ಮಂಗಳವಾರ, ಆಗಸ್ಟ್ 20, 2019
25 °C
pak and india

ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದುರ್ಗತಿ

Published:
Updated:
Prajavani

ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಬಾಲೆಯರ ಅಪಹರಣ ಮತ್ತು ಬಲವಂತ ಮತಾಂತರ- ವಿವಾಹದ ಮತ್ತೊಂದು ಪ್ರಕರಣ ಜರುಗಿದೆ. ಇಂತಹ ಅಸಂಖ್ಯ ಪ್ರಕರಣಗಳ ಸಾಲಿಗೆ ಸದ್ದಿಲ್ಲದೆ ಇದೂ ಸೇರಿಹೋಗಲಿದೆ. ಪುಲ್ವಾಮಾ- ಬಾಲಾಕೋಟ್ ಬಿಸಿಯ ಕಾರಣ ಈ ಪ್ರಕರಣಕ್ಕೆ ಉಭಯ ದೇಶಗಳು ಕುಟುಕು ಜೀವ ದಯಪಾಲಿಸಿವೆ. 

ಭಾರತದ ವಿದೇಶಾಂಗ ಸಚಿವೆ ಮತ್ತು ಪಾಕಿಸ್ತಾನದ ವಾರ್ತಾ ಮಂತ್ರಿಯ ನಡುವೆ ಟ್ವಿಟರ್ ಸಮರ ನಡೆದ ಕಾರಣ ಎದ್ದ ದೂಳು ಎಂದಿನಂತೆ ಬಲುಬೇಗ ಅಡಗಲಿದೆ. ಪರಿಸ್ಥಿತಿ ಮತ್ತೆ ‘ಮಾಮೂಲು’ ಆಗಲಿದೆ. ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕೆ ಹಟ ಹಿಡಿದು ಸಾಧಿಸಿದವರು ಪಾಕಿಸ್ತಾನದ ಜನಕ ಮೊಹಮ್ಮದ್‌ ಅಲಿ ಜಿನ್ನಾ. ಆದರೆ ಮುಸ್ಲಿಂ ಬಹುಳ ಪಾಕಿಸ್ತಾನದಲ್ಲಿ ಮುಸ್ಲಿಮರಿಗೆ ಸಮಾನವಾಗಿ ಹಿಂದೂಗಳು, ಸಿಖ್ಖರು, ಕ್ರೈಸ್ತರು, ಬೌದ್ಧರು ಬದುಕಬೇಕೆಂಬುದು ಅವರ ಇರಾದೆಯಾಗಿತ್ತು. ದುರದೃಷ್ಟವಶಾತ್ ಅದು ಈಡೇರಲಿಲ್ಲ. ಆ ದೇಶದ ಧಾರ್ಮಿಕ ಅಲ್ಪ ಸಂಖ್ಯಾತರು ಎರಡನೆಯ ಅಥವಾ ಮೂರನೆಯ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ. ಜಿನ್ನಾ ನಂತರ ಪಾಕಿಸ್ತಾನದ ಅಧಿಕಾರ ಸೂತ್ರ ಹಿಡಿದವರು ಧಾರ್ಮಿಕ ಅಲ್ಪಸಂಖ್ಯಾತರ ದಮನ ನೀತಿಯನ್ನೇ ಅನುಸರಿಸುತ್ತಾ ಬಂದಿದ್ದಾರೆ. ಮೂಲಭೂತವಾದಿಗಳ ಕೈಗೆ ಬಡಿಗೆಯನ್ನಷ್ಟೇ ಅಲ್ಲ, ಬಂದೂಕುಗಳನ್ನೂ ಕೊಟ್ಟಿದ್ದಾರೆ. ಪಾಕ್ ಎಂದರೆ ಪರಿಶುದ್ಧ ಎಂದು ಅರ್ಥ. ‘ಪರಿಶುದ್ಧ’ ನಾಡನ್ನು ಶುದ್ಧಗೊಳಿಸಬೇಕೆಂಬ ಮುಸ್ಲಿಂ ಕಟ್ಟರ್‌ವಾದಿಗಳ ಕೈಗೊಂಬೆಗಳಂತೆ ನಡೆದುಕೊಂಡಿದ್ದಾರೆ.  ಅಹ್ಮದೀಯರು ಮತ್ತು ಶಿಯಾಗಳನ್ನು ಕೂಡ ಪಾಕಿಸ್ತಾನದಲ್ಲಿ ಮುಸ್ಲಿಮರೆಂದು ಪರಿಗಣಿಸುತ್ತಿಲ್ಲ. ಅವರ ಬದುಕುಗಳೂ ನರಕವಾಗಿವೆ. ಅಹ್ಮದೀಯರ ಮಸೀದಿಗಳನ್ನು ಮಸೀದಿಗಳೆಂದು ಕರೆಯುವುದಿಲ್ಲ. ಅವರ ಗೋರಿಗಳ ಮೇಲಿನ ಕಲ್ಲುಗಳ ಮೇಲೆ ಕುರಾನ್ ವಾಕ್ಯಗಳಿದ್ದರೆ ಅವುಗಳನ್ನು ಪೊಲೀಸರೇ ಗೀರಿ ಅಳಿಸುತ್ತಾರೆ.

ಮುಸಲ್ಮಾನರಲ್ಲದ ಪಾಕ್ ನಾಗರಿಕರನ್ನು ದ್ವೇಷಿಸುವಂತೆ ಪಠ್ಯಪುಸ್ತಕಗಳನ್ನು ಕೂಡ ತಿದ್ದಿ ಬರೆದು ಪ್ರಚೋದಿಸಲಾಯಿತು. ಅಲ್ಪಸಂಖ್ಯಾತ ವಿರೋಧಿ ಕಾಯ್ದೆ ಕಾನೂನುಗಳು ಜಾರಿಗೆ ಬಂದವು. ಜಿಹಾದಿಗಳು ಭಯೋತ್ಪಾದನೆಗೆ ಇಳಿದರು. ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನದ ಮಾತು ಹೊಸದೇನೂ ಅಲ್ಲ. 1971ರಷ್ಟು ಹಿಂದೆಯೇ ಜುಲ್ಫೀಕರ್ ಅಲಿ ಭುಟ್ಟೊ ‘ನಯಾ ಪಾಕಿಸ್ತಾನ’ದ ಪ್ರಸ್ತಾಪ ಮಾಡಿದ್ದರು. ಉದಾರ ಮತ್ತು ಜಾತ್ಯತೀತವಾದಿ ಆಗಿದ್ದ ಅವರು ಕೂಡ ಧರ್ಮಾಂಧ ಶಕ್ತಿಗಳಿಗೆ ಮಣಿದರು. ಇಸ್ಲಾಂ ಅನ್ನು ಅಧಿಕಾರದ ನಂಟಿನ ಅಂಟಾಗಿ ಬಳಸಿದರು. ಧಾರ್ಮಿಕ ಅಲ್ಪಸಂಖ್ಯಾತರ ಪಾಲಿಗೆ ನೇಣಿನ ಕುಣಿಕೆಯಾಗಿ ಪರಿಣಮಿಸಿರುವ ‘ಧರ್ಮನಿಂದೆ’ಯ ಕಾಯ್ದೆಯು ಕುಖ್ಯಾತ ಮಿಲಿಟರಿ ಸರ್ವಾಧಿಕಾರಿ ಜನರಲ್ ಜಿಯಾ ಉಲ್ ಹಕ್‌ ಅವರದು.  ಅಹ್ಮದೀಯರು, ಶಿಯಾಗಳು, ಹಿಂದೂಗಳು, ಕ್ರೈಸ್ತರು, ಸೂಫಿಗಳ ಮೇಲೆ ಅಸಂಖ್ಯ ಮಾರಕ ದಾಳಿಗಳು ಜರುಗಿವೆ. ಧರ್ಮನಿಂದೆಯ ಆರೋಪಿಗಳ ಹತ್ಯೆಗೈದವರಿಗೆ ಸಂತನ ಪಟ್ಟ ಕಟ್ಟಿ ಪೂಜಿಸಲಾಗುತ್ತಿದೆ. ‘ಪವಿತ್ರ’ ನಾಡನ್ನು (ಪಾಕಿಸ್ತಾನ) ಶುದ್ಧೀಕರಿಸುವ ‘ಯೋಜನೆ’ ಆ ದೇಶದ ತಳಪಾಯವನ್ನೇ ಅಲುಗಿಸಿದೆ. ಆದರೂ ಧರ್ಮಾಂಧರಿಗೆ ಅದರ ನದರಿಲ್ಲ.

2011ರ ಅಧಿಕೃತ ಅಂದಾಜಿನ ಪ್ರಕಾರ, ಪಾಕಿಸ್ತಾನದಲ್ಲಿನ ಹಿಂದೂ ಜನಸಂಖ್ಯೆ ಸುಮಾರು 75 ಲಕ್ಷ. ಪಾಕಿಸ್ತಾನದಲ್ಲಿರುವ ಹಿಂದೂ ಸಂಘಟನೆಗಳ ಪ್ರಕಾರ ಈ ಪೈಕಿ ಶೇ 90ರಷ್ಟು ಮಂದಿ ಕೆಳಜಾತಿಗಳವರು ಇಲ್ಲವೇ ‘ಅಸ್ಪೃಶ್ಯ’ರು. ಬಹುಸಂಖ್ಯಾತ ಹಿಂದೂಗಳು ಸಿಂಧ್ ಪ್ರಾಂತ್ಯದ ಉಮರ್ ಕೋಟ್, ಥಾರ್ಪರ್ಕಾರ್, ಮೀರಪುರ್ ಖಾಸ್ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಅಪಹರಣ- ಬಲವಂತದ ಮತಾಂತರ-ವಿವಾಹದ ವಿಷಚಕ್ರಕ್ಕೆ ಸಿಕ್ಕಿರುವ ಬಹುತೇಕ ಬಾಲೆಯರು ದಲಿತರು. ಇಂತಹವರ ಸಂಖ್ಯೆ ವರ್ಷಕ್ಕೆ  1000ದಿಂದ 1200 ಅಥವಾ ಇನ್ನೂ ಹೆಚ್ಚು ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಲ್ಪಸಂಖ್ಯಾತ ವಿಭಾಗದ ಸಲಹೆಗಾರ ಸುರೇಂದರ್ ವಾಲ್ಸಾಯ್ ಹೇಳಿದ್ದಾರೆ. 

ಇಂತಹ ಬಹಳಷ್ಟು ಪ್ರಕರಣಗಳು ವರದಿಯಾಗುವುದಿಲ್ಲ. ನಿತ್ಯ ಹೊಟ್ಟೆ ಹೊರೆಯುವುದೇ ಬಹುದೊಡ್ಡ ಹೋರಾಟವಾಗಿರುವ ದಲಿತರಿಗೆ ದೂರು ನೀಡುವ ಶಕ್ತಿ ಕೂಡ ಇಲ್ಲ ಎಂದಿದ್ದಾರೆ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಅಬ್ದುಲ್ ಹೈ. ಪಾಕಿಸ್ತಾನದಲ್ಲಿನ ಹಿಂದೂಗಳ ಪೈಕಿ ಬಹುಸಂಖ್ಯಾತರು ಕೆಳಜಾತಿಗಳವರಾದರೂ, ಅವರನ್ನು ಅಲ್ಲಿನ ಸಂಸತ್ತಿನಲ್ಲಿ ಪ್ರತಿನಿಧಿಸುವವರು ಶೇ 9ರಷ್ಟಿರುವ ಮೇಲ್ಜಾತಿ ಹಿಂದೂಗಳು. ಹೀಗಾಗಿ ಹಿಂದೂ ಯುವತಿಯರ ಅಪಹರಣ-ಮತಾಂತರ-ವಿವಾಹದ ವಿಷಯ ಅಲ್ಲಿನ ಸಂಸತ್ತಿನಲ್ಲಿ ಅನಾಥ. ದಲಿತರಿಗೆ ಪ್ರತ್ಯೇಕ ಚಹಾ ಅಂಗಡಿಗಳು, ಹೋಟೆಲ್‌ಗಳು ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲೂ ಬಹಳಷ್ಟಿವೆ. ಹಿಂದೂ ಯುವತಿಯರ ಅಪಹರಣ– ಮತಾಂತರವನ್ನು ತಡೆಯುವುದಾಗಿ ಚುನಾವಣೆಗೆ ಮುನ್ನ ತಾವು ನೀಡಿದ್ದ ಮಾತನ್ನು ಇಮ್ರಾನ್ ಖಾನ್ ನಡೆಸಿಕೊಡಬೇಕು.

Post Comments (+)