ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ನೇಹಿಯಾಗಲಿ ಪೊಲೀಸ್‌ ವ್ಯವಸ್ಥೆ ವೇತನ ಪರಿಷ್ಕರಣೆ ಸ್ವಾಗತಾರ್ಹ

Last Updated 19 ಜುಲೈ 2019, 20:00 IST
ಅಕ್ಷರ ಗಾತ್ರ

ಪೊಲೀಸ್ ಇಲಾಖೆಯಲ್ಲಿ ಕೆಳಹಂತದಿಂದ ಹಿಡಿದು ಎಸ್‌ಪಿ ದರ್ಜೆಯ (ಐಪಿಎಸ್‌ ಹೊರತುಪಡಿಸಿ) ಅಧಿಕಾರಿಗಳವರೆಗಿನ ಸಿಬ್ಬಂದಿ ವೇತನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹವಾದುದು. ಆಗಸ್ಟ್‌ ತಿಂಗಳಿನಿಂದಲೇ ಈ ತೀರ್ಮಾನ ಜಾರಿಗೆ ಬರಲಿರುವುದು ಪೊಲೀಸ್‌ ಕುಟುಂಬಗಳ ಪಾಲಿಗೆ ಖುಷಿಯ ಸಮಾಚಾರ. ವೇತನವನ್ನು ಪರಿಷ್ಕರಿಸಬೇಕು ಎನ್ನುವ ಪೊಲೀಸ್‌ ಸಿಬ್ಬಂದಿಯ ಬೇಡಿಕೆ ಹಲವು ವರ್ಷಗಳಷ್ಟು ಹಳೆಯದು. ಸರ್ಕಾರದ ಇತರ ಇಲಾಖೆಗಳ ನೌಕರರ ವೇತನ ಪರಿಷ್ಕರಣೆಯಾದರೂ ಪೊಲೀಸ್‌ ಸಿಬ್ಬಂದಿ ಮಾತ್ರ ಅದರಿಂದ ವಂಚಿತರಾಗಿದ್ದರು. ವೇತನ ತಾರತಮ್ಯದ ಕುರಿತು ದೂರುಗಳು ಹೆಚ್ಚಾಗಿದ್ದರಿಂದ ಸರ್ಕಾರವು ಹಿರಿಯ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದಕರ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಪೊಲೀಸರ ಸಂಬಳ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಇದರೊಟ್ಟಿಗೆ ಆರನೇ ವೇತನ ಆಯೋಗದ ಶಿಫಾರಸುಗಳನ್ನೂ ಗಣನೆಗೆ ತೆಗೆದುಕೊಂಡು ಸರ್ಕಾರ ಈಗ ನಿರ್ಧಾರ ಕೈಗೊಂಡಿದೆ. ಪೊಲೀಸರ ವೇತನ ಹೆಚ್ಚಳಕ್ಕೆ ಯಾರಿಂದಲೂ ವಿರೋಧ ಇಲ್ಲವಾದರೂ ಈ ತೀರ್ಮಾನವನ್ನು ಕೈಗೊಂಡ ಸಮಯದ ಔಚಿತ್ಯದ ಕುರಿತು ಪ್ರಶ್ನೆ ಏಳುತ್ತದೆ. ಏಕೆಂದರೆ, ರಾಜಕೀಯ ಬಿಕ್ಕಟ್ಟು ತೀವ್ರವಾದ ಸಂದರ್ಭದಲ್ಲಿ ವೇತನ ಪರಿಷ್ಕರಣೆಯ ಆದೇಶ ಹೊರಬಿದ್ದಿದೆ. ಆದೇಶದಲ್ಲಿ ಕೆಲವು ಗೊಂದಲಗಳು ಉಳಿದುಕೊಂಡಿವೆ ಎನ್ನುವ ದೂರುಗಳು ಸಹ ಕೇಳಿಬಂದಿವೆ. ಆ ಗೊಂದಲಗಳನ್ನು ದೂರಮಾಡುವ ಕಾರ್ಯ ಆಗಬೇಕಿದೆ. ಏನೇ ಆಗಲಿ, ಸಾಂಸ್ಥಿಕ ವ್ಯವಸ್ಥೆಯಲ್ಲಿ ಮೂಲದಿಂದಲೇ ಉಳಿದುಕೊಂಡಿರುವ ದೋಷ, ರಾಜಕೀಯಪ್ರೇರಿತ ವರ್ಗಾವಣೆ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಲ್ಲಿ ಸಿಲುಕಿ ಕಾರ್ಯಕ್ಷಮತೆಯನ್ನೇ ತಗ್ಗಿಸಿಕೊಂಡಿರುವ ಪೊಲೀಸ್‌ ವ್ಯವಸ್ಥೆಗೆ ಸಂಬಳ ಹೆಚ್ಚಳದ ನಿರ್ಧಾರ ಹೊಸ ಉತ್ಸಾಹವನ್ನು ತುಂಬಲಿದೆ. ಆದರೆ, ಸಮಸ್ಯೆಗಳ ಸುಳಿಯಿಂದ ಆ ವ್ಯವಸ್ಥೆಯನ್ನು ಮೇಲಕ್ಕೆತ್ತಲು ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಪೊಲೀಸರು ಜನಸ್ನೇಹಿ ಅಲ್ಲ, ಜನಸಾಮಾನ್ಯರ ದೂರುಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದು ಲಾಗಾಯ್ತಿನಿಂದಲೂ ಕೇಳಿಬರುತ್ತಿರುವ ಆರೋಪ. 150 ವರ್ಷಗಳಷ್ಟು ಹಿಂದಿನ, ಬ್ರಿಟಿಷ್‌ ‌ವ್ಯವಸ್ಥೆಯ ಪೊಲೀಸ್‌ ಕಾನೂನು ಈಗಿನ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಆಗದಿರುವುದೂ ಇದಕ್ಕೊಂದು ಕಾರಣ ಎನ್ನುವ ಅಭಿಪ್ರಾಯ ಇದೆ. ಪೊಲೀಸ್‌ ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಮನವರಿಕೆ ಆಗಿದ್ದರಿಂದಲೇ ಆ ಪಿಡುಗನ್ನು ತೊಡೆದುಹಾಕಲು ಪೊಲೀಸ್‌ ಸಿಬ್ಬಂದಿ ಮಂಡಳಿಯನ್ನು (ಪಿಇಬಿ) ಎಲ್ಲ ರಾಜ್ಯ ಸರ್ಕಾರಗಳೂ ರಚಿಸಬೇಕು ಎನ್ನುವ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ನೀಡಿತ್ತು. ನ್ಯಾಯಾಂಗ ನಿಂದನೆಯ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜ್ಯದಲ್ಲೂ ಪೊಲೀಸ್‌ ಸಿಬ್ಬಂದಿ ಮಂಡಳಿ ಅಸ್ತಿತ್ವಕ್ಕೆ ಬಂದರೂ ವರ್ಗಾವಣೆಯನ್ನು ಮಾತ್ರ ಬೇರೆ ‘ಮಂಡಳಿ’ಗಳೇ ಮಾಡುವುದು ಗುಟ್ಟಿನ ವಿಚಾರವಾಗಿಯೇನೂ ಉಳಿದಿಲ್ಲ. ಪ್ರತಿ ತಿಂಗಳು ‘ವಂತಿಗೆ’ ಪಡೆಯುವುದು, ಮನೆಯ ಸಮಾರಂಭಗಳನ್ನು ನಿಭಾಯಿಸಲು ಸೂಚಿಸುವುದು, ಕೇಸುಗಳನ್ನು ಕೈಬಿಡುವಂತೆ ಮಾಡುವುದು... ಹೀಗೆ ಹಲವು ರೀತಿಯಲ್ಲಿ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಇದೆ. ಕೆಲವು ಕಡೆ ಕೇಸು ದಾಖಲಾಗುವ ಮುನ್ನ ಶಾಸಕರ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ ಎಂದು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರೊಬ್ಬರು ಹೇಳಿದ್ದರು. ಇದರಲ್ಲಿ ತಥ್ಯ ಇಲ್ಲದಿಲ್ಲ. ಕಾಲದಿಂದ ಕಾಲಕ್ಕೆ ವಾಸ್ತವಾಂಶದ ಮೇಲೆ ರೂಪುಗೊಳ್ಳುವ ಪೊಲೀಸ್ ಸೇವಾ ದಾಖಲೆಗಳು, ರಾಜಕೀಯಪ್ರೇರಿತ ವರ್ಗಾವಣೆಯಿಂದಾಗಿ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ವ್ಯವಸ್ಥೆಗೆ ಬಲ ತುಂಬಲು ಈಗಿನ ಕಾಲಕ್ಕೆ ತಕ್ಕಂತೆ ಕಾನೂನನ್ನು ಬದಲಾಯಿಸುವುದಷ್ಟೇ ಅಲ್ಲದೆ, ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಜನರ ಜತೆ ಸೌಜನ್ಯದಿಂದ ನಡೆದುಕೊಳ್ಳುವ ಕುರಿತು ಪೊಲೀಸ್‌ ಸಿಬ್ಬಂದಿಗೆ ತರಬೇತಿಯನ್ನೂ ಕೊಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT