ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ಗೆ ಹೊನಲು ಬೆಳಕಿನ ನಂಟುಪ್ರೇಕ್ಷಕರನ್ನು ಸೆಳೆಯುವ ಪ್ರಯೋಗ

Last Updated 26 ನವೆಂಬರ್ 2019, 3:49 IST
ಅಕ್ಷರ ಗಾತ್ರ

ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣಕ್ಕೆ 155 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ನಂತರದ ಕ್ರಿಕೆಟ್‌ನ ಬೆಳವಣಿಗೆಗೆ ಅದು ಸಾಕ್ಷಿಯಾಗಿದೆ. ಇದೀಗ ಈ ಅಂಗಳ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಯಿತು. ಪ್ರಥಮ ಬಾರಿ ಇಲ್ಲಿ ಹಗಲು–ರಾತ್ರಿ ಟೆಸ್ಟ್ ಪಂದ್ಯ ನಡೆಯಿತು. ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾದವು. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ, ಪಂದ್ಯದ ಮೂರನೇ ದಿನವೇ ಪಂದ್ಯವನ್ನು ಜ‌ಯಿಸಿತು. 2–0ಯಿಂದ ಸರಣಿಯನ್ನೂ ಗೆದ್ದುಕೊಂಡಿತು. ಫಲಿತಾಂಶ ಏನೇ ಇರಲಿ, ಈ ಪಂದ್ಯದ ಆಯೋಜನೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಉಳಿಸುವ ಅಭಿಯಾನಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಕೈಜೋಡಿಸಿದಂತಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ನೂರಾನೆ ಬಲ ಬಂದಂತಾಗಿದೆ. ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ಬಗೆಯ ಟೆಸ್ಟ್ ಆಯೋಜಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಆದರೆ, ಈ ಪಂದ್ಯಗಳಲ್ಲಿ ಬಳಕೆಯಾಗುವ ನಸುಗೆಂಪು ಚೆಂಡಿನ ಬಗ್ಗೆ ಭಾರತಕ್ಕೆ ತಕರಾರು ಇತ್ತು. ಆದ್ದರಿಂದ ಇಲ್ಲಿಯವರೆಗೂ ಒಪ್ಪಿರಲಿಲ್ಲ. ಈ ಪಂದ್ಯದಲ್ಲಿ ಸ್ವದೇಶಿ ನಿರ್ಮಿತ ಎಸ್‌.ಜಿ. ಚೆಂಡುಗಳನ್ನು ಬಳಸಲಾಯಿತು. ಇದರೊಂದಿಗೆ ಪಿಂಕ್ ಟೆಸ್ಟ್‌ ಆಯೋಜನೆ ಮಾಡಿದ ದೇಶಗಳ ಪಟ್ಟಿಯಲ್ಲಿ ಸೇರಿತು. 2015ರಲ್ಲಿ ಮೊದಲ ಬಾರಿಗೆ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ–ನ್ಯೂಜಿಲೆಂಡ್ ತಂಡಗಳ ನಡುವೆ ಪಿಂಕ್ ಬಾಲ್ ಟೆಸ್ಟ್‌ ನಡೆದಿತ್ತು. ನಂತರ ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ ತಂಡಗಳೂ ಈ ಮಾದರಿಯಲ್ಲಿ ಆಡಿದವು. ಆದರೆ ಬಿಸಿಸಿಐ ಮಾತ್ರ ಪಟ್ಟು ಸಡಿಲಿಸಿರಲಿಲ್ಲ.

ಟೆಸ್ಟ್‌ಗಳಲ್ಲಿ ಬಳಸಲಾಗುವ ಕೆಂಪು ಚೆಂಡು ಮೊದಲ 25–30 ಓವರ್‌ಗಳವರೆಗೆ ವೇಗದ ಬೌಲರ್‌ಗಳ ಸ್ವಿಂಗ್‌ ಪ್ರಯೋಗಕ್ಕೆ ಅನುಕೂಲಕರ. ನಂತರ ಅದರ ಹೊಳಪು ಹಾಗೂ ಕಾಠಿಣ್ಯ ಕುಂದುವುದರಿಂದ ರಿವರ್ಸ್ ಸ್ವಿಂಗ್ ಮತ್ತು ಸ್ಪಿನ್ ಬೌಲಿಂಗ್‌ಗೆ ಪ್ರಶಸ್ತ. ಆದರೆ, ನಸುಗೆಂಪು ಚೆಂಡಿನ ಮೇಲೆ ಒಂದು ಸುತ್ತು ಬಣ್ಣದ ಲೇಪನ ಹೆಚ್ಚು ಇರುತ್ತದೆ. ಕಪ್ಪು ದಾರದ ಹೊಲಿಗೆ ಇರುತ್ತದೆ. ಇದರಿಂದ 80 ಓವರ್‌ಗಳವರೆಗೂ ಹೊಳಪು ಕುಂದುವುದಿಲ್ಲ. ಸ್ಪಿನ್‌ಗೆ ನೆರವಾಗುವುದಿಲ್ಲ. ಭಾರತಕ್ಕೆ ಮೊದಲಿನಿಂದಲೂ ಸ್ಪಿನ್‌ ಬೌಲಿಂಗ್‌ ದೊಡ್ಡ ಶಕ್ತಿಯಾಗಿರುವುದರಿಂದ ಈ ಚೆಂಡಿಗೆ ವಿರೋಧ ಇತ್ತು. ಕೋಲ್ಕತ್ತ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ನರ್‌ಗಳಿಗೆ ಒಂದೂ ವಿಕೆಟ್ ಲಭಿಸಲಿಲ್ಲ. ಮಧ್ಯಮವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರು ಒಟ್ಟು 19 ವಿಕೆಟ್‌ಗಳನ್ನು ಗಳಿಸಿದರು. ಸ್ಪಿನ್‌ ಬೌಲರ್‌ಗಳಿಗೆ ಈ ಚೆಂಡು ಸೂಕ್ತವೋ ಅಲ್ಲವೋ ಎಂಬುದು ಸ್ಪಷ್ಟವಾಗಲು ಇನ್ನಷ್ಟು ಪಂದ್ಯಗಳು ನಡೆಯಬೇಕು. ಅದರೊಂದಿಗೆ ಪಿಂಕ್‌ ಬಾಲ್‌ಗೆ ತಕ್ಕಂತೆ ತಮ್ಮ ಕೌಶಲಗಳನ್ನು ಪರಿಷ್ಕರಿಸಿಕೊಳ್ಳುವ ಸವಾಲು ಕೂಡ ಸ್ಪಿನ್ನರ್‌ಗಳಿಗೆ ಇದೆ.

ಆದರೆ, ನಾಲ್ಕು ವರ್ಷಗಳಿಂದ ಪಿಂಕ್ ಬಾಲ್‌ ಟೆಸ್ಟ್‌ ವಿರೋಧಿಸುತ್ತಾ ಬಂದಿದ್ದ ಭಾರತ ಈ ಬಾರಿ ಇದ್ದಕ್ಕಿದ್ದಂತೆ ಒಪ್ಪಿಕೊಂಡಿದ್ದು ಕೂಡ ಕುತೂಹಲ ಮೂಡಿಸಿದೆ. ಇದರ ಕೇಂದ್ರಬಿಂದು ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ. ‘ಕೂಲಿಂಗ್ ಆಫ್‌ ಅವಧಿ’ ನಿಯಮದ ಕಾರಣ ಅವರು ಇನ್ನು ಎಂಟು ತಿಂಗಳು ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮೂರು ವರ್ಷ ಅವರು ಕ್ರಿಕೆಟ್‌ ಆಡಳಿತದಲ್ಲಿ ಪದಾಧಿಕಾರಿಯಾಗುವಂತಿಲ್ಲ. ಆದ್ದರಿಂದ ತಮಗಿರುವ ಕಡಿಮೆ ಅವಧಿಯಲ್ಲಿ ಹೆಜ್ಜೆಗುರುತು ಮೂಡಿಸಲು ಪಿಂಕ್‌ ಟೆಸ್ಟ್ ಆಯೋಜನೆಯನ್ನು ಅದ್ಧೂರಿಯಾಗಿ ಮಾಡಿದರು. ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗೂಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತುಗಳು ಕೇಳಿಬರುತ್ತಿವೆ. ಅದಕ್ಕಾಗಿ ಈ ಪಂದ್ಯದ ಜನಪ್ರಿಯತೆಯೂ ಅವರಿಗೆ ನೆರವಾಗಬಹುದು.

‘ಪಿಂಕ್ ಟೆಸ್ಟ್ ಕೇವಲ ಕೋಲ್ಕತ್ತಕ್ಕೆ ಸೀಮಿತವಲ್ಲ, ದೇಶದ ಎಲ್ಲ ಕಡೆಯೂ ಆಡಿಸಬೇಕು’ ಎಂದು ಹೇಳುವ ಮೂಲಕ ಗಂಗೂಲಿ ಮತ್ತೊಂದು ಹೆಜ್ಜೆ ಇಡಲು ಸಿದ್ಧರಾಗಿದ್ದಾರೆ. ಚುಟುಕು ಕ್ರಿಕೆಟ್‌ ಭರಾಟೆಯಲ್ಲಿ ಟೆಸ್ಟ್‌ ಮಂಕಾಗಬಾರದು. ಆಟಗಾರರ ನಿಜವಾದ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಈ ಮಾದರಿಯತ್ತ ಯುವಪೀಳಿಗೆಯನ್ನು ಸೆಳೆಯಲು ಪಿಂಕ್ ಟೆಸ್ಟ್ ಪ್ರಯೋಗ ಮಹತ್ವದ್ದು. ಮುಸ್ಸಂಜೆಯಲ್ಲಿ ಹೆಚ್ಚು ಜನರನ್ನು ಕ್ರೀಡಾಂಗಣಕ್ಕೆ ಸೆಳೆಯುವ ಉದ್ದೇಶ ಆಯೋಜಕರದ್ದಾಗಿದೆ. ಆದರೆ ನಿಗದಿಯ ಓವರ್‌ಗಳ ಮಾದರಿಯಲ್ಲಿ ತಾಂಡವವಾಡುತ್ತಿರುವ ಮೋಸದಾಟದ ಕಳಂಕವು ಟೆಸ್ಟ್ ಅಂಗಳಕ್ಕೆ ಕಾಲಿಡದಂತೆ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT