ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲವಿಲ್ಲದೆ ಶಾಂತಿಯುತವಾಗಿ ನಡೆದ ಮತದಾನ

ಕುಂದಾಪುರದಲ್ಲಿ ಶೇ 79 ಮತದಾನ
Last Updated 13 ಮೇ 2018, 8:31 IST
ಅಕ್ಷರ ಗಾತ್ರ

ಕುಂದಾಪುರ: ಎಂದಿನಂತೆ ಮತಗಟ್ಟೆ ಹೊರಗೆ ಕಾಣ ಸಿಗದ ರಾಜಕೀಯ ಬೆಂಬಲಿಗರ ಪಡೆ, ಪ್ರತಿಬಾರಿಯೂ ಮತದಾನ ಮಾಡಲು ಬರುವ ಮತದಾರರನ್ನು ಸ್ವಾಗತಿ ಸುತ್ತಿದ್ದ ಉಪಾಹಾರ ಹಾಗೂ ಆತಿಥ್ಯಕ್ಕೆ ಈ ಬಾರಿ ಕಡಿವಾಣ, ಮಳೆರಾಯನ ನಿರೀಕ್ಷೆಯಿಂದಾಗಿ ಮಧ್ಯಾಹ್ನ 3 ಗಂಟೆಗೂ ಮುನ್ನವೇ ಮತದಾನದ ಪ್ರಮಾಣ ಹೆಚ್ಚಳ, ನಕ್ಸಲ್‌ ಚಟುವಟಿಕೆಯ ಪ್ರದೇಶಗಳ ಮತಗಟ್ಟೆಯಲ್ಲಿಯೂ ಶೇಕಡಾವಾರು ಮತಪ್ರಮಾಣ ಹೆಚ್ಚಳ, ಬೆರಳೆಣಿಕೆಯ ಮತಗಟ್ಟೆಯಲ್ಲಿ ಸಣ್ಣ ಪ್ರಮಾಣದ ತಾಂತ್ರಿಕ ದೋಷ, ಯಾವುದೇ ಗಲಾಟೆ ಇಲ್ಲದೆ ಶಾಂತಿಯುತವಾಗಿ ಮುಗಿದ ಮತದಾನ...

–ಇವಿಷ್ಟು ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಮತದಾನ ವೇಳೆಯಲ್ಲಿ ಕಂಡು ಬಂದ ದೃಶ್ಯಗಳು.

ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್‌ ಚಟುವಟಿಕೆಯ ಪ್ರದೇಶಗಳಾದ ಅಮಾ ಸೆಬೈಲು, ತೊಂಬಟ್ಟು, ಹಳ್ಳಿಹೊಳೆ, ಯಡಮೊಗೆ, ಮುಧೂರು, ಬಸ್ರಿಬೇರು, ರಟ್ಟಾಡಿ, ಶೇಡಿಮನೆ, ಮಡಾಮಕ್ಕಿ, ಉದಯನಗರ, ಕೆರಾಡಿ ಮುಂತಾದ ಕಡೆಗಳಲ್ಲಿಯೂ ಮತದಾನದ ಪ್ರಮಾಣ ಹೆಚ್ಚಾಗಿತ್ತು.

ಮೊದಲ ಚುನಾವಣೆಗಾಗಿ ಮತ ದಾನ ಮಾಡಲು ಮತಗಟ್ಟೆಗೆ ಬಂದಿದ್ದ ಹೊಸ ಮತದಾರರಲ್ಲಿ ಮತದಾನದ ಸಂಭ್ರಮ ಮನೆ ಮಾಡಿತ್ತು. ಮತದಾನ ಮಾಡಿದ ಬಳಿಕ ಪೋಷಕರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ತೆಗೆಸಿ ಕೊಂಡು ಮತದಾನದ ಸಂಭ್ರಮ ಹಂಚಿಕೊಂಡರು. ಯುವಕರಷ್ಟೇ ಮತದಾನದಲ್ಲಿ ಉತ್ಸಾಹ ತೋರಿದ ವಯೋವೃದ್ಧರು ಹಾಗೂ ಅಂಗವಿಕಲರಿಗೆ ಕುಟುಂಬದ ಯುವಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಆಸರೆಯಾದರು. ಮತಗಟ್ಟೆಯವರೆಗೆ ವಾಹನದಲ್ಲಿ ಬಂದ ಅವರನ್ನು ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ಮತಗಟ್ಟೆಯ ಒಳಗೆ ಕರೆದುಕೊಂಡು ಹೋಗಿ ಮತದಾನ ಮಾಡಿಸಲಾಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿ ಮತಗಟ್ಟೆಯಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ ರಾಕೇಶ್‌ ಮಲ್ಲಿ ಅಂಕದಕಟ್ಟೆಯಲ್ಲಿ, ಜೆಡಿಎಸ್‌ ಅಭ್ಯರ್ಥಿ ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆಯಲ್ಲಿ ಹಾಗೂ ಜೆಡಿಯು ಅಭ್ಯರ್ಥಿ ರಾಜೀವ ಕೋಟ್ಯಾನ್‌ ಕುಂದಾಪುರದಲ್ಲಿ ಮತ ಚಲಾಯಿಸಿದರು. ಬೈಂದೂರು ವಿಧಾ ನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಕಟ್‌ಬೇಲ್ತೂರು ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎಂ.ಸುಕುಮಾರ ಶೆಟ್ಟಿ ಬೆಳ್ಳಾಲದಲ್ಲಿ ಮತ ಚಲಾಯಿಸಿದರು.

ಗ್ರಾಮೀಣ ಭಾಗದಲ್ಲಿ ಮಹಿಳೆಯರು ಗುಂಪು ಗುಂಪಾಗಿ ಮತಗಟ್ಟೆ ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಮತದಾನ ಮಾಡಿ ಹೊರ ಬಂದ ಮತದಾರರು ಮತದಾನದ ಗುಟ್ಟು ಬಿಟ್ಟುಕೊಡದೆ ಎಲ್ಲರೊಂದಿಗೆ ನಗು ವನ್ನು ವಿನಿಮಯ ಮಾಡುವುದರ ಮೂಲಕ ರಾಜಕೀಯ ಪ್ರಜ್ಞೆಯನ್ನು ತೋರುತ್ತಿದ್ದರು.

ಹಿಲಿಯಾಣ, ಹಕ್ಲಾಡಿ, ಹೈಕಾಡಿ, ಬಿಲ್ಲಾಡಿ ಸೇರಿದಂತೆ ಬೆರಳೆಣಿಕೆಯ ಮತಗಟ್ಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತಾದರೂ, ಅಧಿಕಾರಿಗಳ ಹಾಗೂ ತಾಂತ್ರಿಕ ಪರಿಣತರ ಪ್ರಯತ್ನದಿಂದಾಗಿ ಅಲ್ಪ ಸಮಯದಲ್ಲಿ ಮತದಾನ ಪ್ರಕ್ರಿಯೆ ಮುಂ ದುವರೆಯಿತು. ಹಿರಿಯ ನಾಗರಿಕರು ಸರತಿ ಸಾಲಲ್ಲಿ ನಿಂತು ಶ್ರಮ ಪಡಬಾರದು ಎನ್ನುವುದಕ್ಕಾಗಿ ಟೋಕನ್‌ ಪಡೆ ದುಕೊಂಡು ಸಿದ್ಧಪಡಿಸಲಾದ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆದ ಹಿರಿಯರು ತಮ್ಮ ಅವಕಾಶ ಬರುವವರೆಗೂ ದಿನಪತ್ರಿಕೆ ಹಾಗೂ ಇತರ ಸೌಲಭ್ಯಗಳ ಸದುಪ ಯೋಗ ಪಡಿಸಿಕೊಂಡದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಯೋವೃದ್ದ ಬಡಗುತಿಟ್ಟು ಯಕ್ಷಗಾನ ಕಲಾವಿದರಾದ ವಿ.ನಾಗಯ್ಯ ಶೆಟ್ಟಿ (94) ಹಾಗೂ ನಾರಾಯಣ ಗಾಣಿಗ ವಂಡ್ಸೆ (84) ಇಳಿ ವಯಸ್ಸಿನಲ್ಲಿ ಮತದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಆದರ್ಶ ಪ್ರಾಯವಾದರು. ಮತದಾನಕ್ಕಾಗಿ ದುಬೈ ಯಿಂದ ಊರಿಗೆ ಬಂದಿದ್ದ ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ವಕ್ವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರೊಂದಿಗೆ ತೆರಳಿ ಮತದಾನ ಮಾಡಿದರು. ಸ್ನೇಹಿತ ವಕ್ವಾಡಿ ಮೂಲದ ಬೆಂಗಳೂರಿನ ಉದ್ಯಮಿ ವಿ.ಕೆ. ಮೋಹನ್ ಅವರಿಗೆ ಸಾಥ್ ನೀಡಿದರು

ಪಿಂಕ್‌ ಮತಗಟ್ಟೆಗಳನ್ನಾಗಿ ಆಯ್ಕೆ ಮಾಡಲಾಗಿದ್ದ ಕುಂದಾಪುರ ನಗರದ ವಡೇರಹೋಬಳಿಯ ಮಧುಸೂದನ ಕುಶೆ ಪ್ರೌಢಶಾಲೆ ಹಾಗೂ ಕಟ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಆಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಈ ಮತಗಟ್ಟೆಯ ವಿಶೇಷತೆಯನ್ನು ನೋಡಲು ಅಕ್ಕಪಕ್ಕದ ಮತಗಟ್ಟೆಯ ಮತದಾರರು ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ನಕ್ಸಲ್‌ ಚಟುವಟಿಕೆ ಪ್ರದೇಶಗಳು ಸೇರಿದಂತೆ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೊಲೀಸ್‌, ಅರೆ ಸೇನಾ ತುಕಡಿ, ಗೃಹರಕ್ಷಕ ದಳ, ಅರಣ್ಯ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ಪಡೆಗಳಿಂದ ಕಾನೂನು ಸುವ್ಯ ವಸ್ಥೆಯ ಪಾಲನೆಗೆ ಕಟ್ಟು ನಿಟ್ಟಿನ ಬಂದೋಬಸ್ತ್‌ ಮಾಡಲಾಗಿತ್ತು.

**
18 ವರ್ಷಗಳ ಕಾಲ ಮತದಾನಕ್ಕಾಗಿ ಕಾದಿದ್ದು, ಇಂದು ಸಾರ್ಥಕ ಭಾವ ಮೂಡಿಸಿದೆ. ನಮ್ಮ ಸಂವಿಂಧಾನದ ಬಗ್ಗೆ ಹೆಮ್ಮೆ ಎನಿಸುತ್ತಿದೆ
– ಪೂಜಿತಾ ಗಣೇಶ್ ಶೇರೇಗಾರ್‌, ಎಂಜಿನಿಯರಿಂಗ್‌ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT