ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸೆರೆ ಸಿಕ್ಕ ಮಾದಕ ವಸ್ತು ಎಚ್ಚರಿಕೆ ಕರೆಗಂಟೆ

Published 17 ಮೇ 2023, 19:15 IST
Last Updated 17 ಮೇ 2023, 19:15 IST
ಅಕ್ಷರ ಗಾತ್ರ

ಕೊಚ್ಚಿ ತೀರಕ್ಕೆ ಹೊಂದಿಕೊಂಡ ಸಮುದ್ರದಲ್ಲಿ ಕಳೆದ ವಾರ ಸುಮಾರು 2,500 ಕೆ.ಜಿಯಷ್ಟು ಅತ್ಯಧಿಕ ಗುಣಮಟ್ಟದ ಮೆಥ್ಯಾಮ್‌ಫೆಟಮೈನ್ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇದು ನಡೆದಿದೆ. ಮಾದಕವಸ್ತು ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಇದು ದೊಡ್ಡ ಪ್ರಕರಣವಾಗಿದೆ. ಇದರ ಮೌಲ್ಯ ಸುಮಾರು ₹ 15 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಕಡಲು ಮಾರ್ಗಗಳ ಮೂಲಕ ದೇಶದೊಳಕ್ಕೆ ನಡೆಯುವ ಮಾದಕವಸ್ತು ಕಳ್ಳಸಾಗಣೆ ಮೇಲೆ ನಿಗಾ ಇರಿಸುವ ‘ಆಪರೇಷನ್ ಸಮುದ್ರಗುಪ್ತ’ ಕಾರ್ಯಾಚರಣೆಯ ಭಾಗ ಇದಾಗಿದೆ. ಮುಂದ್ರಾ ಬಂದರಿನಲ್ಲಿ ಸುಮಾರು 3,000 ಕೆ.ಜಿ ಆಫ್ಗನ್ ಹೆರಾಯಿನ್ ವಶಪಡಿಸಿಕೊಂಡಿದ್ದು ಮತ್ತು ತೂತ್ತುಕುಡಿ ಬಂದರಿನಲ್ಲಿ 2021ರಲ್ಲಿ 303 ಕೆ.ಜಿ ಕೊಕೇನ್ ವಶಪಡಿಸಿಕೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಇನ್ನಿತರ ದೊಡ್ಡ ಪ್ರಕರಣಗಳಾಗಿವೆ. ಕೊಚ್ಚಿಯಲ್ಲಿ ವಶಪಡಿಸಿಕೊಂಡಿರುವ ಮಾದಕವಸ್ತುವಿನ ಪ್ರಮುಖ ಮೂಲ ಅಫ್ಗಾನಿಸ್ತಾನ ಎಂದು ತಿಳಿದುಬಂದಿದೆ. ಕಳೆದ ವರ್ಷ ಜನವರಿಯಲ್ಲಿ ‘ಆಪರೇಷನ್ ಸಮುದ್ರಗುಪ್ತ’ಕ್ಕೆ ಚಾಲನೆ ನೀಡಿದ ಬಳಿಕ ಬೃಹತ್‌ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕವಸ್ತುವಿನ ಒಳನುಸುಳುವಿಕೆಗೆ ಆಸ್ಪದ ನೀಡುವ ಆಯಕಟ್ಟಿನ ಜಾಗಗಳಲ್ಲಿ ಬಿಗಿ ಕಣ್ಗಾವಲು, ಸಮರ್ಥ ಬೇಹುಗಾರಿಕೆ ಹಾಗೂ ಕಟ್ಟೆಚ್ಚರದ ಗಸ್ತುಪಡೆಯ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ.

ಕೊಚ್ಚಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಮಾದಕವಸ್ತುವಿನ ಮೂಲ ಅಫ್ಗಾನಿಸ್ತಾನವಾದರೂ ಇದರ ಕಳ್ಳಸಾಗಣೆ ಕಾರ್ಯಾಚರಣೆಯು ಪಾಕಿಸ್ತಾನದ್ದಾಗಿದೆ. ಈ ಪ್ರಕರಣದಲ್ಲಿ ಮಾದಕವಸ್ತುವನ್ನು ಪಾಕಿಸ್ತಾನ ಮೂಲದ ಅಕ್ಕಿ ಕಂಪನಿಯೊಂದರ ಲೇಬಲ್ ಆಂಟಿಸಿದ್ದ ಸೆಣಬಿನ ಚೀಲಗಳಲ್ಲಿ ಸಾಗಿಸಲಾಗುತ್ತಿತ್ತು. ಮೊದಲಿಗೆ ಇದನ್ನು ಹೊತ್ತ ಹಡಗು ಪಾಕಿಸ್ತಾನ ಮತ್ತು ಇರಾನ್‌ಗೆ ಹೊಂದಿಕೊಂಡ ಮಕರನ್ ಕಡಲ ತೀರದಿಂದ ಹೊರಟಿತ್ತು. ಈ ಸಂಬಂಧ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯು ಹೆಚ್ಚಾಗುತ್ತಿದೆ. ಇದಕ್ಕಾಗಿ ಕಳ್ಳಸಾಗಣೆದಾರರು ಹೆಚ್ಚೆಚ್ಚು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಎನ್‌ಸಿಬಿ ವರದಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಕೊರಿಯರ್, ಪಾರ್ಸಲ್ ಮತ್ತು ಅಂಚೆ ಸೇವೆಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ವರದಿ ಪ್ರಕಾರ, ಕೊರಿಯರ್ ಮತ್ತು ಅಂಚೆ ಸೇವೆಗಳ ಹೆಚ್ಚಿನ ಬಳಕೆಗೂ ದೇಶದಲ್ಲಿ ಡಾರ್ಕ್ ವೆಬ್ ಚಟುವಟಿಕೆಗಳು ಹೆಚ್ಚಾಗಿರುವುದಕ್ಕೂ ನೇರವಾದ ಸಂಬಂಧವಿದೆ. ಕೋವಿಡ್– 19ರ ಸಾಂಕ್ರಾಮಿಕದ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ನಿಬಂಧನೆಗಳನ್ನು ಹೇರಿದಾಗ, ಮಾದಕವಸ್ತು ಕಳ್ಳಸಾಗಣೆದಾರರು ಅಂಚೆ ಸೇವೆ ಬಳಸಿಕೊಳ್ಳುವ ರೂಢಿಗೆ ಇಳಿದರು. ಅದಾದ ಮೇಲೆ ಈಗ ಎರಡೂ ವಿಧಾನಗಳನ್ನು ಕಳ್ಳಸಾಗಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಹೆರಾಯಿನ್ ಕಳ್ಳಸಾಗಣೆಯು ಮುಖ್ಯವಾಗಿ ದೇಶದ ಪಶ್ಚಿಮ ಭೂಭಾಗದ ಗಡಿ ಮತ್ತು ನೇಪಾಳದ ಮೂಲಕ ನಡೆಯುತ್ತಿದೆ. ಹಾಗೆಯೇ, ದಕ್ಷಿಣ ಅಮೆರಿಕ ಮೂಲದ ಕೊಕೇನ್, ಪ್ರಮುಖವಾಗಿ ವಿಮಾನ ನಿಲ್ದಾಣಗಳ ಮೂಲಕ ಕಳ್ಳಸಾಗಣೆಯಾಗುತ್ತಿದೆ. ಇವಲ್ಲದೆ, ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಮಾದಕವಸ್ತುಗಳನ್ನು ಕೂಡ ದೇಶದೊಳಕ್ಕೆ ನುಸುಳಿಸುವ ಸಂಚುಗಳು ನಡೆಯುತ್ತಿವೆ.

ಮಾದಕವಸ್ತುಗಳು ಜನರ ಆರೋಗ್ಯಕ್ಕೆ ಅಪಾಯ ತಂದೊಡ್ಡುವುದರ ಜೊತೆಗೆ ದೇಶದ ಆರ್ಥಿಕತೆಗೆ ಗಂಭೀರ ಸವಾಲುಗಳನ್ನು ಒಡ್ಡುತ್ತವೆ. ಮಾದಕವಸ್ತುಗಳ ಬಳಕೆ ಹಾಗೂ ಅವುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವರದಿಗಳಿವೆ. ಆದರೆ, ದೇಶಕ್ಕೆ ಕಳ್ಳಸಾಗಣೆ ಮೂಲಕ ಒಳನುಸುಳುತ್ತಿರುವ ದೊಡ್ಡ ಪ್ರಮಾಣದ ಮಾದಕವಸ್ತುಗಳಲ್ಲಿ ಬೆಳಕಿಗೆ ಬರುತ್ತಿರುವುದು ಒಂದು ಸಣ್ಣ ಭಾಗವಷ್ಟೇ ಆಗಿದೆ. ಬಹಳಷ್ಟು ಸಂದರ್ಭಗಳಲ್ಲಿ, ಕಳ್ಳಸಾಗಣೆದಾರರು ಕಾನೂನು ಜಾರಿ ಮಾಡುವ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂಬುದು ದೃಢಪಟ್ಟಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವ ಸಂಸ್ಥೆಗಳ ಮಾನವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೇಹುಗಾರಿಕೆ ಸಾಮರ್ಥ್ಯಗಳನ್ನು ಸುಧಾರಿಸಬೇಕಾದ ಅಗತ್ಯವಿದೆ. ಅವುಗಳ ವಿತರಣಾ ಜಾಲಗಳನ್ನು ಬಗ್ಗುಬಡಿಯಬೇಕು, ಸಂಬಂಧಿಸಿದ ಮಾಫಿಯಾ ಮತ್ತು ಸಿಂಡಿಕೇಟ್‌ಗಳನ್ನು ನಿಷ್ಕ್ರಿಯಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಮಾದಕವಸ್ತು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ಪ್ರಚಾರಾಂದೋಲನಗಳು ನಡೆಯಬೇಕು. ಮಾದಕವಸ್ತು ವ್ಯಸನಿಗಳು ಸಹಜ ಬದುಕಿಗೆ ವಾಪಸಾಗಲು ಪೂರಕವಾದ ಹೆಚ್ಚಿನ ಪ್ರಯತ್ನಗಳು ಮತ್ತು ವ್ಯವಸ್ಥೆಗಳು ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT