ವಿದ್ಯುತ್‌ ಅವಘಡಕ್ಕೆ ಮುಗ್ಧರು ಬಲಿಯಾಗುವುದನ್ನು ತಪ್ಪಿಸಿ

ಭಾನುವಾರ, ಜೂನ್ 16, 2019
28 °C

ವಿದ್ಯುತ್‌ ಅವಘಡಕ್ಕೆ ಮುಗ್ಧರು ಬಲಿಯಾಗುವುದನ್ನು ತಪ್ಪಿಸಿ

Published:
Updated:
Prajavani

ವಿದ್ಯುತ್‌ ತಂತಿ ತಗುಲಿ ನಿಖಿಲ್‌ ಎನ್ನುವ 14 ವರ್ಷದ ಬಾಲಕ ಸಾವಿಗೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಮೇಶ್‌ ಎನ್ನುವ ರಾಜಧಾನಿಯ ಯುವಕ ವಿದ್ಯುತ್‌ ಸ್ಪರ್ಶಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಎರಡೂ ಘಟನೆಗಳು ದುರದೃಷ್ಟಕರ. ಮೊದಲ ಘಟನೆಯಲ್ಲಿ, ಮಹಡಿ ಮೇಲೆ ಬಿದ್ದಿದ್ದ ಕ್ರಿಕೆಟ್‌ ಚೆಂಡನ್ನು ತರಲು ಹೋಗಿದ್ದ ಹುಡುಗ, ವಿದ್ಯುತ್‌ ತಂತಿಯ ಸ್ಪರ್ಶಕ್ಕೆ ತುತ್ತಾಗಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಒಣಗಲು ಹಾಕಿದ್ದ ಬಟ್ಟೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಹೈ ಟೆನ್ಷನ್‌ ವೈರಿನ ಸಂಪರ್ಕಕ್ಕೆ ಸಿಕ್ಕ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ಇವೆರಡೂ ದುರಂತಗಳನ್ನು ತಪ್ಪಿಸಲು ಸಾಧ್ಯವಿತ್ತು. ಜನಸಾಮಾನ್ಯರ ಕೈಗೆಟಕುವ ಅಂತರದಲ್ಲಿ ಅಸುರಕ್ಷಿತವಾದ ವಿದ್ಯುತ್‌ ತಂತಿಗಳು ಇರುತ್ತವೆಂದರೆ ಅದು, ವಿದ್ಯುತ್‌ ಪೂರೈಕೆ ಸಂಸ್ಥೆಗಳ ಅಧಿಕಾರಿಗಳ ನಿರ್ಲಕ್ಷ್ಯವಲ್ಲದೆ ಬೇರೇನೂ ಅಲ್ಲ. ಹೈ ಟೆನ್ಷನ್‌ ವೈರುಗಳ ಸನಿಹದಲ್ಲೇ ಮಹಡಿ ಮನೆಗಳು ಕಿಕ್ಕಿರಿದಿರುವ ಉದಾಹರಣೆಗಳು ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಕಾಣಸಿಗುತ್ತವೆ. ಹೀಗೆ ಮನೆ ಕಟ್ಟಲು ಅನುಮತಿ ನೀಡುವ ಅಧಿಕಾರಿಗಳದು ಸ್ಪಷ್ಟವಾದ ಕರ್ತವ್ಯಲೋಪ. ಜನರು ಕೂಡ ತಮ್ಮ ಸುರಕ್ಷತೆಯನ್ನು ಕಡೆಗಣಿಸಿ, ನಿಯಮ ಉಲ್ಲಂಘಿಸಿ, ಹೈ ಟೆನ್ಷನ್‌ ತಂತಿಗಳ ಸನಿಹದಲ್ಲೇ ಮನೆಗಳನ್ನು ಕಟ್ಟುವ ಕೆಟ್ಟ ಧೈರ್ಯ ತೋರುತ್ತಾರೆ. ಕಟ್ಟಡಗಳು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕೂಡ ವಿದ್ಯುತ್‌ ತಂತಿಗಳು ಬಲಿಗಾಗಿ ಕಾಯುತ್ತಿರುತ್ತವೆ. ಈ ವರ್ಷದ ಫೆಬ್ರುವರಿಯಲ್ಲಿ ಉದಯ್‌ ಎನ್ನುವ ಏಳು ವರ್ಷದ ಬಾಲಕ ಉದ್ಯಾನದ ಸಮೀಪ ಆಟವಾಡುವ ಸಂದರ್ಭದಲ್ಲಿ ವಿದ್ಯುತ್‌ ತಂತಿಯ ಸ್ಪರ್ಶಕ್ಕೊಳಗಾಗಿ ಸಾವಿಗೀಡಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದದ್ದು ಸಾರ್ವಜನಿಕರ ನೆನಪಿನಿಂದ ಇನ್ನೂ ಮಾಸಿಲ್ಲ. ಈಗ ನಿಖಿಲ್‌ ಸರದಿ.

ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸಾವು ಸಂಭವಿಸಿದ ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ನಿರಂತರವಾಗಿ ವರದಿಯಾಗುತ್ತಲೇ ಇವೆ. ಇತ್ತೀಚೆಗಷ್ಟೇ ಕೊಡಗು ಜಿಲ್ಲೆಯ ದೊಡ್ಡಪುಲಿಕೋಟು ಗ್ರಾಮದ ಕಾಫಿ ತೋಟದಲ್ಲಿ ಮರಗಳ ರೆಂಬೆ ಕತ್ತರಿಸುವಾಗ ಮೂವರು ಕಾರ್ಮಿಕರು ಸಾವಿಗೀಡಾಗಿದ್ದರು. ಅವರು ಬಳಸುತ್ತಿದ್ದ ಅಲ್ಯೂಮಿನಿಯಂ ಏಣಿ ಜಾರಿ, ತೋಟದ ನಡುವೆ ಹಾದುಹೋಗಿರುವ ವಿದ್ಯುತ್‌ ತಂತಿಗಳ ಸಂಪರ್ಕಕ್ಕೆ ಒಳಗಾಗಿತ್ತು. ಅದರ ಅರಿವಿಲ್ಲದೆ, ಏಣಿಯನ್ನು ಸರಿಪಡಿಸಲು ಹೋದ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಇದೇ ಕೊಡಗಿನ ಅರ್ವತ್ತೊಕ್ಲು ಗ್ರಾಮದಲ್ಲಿ ತೆಂಗಿನಕಾಯಿ ಕೀಳಲು ಹೋದ ಮೂವರು ಕಾರ್ಮಿಕರು ವಿದ್ಯುತ್‌ ಆಘಾತದಿಂದ ಸಾವಿಗೀಡಾದ ದುರ್ಘಟನೆ ಕಳೆದ ತಿಂಗಳು ನಡೆದಿತ್ತು. ಅಲ್ಲಿ ಕೂಡ ಬಳಕೆಯಾಗಿದ್ದುದು ಅಲ್ಯೂಮಿನಿಯಂ ಏಣಿಯೇ. ಚಿಕ್ಕಮಗಳೂರು ಜಿಲ್ಲೆಯ ಸಸಿತೋಟದ ಬಳಿ ವಿದ್ಯುತ್‌ ಮಾರ್ಗ ಸರಿಪಡಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್‌ ಪ್ರವಹಿಸಿದ ಕಾರಣದಿಂದಾಗಿ ಓರ್ವ ಲೈನ್‌ಮ್ಯಾನ್‌ ಸಾವಿಗೀಡಾದ ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಎರಡು–ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ಇವೆಲ್ಲ ಘಟನೆಗಳು ಅಧಿಕಾರಿಗಳ ಬೇಜವಾಬ್ದಾರಿತನದ ಜೊತೆಗೆ ಸಾರ್ವಜನಿಕರ ಮೈಮರೆವಿಗೂ ನಿದರ್ಶನದಂತಿವೆ. ಅಮಾಯಕರ ಜೀವ ಅಗ್ಗವಲ್ಲ ಎನ್ನುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಅರಿತು ಜಾಗೃತರಾಗಬೇಕು. ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಂದರ್ಭವಿದು. ಮಳೆಗಾಲದಲ್ಲಿ ಅಸುರಕ್ಷಿತ ವಿದ್ಯುತ್‌ ಪರಿಕರಗಳಿಂದ ಉಂಟಾಗುವ ಅಪಾಯದ ಸಾಧ್ಯತೆಗಳೂ ಹೆಚ್ಚು. ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿಯೇ ಇರುವ ಅನೇಕ ಟ್ರಾನ್ಸ್‌ಫಾರ್ಮರ್‌ಗಳು ನೀರಿನ ಸಂಪರ್ಕಕ್ಕೆ ಸುಲಭವಾಗಿ ಬರುವಂತೆ ಇರುತ್ತವೆ. ರಸ್ತೆಗಳಲ್ಲಿನ ಮರಗಳ ರೆಂಬೆಕೊಂಬೆಗಳು ಅಡ್ಡಾದಿಡ್ಡಿಯಾಗಿ ಬೆಳೆದು ವಿದ್ಯುತ್‌ ತಂತಿಗಳಿಗೆ ತಾಕುವಂತೆ ಇರುತ್ತವೆ. ಇವೆಲ್ಲದರ ಬಗ್ಗೆ ಸಿಬ್ಬಂದಿ ನಿಗಾ ವಹಿಸಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !