ಶನಿವಾರ, ಸೆಪ್ಟೆಂಬರ್ 18, 2021
26 °C

ಸಂಪಾದಕೀಯ: ರೈತರಿಗೂ ಗುಣಮಟ್ಟದ ವಿದ್ಯುತ್ ಒದಗಿಸುವುದು ಸರ್ಕಾರದ ಹೊಣೆಗಾರಿಕೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಬಹುತೇಕ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯೂ ವಿದ್ಯುತ್‌ ಪೂರೈಕೆಯ ಮೇಲೆ ಅವಲಂಬಿತವಾಗಿದೆ. ಕೈಗಾರಿಕೆ, ಕೃಷಿ, ಪಶುಸಂಗೋಪನೆಯಿಂದ ಹಿಡಿದು ಎಲ್ಲ ಕ್ಷೇತ್ರಗಳ ಚಟುವಟಿಕೆಗೂ ವಿದ್ಯುತ್‌ ಅನಿವಾರ್ಯ ಎಂಬ ಸ್ಥಿತಿ ಇದೆ. ಯಾವ ಕ್ಷೇತ್ರಕ್ಕೆ ಎಷ್ಟು ಅವಧಿಯವರೆಗೆ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತದೆ ಎಂಬುದೇ ಆ ಕ್ಷೇತ್ರದ ಅಭಿವೃದ್ಧಿ ಅಥವಾ ಹಿನ್ನಡೆಯನ್ನು ನಿರ್ಧರಿಸುವಂತಾಗಿದೆ. ಈವರೆಗೂ ಹೆಚ್ಚಿನ ಸಂದರ್ಭಗಳಲ್ಲಿ ಕೈಗಾರಿಕೆಗಳಿಗೆ ಮಾತ್ರ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಪೂರಕವಾಗಿ ನೀರಾವರಿ ಪಂಪ್‌ಸೆಟ್‌ಗಳ ಬಳಕೆಗೆ ಹೆಚ್ಚು ಅವಧಿಯ ಗುಣಮಟ್ಟದ ವಿದ್ಯುತ್‌ ಪೂರೈಕೆಯಾದದ್ದು ಕಡಿಮೆ. ಹಗಲಿನ ಅವಧಿಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ‘ತ್ರೀಫೇಸ್‌’ ವಿದ್ಯುತ್‌ ಪೂರೈಕೆಗೆ ಇಂಧನ ಇಲಾಖೆ ಆಸಕ್ತಿ ತೋರುತ್ತಿಲ್ಲ.

ಕೈಗಾರಿಕೆಗಳಿಗೆ ಹಗಲಿನ ವೇಳೆಯಲ್ಲಿ ಹೆಚ್ಚು ವಿದ್ಯುತ್‌ ಪೂರೈಕೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ತಡರಾತ್ರಿಯ ಬಳಿಕ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಮಾಡುವ ಕ್ರಮ ಸಾಮಾನ್ಯ ಎಂಬಂತೆ ನಡೆದುಕೊಂಡು ಬಂದಿದೆ. ಇದರಿಂದಾಗಿ ರೈತರು ತ್ರೀಫೇಸ್‌ ವಿದ್ಯುತ್‌ ಪೂರೈಕೆಗಾಗಿ ನಿದ್ದೆ ಬಿಟ್ಟು ಕಾದು ಕೂರಬೇಕಾದ ಪರಿಸ್ಥಿತಿ ಇದೆ. ತಡರಾತ್ರಿ ನೀರಾವರಿ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡಲು ಹೋಗುವ ರೈತರು ಹಾವು, ಚೇಳು ಮುಂತಾದ ವಿಷಜಂತುಗಳ ಕಡಿತದಿಂದ ಸಾವು, ನೋವು ಅನುಭವಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕೆ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಬಳಕೆಗೆ ಗುಣಮಟ್ಟದ ವಿದ್ಯುತ್‌ ಪೂರೈಸುವುದಕ್ಕೆ ಏಕರೂಪದ ನೀತಿಯನ್ನು ಅನುಸರಿಸುತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ ಹೆಚ್ಚು ಸಮಯ ಗುಣಮಟ್ಟದ ವಿದ್ಯುತ್‌ ಪೂರೈಕೆ ಆಗುತ್ತಿದ್ದರೆ, ಇನ್ನು ಕೆಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ದೀಪ ಉರಿಸುವುದಕ್ಕೂ ಕಷ್ಟಪಡಬೇಕಾದ ಕಡಿಮೆ ಸಾಮರ್ಥ್ಯದ ವಿದ್ಯುತ್‌ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಯ ಪ್ರಮಾಣದಲ್ಲಿ ಹಲವು ಪಟ್ಟು ಹೆಚ್ಚಳ ಆಗಿದ್ದರೂ ಸರಿಯಾದ ವಿತರಣಾ ನೀತಿ ಮತ್ತು ಪೂರೈಕೆ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮೀಣ ಪ್ರದೇಶದ ಜನರ ಪರದಾಟಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ.

ರಾಜ್ಯದಲ್ಲಿ ಬೇಡಿಕೆಗಿಂತಲೂ ಹೆಚ್ಚು ವಿದ್ಯುತ್‌ ಲಭ್ಯ ಇರುವಾಗಲೂ 15 ಜಿಲ್ಲೆಗಳಲ್ಲಿ ಮಾತ್ರ ಏಳು ಗಂಟೆಗಳ ಕಾಲ ತ್ರೀಫೇಸ್‌ ವಿದ್ಯುತ್‌ ಪೂರೈಕೆಯಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಐದು ಗಂಟೆಗಳಷ್ಟು ಕೂಡ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬಹಿರಂಗಪಡಿಸಿದ್ದಾರೆ. ಇದು, ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಇರುವ ಅಸಮಾನತೆಗೆ ಸಾಕ್ಷ್ಯ ಒದಗಿಸಿದೆ.

ರಾಜ್ಯದಲ್ಲಿ ಬಹುತೇಕ ಅಣೆಕಟ್ಟೆಗಳು ಭರ್ತಿಯಾಗುವ ಹಂತ ತಲುಪಿದ್ದು, ಜಲ ವಿದ್ಯುತ್ ಘಟಕಗಳಲ್ಲಿ ಸಾಮರ್ಥ್ಯದ ಪೂರ್ಣ ಪ್ರಮಾಣದಷ್ಟು ಉತ್ಪಾದನೆ ಆಗುತ್ತಿದೆ. ಸೌರಶಕ್ತಿ ಮತ್ತು ಪವನ ವಿದ್ಯುತ್‌ ಉತ್ಪಾದನೆಯಲ್ಲೂ ಹಲವು ಪಟ್ಟು ಹೆಚ್ಚಳವಾಗಿದೆ. ರಾಜ್ಯ ಸರ್ಕಾರದ ಒಡೆತನದ ಜಲ ವಿದ್ಯುದಾಗಾರಗಳು, ಉಷ್ಣ ವಿದ್ಯುತ್‌ ಸ್ಥಾವರಗಳು, ಸೌರಶಕ್ತಿ ಘಟಕಗಳು, ಪವನ ವಿದ್ಯುತ್‌ ಘಟಕಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಉಷ್ಣ ವಿದ್ಯುತ್‌ ಸ್ಥಾವರಗಳು, ಅಣು ವಿದ್ಯುತ್‌ ಸ್ಥಾವರಗಳು ಹಾಗೂ ಖಾಸಗಿ ಸ್ವಾಮ್ಯದ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಂದ ರಾಜ್ಯಕ್ಕೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ಒಟ್ಟು ಉತ್ಪಾದನೆ ಮತ್ತು ಪೂರೈಕೆಯ ಸಾಮರ್ಥ್ಯಕ್ಕಿಂತಲೂ ಕಡಿಮೆ ವಿದ್ಯುತ್‌ ಬಳಕೆಯಾಗುತ್ತಿದೆ ಎಂಬುದನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಲೂ ಮಳೆಯ ಕೊರತೆಯಿಂದ ಬರದ ವಾತಾವರಣ ಇದೆ. ಇಂತಹ ಸ್ಥಿತಿಯಲ್ಲಿ ಹೆಚ್ಚು ಅವಧಿಯವರೆಗೆ ತ್ರೀಫೇಸ್‌ ವಿದ್ಯುತ್‌ ಪೂರೈಸುವ ಮೂಲಕ ರೈತರ ನೆರವಿಗೆ ಬರಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿ. ವಿದ್ಯುತ್‌ ಉತ್ಪಾದನೆಯಲ್ಲಿ ಮಿಗತೆ ಇದ್ದಾಗಲೂ ಅದನ್ನು ಗ್ರಾಮೀಣ ಪ್ರದೇಶಗಳಿಗೆ ವಿತರಣೆ ಮಾಡಲು ಇಂಧನ ಇಲಾಖೆ ಕ್ರಮ ವಹಿಸದೇ ಇರುವುದು ಜನಹಿತದ ನಡೆಯಲ್ಲ. ಅಧಿಕ ಮಳೆ ಬೀಳುತ್ತಿರುವ ಜಿಲ್ಲೆಗಳನ್ನು ಹೊರತುಪಡಿಸಿ, ಕೃಷಿ ಚಟುವಟಿಕೆಗಳಿಗೆ ಪಂಪ್‌ಸೆಟ್‌ ಬಳಕೆ ಹೆಚ್ಚಿಗೆ ಇರುವ ಜಿಲ್ಲೆಗಳಲ್ಲಿ ಪ್ರತಿದಿನ ಹೆಚ್ಚಿನ ಅವಧಿಯವರೆಗೆ ತ್ರೀಫೇಸ್‌ ವಿದ್ಯುತ್‌ ಒದಗಿಸಬೇಕಿದೆ.

ಈ ದಿಸೆಯಲ್ಲಿ ಮುಖ್ಯಮಂತ್ರಿಯವರೇ ಆಸಕ್ತಿ ವಹಿಸಿ ಇಂಧನ ಇಲಾಖೆಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಯವರ ಸೂಚನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವ ಮೂಲಕ ವಿದ್ಯುತ್‌ ಪೂರೈಕೆಯಲ್ಲಿ ಸುಧಾರಣೆ ತರಬೇಕಿರುವುದು ಇಂಧನ ಇಲಾಖೆಯ ಹೊಣೆಗಾರಿಕೆ. ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುವ ವಿದ್ಯುತ್‌ಗೆ ರೈತರು ಬಿಲ್‌ ಪಾವತಿಸುವುದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ಗುಣಮಟ್ಟದ ವಿದ್ಯುತ್‌ ಒದಗಿಸದೇ ಇರುವುದು ಸಮಂಜಸವಲ್ಲ. ಗುಣಮಟ್ಟದ ವಿದ್ಯುತ್‌ ಪೂರೈಕೆಯಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲು ಅನುಕೂಲ ಆಗುತ್ತದೆ. ಎಲ್ಲ ಕ್ಷೇತ್ರಗಳು ಮತ್ತು ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಸಮಾನವಾಗಿ ಪರಿಗಣಿಸಿ ವಿದ್ಯುತ್‌ ಪೂರೈಸುವ ನೀತಿಯೊಂದನ್ನು ರೂಪಿಸಿ, ಅನುಷ್ಠಾನಕ್ಕೆ ತರಬೇಕು. ನಗರ– ಗ್ರಾಮೀಣ, ಉದ್ದಿಮೆಗಳು– ಕೃಷಿಕರು ಮುಂತಾದ ಅಂಶಗಳ ಆಧಾರದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ತಾರತಮ್ಯಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ವಿದ್ಯುತ್‌ ಲಭ್ಯವಿರುವಾಗಲೂ ರೈತರು ತಮ್ಮ ಹೊಲ, ತೋಟಗಳಿಗೆ ನೀರು ಹಾಯಿಸಲು ತಡರಾತ್ರಿಯವರೆಗೂ ನಿದ್ದೆಬಿಟ್ಟು ಕಾಯಬೇಕಾದ ಪರಿಸ್ಥಿತಿಯನ್ನು ನಿವಾರಿಸುವ ಮೂಲಕ ಇಂಧನ ಇಲಾಖೆಯು ಜನಸ್ನೇಹಿಯಾಗಿ ವರ್ತಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು