ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಸ್ತ್ರವಾಗಿ ಪಿಎಂಎಲ್‌ಎ ಬಳಕೆ– ಇ.ಡಿ ನಡವಳಿಕೆ ಕಳವಳಕಾರಿ

Published 18 ಮೇ 2023, 20:36 IST
Last Updated 18 ಮೇ 2023, 20:36 IST
ಅಕ್ಷರ ಗಾತ್ರ

ಭೀತಿಯ ವಾತಾವರಣ ಸೃಷ್ಟಿಸಬಾರದು ಎಂದು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯು ಅತ್ಯಂತ ಅಗತ್ಯವಾದುದೇ ಆಗಿತ್ತು. ಜೊತೆಗೆ, ಇದು ಸಮಂಜಸವಾದ ಬುದ್ಧಿವಾದವೂ ಹೌದು. ಏಕೆಂದರೆ, ಈ ಸಂಸ್ಥೆಯು ದೇಶದಲ್ಲಿ ‘ಅಂಕೆ ಮೀರಿ’ ವರ್ತಿಸುತ್ತಿದೆ. ಆಡಳಿತಾರೂಢ ಪಕ್ಷದ ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಸರ್ಕಾರದ ಟೀಕಾಕಾರರನ್ನೇ ಇ.ಡಿ ಗುರಿ ಮಾಡಿಕೊಳ್ಳುತ್ತಿದೆ ಎಂಬುದು ಹೊಸ ಆರೋಪವೇನೂ ಅಲ್ಲ. ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕವಂತೂ ಈ ಆರೋಪ ಹೆಚ್ಚು ವ್ಯಾಪಕವಾಗಿ ಕೇಳಿಸುತ್ತಿದೆ; ಇದು ವೃಥಾ ಆರೋಪವೇನೂ ಅಲ್ಲ ಎಂಬ ಭಾವನೆಯೂ ಮೂಡಿದೆ. ಛತ್ತೀಸಗಢ ಸರ್ಕಾರವು ಸಲ್ಲಿಸಿದ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಇ.ಡಿಗೆ ಬುದ್ಧಿವಾದ ಹೇಳಿದೆ. ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರನ್ನು, ರಾಜ್ಯದಲ್ಲಿ ನಡೆದಿದೆ ಎನ್ನಲಾದ ₹ 2,000 ಕೋಟಿ ಮೊತ್ತದ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿಸಲು ಇ.ಡಿ ಯತ್ನಿಸುತ್ತಿದೆ ಎಂದು ಸರ್ಕಾರದ ಅರ್ಜಿಯಲ್ಲಿ ವಾದಿಸಲಾಗಿದೆ. ತನ್ನ ರಾಜಕೀಯ ಮಾಲೀಕರ ಕುಮ್ಮಕ್ಕಿನಂತೆ ಕೆಲಸ ಮಾಡುತ್ತಿರುವ ಇ.ಡಿಯ ತನಿಖೆಯು ಸಂಪೂರ್ಣ ಪೂರ್ವಗ್ರಹಪೀಡಿತವಾಗಿದೆ, ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸುವುದೇ ಇದರ ಉದ್ದೇಶ ಎಂದು ಛತ್ತೀಸಗಢದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರವು ಹೇಳಿದೆ.

ಸಂವಿಧಾನದ 131ನೇ ವಿಧಿಯಲ್ಲಿರುವ ಅವಕಾಶವನ್ನು ಬಳಸಿಕೊಂಡು ಛತ್ತೀಸಗಢ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವೊಂದರ ಜೊತೆಗೆ ವಿವಾದ ಏರ್ಪ‍ಟ್ಟಾಗ ನೇರವಾಗಿ ನ್ಯಾಯಾಲಯಕ್ಕೆ ಹೋಗಲು ಸಂವಿಧಾನದ 131ನೇ ವಿಧಿಯು ಅವಕಾಶ ಕಲ್ಪಿಸಿದೆ. ಈ ವಿಧಿಯ ಅನುಸಾರ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕೆಲವು ಅಂಶಗಳನ್ನು ಛತ್ತೀಸಗಢ ಸರ್ಕಾರವು ಪ್ರಶ್ನಿಸಿದೆ. ಈ ಕಾಯ್ದೆಯನ್ನು ಇ.ಡಿ ಅಸ್ತ್ರದಂತೆ ಬಳಸುತ್ತಿದೆ, ರಾಜಕೀಯ ಕಾರಣಗಳಿಗೆ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೆಹಲಿ ಮತ್ತು ಪಂಜಾಬ್‌ನಲ್ಲಿರುವ ಎಎಪಿ ನೇತೃತ್ವದ ಸರ್ಕಾರಗಳು, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ, ಕೇರಳದ ಎಡರಂಗ ನೇತೃತ್ವದ ಸರ್ಕಾರ ಆರೋಪಿಸಿವೆ. ಪಿಎಂಎಲ್‌ಎಯಲ್ಲಿ ಇರುವ ಕೆಲವು ಕಠಿಣ ಅವಕಾಶಗಳನ್ನು ಬಳಸಿದರೆ ಜಾಮೀನು ದೊರೆಯುವುದು ಅಸಾಧ್ಯ ಎನ್ನುವಷ್ಟು ಕಷ್ಟ. ಈ ಕಾಯ್ದೆ ಮತ್ತು ಇ.ಡಿ ಇರುವುದೇ ಕಿರುಕುಳ ನೀಡುವುದಕ್ಕಾಗಿ ಎಂಬ ವಾದಕ್ಕೆ ಈ ಅಂಶವು ಪುಷ್ಟಿ ಕೊಡುತ್ತದೆ. ಇ.ಡಿ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರಿಗೆ ಮೂರನೇ ಬಾರಿಗೆ ಸೇವಾ ಅವಧಿ ವಿಸ್ತರಣೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ತರಾಟೆಗೆ ತೆಗೆದುಕೊಂಡಿತ್ತು. ಯಾವ ಕಾರಣದಿಂದಾಗಿ ಅವರು ‘ಇಷ್ಟೊಂದು ಅನಿವಾರ್ಯ’ ಎನಿಸಿಕೊಂಡಿದ್ದಾರೆ ಎಂದು ಕೋರ್ಟ್ ಪ್ರಶ್ನಿಸಿತ್ತು. ಮಿಶ್ರಾ ಅವರು ನವೆಂಬರ್‌ ನಂತರ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಕೋರ್ಟ್‌ಗೆ ಸರ್ಕಾರವು ಹೇಳಿತ್ತು. ಪಿಎಂಎಲ್‌ಎ ಅಡಿಯಲ್ಲಿ ಇ.ಡಿ ಹೊಂದಿರುವ ಅಧಿಕಾರಗಳನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. 

ಇ.ಡಿ ತನಿಖೆ ನಡೆಸುತ್ತಿರುವ ಎಲ್ಲ ಪ್ರಕರಣಗಳೂ ರಾಜಕೀಯಪ್ರೇರಿತ ಎಂಬ ಭಾವನೆ ಬಂದುಬಿಟ್ಟರೆ, ಈ ಸಂಸ್ಥೆ ನಡೆಸುವ ಕ್ರಮಬದ್ಧವಾದ ತನಿಖೆಯ ಮೇಲೂ ಅನುಮಾನ ಮೂಡುತ್ತದೆ ಎಂದು ಕೋರ್ಟ್ ಹೇಳಿದೆ. ಇದು ಅತ್ಯಂತ ಮಹತ್ವದ ವಿಚಾರವಾಗಿದೆ. ಏಕೆಂದರೆ, ಭ್ರಷ್ಟ ಮತ್ತು ನಿಜವಾಗಿಯೂ ಅಪರಾಧ ಎಸಗಿದ ಜನರು ಇ.ಡಿ ತಮಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿ, ತಾವೇ ಸಂತ್ರಸ್ತರು ಎಂದು ಬಿಂಬಿಸಿಕೊಳ್ಳಬಹುದು. ರಾಷ್ಟ್ರಮಟ್ಟದ ತನಿಖಾ ಸಂಸ್ಥೆಗಳು ರಾಷ್ಟ್ರಕ್ಕೆ ಬೇಕಾಗಿರುವ ವಿಚಾರಗಳಿಗಾಗಿ ಕೆಲಸ ಮಾಡಬೇಕೇ ವಿನಾ ಆಡಳಿತಾರೂಢ ಪಕ್ಷದ ರಾಜಕೀಯ ಗುರಿಗಳನ್ನು ಈಡೇರಿಸುವುದಕ್ಕೆ ಅಲ್ಲ. ಸಿಬಿಐ, ಇ.ಡಿಯಂತಹ ಸಂಸ್ಥೆಗಳು ತಾರತಮ್ಯದಿಂದ ಕೆಲಸ ಮಾಡಲೇಬಾರದು. ಒಂದು ಸಾರಿ ಕಳೆದುಹೋದರೆ, ಈ ಸಂಸ್ಥೆಗಳ ಕಾರ್ಯಾಚರಣೆ ಶೈಲಿ ಮತ್ತು ವಿಶ್ವಾಸಾರ್ಹತೆಯನ್ನು ಮರಳಿ ಪಡೆಯವುದು ಬಹಳ ಕಷ್ಟದ ಕೆಲಸ. ಈ ಸಂಸ್ಥೆಗಳು ಜನರ ನಂಬಿಕೆಯನ್ನು ಈಗಾಗಲೇ ಕಳೆದುಕೊಂಡಿವೆ. ಹಾಗಾಗಿಯೇ ನ್ಯಾಯಾಲಯವು ಹೇಳಿದ ಬುದ್ಧಿಮಾತು ಈ ಸಂದರ್ಭದಲ್ಲಿ ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT