ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಸ್ವಚ್ಛ ಸರ್ವೇಕ್ಷಣೆಯಲ್ಲಿ ಕಳಪೆ ಸಾಧನೆ: ಆತ್ಮಾವಲೋಕನಕ್ಕೆ ಸಕಾಲ

Last Updated 24 ಆಗಸ್ಟ್ 2020, 20:15 IST
ಅಕ್ಷರ ಗಾತ್ರ

ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣೆ– 2020ರ ವರದಿ ಇದೀಗ ಬಿಡುಗಡೆಯಾಗಿದ್ದು, ದೇಶದ ‘ಸ್ವಚ್ಛ ರಾಜ್ಯಗಳ ಪಟ್ಟಿ’ಯಲ್ಲಿ ಕರ್ನಾಟಕ 21ನೇ ಸ್ಥಾನದಲ್ಲಿದೆ. ಆದರೆ, ದೇಶದ ಮಧ್ಯಮ ನಗರಗಳ ಪೈಕಿ ‘ಅತ್ಯಂತ ಸ್ವಚ್ಛ ನಗರ’ ಎಂಬ ಹಿರಿಮೆಗೆ ಮೈಸೂರು ಪಾತ್ರವಾಗಿದೆ. ರಾಮನಗರ, ಹುಣಸೂರು, ಕೆ.ಆರ್‌.ನಗರ, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ, ಕಡೂರು, ಹೊಳಲ್ಕೆರೆ ಹಾಗೂ ಜಾಲಿ ಪಟ್ಟಣವು ಕಸ ನಿರ್ವಹಣೆಯ ಬೇರೆ ಬೇರೆ ಮಾನದಂಡಗಳಲ್ಲಿ ಮೆಚ್ಚುಗೆಯನ್ನು ಗಳಿಸಿವೆ. ನೈರ್ಮಲ್ಯ ಕಾಪಾಡುವ ವಿಷಯದಲ್ಲಿ ಹಿಂದೆ ಉಳಿದಿದ್ದರೂ 40 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಬೆಂಗಳೂರು ‘ಸ್ವ–ಸುಸ್ಥಿರ ಮಹಾನಗರ’ ಎನಿಸಿಕೊಂಡಿದೆ. ಸ್ವಚ್ಛತೆಯ ದಾರಿಯಲ್ಲಿ ಪುಟ್ಟದಾದರೂ ಹೆಜ್ಜೆಯಿಟ್ಟ ಈ ಎಲ್ಲ ನಗರ–ಪಟ್ಟಣಗಳಲ್ಲಿನ ಸ್ಥಳೀಯ ಸಂಸ್ಥೆಗಳ ಯತ್ನ ಅಭಿನಂದನೀಯ. ನೈರ್ಮಲ್ಯದ ವಾತಾವರಣ ನಿರ್ಮಿಸುವತ್ತ ಅಲ್ಲೊಂದು, ಇಲ್ಲೊಂದು ಸಣ್ಣ ಸಣ್ಣ ಪ್ರಯತ್ನಗಳು ನಡೆಯುತ್ತಿದ್ದರೂ ಇಡಿಯಾಗಿ ರಾಜ್ಯದ ಸಾಧನೆ ಕಳಪೆಯಾಗಿದ್ದು, ಕಳವಳ ಮೂಡಿಸಿದೆ. ಕಸ ವಿಲೇವಾರಿ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಎರಡರಲ್ಲೂರಾಜ್ಯದ ವೈಫಲ್ಯ ಕಣ್ಣಿಗೆ ರಾಚುತ್ತಿದೆ. ಛತ್ತೀಸಗಡ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಕ್ಕೆ ಸ್ವಚ್ಛ ರಾಜ್ಯಗಳ ಪಟ್ಟಿಯಲ್ಲಿ ಅಗ್ರ ಕ್ರಮಾಂಕದ ಮೊದಲ ಮೂರು ಸ್ಥಾನಗಳನ್ನು ಪಡೆಯಲು ಸಾಧ್ಯ ಆಗುವುದಾದರೆ ಕರ್ನಾಟಕಕ್ಕೆ ಏಕೆ ಆಗಲಿಲ್ಲ? ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.

ನಗರಗಳನ್ನು ಸ್ವಚ್ಛವಾಗಿಡುವ ಪ್ರಾಥಮಿಕ ಹೊಣೆ ಸಂಬಂಧಿಸಿದ ನಗರ ಸ್ಥಳೀಯ ಆಡಳಿತಗಳದ್ದೇ ಆಗಿದ್ದರೂ ಅವುಗಳಿಗೆ ರಾಜ್ಯ ಸರ್ಕಾರದ ಸಹಕಾರ ಹಾಗೂ ಸಮುದಾಯದ ಸಹಭಾಗಿತ್ವ ಎರಡೂ ಅಗತ್ಯ. ಈ ಎರಡೂ ವಿಷಯಗಳಲ್ಲಿ ಕರ್ನಾಟಕ ತುಂಬಾ ಹಿಂದೆ ಬಿದ್ದಿರುವ ಅಂಶದತ್ತ ಸರ್ವೇಕ್ಷಣೆ ವರದಿ ಬೊಟ್ಟು ಮಾಡಿದೆ. ಕಸ ನಿರ್ವಹಣೆ ವಿಷಯದಲ್ಲಿ ಬೆಂಗಳೂರು ಮಹಾನಗರ ಸಂಪೂರ್ಣವಾಗಿ ಮುಗ್ಗರಿಸಿದ್ದು ಈ ಹಿಂದೆ ಜಾಗತಿಕ ಮಟ್ಟದ ಸುದ್ದಿಯಾಗಿತ್ತು. ನೈರ್ಮಲ್ಯದ ದಾರಿ ಕಂಡುಕೊಳ್ಳಲು ಆಗ ಒಂದಿಷ್ಟು ಯತ್ನಗಳು ನಡೆದಂತೆ ಕಂಡುಬಂದರೂ ಬಹುತೇಕ ಯೋಜನೆಗಳು ನಿಶ್ಚಿತ ಗುರಿಯನ್ನು ತಲುಪಲಿಲ್ಲ. ಸಮಸ್ಯೆ ಬಿಗಡಾಯಿಸಿ ಹತ್ತು ವರ್ಷಗಳಾದರೂ ಪರಿಹಾರದ ಮಾರ್ಗೋಪಾಯಗಳಿಗಾಗಿ ಬೆಂಗಳೂರು ಇನ್ನೂ ತಡಕಾಡುತ್ತಲೇ ಇದೆ. ಪ್ರಶಸ್ತಿಯ ಗರಿಯನ್ನು ಮೂಡಿಸಿಕೊಂಡ ನಗರಗಳಲ್ಲಿ ನಡೆದಿರುವ ಕಸ ನಿರ್ವಹಣೆಯತ್ತ ಗಮನಹರಿಸಿದರೆ ಪರಿಹಾರ ಸೂತ್ರಗಳು ಸಿಕ್ಕೇ ಸಿಗುತ್ತವೆ. ಮನೆ ಮನೆಯಿಂದ ಕಸ ಸಂಗ್ರಹ, ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆ ಹಾಗೂ ವೈಜ್ಞಾನಿಕ ಸಂಸ್ಕರಣೆ ವಿಷಯಗಳಲ್ಲಿ ಆ ನಗರಗಳು ಗಣನೀಯ ಸಾಧನೆಯನ್ನು ಮಾಡಿರುವುದು ಎದ್ದು ಕಾಣುತ್ತಿರುವ ಅಂಶ. ಮೂಲದಲ್ಲೇ ಕಸ ವಿಂಗಡಣೆ ಹಾಗೂ ಮನೆ, ಮನೆ ಕಸ ಸಂಗ್ರಹದ ಕುರಿತು ನಮ್ಮ ರಾಜಧಾನಿಯಲ್ಲಿ ದಶಕದಿಂದಲೂ ಅಬ್ಬರದ ಪ್ರಚಾರ ನಡೆಯುತ್ತಲೇ ಇದೆ. ಈ ಎರಡೂ ಮಹತ್ವದ ಗುರಿಗಳನ್ನು ಶೇ 50ರಷ್ಟು ತಲುಪುವುದು ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಾಧ್ಯವಾಗಿಲ್ಲ. ಸ್ವಚ್ಛ ನಗರಗಳ ಪಟ್ಟಿಯಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಗಳಿಸುತ್ತಿರುವ ಮಧ್ಯಪ್ರದೇಶದ ಇಂದೋರ್‌ನ ಕಸ ನಿರ್ವಹಣೆ ವ್ಯವಸ್ಥೆ ಕೂಡ ಇತರ ನಗರಗಳಿಗೆ ಮಾದರಿ. ಆ ನಗರದಲ್ಲಿ ರಾತ್ರಿ ವೇಳೆಯಲ್ಲಿಯೇ ಕಸ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತಿದೆ. ರಸ್ತೆಗಳನ್ನೂ ರಾತ್ರಿ ವೇಳೆಯೇ ಸ್ವಚ್ಛಗೊಳಿಸಲಾಗುತ್ತಿದೆ. ಕಸದಿಂದ ಗೊಬ್ಬರವನ್ನೂ ಉತ್ಪಾದಿಸಲಾಗುತ್ತಿದೆ. ಇಂತಹ ಕ್ರಮಗಳು ರಾಜ್ಯದ ನಗರಗಳಿಗೂ ಮಾದರಿಯಾಗಬೇಕು. ನೈರ್ಮಲ್ಯ ಕಾಪಾಡುವಲ್ಲಿ ನಾಗರಿಕರ ಹೊಣೆಯೂ ಇರುವುದರಿಂದ ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸ್ವಚ್ಛತೆಗೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಬೆಂಗಳೂರಿನಂತಹ ನಗರಗಳಲ್ಲಿ ಬೇರೂರಿರುವ ಕಸದ ಮಾಫಿಯಾವನ್ನು ಮೂಲಸಹಿತ ಕಿತ್ತು ಎಸೆಯಬೇಕು. ನೈರ್ಮಲ್ಯ ಕಾಪಾಡಲು ಸ್ಥಳೀಯ ಆಡಳಿತಗಳಿಗೆ ಬೇಕಾದ ಸಹಕಾರ ಹಾಗೂ ಸಮನ್ವಯದ ವ್ಯವಸ್ಥೆಯನ್ನು ರಾಜ್ಯ ಸರ್ಕಾರವು ಆದ್ಯತೆಯ ಮೇಲೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT