ಸೋಮವಾರ, ನವೆಂಬರ್ 18, 2019
25 °C

ಸಂಪಾದಕೀಯ | ಪೊಲೀಸರ ಸಂಬಳ ಹೆಚ್ಚಿದಂತೆ ಸದ್ವರ್ತನೆಯೂ ಹೆಚ್ಚಾಗಲಿ

Published:
Updated:
Prajavani

ವೇತನ ಶ್ರೇಣಿ ಪರಿಷ್ಕರಣೆ ಉಪಕ್ರಮವು ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಿ, ದಕ್ಷತೆಯಿಂದ ಕೆಲಸ ನಿರ್ವಹಿಸಲು ಪ್ರೇರಣೆಯಾಗಲಿ

ಪೊಲೀಸರ ವೇತನ ಶ್ರೇಣಿ ಪರಿಷ್ಕರಣೆ ಕುರಿತು ಇದ್ದ ಗೊಂದಲಗಳೆಲ್ಲ ನಿವಾರಣೆಯಾಗಿದ್ದು, ರಾಘವೇಂದ್ರ ಔರಾದಕರ ಸಮಿತಿ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರ ಕೊನೆಗೂ ಆದೇಶ ಹೊರಡಿಸಿದೆ. ದಸರಾ ಹಬ್ಬದ ವೇಳೆ ಔರಾದಕರ ವರದಿ ಜಾರಿಯಾಗುವುದೆಂಬ ಭರವಸೆ ಹುಸಿಯಾದ ಹಿನ್ನೆಲೆಯಲ್ಲಿ ನಿರಾಶೆಯಿಂದಿದ್ದ ಪೊಲೀಸರು, ಈಗ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಡ್ಡಿಯಿಲ್ಲ.

ಹೊಸ ವೇತನ ಶ್ರೇಣಿಯು ಆಗಸ್ಟ್‌ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೊಳ್ಳಲಿರುವುದೂ ಪೊಲೀಸರ ಸಂತಸ ಹೆಚ್ಚಿಸಿದೆ. ಪೊಲೀಸರ ವೇತನ ಪರಿಷ್ಕರಣೆ ಮಾಡಬೇಕೆಂಬ ಒತ್ತಾಯ ಏಳೆಂಟು ವರ್ಷಗಳ ಹಿಂದಿನಿಂದಲೇ ಇತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಹಿರಿಯ ಪೊಲೀಸ್‌ ಅಧಿಕಾರಿ ಔರಾದಕರ ಸಮಿತಿಯನ್ನು 2016ರ ಜೂನ್‌ನಲ್ಲಿ ರಚಿಸಲಾಗಿತ್ತು. ಈ ಸಮಿತಿ ವರದಿ ಸಲ್ಲಿಸಿದ ಬಳಿಕ ಅದರಲ್ಲಿ ಅಗ್ನಿಶಾಮಕದಳ ಮತ್ತು ಕಾರಾಗೃಹ ಸಿಬ್ಬಂದಿಯ ವೇತನ ಪರಿಷ್ಕರಣೆ ಒಳಗೊಂಡಿಲ್ಲ ಎನ್ನುವ ಅಪಸ್ವರ ಕೇಳಿಬಂದಿತ್ತು. ಅವರ ವೇತನವನ್ನೂ ಪರಿಷ್ಕರಿಸಿ ವರದಿ ನೀಡಬೇಕೆಂದು ಸರ್ಕಾರ ಮತ್ತೆ ಆದೇಶ ಹೊರಡಿಸಿತು.

ಇದನ್ನೂ ಓದಿ: ಸೌಜನ್ಯದ ಪಾಠ ಕಲಿಯಲಿ

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಕೊನೆಯ ದಿನಗಳಲ್ಲಿ ಔರಾದಕರ ಸಮಿತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಪ್ರಕಟಿಸಲಾಯಿತು. ಆದರೆ ಶೇ 30ರಷ್ಟು ವೇತನ ಏರಿಕೆಯ ಬದಲಿಗೆ ಶೇ 12.5ರಷ್ಟು ವೇತನ ಏರಿಕೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು. ಹಾಗಿದ್ದೂ ವರದಿ ಜಾರಿಗೆ ಸರ್ಕಾರದಿಂದ ಆದೇಶ ಹೊರಬಿದ್ದಿರಲಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವರದಿ ಜಾರಿಗೊಳಿಸಿ ಆದೇಶ ಹೊರಡಿಸಬೇಕೆಂಬ ಒತ್ತಾಯ ನಡೆದೇ ಇತ್ತು. ಮೊದಲು ಹಿಂದೆ ಮುಂದೆ ನೋಡಿದ ಸರ್ಕಾರ, ಕೊನೆಗೂ ಪೊಲೀಸರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದೆ.

ಇದನ್ನೂ ಓದಿ: ಪೊಲೀಸರಲ್ಲಿ ಅಶಿಸ್ತು ಏಕೆ ಹೆಚ್ಚುತ್ತಿದೆ?

ಸರ್ಕಾರದ ಇತರ ಇಲಾಖೆಗಳ ನೌಕರರಿಗಿಂತ ಪೊಲೀಸರ ಕೆಲಸ ಹೆಚ್ಚು ಕಷ್ಟಕರ ಎನ್ನುವುದರಲ್ಲಿ ಎರಡು ಮಾತಿಲ್ಲ. ನೌಕರರು ತಮ್ಮ ಹಕ್ಕಿನ ರಜೆಗಳನ್ನು ಅನಾಯಾಸವಾಗಿ ತೆಗೆದುಕೊಳ್ಳಬಹುದು. ಆದರೆ, ಪೊಲೀಸರು ಕೆಲಸದ ಒತ್ತಡದಿಂದಾಗಿ ಎಷ್ಟೋ ಸಲ ವಾರದ ರಜೆಯನ್ನೂ ಸರಿಯಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಗಲಭೆ ಸಂದರ್ಭಗಳಲ್ಲಿ ಜೀವದ ಹಂಗನ್ನೂ ತೊರೆದು, ಬಿಡುವಿಲ್ಲದೆ ದಿನಗಟ್ಟಲೆ  ಕೆಲಸ ಮಾಡಬೇಕಾಗುತ್ತದೆ. ಸರ್ಕಾರಿ ನೌಕರರಿಗೆ ತಿಂಗಳ ನಾಲ್ಕನೇ ಶನಿವಾರವನ್ನು ರಜೆ ದಿನವಾಗಿ ಸರ್ಕಾರ ಘೋಷಿಸಿದೆ. ಇದು ಕೂಡ ಪೊಲೀಸರಿಗೆ ಅನ್ವಯವಾಗಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಪೊಲೀಸರಿಗೆ ಸ್ವಲ್ಪ ಹೆಚ್ಚೇ ಸಂಬಳ ಕೊಡುವುದರಲ್ಲಿ ತಪ್ಪೇನಿಲ್ಲ. ಅವರ ಬೇಡಿಕೆ ಈಡೇರಿದೆ. ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಿ, ದಕ್ಷತೆಯಿಂದ ಕೆಲಸ ನಿರ್ವಹಿಸಲು ಇದು ಪ್ರೇರಣೆ ಆಗಬೇಕು.

ಇದನ್ನೂ ಓದಿ: ಖಾಕಿ ಬಟ್ಟೆ ತೊಟ್ಟವರಲ್ಲಿ ಮಾನವೀಯತೆ ತೀರಾ ಅಪರೂಪ.

ಬಹುಪಾಲು ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಸದಭಿಪ್ರಾಯ ಇಲ್ಲ ಎನ್ನುವುದು ಗುಟ್ಟಿನ ಸಂಗತಿಯಲ್ಲ. ಸಾರ್ವಜನಿಕರ ಜೊತೆ ಒರಟಾಗಿ ವರ್ತಿಸುವುದು ಮತ್ತು ಲಂಚದ ಹಾವಳಿಯು ಪೊಲೀಸರ ವರ್ಚಸ್ಸನ್ನು ಹಾಳುಗೆಡವಿದೆ. ಅಂತಹ ವರ್ತನೆಯನ್ನು ನಿಯಂತ್ರಿಸಲು ಮತ್ತು ಸೌಜನ್ಯದ ನಡೆ ರೂಢಿಸಿಕೊಳ್ಳಲು ಇಲಾಖೆಯ ಉನ್ನತ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತರಬೇತಿ ಹಂತದಲ್ಲೇ ಹೊಸಬರಿಗೆ ಈ ಕುರಿತು ಮನೋವೈಜ್ಞಾನಿಕ ನೆಲೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಅದೇ ವೇಳೆ, ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಜೊತೆಗೆ ಮೇಲಧಿಕಾರಿಗಳು ಕೂಡ ಸೌಜನ್ಯದಿಂದ ವರ್ತಿಸುವುದನ್ನು ರೂಢಿಸಿಕೊಳ್ಳಬೇಕು. ಪೊಲೀಸ್‌ ಇಲಾಖೆಗೆ ಹೊಸ ವರ್ಚಸ್ಸು ನೀಡುವ ದಿಸೆಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಲು ಇದು ಸಕಾಲ.

ಪ್ರತಿಕ್ರಿಯಿಸಿ (+)