ಆಧುನಿಕ ಒಲಿಂಪಿಕ್ ಆಂದೋಲನದ ಪಿತಾಮಹ ಪಿಯರೆ ಡಿ ಕೊಬರ್ತಿ ಅವರ ತವರು ದೇಶದಲ್ಲಿ 100 ವರ್ಷಗಳ ನಂತರ ನಡೆದ ಒಲಿಂಪಿಕ್ ಕೂಟ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು. 200ಕ್ಕೂ ಹೆಚ್ಚು ದೇಶಗಳ, ವಿವಿಧ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ಕ್ರೀಡಾಪಟುಗಳು ಒಂದೇ ವೇದಿಕೆಯಲ್ಲಿ ಸೇರಿದರು. 19 ದಿನ ನಡೆದ ಒಲಿಂಪಿಕ್ ಕೂಟಕ್ಕೆ ಭವ್ಯ ಕಳೆ ತಂದರು. ಕೋವಿಡ್ ನಂತರದ ಕಾಲಘಟ್ಟದಲ್ಲಿ ನಡೆದ ಮೊದಲ ಒಲಿಂಪಿಕ್ಸ್ ಇದಾಗಿತ್ತು. ಆದ್ದರಿಂದ ಭವಿಷ್ಯದ ಆಯೋಜಕರಿಗೆ ಮಾರ್ಗದರ್ಶಿಯಾಗುವ ಸವಾಲು ಕೂಡ ಆತಿಥೇಯ ಫ್ರಾನ್ಸ್ ಮುಂದಿತ್ತು. ಈ ಸವಾಲನ್ನು ಆತಿಥೇಯರು ಸಮರ್ಥವಾಗಿಯೇ ಎದುರಿಸಿದರು. ಪ್ಯಾರಿಸ್‌ನಲ್ಲಿರುವ ಸೆನ್ ನದಿಯಲ್ಲಿ ಉದ್ಘಾಟನೆ ಸಮಾರಂಭವನ್ನು ನಡೆಸಲಾಯಿತು. ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಗ್ರಾಮದಿಂದ ಹೊರಗೆ ಕೂಟದ ಅನಾವರಣ ನಡೆದಿದ್ದು ವಿಶೇಷ. ಆಟಗಾರರು, ಅತಿಥಿಗಳು ಮತ್ತು ಅಧಿಕಾರಿಗಳನ್ನು ದೋಣಿಗಳಲ್ಲಿ ಕರೆದೊಯ್ದು ಸಮಾರಂಭ ನಡೆಸಲಾಯಿತು. ಧಾರಾಕಾರ ಮಳೆಯಲ್ಲಿಯೂ ಈ ಕಾರ್ಯಕ್ರಮವನ್ನು
ನಿರ್ವಹಿಸಲಾಯಿತು. ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಒಲಿಂಪಿಕ್ಸ್ ನಡೆದಾಗ ‘ಬಯೋಬಬಲ್’ ನಿಯಮದಿಂದಾಗಿ ಕ್ರೀಡಾಂಗಣಕ್ಕೆ ಜನರ ಪ್ರವೇಶ ಇರಲಿಲ್ಲ. ಈ ಸಲ ಅಂತಹ ನಿಬಂಧನೆಗಳು ಇರಲಿಲ್ಲ. ಆದ್ದರಿಂದ ಬಹುತೇಕ ಎಲ್ಲ ಕ್ರೀಡೆಗಳಿಗೂ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಸಾವಿರಾರು ಜನರ ಮುಂದೆ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಮೆರೆದರು. ಅಮೆರಿಕ ಎಂದಿನಂತೆ ತನ್ನ ಪ್ರಾಬಲ್ಯ ಮೆರೆಯಿತು. 126 ಪದಕಗಳನ್ನು ಜಯಿಸಿ ಮೊದಲ ಸ್ಥಾನ ಗಳಿಸಿತು. 2028ರಲ್ಲಿ ಅಮೆರಿಕವೇ ಒಲಿಂಪಿಕ್ಸ್ ಆಯೋಜಿಸಲಿದೆ. ಲಾಸ್ ಏಂಜಲೀಸ್‌ನಲ್ಲಿ ಕೂಟ ಜರುಗಲಿದೆ. ಒಟ್ಟು 91 ಪದಕಗಳೊಂದಿಗೆ ಚೀನಾ ಈ ಸಲ ಎರಡನೇ ಸ್ಥಾನ ಪಡೆಯಿತು. ಆದರೆ ಉಭಯ ದೇಶಗಳೂ ತಲಾ 40 ಚಿನ್ನದ ಪದಕ ಗೆದ್ದು ಸಮಬಲ ಮೆರೆದವು. ಅಮೆರಿಕದ ಜಿಮ್ನಾಸ್ಟ್ ಸಿಮೊನ್ ಬೈಲ್ಸ್, ಈಜುಪಟು ಕೇಟ್ ಲೆಡಕಿ, ವೇಗದ ಓಟಗಾರ ನೊವಾ ಲೈಲ್ಸ್, ಜಪಾನಿನ ಕುಸ್ತಿಪಟು ಹಿಗುಚಿ, ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಸೇರಿದಂತೆ ಹಲವರು ತಮ್ಮ ಹೆಜ್ಜೆಗುರುತು ಮೂಡಿಸಿದರು.
ಈ ಒಲಿಂಪಿಕ್ಸ್‌ನಲ್ಲಿ ಭಾರತದ 117 ಕ್ರೀಡಾಪಟುಗಳು, 16 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಹತ್ತಕ್ಕಿಂತ ಹೆಚ್ಚು ಪದಕಗಳನ್ನು ಪಡೆಯುವ ಗುರಿ ಈಡೇರಲಿಲ್ಲ. ಭಾರತವು ಒಂದು ಬೆಳ್ಳಿ, ಐದು ಕಂಚಿನ ಪದಕಗಳನ್ನು ಜಯಿಸಿ 71ನೇ ಸ್ಥಾನ ಪಡೆಯಿತು. ಹೋದ ಬಾರಿ ಜಯಿಸಿದ್ದ ಏಳು ಪದಕಗಳ ಸಾಧನೆಯನ್ನೂ ಮೀರಲಿಲ್ಲ. ಆದರೆ, ಆರು ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯಲ್ಪ ಅಂತರದಲ್ಲಿ ಪದಕಗಳನ್ನು ಕೈತಪ್ಪಿಸಿಕೊಂಡಿತು. ಇದಲ್ಲದೇ ಭಾರತಕ್ಕೆ ದೊಡ್ಡ ಆಘಾತವಾಗಿದ್ದು ಕುಸ್ತಿಯಲ್ಲಿ. ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಫೈನಲ್ ತಲುಪಿ ಇತಿಹಾಸ ಬರೆದ ವಿನೇಶ್ ಫೋಗಟ್ ಅವರು ದೇಹತೂಕದಲ್ಲಿ 100 ಗ್ರಾಂ ಹೆಚ್ಚಾಗಿ ಅನರ್ಹಗೊಂಡರು. ಇದರಿಂದಾಗಿ ಚಿನ್ನ ಜಯಿಸುವ ಅವಕಾಶವೊಂದು ಕೈತಪ್ಪಿತು. ಈ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಯಿತು. ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಪುರುಷರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಸಮಾಧಾನ ತಂದರು. ಆದರೆ ಅಂತಿಮ್ ಪಂಘಲ್ ಅವರ ಅಶಿಸ್ತಿನ ನಡೆಯು ದೇಶಕ್ಕೆ ಮುಜುಗರ ತಂದಿದ್ದು ಸುಳ್ಳಲ್ಲ. ಟೋಕಿಯೊದಲ್ಲಿ ಚಿನ್ನ ಜಯಿಸಿದ್ದ
ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಈ ಬಾರಿ ಬೆಳ್ಳಿ ಗಳಿಸಿದರು. ಪಾಕಿಸ್ತಾನದ ಅರ್ಷದ್ ನದೀಂ ಚಿನ್ನದ ಪದಕ ಜಯಿಸಿದರು. ಪುರುಷರ ಹಾಕಿ ತಂಡವು ಸತತ ಎರಡನೇ ಬಾರಿ ಕಂಚು ಗೆದ್ದಿತು. ಆದರೆ ಪದಕ ಜಯಿಸುವ ಭರವಸೆ ಮೂಡಿಸಿದ್ದ ಬ್ಯಾಡ್ಮಿಂಟನ್, ಬಾಕ್ಸಿಂಗ್ ಹಾಗೂ ಆರ್ಚರಿ ವಿಭಾಗದ ಅಥ್ಲೀಟ್‌ಗಳು ನಿರಾಶೆ ಮೂಡಿಸಿದರು. ಶೂಟಿಂಗ್‌ನಲ್ಲಿ ಮನು ಭಾಕರ್ ಎರಡು ಕಂಚು ಗೆದ್ದು ದಾಖಲೆ ಬರೆದರು. ಸರಬ್ಜೋತ್ ಸಿಂಗ್ (ಮಿಶ್ರ ತಂಡ) ಮತ್ತು ಸ್ವಪ್ನಿಲ್ ಕುಸಾಳೆ ಅವರೂ ಪದಕ ಜಯಿಸಿ ಹೊಸ ಭರವಸೆ ಮೂಡಿಸಿದರು. ಈ ಬಾರಿ ಭಾರತದ ಕ್ರೀಡಾಪಟುಗಳಿಗೆ ತಮ್ಮೊಂದಿಗೆ ವೈಯಕ್ತಿಕ ಕೋಚ್ ಮತ್ತು ನೆರವು ಸಿಬ್ಬಂದಿ ಕರೆದೊಯ್ಯಲು ಅವಕಾಶ ನೀಡಲಾಗಿತ್ತು. ಪೂರ್ವಸಿದ್ಧತೆಗಾಗಿ ವಿದೇಶಗಳಿಗೆ
ತರಬೇತಿಗೆ ಕಳುಹಿಸಲಾಗಿತ್ತು. ಟಾಪ್ (ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ) ಮೂಲಕ ಧನಸಹಾಯವನ್ನೂ ನೀಡಲಾಗಿತ್ತು. ಆದರೂ ಪದಕ ಗಳಿಕೆಯಲ್ಲಿ ಹೆಚ್ಚಳವಾಗಲಿಲ್ಲ. ಈ ಕುರಿತು ಆತ್ಮಾವಲೋಕನ
ಅಗತ್ಯ. ಈ ಒಲಿಂಪಿಕ್ಸ್‌ನ ಕೆಲವು ಸ್ಪರ್ಧೆಗಳ ಫಲಿತಾಂಶಗಳು ನಿಕಟ ಪೈಪೋಟಿಯಿಂದ ಕೂಡಿದ್ದವು. ಪುರುಷರ 100 ಮೀಟರ್ ಓಟದ ಫೈನಲ್‌ನಲ್ಲಿ ಎಲ್ಲ ಎಂಟು ಸ್ಪರ್ಧಿಗಳೂ 10 ಸೆಕೆಂಡುಗಳ ಒಳಗೇ ಗುರಿ ಮುಟ್ಟಿದ್ದರು. ಮೊದಲ ಹಾಗೂ ಎರಡನೇ ಸ್ಥಾನದ ನಡುವಿನ ಅಂತರ 0.005 ಸೆಕೆಂಡಿನಷ್ಟು ಮಾತ್ರವಾಗಿತ್ತು. ಅಂದರೆ ಜಾಗತಿಕವಾಗಿ ಸ್ಪರ್ಧೆಯು ಎಷ್ಟು ಕಠಿಣವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಆ ಹಂತಕ್ಕೆ ಬೆಳೆಯಲು ಭಾರತದ ಅಥ್ಲೀಟ್‌ಗಳಿಗೆ ಇನ್ನೂ ಹೆಚ್ಚಿನ ತಂತ್ರಜ್ಞಾನ, ಕ್ರೀಡಾ ವಿಜ್ಞಾನ ಮತ್ತು ಮನೋವಿಜ್ಞಾನದ ನೆರವು ಅಗತ್ಯವಿದೆ. ಒಲಿಂಪಿಕ್ಸ್‌ನಲ್ಲಿ ನಡೆಯುವ 30ಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸುವ ಪ್ರತಿಭೆಗಳನ್ನು ಸಿದ್ಧಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕ್ರೀಡಾಸಂಸ್ಕೃತಿ
ಯನ್ನು ಬೆಳೆಸುವ ತುರ್ತು ಇದೆ. ಇದಕ್ಕೂ ‘ಮನೆಯೇ ಮೊದಲ ಶಾಲೆ’ ಆಗಬೇಕು. ಶಾಲೆಗಳು
ಕ್ರೀಡಾಪಟುಗಳನ್ನು ಬೆಳೆಸುವ ತಾಣಗಳಾಗಬೇಕು. ಕ್ರೀಡಾಪಟುವಾಗಲು ಬಯಸುವವರಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಜೀವನಭದ್ರತೆ ನೀಡುವ ವ್ಯವಸ್ಥೆ ಬೆಳೆಯಬೇಕು. ಆಗ ಹೆಚ್ಚು ಪದಕ ಜಯಿಸುವ ಕನಸು ನನಸಾಗುವ ಸಾಧ್ಯತೆಗಳೂ ಹೆಚ್ಚುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.