ಬುಧವಾರ, ಆಗಸ್ಟ್ 17, 2022
30 °C
ಸಂಪಾದಕೀಯ

ಪಂಚಾಯಿತಿ ಚುನಾವಣೆ ಸ್ವಾಗತಾರ್ಹ: ಗರಿಷ್ಠ ಮುನ್ನೆಚ್ಚರಿಕೆ ಇಂದಿನ ಅಗತ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ 5,762 ಗ್ರಾಮ ಪಂಚಾಯಿತಿಗಳಿಗೆ ಕೊನೆಗೂ ಚುನಾವಣೆ ನಿಗದಿಯಾಗಿದೆ. ಗ್ರಾಮ ಸ್ವರಾಜ್ಯದ ಆಶಯದ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದವರೆಲ್ಲರ ಪಾಲಿಗೆ ಇದೊಂದು ಖುಷಿಯ ಸಮಾಚಾರ. ಹಾಗೆ ನೋಡಿದರೆ ಜೂನ್‌ ತಿಂಗಳಿನಲ್ಲೇ ಈ ಎಲ್ಲ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೊನಾ ಸೋಂಕಿನ ನೆಪವೊಡ್ಡಿದ ರಾಜ್ಯ ಸರ್ಕಾರ, ಚುನಾವಣೆಯನ್ನೇ ಮುಂದೂಡುವ ನಿರ್ಣಯವನ್ನು ಕೈಗೊಂಡಿತ್ತು. ಈಗಲೂ ಸರ್ಕಾರಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸಲು ಮನಸ್ಸಿಲ್ಲ. ಆದರೆ, ಹೈಕೋರ್ಟ್‌ ಆದೇಶಕ್ಕೆ ಕಟ್ಟುಬಿದ್ದ ರಾಜ್ಯ ಚುನಾವಣಾ ಆಯೋಗ, ಇದೀಗ ಅನಿವಾರ್ಯವಾಗಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕೊರೊನಾ ಕಾಲಘಟ್ಟದಲ್ಲಿ ಕೆಲವು ಉಪ ಚುನಾವಣೆಗಳು ನಡೆದಿವೆಯಾದರೂ ರಾಜ್ಯದಲ್ಲಿ ಘೋಷಣೆಯಾಗಿರುವ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ಈ ಚುನಾವಣೆಯಲ್ಲಿ 2.97 ಕೋಟಿಯಷ್ಟು ಮತದಾರರು ತಮ್ಮ ಪರಮಾಧಿಕಾರವನ್ನು ಚಲಾಯಿಸುವ ಹಕ್ಕು ಹೊಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷಾಧಾರಿತವಾಗಿ ನಡೆಯುವುದಿಲ್ಲವಾದರೂ ಅಭ್ಯರ್ಥಿಗಳಲ್ಲಿ ಹಲವರು ಒಂದಿಲ್ಲೊಂದು ಪಕ್ಷದ ಜತೆ ಗುರುತಿಸಿಕೊಳ್ಳುವುದು ಗುಟ್ಟಿನ ಸಂಗತಿ ಏನಲ್ಲ. ಹೀಗಾಗಿ, ಮುಂದಿನ ಒಂದು ತಿಂಗಳು ಗ್ರಾಮೀಣ ಪ್ರದೇಶಗಳೇ ರಾಜಕೀಯ ಪಕ್ಷಗಳ ಚಟುವಟಿಕೆಯ ಕೇಂದ್ರಗಳೂ ಆಗಲಿವೆ. ರಾಜ್ಯದ ಪ್ರತೀ ಹಳ್ಳಿಯೂ ರಾಜಕೀಯದ ರಂಗಿನಲ್ಲಿ ಮುಳುಗೇಳಲಿದೆ. ಗೆದ್ದವರು ಸ್ಥಳೀಯಾಡಳಿತದ ಮೇಲೆ ನೇರ ಹಿಡಿತ ಸಾಧಿಸುವುದರಿಂದ ಜಿದ್ದಾಜಿದ್ದಿನ ಹೋರಾಟಕ್ಕೂ ಅಖಾಡ ಸಿದ್ಧವಾಗಿದೆ.

ಪಂಚಾಯತ್‌ ರಾಜ್‌ ವ್ಯವಸ್ಥೆಯೇ ನಮ್ಮ ದೇಶದ ಪ್ರಜಾತಂತ್ರದ ತಾಯಿಬೇರು. ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯುವ ಆಡಳಿತದ ಮೊದಲ ಪ್ರಯೋಗ ಶಾಲೆಯೆಂದರೆ ಅದು ಗ್ರಾಮ ಪಂಚಾಯಿತಿಯೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ರಾಮಾಂತರ ಭಾಗದಲ್ಲಿ ಹೊಸ ಜನನಾಯಕರು ರೂಪುಗೊಳ್ಳಲು ಪಂಚಾಯಿತಿ ಸದಸ್ಯತ್ವ ಮೊದಲ ಮೆಟ್ಟಿಲು ಕೂಡ. ಗ್ರಾಮ ಸ್ವರಾಜ್ಯದ ಈಡೇರಿಕೆಗೆ ಅಲ್ಲಿನ ಪಂಚಾಯಿತಿಯೇ ಸಾಧನವಾಗಬೇಕು ಎನ್ನುವುದು ಸಂವಿಧಾನದ ಆಶಯವೂ ಆಗಿದೆ. ಯಾವುದೇ ಗ್ರಾಮದ ಸ್ಥಳೀಯಾಡಳಿತ ಅಲ್ಲಿನ ಪ್ರತಿಯೊಬ್ಬ ಪ್ರಜೆಯನ್ನೂ ಪ್ರಭಾವಿಸುವುದು ಸುಳ್ಳಲ್ಲ. ಸರ್ಕಾರದ ದೊಡ್ಡ ಮೊತ್ತದ ಅನುದಾನ ಇತ್ತೀಚಿನ ವರ್ಷಗಳಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಹರಿದು ಬರುತ್ತಿರುವ ಕಾರಣ ಅವುಗಳ ‘ಶಕ್ತಿ’ ಈಗ ಹೆಚ್ಚಾಗಿದೆ. ದೇಶಕ್ಕೇ ಮಾದರಿಯಾದ ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ಕೊಟ್ಟ ರಾಜ್ಯದಲ್ಲಿ ಒಂದಿಲ್ಲೊಂದು ಕಾರಣದಿಂದ ಕಾಲ ಕಾಲಕ್ಕೆ ಚುನಾವಣೆ ನಡೆಸದೆ ಸ್ಥಳೀಯಾಡಳಿತದ ಬುನಾದಿಯನ್ನು ಅಲುಗಾಡಿಸುತ್ತಾ ಬಂದಿರುವುದು ಒಂದು ದುರಂತವೇ ಸರಿ. ಗ್ರಾಮ ಪಂಚಾಯಿತಿಗಳ ಚುಕ್ಕಾಣಿಯನ್ನು ಅಧಿಕಾರಿಗಳ ಕೈಗೊಪ್ಪಿಸಿ ಕೈಕಟ್ಟಿ ಕೂರುವ ಸರ್ಕಾರದ ಕ್ರಮ ಸರ್ವಥಾ ಒಪ್ಪುವಂಥದ್ದಲ್ಲ. ಹೈಕೋರ್ಟ್‌ ಮಧ್ಯಪ್ರವೇಶ ಮಾಡದಿರುತ್ತಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಯು ಈಗಲೂ ಮಾಯಾಜಿಂಕೆಯಂತೆ ಮುಂದಕ್ಕೆ ಓಡುತ್ತಲೇ ಇರುತ್ತಿತ್ತು. ಹೌದು, ಕೊರೊನಾ ಸೋಂಕಿನ ತೀವ್ರತೆ ಈಗಲೂ ತಗ್ಗಿಲ್ಲ. ಆದರೆ, ಅದರಿಂದ ಭಯಭೀತರಾಗಿ ಕೂರುವ ಅಗತ್ಯವಿಲ್ಲ. ಇಂತಹ ಸನ್ನಿವೇಶದಲ್ಲಿಯೇ ಬಿಹಾರ ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ ಉದಾಹರಣೆ ನಮ್ಮ ಎದುರಿಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸುವುದು ಅಗತ್ಯವಾದರೂ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ಗ್ರಾಮಾಂತರ ಭಾಗದಲ್ಲಿ  ಆರೋಗ್ಯದ ವಿಷಯದಲ್ಲಿ ಮೊದಲೇ ಜಾಗೃತಿ ಕಡಿಮೆ ಎನ್ನುವ ಅಭಿಪ್ರಾಯವಿದೆ. ಹೀಗಾಗಿ, ಪ್ರಚಾರದ ಭರಾಟೆಯು ಸೋಂಕು ಹರಡುವುದಕ್ಕೆ ಕಾರಣ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಚುನಾವಣಾ ಪ್ರಕ್ರಿಯೆಯನ್ನು ನಡೆಸುವಾಗ ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಕೆಯ ಜತೆಗೆ, ಚುನಾವಣೆಗೆ ರೂಪಿಸಿದ ಶಿಷ್ಟಾಚಾರಗಳೆಲ್ಲ ಚಾಚೂತಪ್ಪದೆ ಪಾಲನೆಯಾಗುವಂತೆಯೂ ನೋಡಿಕೊಳ್ಳಬೇಕು. ಕೊರೊನಾ ಸೋಂಕು ಹರಡದಂತೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ನಂತರ ಗ್ರಾಮೀಣ ಪ್ರದೇಶಗಳ ಸನ್ನಿವೇಶದಲ್ಲಿ ಸಾಕಷ್ಟು ಪಲ್ಲಟಗಳಾಗಿವೆ. ವಲಸೆ ಸಮಸ್ಯೆಯು ತಂದಿಟ್ಟ ಬಿಕ್ಕಟ್ಟಿನಿಂದ ಪ್ರತೀ ಹಳ್ಳಿಯಲ್ಲೂ ನೂರಾರು ಜನ ಉದ್ಯೋಗ ಕಳೆದುಕೊಂಡವರು ಇದ್ದಾರೆ. ಸ್ಥಳೀಯರ ಇಂತಹ ಸಂಕಟಗಳನ್ನು ಅರ್ಥಮಾಡಿಕೊಂಡು ಆಡಳಿತ ನಡೆಸುವ ಜನಪ್ರತಿನಿಧಿಗಳು ಬೇಕಾಗಿರುವುದು ಪ್ರತೀ ಗ್ರಾಮದ ಸದ್ಯದ ಜರೂರು. ಈಗ ನಡೆಯಲಿರುವ ಪ್ರಜಾತಂತ್ರ ಹಬ್ಬಕ್ಕೆ ಈ ಕಾರಣಕ್ಕಾಗಿಯೇ ಅಷ್ಟೊಂದು ಮಹತ್ವ. ಗ್ರಾಮೀಣ ಭಾಗದಲ್ಲಿ ಮತ್ತೆ ಜೀವನೋತ್ಸಾಹ ಪುಟಿದೇಳುವಂತೆ ಮಾಡಿದ್ದಾದರೆ ಈ ಚುನಾವಣೆ ನಡೆಸಿದ್ದು ಸಾರ್ಥಕ ಎನ್ನುವುದರಲ್ಲಿ ಸಂಶಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು