರ್ಸ್‌ ಓಟದಲ್ಲಿ ಬೆಳ್ಳಿಪದಕಗಳನ್ನು ಗೆದ್ದರು. 4X400 ಮೀಟರ್ಸ್‌ ರಿಲೆಯಲ್ಲಿಯೂ ಹಿಮಾದಾಸ್, ಎಂ.ಆರ್. ಪೂವಮ್ಮ, ವಿಸ್ಮಯ ಮತ್ತು ಸರಿತಾಬೆನ್ ಗಾಯಕವಾಡ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ರೋಯಿಂಗ್, ಸೆಪಕ್ ಟಕ್ರಾ, ವುಶು, ಬ್ರಿಜ್, ಈಕ್ವೆಸ್ಟ್ರಿಯನ್‌ನಲ್ಲಿ ಪದಕಗಳು ಒಲಿದಿದ್ದು ಅನಿರೀಕ್ಷಿತ ಲಾಭ! ಬೆಂಗಳೂರಿನ ಫವಾದ್ ಮಿರ್ಜಾ ಈಕ್ವೆಸ್ಟ್ರಿಯನ್‌ನಲ್ಲಿ
ಬೆಳ್ಳಿಪದಕ ಗೆದ್ದರು. ಟೆನಿಸ್‌ ಡಬಲ್ಸ್‌ನಲ್ಲಿ ದಿವೀಜ್ ಶರಣ್ ಅವರೊಂದಿಗೆ ರೋಹನ್ ಬೋಪಣ್ಣ ಚಿನ್ನದ ಸಾಧನೆ ಮಾಡಿದರು. ಬೆಳಗಾವಿಯ ಮಲಪ್ರಭಾ ಜಾಧವ ಅವರು ಕುರಾಶ್ ಕ್ರೀಡೆಯಲ್ಲಿ ಕಂಚು ಗೆದ್ದರು. ಆದರೆ, ಕೆಲವು ಆಘಾತಗಳನ್ನೂ ಭಾರತದ ಕ್ರೀಡಾಪಟುಗಳು ಅನುಭವಿಸಬೇಕಾಯಿತು. ಏಷ್ಯಾದ ಕಬಡ್ಡಿಯ ಮೇಲೆ ಭಾರತದ ಆಧಿಪತ್ಯ ಅಂತ್ಯವಾಯಿತು.

ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಇರಾನ್ ಚಿನ್ನ ಗೆದ್ದಿತು. ಪುರುಷರ ಹಾಕಿಯ ಗುಂಪು ಹಂತದಲ್ಲಿ ಗೋಲುಗಳ ಮಳೆ ಸುರಿಸಿದ್ದ ತಂಡವು ನಾಕೌಟ್ ಹಂತದ ಸಡನ್‌ ಡೆತ್‌ನಲ್ಲಿ ಅನುಭವಿಸಿದ ಸೋಲು ಆತ್ಮಾವಲೋಕನಕ್ಕೆ ಹಾದಿ ಮಾಡಿಕೊಟ್ಟಿದೆ.

ಬ್ಯಾಡ್ಮಿಂಟನ್‌ನಲ್ಲಿ ಪುರುಷರು ನಿರಾಸೆಗೊಳಿಸಿದರು. ಆದರೆ, ಮಹಿಳೆಯರಲ್ಲಿ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದು ಸಮಾಧಾನ ತಂದರು. ಈಚೆಗೆ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಿಂಚಿದ್ದ ವೇಟ್‌ಲಿಫ್ಟರ್‌ಗಳು ಇಲ್ಲಿ ವಿಫಲರಾದರು. ಪದಕಪಟ್ಟಿಯಲ್ಲಿ ಸದಾ ಅಗ್ರಸ್ಥಾನದಲ್ಲಿ ಮೆರೆಯುವ ಚೀನಾದ ಮಟ್ಟಕ್ಕೆ ಬೆಳೆಯಲು ಭಾರತಕ್ಕೆ ಇನ್ನೂ ಬಹಳಷ್ಟು ಸಮಯ ಬೇಕು. ಜಕಾರ್ತದಲ್ಲಿ ಮಾಡಿದ ಸಾಧನೆಯ ಗುಂಗಿನಲ್ಲಿ ಮೈಮರೆಯಬಾರದು. 2020ರ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಕನಸಿಗೆ ಈ ಸಾಧನೆಯು ಮೆಟ್ಟಿಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT