ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಗಿಗ್ ಕೆಲಸಗಾರರಿಗೆ ಎನ್‌ಪಿಎಸ್‌ ತ್ವರಿತವಾಗಿ ಕಾರ್ಯರೂಪಕ್ಕೆ ಬರಲಿ

Last Updated 29 ಡಿಸೆಂಬರ್ 2022, 1:19 IST
ಅಕ್ಷರ ಗಾತ್ರ

ದೇಶದಲ್ಲಿ ಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಶಾಸನಬದ್ಧವಾಗಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ವ್ಯಾಪ್ತಿಗೆ ಬರುತ್ತಾರೆ. ಪಿ.ಎಫ್‌. ಜೊತೆಯಲ್ಲೇ ಅವರಿಗೆ ಒಂದಿಷ್ಟು ಪಿಂಚಣಿ ಸೌಲಭ್ಯವೂ ಇರುತ್ತದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದಾತರು ನೀಡುವ ಇತರ ಹಲವು ಸಾಮಾಜಿಕ ಭದ್ರತಾ ಪ್ರಯೋಜನಗಳೂ ಸಿಗುತ್ತವೆ. ಆದರೆ, ದೇಶದಲ್ಲಿ ಈಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿರುವ ಗಿಗ್‌ ಅರ್ಥವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಇಂತಹ ಯಾವ ಸೌಲಭ್ಯವೂ ಇಲ್ಲ. ದೇಶದ ಗಿಗ್‌ ಕೆಲಸಗಾರರಿಗೆ ಪಿಂಚಣಿ ಸಿಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಕೇಂದ್ರ ಸರ್ಕಾರಕ್ಕೆ ಈಚೆಗೆ ಶಿಫಾರಸು ಮಾಡಿದೆ. ಇದು ಸ್ವಾಗತಾರ್ಹ. ಗಿಗ್‌ ಅರ್ಥವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಸಾಮಾನ್ಯವಾಗಿ ಬೇಡಿಕೆ ಆಧರಿಸಿ ಕೆಲಸ ಮಾಡುತ್ತಿರುತ್ತಾರೆ. ಅವರದ್ದು ಪೂರ್ಣಾವಧಿ ಕೆಲಸ ಅಲ್ಲವಾದ ಕಾರಣ, ಅವರಿಗೆ ನಿಶ್ಚಿತ ಆದಾಯ ಇರುವುದಿಲ್ಲ. ಗಿಗ್ ಕೆಲಸಗಾರರಲ್ಲಿ ಹಲವರಿಗೆ ತಾಸುಗಳ ಲೆಕ್ಕದಲ್ಲಿ ಕನಿಷ್ಠ ಸಂಭಾವನೆಯೂ ಪಾವತಿ ಆಗುತ್ತಿಲ್ಲ ಎಂಬ ವರದಿಗಳು ಇವೆ. ಹೀಗಿರುವಾಗ, ಗಿಗ್ ಕೆಲಸಗಾರರು ತಮ್ಮ ಭವಿಷ್ಯಕ್ಕೆ ಅಗತ್ಯವಿರುವ ಹಣಕಾಸಿನ ಭದ್ರತೆಯನ್ನು ತಾವೇ ಕಲ್ಪಿಸಿಕೊಳ್ಳಲಿ ಎಂದು ನಿರೀಕ್ಷಿಸಲಾಗದು. ಇಂತಹ ಕೆಲಸಗಾರರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ವ್ಯಾಪ್ತಿಗೆ ತರಬೇಕು ಎಂಬುದು ಪಿಎಫ್‌ಆರ್‌ಡಿಎ ಶಿಫಾರಸು. ನಿಶ್ಚಿತ ಸಂಬಳ ಸಿಗುವ ಒಂದು ಕೆಲಸ ಹೊಂದಿದ್ದು, ಬಿಡುವಿನ ಅವಧಿಯಲ್ಲಿ ಗಿಗ್ ಕೆಲಸ ಮಾಡುವವರಿಗೆ ಈ ಶಿಫಾರಸು ಹೆಚ್ಚು ಮಹತ್ವದ್ದು ಎಂದು ಅನ್ನಿಸದಿರಬಹುದು. ಆದರೆ, ಜೀವನೋಪಾಯಕ್ಕಾಗಿ ಗಿಗ್ ಕೆಲಸಗಳನ್ನೇ ಪೂರ್ತಿಯಾಗಿ ನೆಚ್ಚಿಕೊಂಡವರಿಗೆ ಪಿಂಚಣಿ ಸೌಲಭ್ಯವು ಖಂಡಿತ ಮಹತ್ವದ್ದಾಗುತ್ತದೆ.

ದೇಶದಲ್ಲಿ ಗಿಗ್ ಕೆಲಸಗಳಲ್ಲಿ ತೊಡಗಿಸಿಕೊಂಡವರ ಬಗ್ಗೆ ನೀತಿ ಆಯೋಗವು ಈಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಗಿಗ್ ಕೆಲಸ ಮಾಡುವವರ ಸಂಖ್ಯೆಯು 2029–30ರ ಸುಮಾರಿಗೆ 2.35 ಕೋಟಿಗೆ ಏರಿಕೆ ಆಗಲಿದೆ ಎಂದು ಆ ವರದಿಯು ಹೇಳಿದೆ. 2020–21ರಲ್ಲಿ ಇಂತಹ ಗಿಗ್ ಕೆಲಸ ಮಾಡುತ್ತಿದ್ದವರ ಸಂಖ್ಯೆ 77 ಲಕ್ಷ ಮಾತ್ರ ಆಗಿತ್ತು ಎಂಬುದು ಗಮನಾರ್ಹ. ಅಂದರೆ 2029–30ರ ವೇಳೆಗೆ ಗಿಗ್ ಕೆಲಸಗಾರರು ದೇಶದ ಒಟ್ಟು ಕಾರ್ಮಿಕ ಬಲದಲ್ಲಿ ಶೇಕಡ 4.1ರಷ್ಟು ಆಗಿರುತ್ತಾರೆ. ಈಗ ಅವರ ಪಾಲು ಸರಿಸುಮಾರು ಶೇ 1.5ರಷ್ಟು ಇದೆ ಎಂದು ವರದಿ ಹೇಳಿದೆ. ನೀತಿ ಆಯೋಗದ ವರದಿ ಕೂಡ, ಗಿಗ್ ಕೆಲಸಗಾರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಹೇಳಿತ್ತು. ಗಿಗ್ ಕೆಲಸಗಾರರು ಹಾಗೂ ಅವರು ಕೆಲಸ ಮಾಡುವ ಕಂಪನಿಗಳ ನಡುವೆ ‘ನೌಕರ–ಮಾಲೀಕ’ ಎಂಬ ಸಂಬಂಧವೇ ಇರುವುದಿಲ್ಲ. ಹೀಗಾಗಿ, ಅವರಿಗೆ ಪಿ.ಎಫ್‌.ನಂತಹ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸುವುದು ಸುಲಭವಲ್ಲ. ಆದರೆ, ಭಾರತದ ಯಾವುದೇ ಪ್ರಜೆ ಎನ್‌ಪಿಎಸ್‌ ಚಂದಾದಾರ ಆಗಲು ಅಡ್ಡಿಯಿಲ್ಲ. ಹೀಗಾಗಿ, ಗಿಗ್ ಕೆಲಸಗಾರರಿಗೆ ಎನ್‌ಪಿಎಸ್‌ ಸೌಲಭ್ಯವನ್ನೇ ನೀಡಬೇಕು ಎಂಬ ಶಿಫಾರಸನ್ನು ಪಿಎಫ್‌ಆರ್‌ಡಿಎ ಮಾಡಿರಬಹುದು. ಡಿಜಿಟಲ್ ಆ್ಯಪ್ ಆಧಾರಿತ ಗಿಗ್ ಉದ್ಯೋಗಗಳನ್ನು ಮಹಿಳೆಯರು ಶಿಕ್ಷಣ ಪಡೆದ ನಂತರ ಅಥವಾ ಮದುವೆಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ನೀತಿ ಆಯೋಗದ ವರದಿಯು ಅಂದಾಜು ಮಾಡಿದೆ.

ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡಲು ಗಿಗ್ ಅರ್ಥವ್ಯವಸ್ಥೆ ಅವಕಾಶ ಕಲ್ಪಿಸಿದೆ. ಕಾಲೇಜು ವಿದ್ಯಾರ್ಥಿಗಳು, ಮಧ್ಯವಯಸ್ಕರು, ಮಧ್ಯ ವಯಸ್ಸು ದಾಟಿದವರು ಕೂಡ ಗಿಗ್‌ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಗಿಗ್ ಕೆಲಸ ಮಾಡುವ ಮಹಿಳೆಯರಿಗೆ ಎನ್‌ಪಿಎಸ್‌ ಸೌಲಭ್ಯ ನೀಡಿದರೆ, ಮುಂದೊಂದು ದಿನ ಅದು ಅವರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನೆರವು ನೀಡಬಲ್ಲದು. ಎನ್‌ಪಿಎಸ್‌ ಅಡಿ ಮಾಡುವ ಹೂಡಿಕೆಗಳು ಷೇರು ಮಾರುಕಟ್ಟೆಯಲ್ಲಿ ವಿನಿಯೋಗ ಆಗುತ್ತವೆ, ವೃತ್ತಿಪರರು ಹೂಡಿಕೆಗಳನ್ನು ನಿರ್ವಹಿಸುತ್ತಿರುತ್ತಾರೆ. ಷೇರು ಮಾರುಕಟ್ಟೆ ಹೂಡಿಕೆಗಳು ದೀರ್ಘಾವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಶಕ್ತಿ ಹೊಂದಿವೆ. ಹೀಗಾಗಿ, ಗಿಗ್ ಕೆಲಸ ಮಾಡುವ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಣ್ಣ ವಯಸ್ಸಿನ ಇತರರಿಗೆ ಇದು ಬಹಳ ದೊಡ್ಡ ಆರ್ಥಿಕ ನೆರವು ಕಲ್ಪಿಸಬಲ್ಲದು. ಪಿಎಫ್‌ಆರ್‌ಡಿಎ ಶಿಫಾರಸು ಮೇಲ್ನೋಟಕ್ಕೆ ಚೆನ್ನಾಗಿದೆ; ಅದನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT