ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಡಿಸೆಂಬರ್‌ ತ್ರೈಮಾಸಿಕದ ಜಿಡಿಪಿ ಆರ್ಥಿಕ ಚಟುವಟಿಕೆ ಕುಗ್ಗುವ ಸೂಚನೆ?

Last Updated 3 ಮಾರ್ಚ್ 2022, 22:44 IST
ಅಕ್ಷರ ಗಾತ್ರ

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ ಶೇಕಡ 5.4ರಷ್ಟು ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ವರದಿ ಹೇಳಿದೆ. 2020ರ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 0.5ರಷ್ಟು ಮಾತ್ರ ಬೆಳವಣಿಗೆ ಸಾಧಿಸಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಕಂಡುಬಂದಿರುವ ಜಿಡಿಪಿ ಬೆಳವಣಿಗೆಯು ದೊಡ್ಡ ಮಟ್ಟದಲ್ಲಿಯೇ ಇದೆ ಎಂಬುದು ನಿಜ. ಆದರೆ, 2021–22ನೇ ಆರ್ಥಿಕ ವರ್ಷದಲ್ಲಿ ಇದುವರೆಗೆ ಕಂಡುಬಂದಿರುವ ಬೆಳವಣಿಗೆ ಪ್ರಮಾಣವನ್ನು ಗಮನಿಸಿದರೆ, ಕಳವಳಕ್ಕೆ ಕಾರಣವಾಗುವ ಕೆಲವು ಅಂಶಗಳು ಕಾಣಿಸುತ್ತವೆ.

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ದಾಖಲೆಯ ಶೇ 20.3ರಷ್ಟು ಇತ್ತು. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯು ಹಿಂಜರಿತದ ಸ್ಥಿತಿಯಲ್ಲಿ ಇತ್ತು. ಅದಕ್ಕೆ ಹೋಲಿಸಿದರೆ, ಈ ಬಾರಿಯ ಜೂನ್ ತ್ರೈಮಾಸಿಕದ ಬೆಳವಣಿಗೆಯು ದೊಡ್ಡ ಮಟ್ಟದ್ದಾಗಿತ್ತು. ನಂತರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 8.5ರ ಮಟ್ಟಕ್ಕೆ ಬಂತು. ಈಗ, ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 5.4ಕ್ಕೆ ತಲುಪಿದೆ. ಅಂದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಒಂದು ತ್ರೈಮಾಸಿಕದಿಂದ ಇನ್ನೊಂದು ತ್ರೈಮಾಸಿಕಕ್ಕೆ ಇಳಿಕೆ ಕಾಣುತ್ತಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರಮುಖ ಹಬ್ಬಗಳು ಕೂಡ ಇದ್ದವು. ನವರಾತ್ರಿ, ದೀಪಾವಳಿ ಹಾಗೂ ಕ್ರಿಸ್ಮಸ್ ಈ ಮೂರು ತಿಂಗಳ ಅವಧಿಯಲ್ಲಿ ಬಂದುಹೋಗಿವೆ.

ಅಲ್ಲದೆ, ಕೊರೊನಾ ವೈರಾಣುವಿನ ಹಾವಳಿಯು ಈ ಅವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಇರಲಿಲ್ಲ. ಹಬ್ಬಗಳ ಸಂದರ್ಭದಲ್ಲಿ ಜನರು ಹೊಸ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದು ವಾಡಿಕೆ. ನೌಕರ ವರ್ಗದವರಿಗೆ ಬೋನಸ್ ರೂಪದಲ್ಲಿ ಹಣ ಸಿಗುವುದು ಕೂಡ ಸಾಮಾನ್ಯವಾಗಿ ದೀಪಾವಳಿ, ನವರಾತ್ರಿ ಹಬ್ಬಗಳ ಸಂದರ್ಭದಲ್ಲಿ. ಮಾರುಕಟ್ಟೆಯ ಚಟುವಟಿಕೆಗಳಿಗೆ ಇವೆಲ್ಲ ಪೂರಕ ವಾತಾವರಣ ನಿರ್ಮಿಸಿ ಕೊಡುತ್ತವೆ. ಇಷ್ಟೆಲ್ಲ ಇದ್ದರೂ ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಇಳಿಕೆ ಕಂಡಿದ್ದಕ್ಕೆ ಕಾರಣ ಏನು ಎಂಬುದರ ಕುರಿತು ನೀತಿ ನಿರೂಪಕರು ಗಮನ ಹರಿಸಬೇಕಿದೆ.

ಜನವರಿ ತಿಂಗಳಿನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರವು ಶೇ 6ರ ಗಡಿಯನ್ನು ದಾಟಿಹೋಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವು ಏರುಗತಿಯಲ್ಲಿ ಸಾಗುತ್ತಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಮುಗಿದ ನಂತರ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ.

ಆಗ ಹಣದುಬ್ಬರ ಪ್ರಮಾಣವು ದೇಶದಲ್ಲಿ ಇನ್ನಷ್ಟು ಜಾಸ್ತಿ ಆಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಹೆಚ್ಚಳ ಕಂಡಂತೆಲ್ಲ, ಜನಸಾಮಾನ್ಯರು ಇತರ ಉತ್ಪನ್ನಗಳ ಖರೀದಿಯನ್ನು ಕಡಿಮೆ ಮಾಡುವುದು ಸಹಜ. ಹಣದುಬ್ಬರವು ಈಗಿನ ಮಟ್ಟಕ್ಕಿಂತ ಇನ್ನಷ್ಟು ಹೆಚ್ಚಾಗುವ, ಗ್ರಾಹಕರ ಖರೀದಿ ಶಕ್ತಿ ಕುಗ್ಗಿ ಮಾರುಕಟ್ಟೆಯಲ್ಲಿ ಲವಲವಿಕೆ ಕುಂದುವ ಸ್ಥಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹಾಗೂ ಸರ್ಕಾರಗಳು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಆಧರಿಸಿ ಮುಂದಿನ ಆರ್ಥಿಕ ಬೆಳವಣಿಗೆಯ ಗತಿ ತೀರ್ಮಾನ ಆಗಬಹುದು. ತೈಲ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ, ಆರ್‌ಬಿಐ ಹಾಗೂ ಜನಸಾಮಾನ್ಯರು ಒಂದು ಹಂತದವರೆಗೆ ನಿರೀಕ್ಷೆ ಮಾಡಿದ್ದರು.

ಆದರೆ, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹಾಗೂ ಅದರಿಂದ ಆಗಬಹುದಾದ ಆರ್ಥಿಕ ಪರಿಣಾಮಗಳು ಸಂಪೂರ್ಣವಾಗಿ ಅನಿರೀಕ್ಷಿತ. ರಷ್ಯಾದ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳು ಕಚ್ಚಾ ತೈಲದ ಬೆಲೆಯ ಮೇಲೆ ಮಾತ್ರವೇ ಅಲ್ಲದೆ, ಇತರ ಕೆಲವು ಉತ್ಪನ್ನಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಉಂಟುಮಾಡಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಕ್ರೇನ್ ಮತ್ತು ರಷ್ಯಾ ಅಡುಗೆ ಎಣ್ಣೆ ಹಾಗೂ ಗೋಧಿಯನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತವೆ. ಯುದ್ಧದಿಂದಾಗಿ ಇವೆರಡರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಬಹುತೇಕ ಖಚಿತ.

ಆಗ ಇವುಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವ ಮಟ್ಟ ತಲುಪಬಹುದು, ದೇಶಿ ಮಾರುಕಟ್ಟೆಯಲ್ಲಿ ಅದರ ಪರಿಣಾಮ ಏನಾಗಬಹುದು ಎಂಬುದು ಗಮನಾರ್ಹ. ಇಡೀ ವರ್ಷಕ್ಕೆ (2021–22) ಜಿಡಿಪಿ ಬೆಳವಣಿಗೆ ದರವು ಶೇ 9.2ರಷ್ಟು ಇರಲಿದೆ ಎಂದು ಈ ಹಿಂದೆ ಅಂದಾಜು ಮಾಡಿದ್ದ ಎನ್‌ಎಸ್‌ಒ, ಈ ಅಂದಾಜನ್ನು ಪರಿಷ್ಕರಿಸಿ ಬೆಳವಣಿಗೆಯು ಶೇ 8.9ರಷ್ಟು ಇರಲಿದೆ ಎಂದು ಹೇಳಿದೆ. ಈ ಎಲ್ಲ ಅಂಶಗಳನ್ನು ಸಮಗ್ರವಾಗಿ ಗ್ರಹಿಸಲು ಯತ್ನಿಸಿದಾಗ, ಹಾಲಿ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್‌ವರೆಗಿನ ಅವಧಿ) ಜಿಡಿ‍ಪಿ ಬೆಳವಣಿಗೆ ದರವು ತೀರಾ ದೊಡ್ಡ ಮಟ್ಟದಲ್ಲಿ ಇರುವುದಿಲ್ಲ ಎಂಬ ಸೂಚನೆ ಖಂಡಿತ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT