ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಮಹಾ ಅಧಿವೇಶನದ ತೀರ್ಮಾನಗಳುಅನುಷ್ಠಾನಕ್ಕೆ ತರಬಲ್ಲದೇ ಕಾಂಗ್ರೆಸ್?

Last Updated 1 ಮಾರ್ಚ್ 2023, 23:30 IST
ಅಕ್ಷರ ಗಾತ್ರ

ರಾಯಪುರದಲ್ಲಿ ಈಚೆಗೆ ನಡೆದ 85ನೆಯ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ಹೊಸ ದಿಕ್ಕೊಂದನ್ನು ಕಂಡುಕೊಳ್ಳಲು ಹಾಗೂ ತನಗೆ ಹೊಸ ರಾಜಕೀಯ ಚೌಕಟ್ಟೊಂದನ್ನು ಹುಡುಕಿಕೊಳ್ಳಲು ಯತ್ನಿಸಿದೆ. ಚುನಾವಣಾ ಪ್ರಣಾಳಿಕೆಯ ರೀತಿಯಲ್ಲಿ ಕಾಣಿಸುವ, ರಾಜಕೀಯ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಅಜೆಂಡಾ ಒಂದನ್ನು ಪಕ್ಷವು ಅನಾವರಣ ಮಾಡಿದೆ. ಈ ವರ್ಷ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಇದು ಮಹತ್ವ ಪಡೆದುಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಮುಂದಿನ ವರ್ಷ ದೇಶವು ಲೋಕಸಭಾ ಚುನಾವಣೆ ಎದುರಿಸಲಿದೆ. ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುನ್ನೆಲೆಗೆ ತರುವ ನಿಲುವನ್ನು ಪಕ್ಷವು ಪ್ರಜ್ಞಾಪೂರ್ವಕವಾಗಿ ಕೈಗೊಳ್ಳುವ ಯತ್ನ ನಡೆಸಿದೆ. 2004ರಿಂದ 2014ರವರೆಗಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಆಡಳಿತ ಅವಧಿಯಲ್ಲಿ ಅನುಸರಿಸಿದ್ದ ನಿಲುವಿನಿಂದ ಕೆಲವು ಹೆಜ್ಜೆ ಮುಂದಕ್ಕೆ ಹೋಗಲು ಪಕ್ಷವು ಪ್ರಯತ್ನ ಮಾಡಿದೆ. ಸಮಾಜದ ತಳ ವರ್ಗಗಳು ಹಾಗೂ ಸಮಾಜದ ಪರಿಧಿಗೆ ತಳ್ಳಲ್ಪಟ್ಟ ವರ್ಗಗಳ ಆಕಾಂಕ್ಷೆಗಳಿಗೆ ಒಂದು ಸ್ಥಾನ ಕಲ್ಪಿಸಿ, ಆ ಮೂಲಕ ಈ ವರ್ಗಗಳ ನಡುವೆ ಪಕ್ಷದ ಬಗೆಗಿನ ಸದಭಿಪ್ರಾಯವನ್ನು ಹೆಚ್ಚಿಸುವ ಯತ್ನ ನಡೆಸಿದೆ. ಹಲವು ರಾಜ್ಯಗಳಲ್ಲಿ ಸಾಮಾಜಿಕ ನ್ಯಾಯವನ್ನು ಆದ್ಯತೆಯನ್ನಾಗಿ ಇರಿಸಿಕೊಂಡ ರಾಜಕೀಯ ಪಕ್ಷಗಳ ಉಗಮದ ನಂತರದಲ್ಲಿ ಹಾಗೂ ಈ ವರ್ಗಗಳ ಪೈಕಿ ಕೆಲವನ್ನು ಬಿಜೆಪಿ ತನ್ನ ಮತಬುಟ್ಟಿಗೆ ಸೆಳೆದುಕೊಂಡ ನಂತರದಲ್ಲಿ ಕಾಂಗ್ರೆಸ್ ಈ ವರ್ಗಗಳ ನಡುವೆ ತನ್ನ ನೆಲೆಯನ್ನು ಒಂದಷ್ಟು ಕಳೆದುಕೊಂಡಿತ್ತು. ಜಾತಿ ಗಣತಿ ನಡೆಸುವ ಭರವಸೆ, ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಪ್ರತ್ಯೇಕ ಸಚಿವಾಲಯ ರಚನೆ, ನ್ಯಾಯಾಂಗದ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಮಾತುಗಳು
ಪಕ್ಷವನ್ನು ಪುನರ್‌ರೂಪಿಸುವ ಅಂಶಗಳಾಗಿ ಕಾಣಿಸುತ್ತಿವೆ. ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ(ಸಿಡಬ್ಲ್ಯುಸಿ) ಶೇಕಡ 50ರಷ್ಟು ಸ್ಥಾನಗಳನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾಗಿ ಇಡುವ ತೀರ್ಮಾನವನ್ನು ಕೂಡ ಪಕ್ಷವು ಕೈಗೊಂಡಿದೆ.

ಈ ಬದಲಾವಣೆಗಳು ತೋರಿಕೆಯ ಉದ್ದೇಶದವು ಅಲ್ಲ. ಬದಲಿಗೆ, ಪಕ್ಷದ ನಿಲುವಿನಲ್ಲಿ ಆಗಿರುವ ಬದಲಾವಣೆ. ಆದರೆ, ಈ ತೀರ್ಮಾನಗಳನ್ನೆಲ್ಲ ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿಯು ಪಕ್ಷಕ್ಕೆ ಇದೆಯೇ ಎಂಬುದನ್ನು ಕಾದುನೋಡಬೇಕು. ಹಿಂದಿನ ವರ್ಷ ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಪಕ್ಷ ಕೈಗೊಂಡಿದ್ದ ಹಲವು ತೀರ್ಮಾನಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಈ ಹಿಂದಿನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಕ್ಷವು ವಿಸ್ತರಿಸಲು ಬಯಸಿದೆ. ಹಾಗಾಗಿ ಅದು ಕಡು ಬಡವರಿಗೆ ಹಾಗೂ ಅತ್ಯಂತ ದುರ್ಬಲ ವರ್ಗಗಳಿಗೆ ಕನಿಷ್ಠ ಆದಾಯ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದೆ. ಆರೋಗ್ಯದ ಹಕ್ಕಿನ ಮೇಲೆ ಗಮನ ನೀಡುವ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಪಕ್ಷವು ಜನರ ಮುಂದಿರಿಸಿದೆ. ಒಬ್ಬಂಟಿ ಮಹಿಳೆಯರಿಗೆ, ಹಿರಿಯರಿಗೆ, ಅಂಗವೈಕಲ್ಯ ಹೊಂದಿರುವವರಿಗೆ ಕೂಡ ಸಾಮಾಜಿಕ ಭದ್ರತಾ ಕ್ರಮಗಳನ್ನು ಜಾರಿಗೆ ತರುವ ಭರವಸೆ ನೀಡಿದೆ. ಈ ಎಲ್ಲ ಕ್ರಮಗಳ ಮೂಲಕ ಬಿಜೆಪಿಯನ್ನು ಎದುರಿಸುವ ಭರವಸೆಯಲ್ಲಿ ಕಾಂಗ್ರೆಸ್‌ ಇರುವಂತಿದೆ. ಧಾರ್ಮಿಕ ತಾರತಮ್ಯ ಮತ್ತು ದ್ವೇಷ ಹರಡುವ ಕೃತ್ಯಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ರೂಪಿಸುವ ಬಗ್ಗೆಯೂ ಕಾಂಗ್ರೆಸ್ ಪ್ರಸ್ತಾಪಿಸಿದೆ.

ಜನರ ಮೇಲೆ ಪರಿಣಾಮ ಬೀರಲು ಹಾಗೂ ಅವರ ಬೆಂಬಲ ಪಡೆದುಕೊಳ್ಳಲು ಒಂದು ಅಜೆಂಡಾ ರೂಪಿಸಿದರೆ ಸಾಕಾಗುವುದಿಲ್ಲ ಎಂಬುದನ್ನು ಪಕ್ಷವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಈಚೆಗಷ್ಟೇ ಭಾರತ್ ಜೋಡೊ ಯಾತ್ರೆಯನ್ನು ಪೂರ್ಣಗೊಳಿಸಿರುವ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪ್ರಮುಖ ನಾಯಕರಾಗಿ ಬಿಂಬಿತರಾಗಲಿದ್ದಾರೆ. ಆದರೆ, ಪಕ್ಷವು ಸಿಡಬ್ಲ್ಯುಸಿ ಸ್ಥಾನಗಳಿಗೆ ಚುನಾವಣೆ ನಡೆಸಲಿಲ್ಲ ಎಂಬುದು ಇಲ್ಲಿ ಗಮನಾರ್ಹ. ಚುನಾವಣೆಯ ಬದಲಿಗೆ ಪಕ್ಷವು ಈ ಸ್ಥಾನಗಳಿಗೆ ಅರ್ಹರನ್ನು ನೇಮಕ ಮಾಡುವ ಅಧಿಕಾರವನ್ನು ಅಧ್ಯಕ್ಷರಿಗೆ ಬಿಟ್ಟುಕೊಡುವ ಹಳೆಯ ಪದ್ಧತಿಗೆ ಶರಣುಹೋಯಿತು. ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಸಮಾನಮನಸ್ಕ ಪಕ್ಷಗಳ ಜೊತೆಗೂಡಿ ಕೆಲಸ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಆದರೆ, ಬಿಜೆಪಿ ವಿರುದ್ಧದ ಹೋರಾಟ ದಲ್ಲಿ ಕಾಂಗ್ರೆಸ್ ಬಯಸುತ್ತಿರುವ ಸ್ಥಾನಕ್ಕೆ ಇತರ ಪಕ್ಷಗಳು ಒಪ್ಪಿಗೆ ನೀಡಲಿವೆಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT