ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ನೆರವು ನೀಡಿ, ಸದ್ಭಾವ ಮೂಡಿಸಿ

ಭಾರತಕ್ಕೂ, ಶ್ರೀಲಂಕಾಕ್ಕೂ ಸಮೃದ್ಧಿಯನ್ನು ತರುವ ಮಾರ್ಗವನ್ನು ಕೇಂದ್ರವು ಅನುಸರಿಸಬೇಕು
Last Updated 30 ಮಾರ್ಚ್ 2022, 5:08 IST
ಅಕ್ಷರ ಗಾತ್ರ

ಭಾರತದ ಜೊತೆ ಗಟ್ಟಿ ಸಾಂಸ್ಕೃತಿಕ ಸಂಬಂಧವನ್ನು ಹೊಂದಿರುವ ನೆರೆಯ ಪುಟ್ಟ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಅಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ ಕಾಗದ ಖರೀದಿಸಲು ಆಗದೆ, ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಲಂಕಾದ ಆಸ್ಪತ್ರೆಯೊಂದರಲ್ಲಿ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳು ಔಷಧಿಯ ಕೊರತೆಯಿಂದಾಗಿ ನಡೆಯುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವರದಿಯಾಗಿದೆ. ಇಂತಹ ಸಂದರ್ಭದಲ್ಲಿ ಆ ದೇಶಕ್ಕೆ ಆಹಾರ, ಔಷಧ ಮತ್ತು ಇತರ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸಲು ₹ 7,500 ಕೋಟಿ ಸಾಲ ಕೊಡಲು ಮುಂದಾಗುವ ಮೂಲಕ ಭಾರತ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಜನವರಿಯಲ್ಲಿ ಕೂಡ ಕೇಂದ್ರ ಸರ್ಕಾರವು ಶ್ರೀಲಂಕಾಕ್ಕೆ ಅಂದಾಜು ₹ 10 ಸಾವಿರ ಕೋಟಿ ಮೊತ್ತದ ನೆರವು ಒದಗಿಸಿತ್ತು. ಶ್ರೀಲಂಕಾ ಕಡೆಯಿಂದ ಭಾರತಕ್ಕೆ ಬರಬೇಕಿರುವ ಅಂದಾಜು
₹ 3,780 ಕೋಟಿ ಸಾಲದ ಮರುಪಾವತಿಗೆ ಹೆಚ್ಚಿನ ಸಮಯಾವಕಾಶ ನೀಡಲಾಗಿದೆ. ಈ ವರ್ಷದಲ್ಲಿ ಭಾರತವು ಇದುವರೆಗೆ ಶ್ರೀಲಂಕಾಕ್ಕೆ ಸರಿಸುಮಾರು ₹ 18 ಸಾವಿರ ಕೋಟಿ ಮೊತ್ತದ ನೆರವು ನೀಡಿದೆ. ಇದು ದೊಡ್ಡ ಮೊತ್ತ. ಆದರೆ, ಆರ್ಥಿಕವಾಗಿ ಬಹಳ ಕೆಟ್ಟ ಸ್ಥಿತಿಯನ್ನು ತಲುಪಿರುವ ಶ್ರೀಲಂಕಾಕ್ಕೆ ಇದು ಸಾಕಾಗದಿರಬಹುದು. ಶ್ರೀಲಂಕಾ ಈಗ ಅಂದಾಜು ₹ 53 ಸಾವಿರ ಕೋಟಿ ಮೊತ್ತದ ವಿದೇಶಿ ಸಾಲ ತೀರಿಸಬೇಕಾಗಿದೆ. ಆದರೆ, ಆ ದೇಶ ಈಗ ತೀವ್ರವಾದ ವಿದೇಶಿ ವಿನಿಮಯ ಕೊರತೆಯನ್ನು ಎದುರಿಸುತ್ತಿದೆ. ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹ 7,500 ಕೋಟಿಗಿಂತ ಕಡಿಮೆ ಮಟ್ಟಕ್ಕೆ ಕುಸಿದಿದೆ ಎನ್ನಲಾಗಿದೆ. ಆರ್ಥಿಕ ಮುಗ್ಗಟ್ಟಿನ ಪರಿಣಾಮವಾಗಿ ಶ್ರೀಲಂಕಾ ಸರ್ಕಾರವು ಮೂಲಭೂತ ಅವಶ್ಯಕತೆ
ಗಳಾದ ಆಹಾರ, ಹಾಲು, ಇಂಧನ ಆಮದಿನ ಮೇಲೆ ಮಿತಿ ವಿಧಿಸಿಕೊಳ್ಳಬೇಕಾದ ಸ್ಥಿತಿ ತಲುಪಿದೆ. ದೇಶವು ಸಾಲ ಮರುಪಾವತಿ ಮಾಡಲಾಗದೆ ದಿವಾಳಿಯ ಅಂಚಿಗೆ ಬಂದು ನಿಂತಿದೆ.

ವಿದೇಶಿ ವಿನಿಮಯ ಕೊರತೆಯು ಶ್ರೀಲಂಕಾದ ಜನಸಾಮಾನ್ಯರ ಮೇಲೆ ಬೀರಿರುವ ಪರಿಣಾಮ ಅಗಾಧ. ಆಹಾರ ವಸ್ತುಗಳು ಮತ್ತು ಹಾಲಿನ ಕೊರತೆ ಅಲ್ಲಿ ಉಂಟಾಗಿದೆ. ಜನಸಾಮಾನ್ಯರು ಇವುಗಳನ್ನು ಖರೀದಿಸುವುದೇ ದುಸ್ತರವಾಗಿದೆ. ಮುದ್ರಣ ಕಾಗದದ ಕೊರತೆಯಿಂದಾಗಿ ಶ್ರೀಲಂಕಾದ ಎರಡು ದಿನಪತ್ರಿಕೆ
ಗಳು ಮುದ್ರಣ ಆವೃತ್ತಿಯನ್ನು ನಿಲ್ಲಿಸಿವೆ. ಭಾರತದಿಂದ ಈಗ ದೊರೆತಿರುವ ಹಣಕಾಸಿನ ನೆರವು ಅಲ್ಲಿನವರಿಗೆ ಒಂದಿಷ್ಟು ಅನುಕೂಲ ತಂದುಕೊಡಬಹುದು. ಆದರೆ, ಭಾರತದಿಂದ ಪಡೆದ ಸಾಲದ ಪರಿಣಾಮಗಳ ಬಗ್ಗೆ ಅಲ್ಲಿ ಕಳವಳ ವ್ಯಕ್ತವಾಗಿದೆ ಎಂಬ ವರದಿಗಳು ಬಂದಿವೆ. ಭಾರತವು ಸಮುದ್ರ ಪ್ರದೇಶದ ಭದ್ರತೆಗೆ ಸಂಬಂಧಿಸಿದ ಕೆಲವು ಒಪ್ಪಂದಗಳಿಗೆ, ಇಂಧನ ಹಾಗೂ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲವು ಒಪ್ಪಂದಗಳಿಗೆ ಸಹಿ ಮಾಡುವಂತೆ ಶ್ರೀಲಂಕಾವನ್ನು ಕೇಳಬಹುದು ಎಂದು ವರದಿಗಳು ಸೂಚಿಸುತ್ತಿವೆ. ಇವು ಅಲ್ಲಿನ ಜನರಲ್ಲಿ ಭಾರತ ವಿರೋಧಿ ಭಾವನೆ ಬೆಳೆಯುವಂತೆ ಮಾಡಬಲ್ಲವು.

ಶ್ರೀಲಂಕಾ ವಿಚಾರದಲ್ಲಿ ಚೀನಾದ ಹಾದಿಯನ್ನು ಭಾರತ ತುಳಿಯಬಾರದು. ಈ ದ್ವೀಪರಾಷ್ಟ್ರದ ವಿಚಾರದಲ್ಲಿ ಚೀನಾ ತೋರಿದ ಧೋರಣೆ ಈಗ ವಿಶ್ವದ ಎಲ್ಲೆಡೆ ಖಂಡನೆಗೆ ಗುರಿಯಾಗಿದೆ. ಚೀನಾ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಶ್ರೀಲಂಕಾವನ್ನು ಸಾಲದ ಸುಳಿಗೆ ತಳ್ಳಿತು ಎಂಬ ಭಾವನೆ ವ್ಯಾಪಕವಾಗಿದೆ. ಶ್ರೀಲಂಕಾಕ್ಕೆ ಈಗ ಎದುರಾಗಿರುವ ಬಿಕ್ಕಟ್ಟನ್ನು ಕೇಂದ್ರ ಸರ್ಕಾರವು ಅಲ್ಲಿನ ಜನರಲ್ಲಿ ಭಾರತದ ಬಗ್ಗೆ ಸದ್ಭಾವನೆ ಬೆಳೆಯುವಂತೆ ನೋಡಿಕೊಳ್ಳಲು ಕೂಡ ಬಳಸಿಕೊಳ್ಳಬೇಕು. ಹಾಗೆ ಮಾಡಿದರೆ ಶ್ರೀಲಂಕಾ ಜೊತೆ ಇನ್ನಷ್ಟು ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗುತ್ತದೆ. ದೀರ್ಘಾವಧಿಯಲ್ಲಿ ಶ್ರೀಲಂಕಾ ದೇಶವನ್ನು ಭಾರತದ ಆಪ್ತ ವಲಯಕ್ಕೆ ಸೆಳೆದುಕೊಳ್ಳಲು ಕೂಡ ನೆರವಾಗುತ್ತದೆ. ಶ್ರೀಲಂಕಾ ಪಾಲಿಗೆ ಬಲಾಢ್ಯ ಪಾಲುದಾರ ಚೀನಾದ ಬದಲು ತಾನಾಗಬೇಕು ಎಂಬ ಬಯಕೆ ಭಾರತಕ್ಕೆ ಇದ್ದಲ್ಲಿ, ಕೇಂದ್ರವು ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಬೇಕು. ಭಾರತಕ್ಕೂ ಶ್ರೀಲಂಕಾಕ್ಕೂ ಸಮೃದ್ಧಿಯನ್ನು ತರುವ ಮಾರ್ಗವನ್ನು ಕೇಂದ್ರವು ಅನುಸರಿಸಬೇಕು. ಇಲ್ಲವಾದರೆ, ಭಾರತ ಈಗ ನೀಡಿರುವ ನೆರವು ಮರೆತುಹೋಗಿ, ಭಾರತ ವಿರೋಧಿ ಭಾವನೆಯು ಅಲ್ಲಿನ ಜನರ ಮನಸ್ಸಿನಲ್ಲಿ ಮತ್ತೆ ಮನೆ ಮಾಡಬಹುದು. ಶ್ರೀಲಂಕಾ, ಭಾರತದ ಪಾಲಿಗೆ ನೆರೆಯ ದೇಶ ಮಾತ್ರವೇ ಅಲ್ಲ; ಅದು ಭಾರತದ ಜೊತೆ ಬಹು ಹಿಂದಿನ ಕಾಲದಿಂದಲೂ ಸಾಂಸ್ಕೃತಿಕ ಕೊಡು–ಕೊಳ್ಳುವ ಸಂಬಂಧ ಹೊಂದಿರುವ ಅತ್ಯಂತ ಪ್ರಮುಖ ದೇಶಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT