ಶುಕ್ರವಾರ, ಆಗಸ್ಟ್ 23, 2019
25 °C

ಜನಸಂಖ್ಯೆ ಹೆಚ್ಚಳದ ಒತ್ತಡ ಎದುರಿಸಲು ಸನ್ನದ್ಧತೆ ಅಗತ್ಯ

Published:
Updated:
Prajavani

ನಮ್ಮ ದೇಶದ ಜನಸಂಖ್ಯೆ ಇನ್ನು ಎಂಟೇ ವರ್ಷಗಳಲ್ಲಿ ಚೀನಾವನ್ನು ಮೀರಿಸಲಿದೆ. 2027ರ ವೇಳೆಗೆ ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ಮುನ್ನೋಟ ವರದಿ ಹೇಳಿದೆ. ಅಂತೆಯೇ, ಮುಂದಿನ 30 ವರ್ಷಗಳಲ್ಲಿ ವಿಶ್ವದ ಜನಸಂಖ್ಯೆ 200 ಕೋಟಿ ಹೆಚ್ಚಾಗಲಿದೆ. ಅಂದರೆ 2050ರ ವೇಳೆಗೆ ಜನಸಂಖ್ಯೆ 770 ಕೋಟಿಯಿಂದ 970 ಕೋಟಿ ತಲುಪಲಿದೆ ಎಂದು ಈ ವರದಿ ತಿಳಿಸಿದೆ. ಈ ಹಿಂದಿನ 50 ವರ್ಷಗಳಲ್ಲಿ ಚೀನಾದಲ್ಲಿ ಫಲವತ್ತತೆ ಪ್ರಮಾಣ 6.5ರಿಂದ 1.69ಕ್ಕೆ ಕುಸಿದಿದ್ದರೆ, ಭಾರತದಲ್ಲಿ ಅದು 5.7ರಿಂದ 2.24ಕ್ಕಷ್ಟೇ ಇಳಿದಿದೆ. ಉತ್ತರಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಫಲವತ್ತತೆ ಪ್ರಮಾಣ 3ಕ್ಕಿಂತ ಹೆಚ್ಚು ಇದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ವೇಗವಾಗಿ ಬೆಳೆಯಲು ಇದು ಕಾರಣವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ಅಂದಾಜಿಸಿದೆ. ಜನಸಂಖ್ಯೆ ಬೆಳವಣಿಗೆ ಪ್ರಮಾಣವು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಎನ್ನುವುದನ್ನು ವರದಿ ಬೊಟ್ಟು ಮಾಡಿದೆ. 2050ರ ಹೊತ್ತಿಗೆ ಭಾರತದ ಜನಸಂಖ್ಯೆ 150 ಕೋಟಿ ಆಗಲಿದ್ದು, 2059ರ ಹೊತ್ತಿಗೆ ಅದು 165 ಕೋಟಿಗೆ ತಲುಪಲಿದೆ. ಈ ಬೆಳವಣಿಗೆಯನ್ನು ನಾವು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬೇಕಿದೆ. ಮುಂದಿನ 30 ವರ್ಷಗಳಲ್ಲಿ ಏರಿಕೆಯಾಗಲಿರುವ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಜನರು ಭಾರತ, ಅಮೆರಿಕ, ಪಾಕಿಸ್ತಾನ, ಇಂಡೊನೇಷ್ಯಾ ಸೇರಿದಂತೆ ಒಂಬತ್ತು ದೇಶಗಳಲ್ಲಿಯೇ ಇರಲಿದ್ದಾರೆ. ಈಗಾಗಲೇ ಕಡಿಮೆಯಾಗುತ್ತಿರುವ ಸಂಪನ್ಮೂಲಗಳ ಮೇಲೆ ಜನಸಂಖ್ಯೆ ಹೆಚ್ಚಳದ ಒತ್ತಡ ಗಂಭೀರ ಪರಿಣಾಮಗಳನ್ನು ಬೀರಬಹುದು. ವಾಯು ಮಾಲಿನ್ಯ, ತ್ಯಾಜ್ಯ ನಿರ್ವಹಣೆಯಂತಹ ಸಮಸ್ಯೆಗಳು ಬೃಹದಾಕಾರ ತಾಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧತೆ ಅಗತ್ಯ. ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೂ ಜನಸಂಖ್ಯೆಗೂ ನೇರ ಸಂಬಂಧ ಇದೆ ಎನ್ನುವುದನ್ನು ಉಪೇಕ್ಷಿಸಲಾಗದು. ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಜನಸಂಖ್ಯೆ ಸೃಷ್ಟಿಸಬಹುದಾದ ತಲ್ಲಣಗಳು ಅಗಾಧ ಎಂಬ ಎಚ್ಚರ ಇರಬೇಕು.

ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ. ಇದು, ಅವಕಾಶಗಳ ಆಗರವನ್ನೇ ತೆರೆದಿಡಲಿದೆಯಾದರೂ ಮುಂದೆ ಬಹು ದೊಡ್ಡ ಸವಾಲುಗಳನ್ನೂ ಸೃಷ್ಟಿಸಲಿದೆ ಎನ್ನುವುದು ವಾಸ್ತವ. ಈಗ ಇರುವ ಹಾಗೂ ಭವಿಷ್ಯದಲ್ಲಿ ಸೇರಲಿರುವ ಅಗಾಧ ಸಂಖ್ಯೆಯ ಜನರಿಗೆ ನೀರು, ವಸತಿ, ಶಿಕ್ಷಣ ಪೂರೈಸುವುದು ಹಾಗೂ ಆರೋಗ್ಯ ಸೇವೆ ಒದಗಿಸುವುದು ಸುಲಭದ ಕೆಲಸವಲ್ಲ. ಸಾರಿಗೆ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವ ದೊಡ್ಡ ಸವಾಲು ಎದುರಾಗಲಿದೆ. ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಇನ್ನಷ್ಟು ವೇಗದ ಅಭಿವೃದ್ಧಿ ತರುವುದು ಸುಲಭದ ಮಾತಲ್ಲ. ಅಷ್ಟಕ್ಕೂ ಈ ಎಲ್ಲಾ ‘ಅಭಿವೃದ್ಧಿ’ಯನ್ನು ಪರಿಸರಕ್ಕೆ ಹಾನಿಯಾಗದಂತೆ ಕೈಗೊಳ್ಳುವುದು ಕಷ್ಟದ ಕೆಲಸ. ಹೀಗಾಗಿ, ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ತಗ್ಗಿಸುವ ಅನಿವಾರ್ಯ ನಮ್ಮೆದುರು ಸದಾ ಇದ್ದೇ ಇದೆ. ಆದರೆ, ಇದಕ್ಕೆ ಬಲವಂತದ ಕ್ರಮಗಳು, ಕಾನೂನಿನ ಅಂಕುಶ ಖಂಡಿತ ಪರಿಹಾರಗಳಲ್ಲ. ಜನಸಂಖ್ಯೆ ಹೆಚ್ಚಳಕ್ಕೆ ಅಲ್ಪಸಂಖ್ಯಾತರೇ ಕಾರಣ ಎಂದು ಕೆಲವರು ಹುಯಿಲೆಬ್ಬಿಸುವುದಿದೆ. ಅದರಲ್ಲಿ ಹುರುಳಿಲ್ಲ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮುಂತಾದ ಉಪಕ್ರಮಗಳು ಜನಸಂಖ್ಯೆ ಬೆಳವಣಿಗೆ ಪ್ರಮಾಣವನ್ನು ತಡೆಯುವ ನಿಜವಾದ ಅಸ್ತ್ರಗಳು. ಸರ್ಕಾರ ಮತ್ತು ಸಮಾಜ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕು.

Post Comments (+)