ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ವಿಭಜನೆಯ ಯತ್ನ ನಿಲ್ಲಿಸಿ; ಸಾಮರಸ್ಯಕ್ಕೆ ಒತ್ತು ನೀಡಿ

Last Updated 26 ಮೇ 2022, 18:54 IST
ಅಕ್ಷರ ಗಾತ್ರ

ದೇಶದ ವಿವಿಧ ಕಡೆಗಳಲ್ಲಿ ಪ್ರಾರ್ಥನಾ ಸ್ಥಳಗಳ ವಿಚಾರದಲ್ಲಿ ವಿವಾದಗಳನ್ನು ಸೃಷ್ಟಿಸಲು ನಡೆಯುತ್ತಿರುವ ಪ್ರಯತ್ನಗಳು ಸಾಮಾಜಿಕ ಹಾಗೂ ರಾಜಕೀಯ ವಿಭಜನೆಯ ಉದ್ದೇಶ ಹೊಂದಿವೆ. ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡುವ ಉದ್ದೇಶವೂ ಇಂತಹ ಯತ್ನಗಳ ಹಿಂದೆ ಇದೆ. ದೇಶದ ಧರ್ಮನಿರಪೇಕ್ಷ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಉದ್ದೇಶವೂ ಇದೆ.

ಧರ್ಮನಿರಪೇಕ್ಷ ತತ್ವವು ನಮ್ಮ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು ಎಂಬುದನ್ನು ಮರೆಯಬಾರದು. ಈ ಎಲ್ಲ ಯತ್ನಗಳು 1991ರ ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯೂ ಹೌದು. ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು 1947ರ ಆಗಸ್ಟ್‌ 15ರಂದು ಹೇಗಿತ್ತೋ ಆ ರೀತಿಯಲ್ಲಿಯೇ ಅದನ್ನು ಕಾಯ್ದುಕೊಂಡು ಹೋಗುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಆ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದನ್ನು ಈ ಕಾಯ್ದೆಯು ನಿಷೇಧಿಸಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿನ ಶ್ರದ್ಧಾ ಕೇಂದ್ರಗಳಿಗೆ ಸಂಬಂಧಿಸಿದಂತೆ ಈಗ ಅಭಿಯಾನ ನಡೆದಿದೆ. ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಕೋಮು ವಿಷದಿಂದ, ಇತಿಹಾಸದ ತಿರುಚುವಿಕೆಯಿಂದ ಮತ್ತು ಕಾನೂನನ್ನು ತಪ್ಪಾಗಿ ಅರ್ಥೈಸುವುದರಿಂದ ವಾತಾವರಣ ಕಲುಷಿತವಾಗಿರುವ ಹೊತ್ತಿನಲ್ಲಿ ಕೆಲವು ಬೇಡಿಕೆಗಳ ವಿಚಾರವಾಗಿ ನ್ಯಾಯ ನಿರ್ಣಯ ಪ್ರಕ್ರಿಯೆಯೂ ಶುರುವಾಗಿದೆ.

ಬಾಬರಿ ಮಸೀದಿ ಹೊರತುಪಡಿಸಿ ಇತರ ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವು 1947ರ ಆಗಸ್ಟ್‌ 15ರಂದು ಯಾವ ಬಗೆಯಲ್ಲಿ ಇತ್ತೋ, ಅದನ್ನೇ ಮುಂದುವರಿಸಲು ತೀರ್ಮಾನಿಸುವ ಮೂಲಕ ‘ಪೂಜಾ ಸ್ಥಳಗಳ ಕಾಯ್ದೆ’ಯು ಇಂತಹ ವಿಭಜನಕಾರಿ ವಿವಾದಗಳನ್ನು ಕೊನೆಗೊಳಿಸಲು ಬಯಸಿತ್ತು. ಈ ಕಾಯ್ದೆಯು ಈ ನೆಲದ ಕಾನೂನು. ಈಗ ವಿವಾದದ ಕೇಂದ್ರ ಆಗಿರುವ ಸ್ಥಳಗಳೂ ಸೇರಿದಂತೆ ಹಿಂದುತ್ವವಾದಿ ಸಂಘಟನೆಗಳು ಈಗ ತಮ್ಮದು ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಸ್ಥಳಗಳಿಗೂ ಇದು ಅನ್ವಯವಾಗುತ್ತದೆ. ಬಾಬರಿ ಮಸೀದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2019ರ ತೀರ್ಪಿನಲ್ಲಿ ಈ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ.

ಮಸೀದಿಯನ್ನು ಧ್ವಂಸಗೊಳಿಸಿದ್ದನ್ನು ನ್ಯಾಯಾಲಯವು ಕ್ರಿಮಿನಲ್ ಅಪರಾಧಎಂದು ಕರೆದಿದೆ. ‘ಈ ಕಾಯ್ದೆಯನ್ನು ರೂಪಿಸುವ ಮೂಲಕ ಸರ್ಕಾರವು ದೇಶದ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದಾಗಿರುವ ಧರ್ಮನಿರಪೇಕ್ಷತೆ, ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದನ್ನು ಎತ್ತಿಹಿಡಿಯುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಕ್ರಿಯಾರೂಪಕ್ಕೆ ತಂದಿದೆ, ಸಾಂವಿಧಾನಿಕ ಬದ್ಧತೆಯೊಂದನ್ನು ಜಾರಿಗೊಳಿಸಿದೆ’ ಎಂದು ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

ಈಗ ನಡೆದಿರುವ ಪ್ರಯತ್ನಗಳು ಕೋಮು ದ್ವೇಷದಿಂದ ಪ್ರೇರಿತವಾಗಿವೆ. ದೇಶದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆ ಕೊಡಬೇಕು, ಅವರನ್ನು ಅವಮಾನಿಸಬೇಕು ಎಂಬ ಬಯಕೆಯನ್ನು ಹೊಂದಿವೆ. ಅಲ್ಪಸಂಖ್ಯಾತ ಸಮುದಾಯವನ್ನು ಅಂಕೆಯಲ್ಲಿ ಇಟ್ಟುಕೊಳ್ಳಬೇಕು ಹಾಗೂ ಆ ಸಮುದಾಯವನ್ನು ಮುಖ್ಯವಾಹಿನಿಯಿಂದ ಹೊರಗೆ ಇರಿಸಬೇಕು ಎನ್ನುವ ಉದ್ದೇಶ ಹೊಂದಿವೆ. ವರ್ತಮಾನದಲ್ಲಿ ನಿಂತು ಇತಿಹಾಸವನ್ನು ಬದಲಾಯಿಸಲು ಹೊರಡುವುದು ತಪ್ಪು. ಹಿಂದೆ ನಡೆದ ಅತಿರೇಕದ ವರ್ತನೆಗಳನ್ನು ಈಗ ಮತ್ತೆ ಅದೇ ಬಗೆಯ ಅತಿರೇಕಗಳ ಮೂಲಕ ಸರಿಪಡಿಸಲು ಆಗದು. ಇತಿಹಾಸದಲ್ಲಿ ಹತ್ತು ಹಲವು ತಪ್ಪುಗಳು ಆಗಿರಬಹುದು. ಅವುಗಳನ್ನು ವರ್ತಮಾನದಲ್ಲಿ ಸರಿಪಡಿಸಲು ಆಗುವುದಿಲ್ಲ. ಇತಿಹಾಸದ ತಪ್ಪುಗಳನ್ನು ಕಂಡು ಪಾಠ ಕಲಿಯಬೇಕು, ಅವುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಈಗ ನಡೆದಿರುವ ವಿಷಕಾರಿ ಅಭಿಯಾನದ ಬಗ್ಗೆ ಸರ್ಕಾರವು ಏನನ್ನೂ ಹೇಳಿಲ್ಲ. ಆದರೆ ಈ ಅಭಿಯಾನಕ್ಕೆ ಬಿಜೆಪಿಯ ಕೆಲವು ಮುಖಂಡರು ನೀಡಿರುವ ಬೆಂಬಲವನ್ನು ಗಮನಿಸಿ ಸರ್ಕಾರದ ನಿಲುವು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಈಗಿನ ಕಾನೂನನ್ನು ಎತ್ತಿಹಿಡಿಯಬೇಕಾದ ಹೊಣೆಗಾರಿಕೆಯು ಸರ್ಕಾರದ ಮೇಲೆ ಇದೆ. ಆ ಹೊಣೆಯಿಂದ ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಒಂದು ವೇಳೆ ಕಾನೂನಿಗೆ ತಿದ್ದುಪಡಿ ತರಲು ಮುಂದಾದರೆ ಅಂತಹ ನಡೆಯು ದೇಶದ ಸಂವಿಧಾನದ ಅತಿಮುಖ್ಯ ಭಾಗವೊಂದನ್ನು ದುರ್ಬಲಗೊಳಿಸಿದಂತೆ ಆಗುತ್ತದೆ ಎಂಬ ಎಚ್ಚರ ಸರ್ಕಾರಕ್ಕೆ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT