ಭಾನುವಾರ, ಜನವರಿ 26, 2020
18 °C

ಸಂಸದೀಯ ಕಾರ್ಯದರ್ಶಿ ಹುದ್ದೆ ರದ್ದು: ಹೈಕೋರ್ಟ್‌ ಆದೇಶ ಸ್ವಾಗತಾರ್ಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ‘ಸಂವಿಧಾನ ಪುನರ್‌ ಪರಿಶೀಲನಾ ರಾಷ್ಟ್ರೀಯ ಆಯೋಗ’ ನೀಡಿದ್ದ ಶಿಫಾರಸುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಪುಟದ ಗಾತ್ರವನ್ನು ಮಿತಿಗೊಳಿಸುವುದು ಕೂಡ ಸೇರಿತ್ತು. ಆ ಶಿಫಾರಸಿಗೆ ಅನುಗುಣವಾಗಿ 2003ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದ ಕೇಂದ್ರ ಸರ್ಕಾರವು ಕೇಂದ್ರ ಹಾಗೂ ರಾಜ್ಯಗಳ ಸಚಿವ ಸಂಪುಟದ ಸಂಖ್ಯಾಬಲಕ್ಕೆ ಮಿತಿ ಹಾಕಿತು. ರಾಜ್ಯ ಸಂಪುಟದ ಗಾತ್ರವು ಆ ರಾಜ್ಯದ ವಿಧಾನಸಭೆಯ ಒಟ್ಟು ಸ್ಥಾನಗಳ ಶೇಕಡ 15ರಷ್ಟಕ್ಕಿಂತ ಹೆಚ್ಚು ಇರುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿತು. ಹಾಗೆಯೇ, ಸಂಪುಟದ ಸದಸ್ಯರ ಸಂಖ್ಯೆ 12ಕ್ಕಿಂತ ಕಡಿಮೆಯಾಗುವಂತಿಲ್ಲ ಎಂದೂ ಅದೇ ತಿದ್ದುಪಡಿ ಹೇಳಿತು.

ಜನಹಿತಕ್ಕಿಂತಲೂ ಹೆಚ್ಚಾಗಿ ರಾಜಕೀಯ ಕಾರಣಗಳನ್ನು ಪರಿಗಣಿಸಿ ಜಂಬೊ ಸಂಪುಟವನ್ನು ರಚಿಸುತ್ತಿದ್ದವರಿಗೆ ಇದು ಅಂಕುಶ ಹಾಕಿತು. ಆದರೆ, ಈ ಅಂಕುಶದ ಹಿಡಿತದಿಂದ ತಪ್ಪಿಸಿಕೊಳ್ಳಲು ವಿವಿಧ ರಾಜ್ಯ ಸರ್ಕಾರಗಳು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಹೆಸರಿನ ಹುದ್ದೆಯನ್ನು ಬಳಸಿಕೊಂಡವು.

ನಮ್ಮ ರಾಜ್ಯದಲ್ಲಿ ಸಂಪುಟದಲ್ಲಿ ಸ್ಥಾನ ಸಿಗದ ಪರಿಣಾಮವಾಗಿ ‘ಅತೃಪ್ತ’ರಾಗುವ ಶಾಸಕರಿಗೆ ‘ಸಂಸದೀಯ ಕಾರ್ಯದರ್ಶಿ’ ಹುದ್ದೆಯನ್ನು ನೀಡಿ ಅವರನ್ನು ‘ತೃಪ್ತ’ರನ್ನಾಗಿಸುವ ಕಾರ್ಯಕ್ಕೆ ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ಭತ್ಯೆ (ತಿದ್ದುಪಡಿ) ಕಾಯ್ದೆ– 1999’ ನೆರವಿಗೆ ಬಂತು. ಈ ತಿದ್ದುಪಡಿ ಕಾಯ್ದೆಯು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಪಕ್ಷಗಳ ಮುಖ್ಯಮಂತ್ರಿಗಳಿಗೆ ಆಸರೆಯಾದುದು ಈಗ ಇತಿಹಾಸ. ಆದರೆ, ಹೀಗೆ ಅತೃಪ್ತರನ್ನು ತೃಪ್ತರನ್ನಾಗಿಸುವ ಅಥವಾ ಇನ್ಯಾವುದೋ ರಾಜಕೀಯ ಒತ್ತಡಕ್ಕೆ ಸ್ಪಂದಿಸುವ ಭಾಗವಾಗಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿದಾಗಲೆಲ್ಲ, ರಾಜ್ಯಗಳ ಸಂಪುಟದ ಗಾತ್ರ ಎಷ್ಟಿರಬೇಕು ಎಂಬುದನ್ನು ನಿಗದಿಪಡಿಸಿದ ಸಂವಿಧಾನದ 164 (1ಎ) ವಿಧಿಯ ಆಶಯಗಳ ಉಲ್ಲಂಘನೆ ನಡೆಯುತ್ತಿದ್ದುದು ವಿಷಾದಕರ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌, ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳಲು ಅವಕಾಶ ಕೊಡುತ್ತಿದ್ದ ಕಾಯ್ದೆಯ ಅಂಶಗಳನ್ನು ಈಗ ರದ್ದುಪಡಿಸಿದೆ.

ರಾಜಕೀಯವಾಗಿ ಮಹತ್ವ ಹೊಂದಿದ್ದ ಸಂಸದೀಯ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಗಳು ಯಾವುವು ಎಂಬುದನ್ನು ವಿವರಿಸುವ ನಿಯಮಗಳನ್ನು ರಾಜ್ಯದಲ್ಲಿ 2016ರಲ್ಲಿ ರೂಪಿಸಲಾಗಿತ್ತು. ಸಂಸದೀಯ ಕಾರ್ಯದರ್ಶಿಗಳ ಬಹುತೇಕ ಹೊಣೆಗಾರಿಕೆಗಳು ಶಾಸಕಾಂಗದ ಕಾರ್ಯಗಳಿಗೆ ಸಂಬಂಧಿಸಿದ್ದವು. ಸುಪ್ರೀಂ ಕೋರ್ಟ್‌ ಈ ಹಿಂದೆ ಬಿಮೊಲಾಂಗ್ಶು ರಾಯ್‌ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಆಧಾರವಾಗಿ ಇರಿಸಿಕೊಂಡು, ಕಾಯ್ದೆಯ ಅಂಶಗಳನ್ನು ರದ್ದುಪಡಿಸುವ ಆದೇಶವನ್ನು ಹೈಕೋರ್ಟ್‌ ಈಗ ನೀಡಿದೆ. ಅಷ್ಟೇ ಅಲ್ಲ, ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ಸೃಷ್ಟಿಸಲು ಅನುವಾಗಿಸುವ ಕಾಯ್ದೆ ರೂಪಿಸುವ ಅಧಿಕಾರವು ವಿಧಾನಸಭೆಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದ್ದ ಮಾತನ್ನು ಹೈಕೋರ್ಟ್‌ ಪುನರುಚ್ಚರಿಸಿದೆ.

‘ಸಂವಿಧಾನ ನಿಗದಿ ಮಾಡಿರುವ ಮಿತಿಯ ಕಾರಣದಿಂದಾಗಿ, ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡಲು ಆಗದವರಿಗೆ, ತಮಗೆ ಬೇಕಾದವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲು ಮುಖ್ಯಮಂತ್ರಿಗೆ ಈ ಕಾಯ್ದೆಯು ಸಾಧನದ ರೀತಿಯಲ್ಲಿ ಬಳಕೆಯಾಗುತ್ತಿತ್ತು. ಇದು 164(1ಎ) ವಿಧಿಯಲ್ಲಿ ನಿಗದಿ ಮಾಡಿರುವ ಸಂಪುಟದ ಗಾತ್ರದ ಮಿತಿ ಅರ್ಥಹೀನ ಅನ್ನಿಸುವಂತೆ ಮಾಡುತ್ತಿತ್ತು’ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶಕ್ಕೆ ಕಾನೂನಿನ ದೃಷ್ಟಿಯಿಂದ ಇರುವ ಮಹತ್ವವನ್ನು ಕಾಣುವ ಜೊತೆಯಲ್ಲೇ, ಈ ಕಾಯ್ದೆಯು ಇಂದಿನ ರಾಜಕೀಯ ಸಂದರ್ಭದಲ್ಲಿ ಹೊಂದಿದ್ದ ಮಹತ್ವವನ್ನು ಗುರುತಿಸಬೇಕು.

ರಾಜಕೀಯ ‘ಅತೃಪ್ತಿ’ ಎನ್ನುವುದು ಬಹುಮತ ಹೊಂದಿರುವ ಸರ್ಕಾರಗಳನ್ನು ಉರುಳಿಸಿಬಿಡುವ ಶಕ್ತಿ ಗಳಿಸಿರುವ ಈ ಹೊತ್ತಿನಲ್ಲಿ, ಇಂಥದ್ದೊಂದು ಹುದ್ದೆ ಸೃಷ್ಟಿಗೆ ಅವಕಾಶವಿಲ್ಲ ಎಂದು ಕೋರ್ಟ್‌ ಸಾರಿರುವುದರಿಂದ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ನೀಡಿ ‘ತೃಪ್ತಿ’ಪಡಿಸುವ ಕಾರ್ಯಕ್ಕೆ ಪೂರ್ಣವಿರಾಮ ಹಾಕಿದಂತೆ ಆಗಿದೆ. ಅತೃಪ್ತರನ್ನು ತೃಪ್ತಿಪಡಿಸಲು ಹುದ್ದೆಗಳ ಸೃಷ್ಟಿಯು ಸರಿಯಲ್ಲ ಎಂಬ ನೆಲೆಯಲ್ಲೂ ಈ ಆದೇಶವನ್ನು ಗ್ರಹಿಸಲು ಅವಕಾಶವಿದೆ. ಜನಹಿತದ ಕೆಲಸಗಳ ಮೂಲಕ ರಾಜಕೀಯ ತೃಪ್ತಿ ಕಂಡುಕೊಳ್ಳುವುದು ಯುಕ್ತವಾದ ಮಾರ್ಗ. ಅದನ್ನು ಬಿಟ್ಟು, ಒಂದಲ್ಲ ಒಂದು ಹುದ್ದೆಯ ಹಿಂದೆ ಓಡುವುದರಿಂದ ‘ತೃಪ್ತಿ’ ಕಂಡುಕೊಳ್ಳುವುದು ಸಮಂಜಸವಲ್ಲ. ಈ ನೆಲೆಯಲ್ಲೂ ಈ ಸ್ವಾಗತಾರ್ಹ ಆದೇಶವನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಇದೆ.

ಇದನ್ನೂ ಓದಿ: ಹೆಸರಿಗಷ್ಟೇ ಸಂಸದೀಯ ಕಾರ್ಯದರ್ಶಿ!

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು