ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದಲಿತ ಸಂಘಟನೆಗಳ ಏಕತೆ ಪ್ರದರ್ಶನಹೊಸ ಸಂದೇಶ, ಹೊಸ ಭರವಸೆ

Last Updated 7 ಡಿಸೆಂಬರ್ 2022, 19:42 IST
ಅಕ್ಷರ ಗಾತ್ರ

ಕೋಮುದ್ವೇಷದ ಮಾತು–ಚಟುವಟಿಕೆಗಳು ಎಲ್ಲೆಡೆ ತುಂಬಿರುವ ಸಂದರ್ಭದಲ್ಲಿ, ಸಂವಿಧಾನದ ನೆಲೆಗಟ್ಟಿನಲ್ಲಿ ಬಹುತ್ವಕ್ಕೆ ಹಂಬಲಿಸುವ ಸಮಾನಮನಸ್ಕರು ಒಂದೆಡೆ ಸೇರಿ ಚರ್ಚಿಸುವುದು ಆಶಾದಾಯಕ ಸಂಗತಿ. ಇಂಥದೊಂದು ಆರೋಗ್ಯಕರ ಬೆಳವಣಿಗೆಗೆ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ– ದಲಿತ ಸಂಘಟನೆಗಳ ಬೃಹತ್‌ ಐಕ್ಯತಾ ಸಮಾವೇಶ’ ನಾಂದಿ ಹಾಡಿದೆ. ‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ಬೆಂಗಳೂರಿನಲ್ಲಿ ಸಂಘಟಿಸಿದ್ದ ಈ ಸಮಾವೇಶಕ್ಕೆ ದಲಿತರ ಹಿತದೃಷ್ಟಿಯಿಂದ ವಿಶೇಷ ಮಹತ್ವವಿದೆ. ಸಮುದಾಯದ ಚೌಕಟ್ಟನ್ನು ಮೀರಿ ಇಡೀ ಸಮಾಜಕ್ಕೆ ಒಳಿತನ್ನುಂಟುಮಾಡುವ ಪ್ರಯತ್ನದ ರೂಪದಲ್ಲೂ ಪ್ರಸಕ್ತ ಬೆಳವಣಿಗೆಯನ್ನು ಗಮನಿಸಬಹುದು. ದಲಿತರು, ಅಲ್ಪಸಂಖ್ಯಾತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಹಾಗೂ ಅವರು ದೇಶದ ನಾಗರಿಕರಾಗಿ ಆತ್ಮಘನತೆಯಿಂದ ಬದುಕುವ ಭರವಸೆಯನ್ನು ಇಂಥ ಸಮಾವೇಶಗಳು ತುಂಬುತ್ತವೆ. ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಚೆಲ್ಲಾಪಿಲ್ಲಿಯಾಗಿದ್ದ ರಾಜ್ಯದ ದಲಿತ ಸಂಘಟನೆಗಳು, ತಮ್ಮ ತಕರಾರುಗಳನ್ನು ಮರೆತು ಒಟ್ಟುಗೂಡಿ ಕೆಲಸ ಮಾಡಲು ನಿರ್ಧರಿಸುವುದು ಒಂದು ವಿಶೇಷ ಸಂಗತಿ. ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿರುವುದಕ್ಕೆ ಸಾಮಾಜಿಕ ಹಾಗೂ ರಾಜಕೀಯ ಮಹತ್ವವಿದೆ. ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್ 6ರಂದು ನಡೆಯುವ ಮೂಲಕ ಈ ಸಮಾವೇಶವು ತನ್ನ ಬದ್ಧತೆ ಸಂವಿಧಾನಕ್ಕೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಅಂಬೇಡ್ಕರ್‌ ಚಿಂತನೆಗಳ ಬೆಳಕಿನಲ್ಲಿ ಭಾರತೀಯ ಸಮಾಜ ನಡೆಯಬೇಕಾದ ಅಗತ್ಯವನ್ನೂ ಸಮಾವೇಶ ಮನದಟ್ಟು ಮಾಡುವಂತಿದೆ. ರಾಜಕೀಯ ಪಕ್ಷಗಳೊಂದಿಗೆ ನಂಟು ಹೊಂದಿರುವವರು ಹಾಗೂ ಕೋಮುವಾದಿ ಶಕ್ತಿಗಳನ್ನು ದೂರವಿಟ್ಟು ಹೋರಾಟ ನಡೆಸಲು ನಿರ್ಧರಿಸಿರುವುದು, ಈ ಕಾಲಕ್ಕೆ ಅತ್ಯಗತ್ಯವಾದ ವಿವೇಕ. ‘ಸಂವಿಧಾನದತ್ತವಾದ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುವ ಮೂಲಕ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಬೃಹತ್‌ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯವೂ ಸರಿಯಾಗಿದೆ.

ತರತಮಗಳಿಂದ ಹೊರತಾದ ಸಮಾಜವನ್ನು ರೂಪಿಸುವ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕಾದುದು ಈ ಕಾಲಘಟ್ಟದ ಅಗತ್ಯ. ಹಿಂದುಳಿದ ವರ್ಗಗಳು ಪ್ರತ್ಯೇಕವಾಗಿ ಉಳಿದು ನಡೆಸುವ ರಾಜಕೀಯ ಹೋರಾಟಗಳು ದೀರ್ಘ ದಾರಿ ಸವೆಸುವ ಶಕ್ತಿ ಹೊಂದಿರುವುದಿಲ್ಲ. ದಲಿತ ಸಂಘಟನೆಗಳೆಲ್ಲ ಒಂದುಗೂಡಿ ಧ್ವನಿ ಎತ್ತಿದಾಗಷ್ಟೇ ಸರ್ಕಾರದ ಗಮನಸೆಳೆಯುವುದು ಸಾಧ್ಯವಿದೆ. ಈ ದಿಸೆಯಲ್ಲಿ ರಾಜ್ಯದ ದಲಿತ ಸಂಘಟನೆಗಳು ಹೋರಾಟದ ಹಾದಿಯಲ್ಲಿ ಒಟ್ಟಾಗಿ ನಡೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ದೊರಕುವುದು ಸಾಮುದಾಯಿಕ ‍ಪ್ರಯತ್ನಗಳಿಂದಷ್ಟೇ ಸಾಧ್ಯ. ದಲಿತ ಸಂಘಟನೆಗಳ ನಡುವಿನ ಬಿರುಕನ್ನು ರಾಜಕೀಯ ಪಕ್ಷಗಳು ಈವರೆಗೂ ತಮ್ಮ ಹಿತಾಸಕ್ತಿಗೆ ಬಳಸಿಕೊಂಡಿರುವುದೇ ಹೆಚ್ಚು. ಇದರಿಂದಾಗಿ, ದಲಿತರು ಮತಬ್ಯಾಂಕ್‌ಗಳಾಗಿ ಚಲಾವಣೆಯಲ್ಲಿ ಇರುತ್ತಾರೆಯೇ ಹೊರತು, ಅಧಿಕಾರದ ನಿರ್ಣಾಯಕ ಸ್ಥಾನಗಳಿಗೆ ಬರುವುದು ಕಷ್ಟಸಾಧ್ಯ. ದಲಿತ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾದಾಗಷ್ಟೇ ಸಮುದಾಯದ ಅಭಿವೃದ್ಧಿ ಮತ್ತು ರಾಜಕೀಯ ಹಿತಾಸಕ್ತಿ ರಕ್ಷಣೆಯ ಪ್ರಯತ್ನಗಳಿಗೆ ಬಲ ಬರಬಹುದು. ಧರ್ಮನಿರಪೇಕ್ಷತೆಯನ್ನು ಪ್ರತಿಪಾದಿಸುವ ಸಂವಿಧಾನವನ್ನು ಅಣಕ ಮಾಡುವಂತಹ ಘಟನೆಗಳು ದೇಶದಲ್ಲಿ ನಿರಂತರವಾಗಿ ನಡೆಯುತ್ತಿವೆ. ದೇಶದ ವಿವಿಧ ಭಾಗಗಳಲ್ಲಿ ಅಸ್ಪೃಶ್ಯತೆ ಆಚರಣೆಯ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ದಲಿತ ಹೆಣ್ಣುಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಅತ್ಯಾಚಾರಗಳು ನಡೆಯುತ್ತಿವೆ. ಆಡಳಿತ ವ್ಯವಸ್ಥೆಯೇ ಕೋಮುವಾದವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೋಷಿಸುತ್ತಿದೆ. ಈ ಎಲ್ಲ ಶೋಷಣೆಯನ್ನು ತಡೆಗಟ್ಟಬೇಕಾದ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ, ಸಂವಿಧಾನವನ್ನು ಬಲಪಡಿಸಬೇಕಾದ ಹೊಣೆಗಾರಿಕೆ ಪ್ರಜಾಪ್ರಭುತ್ವವನ್ನು ಹಂಬಲಿಸುವ ಪ್ರತಿಯೊಬ್ಬ ನಾಗರಿಕನದೂ ಆಗಿದೆ. ವಿಶೇಷವಾಗಿ, ದಲಿತ ಸಮುದಾಯಕ್ಕೆ ಸೇರಿದವರು ಸಂವಿಧಾನದ ಸ್ವರೂಪಕ್ಕೆ ಗಾಸಿಯಾಗದಂತೆ ಎಚ್ಚರ ವಹಿಸಬೇಕಾಗಿದೆ.

ಬೆಂಗಳೂರಿನಲ್ಲಿ ನಡೆದ ‘ಐಕ್ಯತಾ ಸಮಾವೇಶ’ ದಲಿತ ಮನಸ್ಸುಗಳು ಜಾಗೃತಗೊಂಡ ಸಂಕೇತದಂತಿದೆ. ಆದರೆ, ಈ ಸಮಾವೇಶವೂ ಟೀಕೆಟಿಪ್ಪಣಿಗಳಿಂದ ಮುಕ್ತವಾಗಿಲ್ಲ ಎನ್ನುವುದನ್ನು ಮರೆಯಬಾರದು. ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ನಡೆದಿಲ್ಲ ಎನ್ನುವುದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಮಾಧಾನದ ನಡುವೆಯೂ ಸಮಾವೇಶ ದೊಡ್ಡ ಯಶಸ್ಸು ಕಂಡಿರುವುದು ಹಾಗೂ ಯುವಜನ ಗಮನಾರ್ಹ ಸಂಖ್ಯೆಯಲ್ಲಿ ಭಾಗವಹಿಸಿರುವುದು, ಇಂಥ ಸಾಮೂಹಿಕ ನಡೆ ಈ ಕಾಲಕ್ಕೆ ಎಷ್ಟು ಅಗತ್ಯ ಎನ್ನುವುದನ್ನು ಸೂಚಿಸುವಂತಿದೆ. ಈ ಯಶಸ್ಸು ಸಂಘಟನೆಗಳ ಮುಖಂಡರ ಮನಸ್ಸುಗಳನ್ನು ಇನ್ನಷ್ಟು ತಿಳಿಯಾಗಿಸಿ, ಮುಂದಿನ ದಿನಗಳಲ್ಲಿ ಎಲ್ಲ ದಲಿತರನ್ನೂ ಒಟ್ಟಿಗೆ ಸಂಘಟಿಸಿ ಕಾರ್ಯನಿರ್ವಹಿಸಲು ಅವರಿಗೆ ಪ್ರೇರಣೆಯಾಗಬೇಕು. ಮನಸ್ಸುಗಳನ್ನು ಬೆಸೆಯುವಂತಹ ಹಾಗೂ ರಾಜಕೀಯ ಎಚ್ಚರ ಮೂಡಿಸುವ ಇಂತಹ ಪ್ರಯತ್ನಗಳಿಗೆಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಶಕ್ತಿಯಿದೆ. ಆ ಕಾರಣದಿಂದಲೇ ದೇಶದ ವಿವಿಧ ಭಾಗಗಳಲ್ಲೂ ದಲಿತರ ಏಕತಾ ಸಮಾವೇಶಗಳು ನಡೆಯಬೇಕು. ಕರ್ನಾಟಕದ ದಲಿತ ಸಂಘಟನೆಗಳ ಒಗ್ಗಟ್ಟಿನ ಪ್ರಯತ್ನ ಉಳಿದ ರಾಜ್ಯಗಳಿಗೂ ಮಾದರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT