ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಒಪ್ಪಿಗೆಯ ವಯೋಮಿತಿ: ಹೈಕೋರ್ಟ್‌ ಸಲಹೆ ಕುರಿತು ಗಂಭೀರ ಚಿಂತನೆ ಅಗತ್ಯ

Last Updated 10 ನವೆಂಬರ್ 2022, 19:45 IST
ಅಕ್ಷರ ಗಾತ್ರ

‘ಲೈಂಗಿಕ ಸಂಪರ್ಕದ ಕುರಿತಂತೆಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಲ್ಲಿ ಹೇಳಿರುವ ‘ಒಪ್ಪಿಗೆಯ ವಯೋಮಿತಿ’ ನಿಯಮದ ಬಗ್ಗೆಮರುಚಿಂತನೆ ನಡೆಸಬೇಕು’ ಎಂದು ರಾಜ್ಯ ಹೈಕೋರ್ಟ್‌, ಕೇಂದ್ರ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿದೆ. ಹದಿನಾರು ವರ್ಷ ದಾಟಿದ (ಆದರೆ, ಹದಿನೆಂಟು ವರ್ಷಕ್ಕಿಂತ ಕಡಿಮೆ ಪ್ರಾಯದ) ಬಾಲಕಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಮನೆಬಿಟ್ಟು ಹೋಗುವ ಮತ್ತು ಲೈಂಗಿಕ ಸಂಪರ್ಕ ಹೊಂದುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ನ್ಯಾಯಪೀಠವು, ವಾಸ್ತವ ಸಂಗತಿಗಳ ಆಧಾರದಲ್ಲಿ ‘ಒಪ್ಪಿಗೆಯ ವಯೋಮಿತಿ’ ನಿಯಮದ ಕುರಿತು ಮರುಪರಿಶೀಲನೆಯನ್ನು ನಡೆಸಬೇಕು ಎಂದೂ ಆದೇಶಿಸಿದೆ. ದೇಶದ ಯಾವುದೇ ಕಾಯ್ದೆಯು ನ್ಯಾಯದಾನದ ಮೂಲತತ್ವಕ್ಕೆ ಬದ್ಧವಾಗಿರಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಅದೇ ಸಂದರ್ಭದಲ್ಲಿ, ನೆಲದ ವಾಸ್ತವವನ್ನು ಅರಿತುಕೊಂಡು, ಕಾಲಕ್ಕೆ ಅನುಗುಣವಾಗಿ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬ ಮಾತನ್ನೂ ಅಲ್ಲಗಳೆಯುವಂತಿಲ್ಲ. ಈ ದಿಸೆಯಲ್ಲಿ, ಹದಿನಾರು ವರ್ಷ ದಾಟಿದ ಬಾಲಕಿಯೊಂದಿಗೆ, ಅವಳ ಸಮ್ಮತಿಯಿಂದಲೇ ಲೈಂಗಿಕ ಸಂಪರ್ಕ ನಡೆದರೂ ಪೋಕ್ಸೊ ಕಾಯ್ದೆಯಡಿಯಲ್ಲಿ ಅದನ್ನು ಅಪರಾಧ ಎಂದು ಪರಿಗಣಿಸುತ್ತಿರುವ ಕುರಿತು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.

ಲೈಂಗಿಕ ಕಿರುಕುಳದಿಂದ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಾಗಿಯೇ ಪೋಕ್ಸೊ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಮತ್ತು ಲೈಂಗಿಕ ಸಂಪರ್ಕದ ‘ಒಪ್ಪಿಗೆಯ ವಯೋಮಿತಿ’ಯನ್ನು ಆ ಸಮಯದಲ್ಲಿಯೇ 16 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೆ, ಕೋರ್ಟ್‌ಗೆ ವಿಚಾರಣೆಗಾಗಿ ಬರುತ್ತಿರುವ ಹಲವು ಪ್ರಕರಣಗಳಲ್ಲಿ ಹದಿನಾರು ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಬಾಲಕಿಯರು, ಮದುವೆಯಾಗುವ ಹಾಗೂ ಪ್ರಣಯದಲ್ಲಿ ತೊಡಗುವ ಸ್ವ–ಇಚ್ಛೆಯಿಂದಲೇ ಮನೆಯಿಂದ ಹೋಗಿರುವುದು ಎದ್ದು ಕಂಡಿದೆ. ಇಂತಹ ಬಹುತೇಕ ಸಂದರ್ಭಗಳಲ್ಲಿ ಬಾಲಕಿಯ ಪಾಲಕರಿಂದ ಅವಳ ಪ್ರಿಯತಮನ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದೊಮ್ಮೆ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಏರ್ಪಟ್ಟಿರುವುದು ಸಾಬೀತಾದರೆ ಪೋಕ್ಸೊ ಕಾಯ್ದೆಯಡಿ ಹುಡುಗನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಆ ಹುಡುಗನೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನು ಆಗಿರಬಹುದು ಇಲ್ಲವೇ ಮದುವೆಗೆ ಕಾನೂನುಬದ್ಧ ವಯೋಮಿತಿಯನ್ನು (21 ವರ್ಷ) ಇನ್ನೂ ದಾಟಿಲ್ಲದೇ ಇರಬಹುದು. ಈ ವಯಸ್ಸಿನಲ್ಲಿ ಕಾನೂನು ಕ್ರಮಕ್ಕೆ ಗುರಿಯಾಗುವುದರ ಪರಿಣಾಮಗಳು ಜೀವನದ ಗತಿಯನ್ನೇ ಬದಲಾಯಿಸ ಬಲ್ಲವು. ಹುಡುಗನು ಕ್ರಿಮಿನಲ್‌ ಪ್ರಕರಣ ಎದುರಿಸು ವಂತಾದರೆ, ಹುಡುಗಿಯ ಪಾಲಕರು ಇಂತಹ ಸಂಬಂಧವನ್ನು ವಿರೋಧಿಸುವ ಕಾರಣ, ಆಕೆ ಸರ್ಕಾರಿ ಸಂಸ್ಥೆಗಳಲ್ಲಿ ಆಶ್ರಯವನ್ನು ಪಡೆಯಬೇಕಾಗುತ್ತದೆ. ಇಬ್ಬರ ಜೀವನವನ್ನೂ ಇಂತಹ ಪ್ರಕರಣಗಳು ಹಾಳು ಮಾಡುತ್ತವೆ ಮತ್ತು ಎರಡೂ ಕುಟುಂಬಗಳು ಕಾನೂನು ಹೋರಾಟದಲ್ಲಿ ಹೈರಾಣಾಗುತ್ತವೆ ಎಂದು ತಜ್ಞರು ಹೇಳುವುದರಲ್ಲಿಯೂ ಅರ್ಥವಿದೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಅಪಾಯ ಹೆಚ್ಚು ಮತ್ತು ಅವರು ಲೈಂಗಿಕವಾಗಿ ಶೋಷಣೆಗೆ ಒಳಗಾಗದಂತೆ ಸಾಧ್ಯವಾದ ಎಲ್ಲ ಬಗೆಯಲ್ಲೂ ನಿಗಾ ವಹಿಸಬೇಕು. ಅದನ್ನು ಸಾಧ್ಯವಾಗಿಸಲು ಕಾನೂನಿನ ಹಿಡಿತ ಬಿಗಿಯಾದಷ್ಟೂ ಒಳ್ಳೆಯದು. ಆದಾಗ್ಯೂ, ಇಂತಹ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯ ಸಂದರ್ಭದಲ್ಲಿ ಹದಿಹರೆಯದವರ ಆಕರ್ಷಣೆಯ ನೈಜತೆ ಮತ್ತು ಲೈಂಗಿಕ ಸಂಪರ್ಕ ಹೊಂದುವಾಗ ಹದಿನಾರು ವರ್ಷಕ್ಕಿಂತ ಹೆಚ್ಚಿನ ವಯೋಮಾನದವರ ಪರಸ್ಪರ ಸಮ್ಮತಿ– ಎರಡನ್ನೂ ಗಣನೆಗೆ ತೆಗೆದುಕೊಳ್ಳಬೇಕು. ‘ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದಲೇ ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ ಪೋಕ್ಸೊ ಕಾಯ್ದೆಯ ನಿಯಮಗಳ ಬಗ್ಗೆ ಶಿಕ್ಷಣ ನೀಡಬೇಕು. ಐಪಿಸಿ ಮತ್ತು ಪೋಕ್ಸೊ ಕಾಯ್ದೆ ಉಲ್ಲಂಘನೆ ಮಾಡುವುದರಿಂದ ಎಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು’ ಎಂದು ನ್ಯಾಯಪೀಠ ನೀಡಿರುವ ಸೂಚನೆಯನ್ನು ಸರ್ಕಾರ ತ್ವರಿತವಾಗಿ ಪಾಲಿಸಬೇಕು. ಹೀಗೆ ಮಕ್ಕಳಲ್ಲಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಿದೆ. ಹಾಗೆಯೇ, ಪೋಕ್ಸೊ ಕಾಯ್ದೆಯು ಒಂದಿನಿತೂ ಅಳ್ಳಕಗೊಳ್ಳದಂತೆ ಲೈಂಗಿಕ ಸಂಪರ್ಕದ ‘ಒಪ್ಪಿಗೆಯ ವಯೋಮಿತಿ’ಯನ್ನು, ಕೋರ್ಟ್‌ ನಿರ್ದೇಶನದಂತೆ, ಹದಿನೆಂಟು ವರ್ಷದಿಂದ ಹದಿನಾರು ವರ್ಷಕ್ಕೆ ಇಳಿಸುವ ದಿಸೆಯಲ್ಲಿ ಕಾನೂನು ಆಯೋಗ ಸಹ ಗಂಭೀರವಾಗಿ ಆಲೋಚಿಸುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT