ಶುಕ್ರವಾರ, ಆಗಸ್ಟ್ 23, 2019
26 °C

ಕುಲಪತಿಗಳ ಬಾಯಿ ಮುಚ್ಚಿಸುವ ಸರ್ಕಾರದ ಯತ್ನ ಸರಿಯಲ್ಲ

Published:
Updated:
Prajavani

ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕುಲಪತಿಗಳು ಮಾಧ್ಯಮದವರ ಜೊತೆ ಮಾತನಾಡಬಾರದು ಎಂದು ಉನ್ನತ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ‘ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವ ಮತ್ತು ಇತರ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ. ಇನ್ನು ಮುಂದೆ ಯಾರಾದರೂ ಮಾಧ್ಯಮಗಳ ಜೊತೆ ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಸುತ್ತೋಲೆ ಮೂಲಕ ಎಚ್ಚರಿಕೆ ನೀಡಲಾಗಿದೆ. ‘ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ, ಮಾಧ್ಯಮಗಳ ಗಮನಕ್ಕೆ ಅಲ್ಲ’ ಎನ್ನುವುದು ಸರ್ಕಾರದ ಫರ್ಮಾನು. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳು ಎಂದು ಒಪ್ಪಿಕೊಂಡ ಯಾವುದೇ ಸರ್ಕಾರ ಇಂತಹ ಸುತ್ತೋಲೆಯನ್ನು ಹೊರಡಿಸುವುದು ಕುಲಪತಿಗಳಿಗೆ ಮಾಡುವ ಅವಮಾನ. ಸ್ವಾಯತ್ತ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳ ಆಡಳಿತಕ್ಕೆ ಸಂಬಂಧಿಸಿ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಕುಲಪತಿಗಳಿಗೆ ಇದೆ. ಕುಲಾಧಿಪತಿಗಳಾದ ರಾಜ್ಯಪಾಲರು ಕೆಲವು ವಿಶೇಷ ಸಂದರ್ಭಗಳಲ್ಲಿ ಕುಲಪತಿಗಳಿಗೆ ಸೂಚನೆ ನೀಡುವುದರಲ್ಲಿ ಅರ್ಥವಿದೆ. ಆದರೆ, ಸರ್ಕಾರ ಯಾವುದೇ ಭಿಡೆ ಇಲ್ಲದೆ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ಈ ರೀತಿ ಹಸ್ತಕ್ಷೇಪ ನಡೆಸುವುದು ಸರಿಯಲ್ಲ. ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಮೂಗು ತೂರಿಸಲು ಸರ್ಕಾರ ಸತತವಾಗಿ ಪ್ರಯತ್ನಿಸುತ್ತಿದೆ ಎನ್ನುವುದಕ್ಕೆ ಈ ಸುತ್ತೋಲೆ ಇತ್ತೀಚಿನ ನಿದರ್ಶನ. ಹಿಂದೆಯೂ ಇಂತಹ ಹಲವು ಪ್ರಯತ್ನಗಳು ನಡೆದಿವೆ. ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ– 2000’ ಜಾರಿಗೆ ತಂದಾಗಲೇ ಸರ್ಕಾರ ತನ್ನ ಹಸ್ತಕ್ಷೇಪಕ್ಕೆ ಒಂದು ಅವಕಾಶವನ್ನು ಸೃಷ್ಟಿಸಿಕೊಂಡಿದೆ. ಸರ್ಕಾರದ ಈ ಧೋರಣೆಯನ್ನು ಪ್ರತಿಭಟಿಸಬೇಕಾದ ಕುಲಪತಿಗಳು ಮೌನಕ್ಕೆ ಶರಣಾಗಿರುವುದು ವಿಪರ್ಯಾಸ.  ಒಂದಿಬ್ಬರು ಕುಲಪತಿಗಳು ಹೆಸರು ಬಹಿರಂಗಪಡಿಸಲು ಇಚ್ಛಿಸದೆ ಇದನ್ನು ವಿರೋಧಿಸಿದ್ದು ಬಿಟ್ಟರೆ, ಉಳಿದವರು  ಚಕಾರ ಎತ್ತುತ್ತಿಲ್ಲ. ವಿಶ್ವವಿದ್ಯಾಲಯಗಳ ಘನತೆ ಮತ್ತು ಸ್ವಾಯತ್ತೆಯನ್ನು ರಕ್ಷಿಸಬೇಕಾದ ಕುಲಪತಿಗಳೇ ಇಂತಹ ಸಂದರ್ಭಗಳಲ್ಲಿ ಸುಮ್ಮನಿರುವುದು, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುವಂತಿದೆ.

ರಾಜ್ಯದ 12ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಣಕಾಸು ಅವ್ಯವಹಾರಗಳು ನಡೆದಿವೆ ಎನ್ನುವುದು ನಿಜ. ಇದನ್ನು ನೆಪವಾಗಿಸಿಕೊಂಡು, ಎಲ್ಲ ವಿಶ್ವವಿದ್ಯಾಲಯಗಳನ್ನೂ ನಿಯಂತ್ರಿಸುವ ಅಗತ್ಯವಿದೆ ಎಂದು ಸರ್ಕಾರ ಭಾವಿಸಿದ್ದರೆ ಅದನ್ನು ಒಪ್ಪಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಲಪತಿಗಳು ಮತ್ತು ಕುಲಸಚಿವರು ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸಿಂಡಿಕೇಟ್‌ ಮತ್ತು ಅಕಾಡೆಮಿಕ್‌ ಕೌನ್ಸಿಲ್‌ಗಳಿವೆ. ಕುಲಪತಿಗಳ ಯಾವುದೇ ನಿರ್ಧಾರದಲ್ಲಿ ತಪ್ಪಿದ್ದರೆ ಅಲ್ಲಿ ಅದನ್ನು ಪ್ರಶ್ನಿಸಬಹುದು, ತಡೆಯಬಹುದು. ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಬಗ್ಗೆ ಸರ್ಕಾರವೇ ನೇಮಿಸಿದ ತನಿಖಾ ಸಮಿತಿಗಳ ವರದಿಗಳೂ ಬಂದಿವೆ. ಸರ್ಕಾರ ಅಂತಹ ಎಷ್ಟು ವರದಿಗಳನ್ನು ಅಂಗೀಕರಿಸಿದೆ? ಈವರೆಗೆ ಎಷ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ? ಈ ವರದಿಗಳು ಸರ್ಕಾರದ ಗೋದಾಮಿನಲ್ಲಿ ದೂಳು ತಿನ್ನುತ್ತಿವೆ. ಕುಲಪತಿಗಳ ಮತ್ತು ಕುಲಸಚಿವರ ನೇಮಕಗಳಲ್ಲಿ ಸರ್ಕಾರದ ಹಂತದಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎನ್ನುವುದು ಇಂದು ಗುಟ್ಟಾಗಿ ಉಳಿದಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಪರೀಕ್ಷೆಗಳು ನಡೆಯಬೇಕು, ಏಕರೂಪದ ಪಠ್ಯಗಳು ಬರಬೇಕು ಎನ್ನುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಇತ್ತೀಚೆಗೆ ಚರ್ಚೆ ನಡೆಯುತ್ತಿದೆ. ಹಾಗೆ ಮಾಡುವುದಾದರೆ ಇಷ್ಟೊಂದು ವಿಶ್ವವಿದ್ಯಾಲಯಗಳು ಏಕೆ ಬೇಕು? ಇಡೀ ರಾಜ್ಯಕ್ಕೆ ಒಂದೇ ವಿಶ್ವವಿದ್ಯಾಲಯ ಸಾಕಲ್ಲವೇ? ಒಂದು ಕಾಲದಲ್ಲಿ ವಿಶ್ವವಿದ್ಯಾಲಯಗಳು ಸಮಾಜಕ್ಕೆ ಬೌದ್ಧಿಕ ಮಾರ್ಗದರ್ಶನ ನೀಡುವ ಜ್ಞಾನಕೇಂದ್ರಗಳಾಗಿದ್ದವು. ಯಾವುದೇ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ಬಹಿರಂಗವಾಗಿ ಯಾವುದೇ ವಿಷಯದ ಬಗ್ಗೆ ಮಾತನಾಡಿದರೆ ಸರ್ಕಾರ ಕೂಡಾ ಕಿವಿಗೊಟ್ಟು ಗಂಭೀರವಾಗಿ ಆಲಿಸುತ್ತಿತ್ತು. ಸಾಮಾಜಿಕ– ಆರ್ಥಿಕ ವಿಷಯಗಳಿಗೆ ಸಂಬಂಧಿಸಿ ಅಲ್ಲಿ ನಡೆಯುವ ಬೌದ್ಧಿಕ ವಾಗ್ವಾದ, ವಿಚಾರ ವಿಮರ್ಶೆ, ಪಿಎಚ್‌.ಡಿ ಪ್ರಬಂಧಗಳು ಸರ್ಕಾರದ ನೀತಿ ನಿರೂಪಣೆಗೆ ಮಾರ್ಗದರ್ಶನ ನೀಡುತ್ತಿದ್ದವು. ಈಗ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕುಲಪತಿಗಳ, ಕುಲಸಚಿವರ ನೇಮಕದಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುವ ಸರ್ಕಾರಕ್ಕೆ ಅಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸುವ ನೈತಿಕತೆ ಎಲ್ಲಿ ಉಳಿದಿದೆ? ದುಡ್ಡು ಕೊಟ್ಟು ಸ್ಥಾನ ಪಡೆಯುವ ಕುಲಪತಿ, ಕುಲಸಚಿವರಿಗೆ ಸರ್ಕಾರದ ಹಸ್ತಕ್ಷೇಪವನ್ನು ವಿರೋಧಿಸುವ ಮನಃಸ್ಥಿತಿಯೂ ಇರುವುದಿಲ್ಲ. ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿ ಮಾಧ್ಯಮಗಳ ಜೊತೆಗೆ ಕುಲಪತಿಗಳು ಮಾತನಾಡಿದರೆ ಅದರಿಂದ ತನಗೆ ಅವಮಾನ ಎಂದು ಸರ್ಕಾರ ಭಾವಿಸುತ್ತಿರುವುದು ಹಾಸ್ಯಾಸ್ಪದ.  ಸ್ವಾಯತ್ತ ವಿಶ್ವವಿದ್ಯಾಲಯಗಳ ಸ್ವಾತಂತ್ರ್ಯವನ್ನು ದಮನಿಸದೆ, ಆ ಸಂಸ್ಥೆಗಳನ್ನು ಆಂತರಿಕ ನಿಯಂತ್ರಣ ವ್ಯವಸ್ಥೆಯ ಮೂಲಕವೇ ಸರಿದಾರಿಗೆ ತರಲು ಸರ್ಕಾರ ಯತ್ನಿಸಬೇಕು. ವಿಶ್ವಾಸಾರ್ಹತೆ, ಪಾರದರ್ಶಕ ಆಡಳಿತ ಮತ್ತು ಬೌದ್ಧಿಕ ಘನತೆಯ ಮೂಲಕ ವಿಶ್ವವಿದ್ಯಾಲಯಗಳ ಸ್ವಾಯತ್ತೆಯನ್ನು ರಕ್ಷಿಸಲು ಸಮಾಜದ ಗಣ್ಯರು ಕೂಡಾ ಧ್ವನಿಯೆತ್ತುವ ಅಗತ್ಯವಿದೆ.

Post Comments (+)