ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಭೂತಾನ್‌ ಅಡಿಕೆ ಭಾರತಕ್ಕೆ ನಮ್ಮ ರೈತರ ಹಿತಾಸಕ್ತಿಗೆ ಆದೀತು ಧಕ್ಕೆ

ಭೂತಾನದಿಂದ ಹಸಿಯಡಿಕೆ ಬರಲಿ, ಕೆಂಪಡಿಕೆ ಬರಲಿ, ನಮ್ಮ ಬೆಳೆಗಾರರಿಗೆ ಅದು ಕೆಂಪು ನಿಶಾನೆಯಾಗಿಯೇ ಕಾಡುತ್ತದೆ
Last Updated 5 ಅಕ್ಟೋಬರ್ 2022, 20:30 IST
ಅಕ್ಷರ ಗಾತ್ರ

ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡುವಂಥ ಒಂದಲ್ಲ ಒಂದು ತುಮುಲ ಆಗಾಗ ಏಳುತ್ತಿರುತ್ತದೆ.
ಒಂದೆಡೆ ಅಡಿಕೆಗೆ ಹಳದಿ ರೋಗ, ಕೊಳೆರೋಗದಂಥ ಹಳೇ ಕಾಯಿಲೆಗಳ ಸಾಲಿಗೆ ಎಲೆಚುಕ್ಕಿ ರೋಗವೆಂಬ ಹೊಸ ಹಾವಳಿ. ಇನ್ನೊಂದೆಡೆ ಅತಿವೃಷ್ಟಿ, ಅನಾವೃಷ್ಟಿಯಂಥ ಹವಾಗುಣದ ಅಟಾಟೋಪ. ಮತ್ತೊಂದೆಡೆ ನಿರಂತರ ಏರುತ್ತಿರುವ ಕೂಲಿ ವೆಚ್ಚ ಮತ್ತು ಕೂಲಿಯಾಳುಗಳ ಅಭಾವವನ್ನು ನೀಗಬಲ್ಲ ಕೃಷಿ ತಾಂತ್ರಿಕ ಸಲಕರಣೆಗಳ ಅಭಾವ. ಅವೆಲ್ಲವುಗಳೊಂದಿಗೆ ಹೇಗೋ ಏಗುತ್ತಿರುವ ಬೆಳೆಗಾರರ ಎದುರು ಕೇಂದ್ರ ಸರ್ಕಾರವು ಈಗ ಅಡಿಕೆ ಆಮದಿನ ಗುಮ್ಮನನ್ನು ಛೂ ಬಿಟ್ಟಿದೆ. ಪ್ರತಿವರ್ಷ 17 ಸಾವಿರ ಟನ್‌ ಹಸಿರು ಅಡಿಕೆಯನ್ನು ಭೂತಾನ್‌ದಿಂದ ಆಮದು ಮಾಡಿಕೊಳ್ಳಲು ಅನುಮತಿ ನೀಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯವು ಸೆಪ್ಟೆಂಬರ್‌ 28ರಂದು ಆದೇಶ ಹೊರಡಿಸಿದೆ. ಪಶ್ಚಿಮ ಬಂಗಾಳದ ಜೈಗಾಂವ್‌ ಬಂದರಿನ ಮೂಲಕವೇ ಆಮದು ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಹಿಂದೆಲ್ಲ ಅಡಿಕೆಯನ್ನು ಆಮದು ಮಾಡಿಕೊಳ್ಳಬೇಕಾದರೆ ಅದಕ್ಕೆ ಪ್ರತೀ ಕಿಲೊಗ್ರಾಂಗೆ ಕನಿಷ್ಠ ₹ 251 ಬೆಲೆ ಇಟ್ಟಿರಬೇಕು ಮತ್ತು ವರ್ತಕರು ಸರ್ಕಾರಕ್ಕೆ ಆಮದು ಸುಂಕದ ರೂಪದಲ್ಲಿ ₹ 108 ಕಟ್ಟಬೇಕು ಎಂಬ ಕಟ್ಟುಪಾಡು ಇದ್ದವು. ಈಗಿನ ಧೋರಣೆಯ ಪ್ರಕಾರ ಆಮದು ಅಡಿಕೆಗೆ ಕನಿಷ್ಠ ದರವನ್ನೇ ನಿಗದಿ ಮಾಡಿಲ್ಲವಾದ್ದರಿಂದ ಅತಿ ಕಡಿಮೆ ಬೆಲೆಯಲ್ಲಿ ದಲ್ಲಾಳಿಗಳು ಭೂತಾನ್‌ನ ಅಡಿಕೆಯನ್ನು ಭಾರತದ ಮಾರುಕಟ್ಟೆಗೆ ತಂದು ಸುರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸಹಜವಾಗಿ ನಮ್ಮ ರೈತರ ಅಡಿಕೆ ಬೆಲೆ ಕುಸಿಯುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಅದರ ಹೊಡೆತ ರೈತನಿಗಷ್ಟೇ ಅಲ್ಲ, ಅಡಿಕೆ ಬೆಳೆಯುವ ಪ್ರದೇಶದ ಭೂರಹಿತ ಕಾರ್ಮಿಕರಿಗೂ ಗ್ರಾಮೀಣ ಕುಶಲಕರ್ಮಿಗಳಿಗೂ ಪಟ್ಟಣದ ತರಾವರಿ ಅಂಗಡಿಕಾರರಿಗೂ ಸರಣಿ ರೂಪದಲ್ಲಿ ಬೀಳುತ್ತದೆ. ಹೀಗಿದ್ದರೂ ಕೇಂದ್ರ ಸರ್ಕಾರದ ಧೋರಣೆ ಮಾತ್ರ ಯಾವ ತರ್ಕಕ್ಕೂ ಸಿಗದಂತಾಗಿದೆ. ಈಚೆಗೆ, ರಾಜ್ಯದ ಅಡಿಕೆ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಮಂಗಳೂರಿನ ‘ಕ್ಯಾಂಪ್ಕೊ’ದ ನೇತೃತ್ವದಲ್ಲಿ ದೆಹಲಿಗೆ ಹೋಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿಯಾಗಿದ್ದರು. ಅಡಿಕೆಯ ಆಮದು ಬೆಲೆಯ ಕನಿಷ್ಠ ಮಿತಿಯು ಏಳು ವರ್ಷಗಳಿಂದ ₹ 251ರಲ್ಲೇ ಸ್ಥಿರವಾಗಿದ್ದು ಅದನ್ನು ಪ್ರತೀ ಕಿಲೊಗ್ರಾಂಗೆ ₹ 360 ಅಥವಾ ಅದಕ್ಕಿಂತ ಹೆಚ್ಚಿಗೆ ಏರಿಸಿದರೆ ಮಾತ್ರ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯ ಎಂದು ವಿವರಿಸಿ ಬಂದಿದ್ದರು. ಮ್ಯಾನ್ಮಾರ್‌ ದೇಶದಿಂದ ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಮತ್ತು ಬಾಂಗ್ಲಾದೇಶದಿಂದ ಕಳ್ಳಸಾಗಣೆಯ ಮೂಲಕ, ಅಷ್ಟೇ ಅಲ್ಲ, ಅಡಿಕೆಯನ್ನೇ ಬೆಳೆಯದ ದುಬೈ ಮೂಲಕವೂ ಮುಂಬೈ ಬಂದರಿಗೆ ಅಡಿಕೆ ಬಂದಿಳಿಯುತ್ತಿರುವ ವಿದ್ಯಮಾನಗಳತ್ತ ಸಚಿವರ ಗಮನ ಸೆಳೆದಿದ್ದರು. ಈಗ ನೋಡಿದರೆ, ಆಮದು ಬೆಲೆಯನ್ನು ಹೆಚ್ಚಿಸುವುದು ಹಾಗಿರಲಿ, ಕನಿಷ್ಠ ಮಿತಿಯ ನಿರ್ಬಂಧವನ್ನೂ ಕಳಚಿ ಹಾಕಿ, ಭೂತಾನ್‌ದಿಂದ ಅನಿರ್ದಿಷ್ಟ ಅವಧಿಯವರೆಗೆ ಅಡಿಕೆಯನ್ನು ಆಮದು ಮಾಡಿಕೊಳ್ಳಲು ವ್ಯಾಪಾರಿಗಳಿಗೆ ಕೇಂದ್ರಸರ್ಕಾರವು ಅನುವು ಮಾಡಿಕೊಟ್ಟಿದೆ. ಯಾರನ್ನು ಮೆಚ್ಚಿಸಲೋಸುಗವೊ?

ಅಡಿಕೆಯನ್ನು ಬೆಳೆಯುವುದೆಂದರೆ ಒಂದು ರೀತಿಯ ಹುಲಿ ಸವಾರಿ ಎಂತಲೇ ಹೇಳಬೇಕು. ಮೊದಲ ಫಸಲನ್ನು ಪಡೆಯಲು ಏಳೆಂಟು ವರ್ಷಗಳ ದುಡಿಮೆಯನ್ನು ಬೇಡುವ ಇದು ರೋಗರುಜಿನ, ಪ್ರಕೃತಿ ವಿಕೋಪ ಅಥವಾ ಬೆಲೆ ಕುಸಿತದಂಥ ಕಾರಣದಿಂದಾಗಿ ರೈತನನ್ನು ಬೀಳಿಸಿದರೆ ಆತ ಇದರ ಬದಲಿಗೆ ಬೇರೇನನ್ನೂ ಬೆಳೆಯಲಾರ. ಇಳುವರಿಯಾಗಲೀ ಅದರ ವೆಚ್ಚವಾಗಲೀ ಮತ್ತು ಬೆಲೆಯಾಗಲೀ ಯಾವುದೂ ರೈತನ ನಿಯಂತ್ರಣದಲ್ಲಿ ಇಲ್ಲ. ಆದರೂ ಜಗತ್ತಿನಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಷ್ಟ್ರವೆನಿಸಿದ ನಮ್ಮ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಫಸಲು ಬೆಳೆಯುತ್ತಿದೆ. ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದ್ದು, ನಮ್ಮ ರಾಜ್ಯದ ಅಂದಾಜು ಎರಡು ಕೋಟಿ ಜನರ ಆರ್ಥಿಕತೆ ಇದೊಂದು ಫಸಲಿನ ಮೇಲೆಯೇ ನಿಂತಿದೆ. ಅಷ್ಟೇ ಮುಖ್ಯ ಸಂಗತಿ ಏನೆಂದರೆ, ರಾಜ್ಯದಲ್ಲಿ ಅರ್ಧದಷ್ಟು (ದೇಶದಾದ್ಯಂತ ಐವತ್ತಕ್ಕೂ ಹೆಚ್ಚು) ಸಂಸದರು ಅಡಿಕೆ ಬೆಳೆಯುವ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುತ್ತಾರೆ. ಅವರೆಲ್ಲರ ಗಮನಕ್ಕೇ ಬಾರದೆ ಅಡಿಕೆಗೆ ಸಂಬಂಧಿಸಿದ ಆಮದು ನೀತಿಯ ಪರಿಷ್ಕರಣೆ ಆಗುತ್ತಿದೆಯೇ? ಬೆಳೆಗಾರರನ್ನು ಕಡೆಗಣಿಸಿ ಕೇಂದ್ರ ಸರ್ಕಾರವು ಕೆಲವು ವ್ಯಾಪಾರಿಗಳ ಹಿತಾಸಕ್ತಿಗೇ ಆದ್ಯತೆ ನೀಡುತ್ತಿದ್ದರೆ ಈ ಜನಪ್ರತಿನಿಧಿಗಳು ಮೌನವಾಗಿರುವುದು ಸರ್ವಥಾ ಸರಿಯಲ್ಲ. ನಮ್ಮ ರೈತರು ಪದೇ ಪದೇ ಅಡಕತ್ತರಿಯಲ್ಲಿ ಸಿಲುಕುತ್ತಿರುವಾಗ ಬೇರೊಂದು ದೇಶವನ್ನು ‘ಆತ್ಮನಿರ್ಭರ’ ಮಾಡಲು ಹೊರಟಿರುವ ಸರ್ಕಾರದ ನೀತಿಯೂ ಸಮರ್ಥನೀಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT